Advertisement

ನಮ್ಮೊಳಗೇ ಇರುವ ಎಂಇಜಿ!

09:34 AM Nov 19, 2019 | mahesh |

ಸುಮಾರು ಎರಡೂವರೆ ಶತಮಾನದಿಂದ ದೇಶದ ಸೇವೆ ಸಲ್ಲಿಸುತ್ತಿರುವ ಸೈನಿಕರ ತಂಡವೊಂದು ನಗರದ ಹೃದಯಭಾಗದಲ್ಲಿದೆ. ಅದು ಹಿಮಾಲಯದ ತುತ್ತ ತುದಿಯಲ್ಲಿ, ಕುಲು ಮನಾಲಿಯಂತಹ ಕಂದರಗಳಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸಿ ಯಾತ್ರಿಕರಿಗೆ ಸುಗಮ ದಾರಿ ಮಾಡಿಕೊಟ್ಟಿದೆ. ಉತ್ತರ ಕರ್ನಾಟಕದಂತಹ ನೆರೆಹಾವಳಿಗಳಲ್ಲಿ ನೂರಾರು ಜೀವಗಳನ್ನೂ ರಕ್ಷಿಸಿದೆ. ಈ ಹಿಂದೆ ಯುದ್ಧ ಘೋಷಣೆಗಳಾದಾಗ, ಯೋಧರೊಂದಿಗೆ ಜತೆಯಾಗಿ ಶತ್ರುಗಳನ್ನೂ ಹೊಡೆದುರುಳಿಸಿದೆ. ಅದರ ಹೆಸರು- ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌. ನಮ್ಮ ಮಧ್ಯೆಯೇ ಇರುವ ಆ ಗ್ರೂಪ್‌ ಇಂದು 239ನೇ ಸಂಸ್ಥಾಪನಾ ದಿನ ಆಚರಿಸುತ್ತಿದೆ. ಅದು ನಡೆದುಬಂದ ಹಾದಿಯ ಒಂದು ಮೆಲುಕು ಸುದ್ದಿ ಸುತ್ತಾಟದಲ್ಲಿ…

Advertisement

ಅದು 1916ರ ಸಮಯ. ಮೊದಲ ಮಹಾಯುದ್ಧದಲ್ಲಿ ಭೂಮಿಯಲ್ಲಿ ಹುದುಗಿಸಿಟ್ಟ ಸಿಡಿಮದ್ದುಗಳಿಗೆ ಸೈನಿಕರು ಬಲಿಯಾಗುತ್ತಿದ್ದರು. ಅದನ್ನು ಹೊಡೆದುಹಾಕಿ, ಶತ್ರುಗಳತ್ತ ಸೈನಿಕರು ಮುನ್ನುಗ್ಗಲು ಬಿದಿರಿನ ಕೊಳವೆಯಲ್ಲಿ ರಾಸಾಯನಿಕ ಅಂಶಗಳನ್ನು ತುಂಬಿ ಸ್ಫೋಟಿಸಿ “ಟಾರ್ಪೆಡೊ’ ಎಂಬ ಅಸ್ತ್ರವೊಂದನ್ನು ಅಭಿವೃದ್ಧಿಪಡಿಸಲಾಯಿತು. ಆ ಟಾರ್ಪೆಡೊಗೂ ಬೆಂಗಳೂರಿಗೂ ನಂಟಿದೆ. ಹಾಗಾಗಿ, ಮುಂದೆ ಅದು ವಿಶ್ವದ ರಕ್ಷಣಾ ಕ್ಷೇತ್ರದಲ್ಲಿ “ಬೆಂಗಳೂರು ಟಾರ್ಪೆಡೊ’ ಎಂದು ಪರಿಚಿತವಾಯಿತು. ಈಗಲೂ ಅಮೆರಿಕ ಸೇರಿದಂತೆ ಹಲವು ಮುಂದುವರಿದ ದೇಶಗಳ ಸೇನೆಗಳು ಇದೇ ಅಸ್ತ್ರವನ್ನು ಬಳಕೆ ಮಾಡುತ್ತಿವೆ!

