ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು
ವಿದ್ಯಾ ಭೂಷಣ
ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ ನನಗೆ ಅಭಿಮಾನ ಎನಿಸುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ವಿದ್ವಾಂಸರು. ಸ್ಯಾಕ್ಸೋಫೋನ್ ನಂಥ ವಿದೇಶಿ ವಾದ್ಯಕ್ಕೆ ಗಮಕ ಪ್ರಧಾನವಾದ ಕರ್ನಾಟಕ ಸಂಗೀತವನ್ನು ಅಳವಡಿಸಿದ ಸಾಧಕ. ಭೈರವಿ, ತೋಡಿಯಂಥ ಕ್ಲಿಷ್ಟಕರವಾದ ರಾಗಗಳಿಗೆ ಈ ವಾದ್ಯ ಪರಿಕರವನ್ನು ಅಳವಡಿಸುವುದು ಬಹಳ ಕಷ್ಟ. ಈ ದೃಷ್ಟಿಯಲ್ಲಿ ವಿದೇಶಿ ವಾದ್ಯಕ್ಕೆ ಕದ್ರಿ ಗೋಪಾಲನಾಥ್ ಭಾರತೀಯ ಸಂಸ್ಕಾರವನ್ನು ಕೊಟ್ಟರೆಂದು ಹೇಳಬಹುದು.
ಬೆಲ್ಜಿಯಂ ದೇಶದ ಈ ವಾದ್ಯ ಯುರೋಪಿನ ಜಾಸ್‌ಗಳಲ್ಲಿ ಬಳಕೆಯಾಗುತ್ತಿತ್ತು. ಮಹಾರಾಜರ ಕಾಲದಲ್ಲಿ ಮೈಸೂರಿಗೆ ಬಂದಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಅಪಾರ ಕಲಾಸಕ್ತಿಯವರು. ತಮ್ಮ ವಾದ್ಯವೃಂದದಲ್ಲಿ ಸ್ಯಾಕ್ಸೋಫೋನ್‌ನ್ನು ಸೇರಿಸಿಕೊಂಡಿದ್ದರು. ಅಲ್ಲಿ ನರಸಿಂಹ ಎಂಬವರು ಆ ವಾದ್ಯವನ್ನು ನುಡಿಸುತ್ತಿದ್ದರಂತೆ.
ಅದನ್ನು ಮೊದಲು ನಮ್ಮಲ್ಲಿಗೆ ತಂದವರು ವೆಂಕಟಪ್ಪ ಡೋಗ್ರ ಅವರು. ಅವರು ಶಿವ ರಾಮ ಕಾರಂತರ ಬ್ಯಾಲೆ ತಂಡಗಳಲ್ಲಿ ಜಾಸ್ ನುಡಿಸುತ್ತಿದ್ದವರು. ಮುಂದೆ ಕದ್ರಿ ಗೋಪಾಲನಾಥರು ಸ್ಯಾಕ್ಸೋಫೋನ್‌ನಲ್ಲಿ ಕರ್ನಾಟಕ ಸಂಗೀತದ ರಾಗಗಳ ಸೂಕ್ಷ್ಮಗಳನ್ನೆಲ್ಲ ಹೊಮ್ಮಿಸಿ ವಿಶೇಷ ಖ್ಯಾತಿ ಪಡೆದರು. ಸಾಧನೆ, ವಿದ್ವತ್ ಮತ್ತು ಪ್ರತಿಭೆ- ಈ ಮೂರರ ಸಂಗಮ ಕದ್ರಿ ಗೋಪಾಲನಾಥ್.
ಮಂಗಳೂರಿನಲ್ಲಿ ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಕಲಿಯಲಾರಂಭಿಸಿದ ಗೋಪಾಲನಾಥರು ವಿಸ್ತಾರವಾಗಿ ಕಲಿತದ್ದು ಚೆನ್ನೈಯಲ್ಲಿ ಟಿ. ವಿ. ಗೋಪಾಲಕೃಷ್ಣನ್ ಅವರ ಗುರುತ್ವದಲ್ಲಿ. ಟಿ.ವಿ. ಗೋಪಾಲಕೃಷ್ಣನ್‌ರ ಬಗ್ಗೆ ಒಂದೆರಡು ಮಾತು ಹೇಳಬೇಕು. ಅವರು ಕೂಡ ಮಹಾಸಾಧಕರೇ. ನಾನೂ ಅವರಲ್ಲಿ ಅಭ್ಯಾಸ ಮಾಡಿದ್ದೇನೆ. ಟಿ. ವಿ. ಜಿ. ಕರ್ನಾಟಕ ಸಂಗೀತದಷ್ಟೇ ಹಿಂದೂಸ್ತಾನಿ ಸಂಗೀತದ ಸಿದ್ಧಿ ಯನ್ನೂ ಪಡೆದಿದ್ದರು. ಸಂಗೀತ ಕ್ಷೇತ್ರದ ಎಲ್ಲ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಮೃದಂಗ ವಾದನದಲ್ಲಂತೂ ಬಹಳ ಮೇಲ್ಪಂಕ್ತಿಯ ಪ್ರತಿಭಾಶಾಲಿಗಳು. ಜೊತೆಗೆ ಅವರ ಇನ್ನೊಂದು ಗುಣವನ್ನೂ ಹೇಳಬೇಕು. ಯಾರಾದರೂ ಕಲಿಯುವ ಆಸಕ್ತಿ ತೋರಿಸಿದರೆ, ಅವರಲ್ಲಿ ಉದಯೋನ್ಮುಖ ಪ್ರತಿಭೆ ಕಂಡರೆ, ಮುಕ್ತ ಮನಸ್ಸಿನಿಂದ ಕಲಿಸಿ ಪ್ರೋತ್ಸಾಹಿಸುತ್ತಿದ್ದರು. ಟಿ. ವಿ. ಗೋಪಾಲಕೃಷ್ಣನ್ ಅವರ ಶಿಷ್ಯರಲ್ಲಿ ಬಹಳ ಮಂದಿ ಜಗತ್ಪಸಿದ್ಧರಾಗಿದ್ದಾರೆ. ಎ. ಆರ್. ರೆಹಮಾನ್, ರಾಜಕುಮಾರ್ ಭಾರತಿ, ಇಳೆಯರಾಜ ಮುಂತಾದವರು ಅವರ ಶಿಷ್ಯರೇ. ಅಂಥವರ ಸಾಲಿನಲ್ಲಿ ಕದ್ರಿ ಗೋಪಾಲನಾಥ್ ಕೂಡ ಸೇರಿದ್ದಾರೆ.
