ತೀರ್ಥಹಳ್ಳಿಯ ಸರ್ಕಲ್ಲಿನಲ್ಲಿ ಕುವೆಂಪು ಪ್ರತಿಮೆ ಕಂಡೊಡನೆ ಬೆಳಗ್ಗಿನಿಂದ ಕಟ್ಟಿಟ್ಟುಕೊಂಡ ಕಾತರಗಳೆಲ್ಲಾ ಕಂಬಳಿಹುಳದಿಂದ ಆಗಷ್ಟೇ ಹೊರಬಂದ ಮರಿಚಿಟ್ಟೆಯಂತೆ ಪಕಪಕನೆ ಕುಣಿಯತೊಡಗಿದವು. ಕುಪ್ಪಳ್ಳಿಯೆಡೆಗೆ ನಮ್ಮ ವಾಹನ ತಿರುಗಿದೊಡನೆ ಮಡಿಲಲ್ಲಿದ್ದ ಮರಿಗುಬ್ಬಿಯನ್ನೂ ಮರೆತು ರಸಋಷಿಯು ಓಡಾಡಿದ ಹಾದಿಯನ್ನು ಮನ ಕಣ್ತುಂಬಿಕೊಳ್ಳತೊಡಗಿತು. ಸುಮಾರು 15 ಕಿ.ಮೀ. ದೂರ ಪ್ರಯಾಣದ ನಂತರ “ಕವಿಶೈಲಕ್ಕೆ ದಾರಿ’ ಎಂಬ ಫಲಕ ಕಾಣಿಸಿತು. ಚಿಟ್ಟೆಗಳೆಲ್ಲಾ ಹಾರಿ ಅದಾಗಲೇ ಕುಪ್ಪಳಿ ಮನೆಯ ಹೆಬ್ಟಾಗಿಲು ದಾಟಿದ್ದವೆನೋ, ನಾವೂ ತಲುಪಿದೆವು. ಮರಿಗುಬ್ಬಿಯನ್ನು ಮನೆಯವರ ಬಳಿ ಬಿಟ್ಟು, “ಮನೆ ಮನೆ ನನ್ನ ಮನೆ…’ ಎಂದು ಗುನುಗುತ್ತಾ ರಸಋಷಿಯುಸಿರ ಹೊತ್ತ ಗುಡಿಯ ರಸಸ್ವಾದಿಸಲು ನಾನೊಬ್ಬಳೇ ಹೊರಟೆ.
Advertisement
ಅಕ್ಷರಬ್ರಹ್ಮನ ದೇಗುಲ: ದೇವಸ್ಥಾನದ ಹೊಸ್ತಿಲು ದಾಟುವಾಗ ನಮಸ್ಕರಿಸಿಯೇ ಮುಂದಡಿ ಇಡುವುದು ರೂಢಿ. ಇಲ್ಲಿಯೂ ಹಾಗೇ ಮಾಡಿದಾಗ ಕೆಲವರು ಪಿಸಕ್ಕೆಂದರು, ಆದರೆ ನನಗದು ದೇಗುಲವೇ, ಅವರು ಅಕ್ಷರಬ್ರಹ್ಮನೇ. ಮೂರು ಚೌಕಿಯ, ಮೂರಂತಸ್ತಿನ ಹೆಮ್ಮನೆಯ ಒಳಬರುತ್ತಿದ್ದಂತೆಯೇ ಗಮನ ಸೆಳೆದವಳು ಸೊಂಪಾಗಿ ಬೆಳೆದು ನಳನಳಿಸುತ್ತಿರುವ ತುಳಸಿ. ಕವಿಮನೆಯ ಹಳೆಬಾಗಿಲು, ದಿಂಡಿಗೆ, ಪತ್ತಾಸು, ಅವರು ಮದುವೆಯಾದ ಮಂಟಪ, ಲಗ್ನಪತ್ರಿಕೆಯ ಪ್ರತಿ, ಹಿತ್ತಲ ಬಾಗಿಲ ಬಳಿಯಿರುವ ಕವಿದಂಪತಿಗಳ ದೊಡ್ಡ ಭಾವಚಿತ್ರ ಎಲ್ಲವೂ ಕಣ್ಮನಗಳಿಗೆ ಮಧುರಾನುಭೂತಿಯುಂಟು ಮಾಡಿತು. ಅದೆಷ್ಟೋ ಹೊತ್ತು ಆ ಭಾವಚಿತ್ರದೆದುರು ಸುಮ್ಮನೆ ನಿಂತಿದ್ದೆ ಭಾವಪರವಶಳಾಗಿ. ತನ್ನ ಮನೆಗೆ ಬಂದ ಕೂಸನ್ನು ಅವರೀರ್ವರು ಮಾತನಾಡಿಸುತ್ತಾ ಎದುರು ನಿಂತಿದ್ದಾರೆ ಎಂಬ ಭಾವದಲಿ ಕಣ್ಮುಚ್ಚಿದೆ, ಆ ಅಮೃತ ಘಳಿಗೆ ನನ್ನದಾಯಿತು.
Related Articles
Advertisement
ಅದು ದೈವಿಕ ಜಾಗ: ವಿಶಾಲವಾದ ಕಿಟಕಿ, ಒಂದು ಕಡೆ ಗೋಡೆಯಿಲ್ಲದ ತೆರೆದ ಕೋಣೆ, ಕವಿ ಬರೆಯಲು- ಓದಲು ಬಳಸುತ್ತಿದ್ದ ಆರಾಮ ಖುರ್ಚಿ ಇವಿಷ್ಟೇ ಅಲ್ಲಿದ್ದುದು, ನೋಡುಗರಿಗೆ. ನನಗೆ ಮಾತ್ರ ಅದು ಅಭೂತಪೂರ್ವ ಅನುಭವ ನೀಡಿದ ದೈವಿಕ ಜಾಗ ಅನಿಸಿತ್ತು. ಮನಸ್ಸಿಲ್ಲದ ಮನಸ್ಸಿಂದ ಅಲ್ಲಿಂದ ಕಾಲೆತ್ತಿಟ್ಟಾಗ ಮನದೊಳು“ರನ್ನನು ಪಂಪನು ಬಹರಿಲ್ಲಿ
ಶ್ರೀ ಗುರುವಿಹನಿಲ್ಲಿ
ಮಿಲ್ಟನ್, ಷೆಲ್ಲಿ ಬಹರಿಲ್ಲಿ
ಕವಿವರಹರಿಹರಿಲ್ಲಿ,
ಮುದ್ದಿನ ಹಳ್ಳಿ
ಕುಪ್ಪಳ್ಳಿ,
ಬಾ ಕಬ್ಬಿಗ ನಾನಿಹೆನಿಲ್ಲಿ!’ ಎಂಬ ಸಾಲಿನದ್ದೇ ನರ್ತನ. ತವರನ್ನು ಬಿಟ್ಟು ಹೊರಟ ಮಗಳಂತೆ ಮತ್ತೆ ಮತ್ತೆ ಕವಿಮನೆಯನ್ನು ನೋಡುತ್ತಾ ಹಿಂತಿರುಗಿದೆ. * ಶುಭಶ್ರೀ ಭಟ್ಟ