ಅಂಥ ಗುರುಗಳು ಸಿಕ್ಕಿದ್ದು ಕದ್ರಿ ಗೋಪಾಲನಾಥರ ಅದೃಷ್ಟವೇ ಸರಿ. ಜೊತೆಗೆ ಎಂ. ಬಾಲಮುರಲೀಕೃಷ್ಣ ಅವರ ಬೆಂಬಲವೂ ಸಿಕ್ಕಿತೆಂಬುದನ್ನು ಕೇಳಿದ್ದೇನೆ. ಮೊದಲಿನಿಂದಲೂ ಕದ್ರಿ ಗೋಪಾಲನಾಥರ ಅನೇ ಕ ಕಛೇರಿಗಳಲ್ಲಿ ನಾನು ಕೇಳುಗನಾಗಿ ಉಪಸ್ಥಿತನಿದ್ದೆ. ಹಿಂದಿನ ದಿನಗಳಲ್ಲಿ ಶ್ರೀಸುಬ್ರಹ್ಮಣ್ಯ ಮಠಕ್ಕೆ ನಾನು ಅವರನ್ನು ಆಹ್ವಾನಿಸಿದ್ದೂ ಇತ್ತು. ಶ್ರೋತೃವಾಗಿ ಅವರ ರಾಗ ಪ್ರಸ್ತುತಿಯನ್ನು ನಾನು ಸಮಗ್ರವಾಗಿ ಅನುಭವಿಸುತ್ತಿದ್ದೆ. ಆದರೆ, ಭೈರವಿ ರಾಗ ಪ್ರಸ್ತುತಿಯಲ್ಲಿ ಅವರ ನುಡಿಸಾಣಿಕೆಯ ಕೌಶಲವನ್ನು ಇವತ್ತಿಗೂ ನೆನೆಯುತ್ತೇನೆ.
ನಾನು ಹಾಡಿದ ಹಲವು ಜನಪ್ರಿಯ ದಾಸರ ಪದಗಳನ್ನು ಅವರು ಸ್ಯಾಕ್ಸೋಫೋನ್‌ನಲ್ಲಿ ನುಡಿಸಿದ್ದನ್ನು ಕೇಳಿದ್ದೇನೆ. ನಮ್ಮಮ್ಮ ಶಾರದೆ, ಪಿಳ್ಳಂಗೋವಿಯ ಚೆಲುವ ಕೃಷ್ಣನ… ಹೀಗೆ ಹಲವು ಹಾಡುಗಳು ನೆನಪಿಗೆ ಬರುತ್ತವೆ. ಧ್ವನಿಸುರುಳಿಗಳಲ್ಲಿ ಸ್ಯಾಕ್ಸೋಫೋನ್ ನಾದವನ್ನು ಕೇಳಿದಾಗಲೆಲ್ಲ ಅವರಿಲ್ಲ ಎಂಬುದನ್ನು ನಂಬುವುದೇ ಕಷ್ಟವಾಗುತ್ತದೆ.
ಗುರು, ಗೆಳೆಯ, ತತ್ತ್ವಜ್ಞಾನಿ ಎಲ್ಲವೂ ಆಗಿದ್ದರು ಪ್ರೀತಿಯ ಅಪ್ಪ
ಮಣಿ ಕಾಂತ್ ಕದ್ರಿ
ಪದ್ಮಶ್ರೀ ಕಲೈ ಲಾಮಣಿ ಡಾಕ್ಟರ್ ಕದ್ರಿ ಗೋಪಾಲನಾಥ್ ಎಂದರೆ ವಿಶ್ವಪ್ರಸಿದ್ಧ ಸ್ಯಾಕ್ಸೋಫೋನ್ ಕಲಾವಿದರು. ಆದರೆ, ನನ್ನ ಪಾಲಿಗೆ ಪ್ರೀತಿಯ ಅಪ್ಪ. ದೇಶಕ್ಕೆ ರಾಜನಾದರೂ ತಾಯಿಗೆ ಮಗ ಎನ್ನುತ್ತಾರಲ್ಲ, ಹಾಗೆ. ದೊಡ್ಡ ಸಂಗೀತಗಾರನಾದರೂ ಮಕ್ಕಳಾದ ನಮಗೆ, ಅಂದರೆ ನನಗೆ, ನನ್ನ ಅಣ್ಣನಿಗೆ, ತಂಗಿಗೆ ಅವರು ಪ್ರೀತಿಯ ಅಪ್ಪನಾಗಿದ್ದರು.
ಹಾಗೆ ನೋಡಿದರೆ, ನನ್ನ ಮತ್ತು ಅಪ್ಪನ ನಡುವೆ ಸಾಮೀಪ್ಯವೂ ಇತ್ತು, ಅಂತರವೂ ಇತ್ತು. ನನ್ನ 20-21ನೆಯ ವಯಸ್ಸಿಗೆ, ಅಂದರೆ 1998ರಲ್ಲಿ ನಾನು ಅಪ್ಪನೊಂದಿಗೆ ಚೆನ್ನೈಗೆ ಹೋಗಿದ್ದೆ. ಚೆನ್ನೈಯಲ್ಲಿ ನಾನು ಸಾಫ್ಟ್ವೇರ್ ಡಿಪ್ಲೊಮಾ ಕಲಿತು ಏನಾದರೂ ಉದ್ಯೋಗ ಹಿಡಿಯಬೇಕೆಂದು ಅಪ್ಪನ ಯೋಚನೆಯಾಗಿತ್ತು. ನಾನು ಅಷ್ಟರಲ್ಲಿಯೇ ಸ್ಯಾಕ್ಸೋಫೋನ್ ನುಡಿಸುವುದನ್ನು ಕಲಿತುಕೊಂಡಿದ್ದೆ.
ಮಂಗಳೂರಿನ ಪದವಿನಂಗಡಿಯಲ್ಲಿ ನಮ್ಮ ಮನೆಯ ಹಿಂದೆ ಸಂಗೀತ ವಿದ್ವಾಂಸ ಶ್ರೀನಾಥ್ ಮರಾಠೆಯವರ ಮನೆ ಇತ್ತು. ನನ್ನ ಅಪ್ಪ ನನಗೆ ಮೊದಲ ಸಂಗೀತ ಗುರುವಾದರೆ, ಮರಾಠೆಯವರು ನನ್ನ ಪಾಲಿನ ಎರಡನೆಯ ಗುರು. ನಾವೆಲ್ಲ ಓದಿದ್ದು ಕನ್ನಡ ಮಾಧ್ಯಮದಲ್ಲಿಯೇ. ಕನ್ನಡ ಮಾಧ್ಯಮದಲ್ಲಿಯೇ ಓದಬೇಕೆಂದು ಅಪ್ಪನ ಇಚ್ಛೆಯೂ ಆಗಿತ್ತು. ಬದುಕಿನಲ್ಲಿ ಸರಳವಾಗಿರುವುದನ್ನೂ ಘನತೆಯಿಂದಿರುವುದನ್ನೂ ಕಲಿಸಿದ್ದು ಅವರೇ. ಮದುವೆ ಸಮಾರಂಭಗಳಲ್ಲಿ ಸಾಕ್ಸೋಫೋನ್ ವಾದಕರಾಗಿ ಜನ ಪ್ರಿಯರಾಗಿದ್ದ ಅಪ್ಪ ಆಗಲೇ ಸತತ ಸಾಧನೆಯ ಮೂಲಕ ಮೇಲ್ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಮಗೆ ಅವೆಲ್ಲ ಗೊತ್ತಾಗುತ್ತಿರಲಿಲ್ಲ. ಹೊರಗೆಲ್ಲ ಸಾಮಾನ್ಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ಅವರು ಮನೆಯಲ್ಲಿ ಗಂಟೆಗಟ್ಟಲೆ ಸಾಧನೆ ಮಾಡುವುದನ್ನು ಮಾತ್ರ ನಾವು ಕಂಡಿದ್ದೆವು.
ನನ್ನಲ್ಲಿ ಲಯಜ್ಞಾನ ಸಹಜವಾಗಿ ಬಂದಿತ್ತು. ಹಾಗಾಗಿ, “ಬಾ, ನನ್ನ ಕಛೇರಿಗೆ ತಾಳ ನುಡಿಸು’ ಎಂದು ಕರೆದೊಯ್ಯುತ್ತಿದ್ದರು.
ನಾನು ಲಯಬದ್ಧವಾಗಿ ತಾಳ ನುಡಿಸುವುದನ್ನು ಬೇರೆಯವರಿಗೆ ತೋರಿಸಿ, “”ನೋಡಿ, ನನ್ನ ಮಗ ಹೇಗೆ ತಾಳ ಹಾಕುತ್ತಿದ್ದಾನೆ” ಎಂದು ಅಭಿಮಾನದಿಂದ ಹೇಳುತ್ತಿದ್ದರು. ವಿಷಮಲಯದಲ್ಲಿ ನುಡಿಸಿ ತಾಳ ತಪ್ಪಿಸಲು ಕೂಡಾ ಪ್ರಯತ್ನಿಸುತ್ತಿದ್ದರು. ನನ್ನ ಲಯಸಿದ್ಧಿ ಗಟ್ಟಿಯಾಗಲಿ ಎಂಬ ಉದ್ದೇಶದಿಂದ ಹಾಗೆ ಮಾಡುತ್ತಿದ್ದಾರೆಂದು ನನಗೆ ಕ್ರಮೇಣ ಗೊತ್ತಾಯಿತು. ನಾನು ಪ್ರತಿ ಬಾರಿ ಕಾರ್ಯಕ್ರಮಕ್ಕೆ ಹೋಗುವಾಗಲೂ ದಾರಿಯಲ್ಲಿ ಸಿಗುವ ದೇವಸ್ಥಾನಗಳತ್ತ ನೋಡಿ ಪ್ರಾರ್ಥಿಸುತ್ತಿದ್ದೆ- “ಇವತ್ತು ನನ್ನ ತಾಳ ತಪ್ಪದಿರಲಿ’. ತಾಳ ತಪ್ಪಿಸಿದರೆ ನನ್ನನ್ನು ಹೇಗೂ ಬೈಯುವುದೇ ಬಿಡಿ, ಜೊತೆಗೆ, ಸಭೆಯ ಮುಂದೆ ಕುಳಿತವರು ಯಾರಾದರೂ ತಪ್ಪು ತಪ್ಪು ತಾಳ ತಟ್ಟಲಾರಂಭಿಸಿದರೆ, “ನೀವು ಸುಮ್ಮನೆ ಕುಳಿತುಕೊಳ್ಳಿ, ಇವನು ತಾಳ ಹಾಕಿದರೆ ಸಾಕು’ ಎನ್ನುತ್ತಿದ್ದರು ನಿರ್ದಾಕ್ಷಿಣ್ಯವಾಗಿ.
ಅಪ್ಪ ಮಂಗಳೂರಿನಲ್ಲಿ ಸಂಗೀತಾಭ್ಯಾಸ ಮಾಡಿದ್ದು ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ. ತಾನು ಹೆಚ್ಚಿನ ಹೆಸರು ಪಡೆದ ಬಳಿಕವೂ ಅವರ ಬಗೆಗಿನ ಗೌರವಭಾವ ಹಾಗೆಯೇ ಇತ್ತು. ಮಂಗಳೂರಿನ ಕಲಾನಿಕೇತನದಲ್ಲಿ ಗುರು ಗೋಪಾಲಕೃಷ್ಣ ಅಯ್ಯರ್ ಅವರ ತರಗತಿಗಳು ನಡೆಯುತ್ತಿದ್ದಾಗ ಅವರು ನನ್ನನ್ನು ಕರೆದೊಯ್ಯುತ್ತಿದ್ದರು.
ನಿಮಗೆಲ್ಲ ತಿಳಿದಿರುವಂತೆ, 70ರ ದಶಕದಲ್ಲಿ ಚೆನ್ನೈಯಲ್ಲಿ ಟಿ. ವಿ. ಗೋಪಾಲಕೃಷ್ಣನ್ ಅವರ ಶಿಷ್ಯವೃತ್ತಿಯನ್ನು ಕೈಗೊಂಡ ಬಳಿಕ ಅವರ ಸಾಧನೆಯ ಹೆಬ್ಟಾಗಿಲು ತೆರೆಯಿತು. ಚೆನ್ನೈಯ ಅಗ್ರ ಪಂಕ್ತಿಯ ಸಂಗೀತಗಾರರ ಸಾಲಿನಲ್ಲಿ ಅಪ್ಪನೂ ಶೋಭಿಸಲಾರಂಭಿಸಿದರು.
ಕಾಲೇಜು ಕಲಿಕೆಯ ಉದ್ದೇಶದಿಂದ ನಾನು ಚೆನ್ನೈಗೆ ಹೋದದ್ದು. ಅಣ್ಣ ಗುರುಪ್ರಸಾದ ಆಗಲೇ ಅಲ್ಲಿದ್ದು ಎಂಬಿಎ ಓದುತ್ತಲೇ ಕೊಳಲು ನುಡಿಸುವುದನ್ನೂ ಕಲಿತು ಮರಳಿ ಬಂದಿದ್ದ.
ನನ್ನ ಅಪ್ಪ ಎಷ್ಟು ದೊಡ್ಡ ವ್ಯಕ್ತಿ ಎಂಬುದು ಗೊತ್ತಾದದ್ದು ನಾನು ಚೆನ್ನೈಗೆ ಹೋದ ಬಳಿ ಕವೇ.
ಒಮ್ಮೆ ಒಂದು ಘಟನೆ ನಡೆಯಿತು. ಎಲ್ಲರೂ ಮನೆಯಿಂದ ಹೊರಗೆ ಹೋದ ಬಳಿಕ ನಾನೊಬ್ಬನೇ ಇರುತ್ತಿದ್ದೆ. ಆಗೊಮ್ಮೆ ನಾನೇ ನುಡಿಸಿದ ಸ್ಯಾಕ್ಸೋಫೋನ್‌ನ ಧ್ವನಿಯನ್ನು ಮಲ್ಟಿ ಮೀಡಿಯಾ ಮೈಕ್‌ನಲ್ಲಿ ರೆಕಾರ್ಡ್ ಮಾಡಿಕೊಂಡೆ. ಅಪ್ಪ ಒಂದು ಕಂಪ್ಯೂಟರ್ ತೆಗೆದುಕೊಟ್ಟಿದ್ದರು. ಸ್ಯಾಕ್ಸೋಫೋನ್‌ನ ಧ್ವನಿಯನ್ನು ಕಂಪ್ಯೂಟರ್‌ಗೆ ಹಾಕಿ, ಹಿನ್ನೆಲೆಯಲ್ಲಿ ವೆಸ್ಟರ್ನ್ ಮ್ಯೂಸಿಕ್ ಅಳವಡಿಸಿ ನನ್ನದೇ ರೀತಿಯಲ್ಲಿ “ಪ್ರಾಯೋಗಿಕ ಸಂಗೀತ ಸಂಯೋಜನೆ ’ ಮಾಡಿದೆ. ನನ್ನ ಗ್ರಹಚಾರ ಸರಿಯಾಗಿತ್ತು ಎನ್ನುವುದೊ, ಸರಿಯಾಗಿರಲಿಲ್ಲ ಎನ್ನುವುದೊ? ಏನೋ ಕಾರ ಣಕ್ಕೆ ಅರ್ಧ ದಾರಿಯಿಂದಲೇ ಅಪ್ಪ ಮನೆಗೆ ಮರಳಿ ಬಂದಿದ್ದರು. ರೆಕಾರ್ಡರ್‌ನಲ್ಲಿ ವಿಚಿತ್ರವಾದ ಮ್ಯೂಸಿಕ್ ಕೇಳಿ ಅವರಿಗೆ ಸಿಟ್ಟು ಬಂದಿರಬೇಕು. ನನ್ನ ಕಪಾಳಕ್ಕೊಂದು ಬಾರಿಸಿದರು. “ಏನು ಮಾಡ್ತಿದ್ದೀಯಾ ನೀನು, ಈ ಥರ ಅಬದ್ಧ ಮಾಡಲು ಯಾರು ಹೇಳಿಕೊಟ್ಟರು ನಿನಗೆ? ’ ಎಂದು ಗದರಿಸಿದರು. ಆವಾಗ ನನ್ನಲ್ಲಿ ಮ್ಯೂಸಿಕ್ ಕೀಬೋರ್ಡ್ ಇರಲಿಲ್ಲ. ಕಂಪ್ಯೂಟರ್ ಕೀ ಬೋರ್ಡನ್ನೇ ಅಳವಡಿಸಿ ಸಂಗೀತ ಸಂಯೋ ಜನೆಯನ್ನು ಮಾಡಿದ್ದೆ. “ನೀನು ಎ. ಆರ್. ರೆಹಮಾನ್ ತರ ಆಗೋದು ಅಷ್ಟು ಸುಲಭ ಇಲ್ಲ. ಒಂದೋ ಕೆಲಸಕ್ಕೆ ಹೋಗು, ಇಲ್ಲದಿದ್ದರೆ ಸ್ಯಾಕ್ಸೋಫೋನ್ ನುಡಿಸು’ ಎಂದು ಆಜ್ಞೆ ಮಾಡಿ ಹೊರಟುಹೋದರು.
ನನಗೆ ತುಂಬ ನೋವಾಯಿತು. ಏನು ಮಾಡುವುದೆಂದು ಗೊತ್ತಾಗಲಿಲ್ಲ. ಕಂಪ್ಯೂಟರ್ ಶಟ್-ಡೌನ್ ಮಾಡಿ ಒಂದು ಮೂಲೆಯಲ್ಲಿ ಸುಮ್ಮನೆ ಕೂತಿದ್ದೆ. ಅಪ್ಪ ಮನೆಯಿಂದ ಹೊರಗೆ ಹೋದವರು ಮತ್ತೆ ಮರಳಿ ಬಂದರು. ಅವರಿಗೆ ಏನನ್ನಿಸಿತೋ, “ಆ ರೆಕಾರ್ಡ್‌ನಲ್ಲಿ ಸ್ಯಾಕ್ಸೋಫೋನ್ ನುಡಿಸಿದ್ದು ಯಾರು?’ ಎಂದು ಕೇಳಿದರು.
“ನಾನೇ’ ಎಂದೆ ಮೆತ್ತಗಿನ ದನಿಯಲ್ಲಿ.
“ನಾನು ಸ್ಯಾಕ್ಸೋಫೋನ್ ನುಡಿಸುತ್ತೇನೆ. ನೀನು ಸಂಗೀತ ಸಂಯೋಜನೆ ಮಾಡ್ತೀಯಾ?’ ಎಂದು ಕೇಳಿದರು.
ನಾನು ಕೊಂಚ ಚೇತರಿಸಿಕೊಂಡು, “ಆಯ್ತಪ್ಪ’ ಎಂದೆ.
ಅವರು, ಹಂಸಧ್ವನಿರಾಗದ ವಾತಾಪಿ ಗಣಪತಿಂ ಭಜೇ … ನುಡಿಸಿದರು. ಅದೇ ಚಿಕ್ಕ ಮೈಕ್‌ನಲ್ಲಿ ರೆಕಾರ್ಡ್ ಮಾಡಿದೆ. ಅದಕ್ಕೆ ವಿಶಿಷ್ಟ ರೀತಿಯ ಮ್ಯೂಸಿಕ್ ಕೊಟ್ಟೆ. ಆಲಿಸಿದರು. “ಹ್ಮ್’ ಅಂದರು. ನನಗೆ ಪ್ರಾಣ ಮರಳಿ ಬಂದ ಹಾಗಾಯಿತು. ಮಗನ ಕುರಿತು ಮೆಚ್ಚುಗೆ ಸೂಚಿಸಿದ ಬಗೆಯದು. ಆದರೆ, ಅದನ್ನು ಬಾಯಿ ಬಿಟ್ಟು ಹೇಳಲಾರರು.
ಒಮ್ಮೆ ಎಚ್‌ಎಂವಿ ಆಡಿಯೋ ಕ್ಯಾಸೆಟ್ ಡೀಲರ್ಸ್‌ನ ಮುತ್ತು ಕುಮಾರ್ ಬಂದಿದ್ದರು. ಅವರು ಹೊಸ ಕಂಪೆನಿಯನ್ನೇನೋ ಮಾಡಿದ್ದರು. ಅವರು ಅಪ್ಪನ ಕ್ಲಾಸಿಕಲ್ ಆಲ್ಬಂ ಮಾಡಲು ಕರಾರು ಪತ್ರವನ್ನು ಹಿಡಿದುಕೊಂಡೇ ಬಂದಿದ್ದರು. ಒಳಗಿನ ಕೊಠಡಿಯಲ್ಲಿ ನಾನೇ ಮಾಡಿದ ಸಂಗೀತ ಪ್ರಯೋಗವನ್ನು ಕೇಳಿ ಆನಂದಿಸುತ್ತ ತಲ್ಲೀನನಾಗಿದ್ದೆ. ಹಾಗೆ ಮಾಡಲು ಈಗಂತೂ ಅಪ್ಪನ ಅನುಮತಿಯೇ ಇತ್ತಲ್ಲ ! ಮುತ್ತುಕುಮಾರ್ ಬಾಗಿಲು ತೆರೆ ದು ಪ್ರವೇಶಿಸಿದವರೇ ನೇರವಾಗಿ ನನ್ನ ಬಳಿಗೆ ಧಾವಿಸಿ, “ಏನದು ಏನದು, ಮತ್ತೂಮ್ಮೆ ಪ್ಲೇ ಮಾಡು’ ಎಂದರು.
ನನಗೆ ಭಯವಾಯಿತು. ನಾನು ಪ್ಲೇ ಮಾಡಿದೆ. ಅವರು ಆಲಿಸಿದರು.
ಅಪ್ಪನತ್ತ ನೋಡಿ, “ಕ್ಲಾಸಿಕಲ್ ಬೇಡಣ್ಣ. ಇದೇ ಮಾಡೋಣ’ ಎಂದರು.
“ಅವನಿನ್ನೂ ಚಿಕ್ಕ ಹುಡುಗನಲ್ಲವೆ?’ ಎಂದರು ಅಪ್ಪ ಆಕ್ಷೇ ಪದ ಧ್ವನಿಯಲ್ಲಿ.
“ಅವನು ಮಾಡ್ತಾನೆ, ಅವನಿಂದಲೇ ಮಾಡಿಸೋಣ’ ಎಂದರು ದೃಢವಾಗಿ ಮುತ್ತು ಕುಮಾರ್. ಅಪ್ಪನಿಗೆ ಕೊಡಲು ತಂದಿದ್ದ ಕರಾರು ಪತ್ರವನ್ನು ಒಳಗಿಟ್ಟರು. ನಾನೇನು ಮಾಡಲಿ ಎಂಬ ಭಾವದಲ್ಲಿ ಅಪ್ಪನ ಮುಖ ನೋಡಿದೆ. ಅವರೇನೂ ಹೇಳಲಿಲ್ಲ. ಆದರೆ, ನಾನು ಸ್ವತಂತ್ರವಾಗಿ ಆಲ್ಬಂ ಮಾಡುವ ಬಗ್ಗೆ ಒಳಗೊಳಗೆ ಒಪ್ಪಿಗೆ ಇದ್ದಿರಬೇಕು. ನನ್ನ ಮಗ ತನಗಿಂತ ಕೊಂಚ ಭಿನ್ನವಾದ ಹಾದಿಯನ್ನು ಅನುಸರಿಸುತ್ತಾನೆ ಎಂದು ಅವರಿಗೆ ಗೊತ್ತಾಗಿರಬೇಕು. ಅದನ್ನು ತೋರಗೊಡುತ್ತಿರಲಿಲ್ಲ.
ನನ್ನ ಅಣ್ಣನಿಗೆ ಅಲ್ಲಿ ರಾಜಮನೆತನದ ಪರಿಚಯವಿತ್ತು. ಪ್ರಿನ್ಸ್ ಆಫ್ ಆರ್ಕಾಟ್ ನವಾಬ್ ಆಸಿಫ್ ಅಲಿ ಅಂತ ಇದ್ದರು. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ. ಸ್ವಂತ ಸ್ಟುಡಿಯೋ ಕೂಡ ಇತ್ತು. ಅಲ್ಲಿ “ಡ್ರೀಮ್ ಜರ್ನಿ’ ಎಂಬ ಆಲ್ಬಮ್ ಮಾಡಿದೆ. ತುಂಬ ಹಿಟ್ ಆಯಿತು. ಆಗ ಅಪ್ಪ ನನ್ನನ್ನು ಕರೆದು ಹೇಳಿದ ಮಾತು ಈಗಲೂ ನೆನಪಿದೆ. ಅದರ ಬೇರೆ ಬೇರೆ ವಾಲ್ಯೂಮ್‌ಗಳು ಪ್ರಕಟವಾದವು. 2001ರಲ್ಲೊಮ್ಮೆ ಹೃದಯದ ಬೈಪಾಸ್ ಸರ್ಜರಿಗೊಳಗಾಗುವ ಮೊದಲು ಅಪ್ಪ , “ನಿನ್ನ ಆಲ್ಬಂಗೆ ಬೇಕಿ ದ್ದರೆ ಈಗಲೇ ರೆಕಾರ್ಡ್ ಮಾಡಿಕೋ’ ಎಂದಿದ್ದರು. ಹಾಗೆ ಹೇಳಿದವರು ಕಳೆದ ಜೂನ್ ವರೆಗೂ ಸ್ಯಾಕ್ಸೋ ಫೋನ್ ಕಛೇರಿ ಕೊಡುತ್ತ ಬಂದಿದ್ದರು, ಆ ಮಾತು ಬೇರೆ.
ಅಪ್ಪನ ಪ್ರಯೋಗಶೀಲತೆಯ ಬಗ್ಗೆ ನನಗೆ ತುಂಬ ಹೆಮ್ಮೆಯಿದೆ. ಅವರ ಗುರು ಟಿ. ವಿ. ಗೋಪಾಲಕೃಷ್ಣನ್ ಸ್ವತಃ ಪ್ರಯೋಗಶೀಲರು. ಸಂಗೀತ ಶಿಕ್ಷ ಣದ ಮಟ್ಟಿಗೆ ತುಂಬ ಉದಾರಿಯಾಗಿದ್ದರು. ನನ್ನ ಅಪ್ಪನೂ ಅಷ್ಟೆ. ಪ್ರಯೋಗಶೀಲರು. ಅನೇಕ ಸಂಗೀತ ಪ್ರಯೋಗಗಳನ್ನು ನಡೆಸಿದ್ದಾರೆ. ಫ್ಯೂಶನ್‌ಗಳನ್ನು ನಿರ್ವಹಿಸಿದ್ದಾರೆ.
ಬೆಲ್ಜಿಯಂ ಮೂಲದ ಸಂಗೀತ ವಾದ್ಯವನ್ನು ಭಾರತೀಯ ಸಂಗೀತಕ್ಕೆ ಅಳವಡಿಸಿದ್ದೇ ಒಂದು ಹೊಸ ಚಿಂತನೆಯ ಸಾಧನೆ. ಹಾಗೆ, ಅಳವಡಿಸುವಾಗಲೂ ಸಂಗೀತವನ್ನು ಹಾಗೆಯೇ ಉಳಿಸಿಕೊಂಡಿದ್ದರು, ವಾದ್ಯ ಪರಿಕರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಕೊಳಲಿನಲ್ಲಾದರೆ ರಂಧ್ರ ಮತ್ತು ಬೆರಳುಗಳ ನಡುವೆ ನೇರ ಸಂಬಂಧವಿರುತ್ತಿತ್ತು. ಸ್ಯಾಕ್ಸೋಫೋನ್‌ನಲ್ಲಿ ಕೀಗಳನ್ನು ಬಳಸುತ್ತಾರೆ. ಜೊತೆಗೆ ಕೀಪ್ಯಾಡ್‌ಗಳಿರುತ್ತವೆ. ಅದರಲ್ಲಿ ಸಾಕಷ್ಟು ಪರಿಷ್ಕಾರ ನಡೆಸಿದ್ದರು. ಇದು ಒಂದು ಸುದೀರ್ಘ ಅವಧಿಯ ಪರಿಶ್ರಮದ ಫಲ. ನಮ್ಮಿಂದಲೂ ಅವರು ಅಂಥ ಪರಿಶ್ರಮವನ್ನು ನಿರೀಕ್ಷಿಸುತ್ತಿದ್ದರು.
ಶುದ್ಧ ಶಾಸ್ತ್ರೀಯ ಸಂಗೀತ ಕಛೇರಿಗೂ, ನನ್ನ ಸಿನೆಮಾ ಸಂಗೀತಕ್ಕೂ ಇರುವ ವ್ಯತ್ಯಾಸದ ಬಗ್ಗೆ ಸ್ಪಷ್ಟವಾದ ಅರಿವಿತ್ತು. ಅವರು ಹೇಳುತ್ತಿದ್ದರು, “”ನೀನು ಅಡುಗೆ ಮಾಡಿ ಇಡಬಹುದು. ಅದರ ಪರಿಮಳ ಎಲ್ಲರನ್ನೂ ಆಕರ್ಷಿಸಿರಬಹುದು. ಆದರೆ, ಅದನ್ನು ಯಾವಾಗ ಮತ್ತು ಯಾರಿಗೆ ಬಡಿಸುತ್ತಿ ಎಂಬುದು ಮುಖ್ಯ. ಎಲ್ಲ ಮನೋಸ್ಥಿತಿಯ ಜನರಿರುವ ಮದುವೆ ಮನೆಯಲ್ಲಿ ಶುದ್ಧ ಕ್ಲಾಸಿಕಲ್ ಮ್ಯೂಸಿಕ್ ನುಡಿಸಿದರೆ ಅದು ಯಾರಿಗೆ ಬೇಕು! ಶಾಸ್ತ್ರೀಯ ಸಂಗೀತವನ್ನೇ ಬಯಸುವವರ ಮುಂದೆ ಭಾವಗೀತೆ ಯಾಕೆ ಹಾಡಬೇಕು! ನೀನು ಯಾವ ಸಿನೆಮಾಕ್ಕೆ ಸಂಗೀತ ಕೊಡುತ್ತಿದ್ದಿ, ಯಾರು ನಿನ್ನ ಸಂಗೀತವನ್ನು ಆಲಿಸುತ್ತಿದ್ದಾರೆ- ಈ ಎಲ್ಲ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೋ. ನಿನಗೆ ಎಲ್ಲ ವಾದ್ಯಗಳನ್ನು ನುಡಿಸುವುದಕ್ಕೆ ತಿಳಿದಿದೆಯೊ ಇಲ್ಲವೊ ಎಂಬುದು ಮುಖ್ಯವಲ್ಲ. ನೀನು ಅದನ್ನು ಅಳವಡಿಸುವ ಕೌಶಲವನ್ನು ಮಾಡಿರುವುದು ಬಹಳ ಮುಖ್ಯ. ವಯಲಿನ್‌ನಂಥ ತಂತಿವಾದ್ಯಕ್ಕೆ ಮತ್ತು ಸ್ಯಾಕ್ಸೋಫೋನ್‌ನಂಥ ಗಾಳಿವಾದ್ಯಕ್ಕೆ ಅವುಗ ಳದ್ದೇ ಆದ ವ್ಯತ್ಯಾಸವಿದೆ. ವಯಲಿನ್‌ನಲ್ಲಿ “ಬೋ’ವನ್ನು ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಮುಟ್ಟುವಷ್ಟು ಕಾಲಾವಧಿಯಲ್ಲಿ ಒಂದು ಸ್ವರವನ್ನು ನಿರಂತರ ವಾಗಿ ಹೊಮ್ಮಿಸಲು ಸಾಧ್ಯವಾಗುತ್ತದೆ. ಅದನ್ನು ಮುಂದುವರಿಸಿದರೆ ಅದು ಮಧ್ಯದಲ್ಲಿಯೋ ಕಟ್ ಆಗಲೇಬೇಕು. ಕಟ್ ಆಗದಂತೆಯೂ ನುಡಿಸುವುದಕ್ಕೆ ಸಿದ್ಧಿ ಬೇಕು, ಅದಿರಲಿ. ಆದರೆ ಸ್ಯಾಕ್ಸೋಫೋನ್‌ನಂಥ ವಾದ್ಯಗಳಲ್ಲಿ ನಿರಂತರ ನಾದ ಹೊಮ್ಮಿಸುವಿಕೆಯ ಸಾಧ್ಯತೆ ಹೆಚ್ಚು. ಅಂದರೆ, ಉಸಿರಿನ ಬಲದಲ್ಲಿ ಒಂದು ಸ್ವರ ವನ್ನು ನಿರಂತರವಾಗಿ ನುಡಿಸುತ್ತಿರಬಹುದು. ಹೀಗೆ, ಪ್ರತಿವಾದ್ಯಗಳಿಗೂ ಅವುಗಳದ್ದೇ ಆದ ಸ್ವರೂಪವಿದೆ. ಅದನ್ನು ತಿಳಿದಿದ್ದರೆ ಮಾತ್ರ ಸಿನೆ ಮಾದಂಥ ಮಾಧ್ಯಮದಲ್ಲಿ ಸಂಗೀತ ನಿರ್ದೇ ಶ ಕ ನಾ ಗಲು ಸಾಧ್ಯ”
ನನ್ನ ಬದುಕಿನ ಹಾದಿ ಖಚಿತವಾಗುತ್ತಿದ್ದಂತೆ, ನಾನು ಚೆನ್ನೈನ ಸ್ಟುಡಿಯೋದಲ್ಲಿಯೇ ಸಕ್ರಿಯನಾಗಿ, ಅಂದರೆ, ಸಂಗೀತಗಾರನಾಗಿಯೂ ಸಾಮಾನ್ಯ ಕೆಲಸಗಾರನಾಗಿಯೂ ನನ್ನ ಹೊಸ ದಿನಗಳನ್ನು ಆರಂಭಿಸಿದ್ದೆ. ಅಪ್ಪ ಬೇಡವೆಂದಿರಲಿಲ್ಲ. ಅಲ್ಲಿ ನನ್ನ ಆಲ್ಬಂನ ಆವೃತ್ತಿಗಳು ಹೆಸರು ಪಡೆಯುತ್ತಿದ್ದಂತೆ ಅವರು ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿವೆ.
“”ನೋಡಪ್ಪ , ನೀನು ಈ ಕ್ಷೇತ್ರದಲ್ಲಿ ಮುಂದುವರಿಯುವುದು ದೊಡ್ಡದಲ್ಲ, ನಾನು ಶಿಫಾ ರಸು ಮಾಡಿ ದರೆ ಯಾವನೇ ನಿರ್ದೇಶಕನಾಗಲಿ, ನಿರ್ಮಾಪಕನಾಗಲಿ ನಿನಗೆ ಅವಕಾಶ ಕೊಟ್ಟಾನು. ಆದರೆ, ಸ್ವತಂತ್ರವಾಗಿ ಬೆಳೆಯಲು ಪ್ರಯತ್ನಿಸು. ನನ್ನ ಹೆಸರು ಹೇಳಿ ಬೆಳೆಯಲು ಪ್ರಯತ್ನಿಸಬೇಡ. ಸಂಸ್ಕಾರ ನನ್ನದಿರಲಿ, ಸಾಧನೆ ನಿನ್ನದೇ ಇರಲಿ. ಯಾವುದಾದರೂ ಪ್ರಶಸ್ತಿ, ಹೆಸರು ಬಂದಾಗ ಅದನ್ನು ತಲೆಗೆ ಹಚ್ಚಿಸಿಕೊಳ್ಳಬೇಡ. ಅದು ಬದುಕಿನ ಸಂತೋಷದ ಘಟನೆಗಳು ಮಾತ್ರ. ನಾವು ನಮ್ಮ ಸಾಧನೆಯನ್ನು ಮಾಡುತ್ತಲೇ ಮುಂದುವರಿಸುತ್ತಲೇ ಇರಬೇಕು.”
ಅವರೇ ಹೇಳಿದ ಹಾಗೆ, ತಮಗೆ ಪ್ರಶಸ್ತಿ, ಸಂಮಾನ ಬಂದಾಗ ಅದರ ಬಗ್ಗೆ ಸಂತೋಷಪಡುತ್ತಿದ್ದರು. ಆದರೆ, ತಾನಿನ್ನೂ ಸಾಧಿಸುವುದಕ್ಕಿದೆ ಎಂಬುದನ್ನು ದೃಢವಾಗಿ ನಂಬಿದ್ದರು. ಪ್ರಸಿದ್ಧಿ ಎಂಬುದು ಅವರಲ್ಲಿ ಅಹಂನ್ನು ಉಂಟುಮಾಡಲಿಲ್ಲ.
ಅವರ ಸಂಗೀತ ಕಛೇರಿಯನ್ನು ಸಾಮಾನ್ಯ ಶ್ರೋತೃವಾಗಿ ಅನುಭವಿಸಿದ್ದೇನೆ. ಆದರೆ, ಮಗನಾಗಿ ಹೆಮ್ಮೆ ಅನುಭವಿಸಿದ್ದೇನೆ ಎಂಬುದು ಕೂಡ ನಿಜವೇ. ವೇದಿಕೆಗೆ ಹೋದಮೇಲೆ ಅವರು ಮನುಷ್ಯನಾಗಿ ಉಳಿಯುತ್ತಿರಲಿಲ್ಲ. ದೇವರೇ ಆಗಿ ಬಿಡುತ್ತಿದ್ದರೋ ಏನೊ! ವಾತಾಪಿ ಗಣಪತಿಂ ಭಜೇ… ಸಾವಿರಾರು ಬಾರಿ ಕೇಳಿರಬಹುದು, ಮತ್ತೆ ಕೇಳ್ಳೋಣ ಅನ್ನಿಸುತ್ತದೆ. ಎಮ್.ಎಸ್. ಅಮ್ಮ ಅವರು ಹಾಡುತ್ತಿದ್ದ ಕುರೈ ಒಂನ್ರುಮ್ ಇಲ್ಲೈ ಹಾಡು ಎಲ್ಲ ರನ್ನು ತಟ್ಟಿದ್ದೇ. ಆದರೆ, ಅದು ಅಪ್ಪನ ಸ್ಯಾಕ್ಸೋಫೋನ್‌ನಲ್ಲಿ ಮೂಡಿಬರುವಾಗ ಅದರ ಮಾಧುರ್ಯವೇ ಬೇರೆ. ಶಿವ ರಂಜಿನಿ ರಾಗದಲ್ಲಿ ಆರಂಭವಾಗುವ ಆ ರಾಗ ಮಾಲಿಕೆಯನ್ನು ನಾನು ಎಷ್ಟು ಬಾರಿ ಕೇಳಿಲ್ಲ. ಕೇಳಿ ಕಣ್ಣೀರಾಗಿಲ್ಲ! “ನನ್ನಲ್ಲಿ ಕೊರತೆಗಳೇ ಇಲ್ಲ ಕೃಷ್ಣ. ಈ ಬದುಕೇ ನನ್ನ ಭಾಗ್ಯ ದೇವರೇ’ ಎಂಬ ಉಕ್ತಿಗೆ ಅನುಗುಣವಾಗಿ ಅಪ್ಪ ಬದುಕಿದರು. ನನ್ನ ಮಟ್ಟಿಗೆ ಅವರ ಸಂಗೀತ ಕಛೇರಿ ಎಂದರೆ ಒಂದು ಮಹಾಯಾತ್ರೆ. ಅವರು, ಆ ಯಾತ್ರೆಯಲ್ಲಿ ಕೇಳುಗರನ್ನೂ ಜೊತೆಗೆ ಕರೆದೊಯ್ಯುತ್ತಾರೆ.
ಪರಮ ದೈವಭಕ್ತರಾದ ಅಪ್ಪ ಹಲವು ದೇವಸ್ಥಾನಗಳ ಆಸ್ಥಾನ ವಿದ್ವಾಂಸರಾಗಿದ್ದರು. ಎತ್ತರವಾದ ಶರೀರದಂತೆ ನಿಲುವು ಕೂಡ ನೀಳವೇ. ಕಾರ್ಯಕ್ರಮಗಳಲ್ಲಿ ತನ್ನ ಘನತೆಗೆ ಕುಂದು ಬರುವಂತೆ ಯಾರಾದರೂ ವರ್ತಿಸಿದರೆ ತತ್‌ಕ್ಷಣ ಹೇಳಿ ಬಿಡುವಂಥ ನಿಷ್ಠುರವಾದಿ. ಅಂಥ ಮಹಾನ್ ಸಾಧಕನ ನೆರಳಲ್ಲಿ ಬದುಕಿದ್ದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ. ಈಗ ಆ ಮಹಾವೃಕ್ಷವಿಲ್ಲ. ಆದರೆ, ತಂಪಾದ ನೆರಳು ಹಾಗೆಯೇ ಇದೆ.
ಅವರು ನನ್ನ ಅಪ್ಪ. ಜೊತೆಗೆ ಗುರು, ಗೆಳೆಯ, ಮಾರ್ಗದರ್ಶಕ, ತಣ್ತೀಜ್ಞಾನಿ ಎಲ್ಲವೂ.
(ಕದ್ರಿ ಗೋಪಾಲನಾಥ್ ಅವರ ಪುತ್ರರಾಗಿರುವ ಮಣಿಕಾಂತ ಕದ್ರಿ ಪ್ರಸಿದ್ಧ ಸಿನೆಮಾ ಸಂಗೀತ ನಿರ್ದೇಶಕರು )