ಅದನ್ನು ಅಭಿವೃದ್ಧಿಪಡಿಸಿದ್ದು ಬೆಂಗಳೂರಿನ “ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌’ (ಎಂಇಜಿ). ಅಷ್ಟೇ ಅಲ್ಲ, ಲಡಾಖ್‌ ಪ್ರದೇಶದ 18,380 ಅಡಿ ಎತ್ತರದಲ್ಲಿರುವ ಖರದುಂಗ್ಲಾ ಸೇತುವೆಯೊಂದು ತಲೆಯೆತ್ತಿದೆ. ಅದು ಈಗ ವಿಶ್ವದ ಅತಿ ಎತ್ತರದ ಸೇತುವೆ. ಆ ದಾಖಲೆ ಮೇಲೆ ಇದೇ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಹೆಸರು ಕೆತ್ತಲಾಗಿದೆ. ಐತಿಹಾಸಿಕ ಗೋದಾವರಿ ಅಣೆಕಟ್ಟೆಗೆ ಕಲ್ಲುಹೊತ್ತವರು, ಪಠಾಣ್‌ಕೋಟ್‌-ಕಾರ್ಗಿಲ್‌ ನಡುವಿನ ಕಡಿದಾದ ಮಾರ್ಗದಲ್ಲಿ ರಸ್ತೆಗೆ ಅಡಿಗಲ್ಲು ಹಾಕಿದ್ದು, ದೇಶದ ಅತಿ ವೇಗದ ಮನುಷ್ಯನನ್ನು ಕೊಟ್ಟಿದ್ದು ಸೇರಿದಂತೆ ಇಂತಹ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ ಅಗ್ಗಳಿಕೆ ಹಲಸೂರು ಕೆರೆ ಗೇಟ್‌ ಬಳಿ ಇರುವ ಎಂಇಜಿಗೆ ಸಲ್ಲುತ್ತದೆ.

ಬ್ರಿಟಿಷರು ಮದ್ರಾಸ್‌ ಬಂದರಿಗೆ ಬಂದಿಳಿದಾಗ, ಉತ್ಪನ್ನಗಳು, ಅಸ್ತ್ರಗಳನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸಲು ಜನ ಬೇಕಾಗಿತ್ತು. ಆಗ ಬ್ರಿಟಿಷರು, ಸ್ಥಳೀಯರನ್ನು ಒಗ್ಗೂಡಿಸಿ ಒಂದು ತಂಡ ರಚಿಸಿದರು. ಈಸ್ಟ್‌ ಇಂಡಿಯಾ ಕಂಪೆನಿಯ ವ್ಯಾಪಾರ-ವಹಿವಾಟಿಗೆ ನೆರವಾಗಲೆಂದು 1780ರಲ್ಲಿ ಅಸ್ತಿತ್ವಕ್ಕೆ ಬಂದ ಈ ತಂಡವು ಇಂದು ರಕ್ಷಣಾ ವಲಯದ ಹತ್ತುಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಶತಮಾನದಿಂದ ಈಚೆಗೆ ಅದು ಎಂಇಜಿ ಎಂದು ಚಿರಪರಿಚಿತವಾಗಿದೆ. ಅದರಲ್ಲಿ ಸುಮಾರು 30 ಸಾವಿರ ಸೈನಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರ ಅದು 239ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಭಾರತೀಯ ಸೇನೆಯಲ್ಲಿ ಅತ್ಯಂತ ಹಳೆಯದಾದ ಈ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ನಡೆದುಬಂದ ಹಾದಿಯ ಒಂದು ನೋಟ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

1742ರಲ್ಲಿ ಜರ್ಮನಿಯ ಆಸ್ಟ್ರಿಯಾದ ರಾಜಾ ಸಾವನ್ನಪ್ಪಿದ. ಆಗ ಆ ಸಿಂಹಾಸನದ ಮುಂದಿನ ಅಧಿಪತಿಗಾಗಿ ಬ್ರಿಟಿಷ್‌ ಮತ್ತು ಫ್ರಾನ್ಸ್‌ ನಡುವೆ ದೊಡ್ಡ ಯುದ್ಧ ನಡೆಯಿತು. ಆ ಯುದ್ಧದಲ್ಲಿ ಫ್ರಾನ್ಸ್‌ ಗೆಲುವು ಸಾಧಿಸಿತು. ಮುಂದೆ ಆ ಗೆಲುವಿನ ಓಟ ಭಾರತದಲ್ಲೂ ಮುಂದುವರಿಯಿತು. ಇದು ಬ್ರಿಟಿಷರ ನಿದ್ದೆಗೆಡಿಸಿತು. ಸೋಲಿನ ಕಾರಣಗಳನ್ನು ಹುಡುಕಲು ಶುರುಮಾಡಿತು. ಫ್ರಾನ್ಸ್‌, ಸ್ಥಳೀಯರ ನೆರವಿನಿಂದ ಈ ಗೆಲುವು ಸಾಧಿಸಿದ್ದು ಗೊತ್ತಾಯಿತು. ಆಗ ಈಸ್ಟ್‌ ಇಂಡಿಯಾ ಕಂಪೆನಿ ಒಂದು ಸಣ್ಣ ಕಾರ್ಮಿಕರ ಗುಂಪನ್ನು ಅಸ್ತಿತ್ವಕ್ಕೆ ತಂದಿತು.

Advertisement

200 ಕಾಯಂ ಕಾರ್ಮಿಕರ ಈ ಗುಂಪು ತನ್ನ ಬದ್ಧತೆಯಿಂದ ಮೇಲಧಿಕಾರಿಗಳ ಗಮನಸೆಳೆಯಿತು. ಕೇವಲ ಉತ್ಪನ್ನಗಳ ಸಾಗಾಣಿಕೆಗೆ ಸೀಮಿತವಾಗಿದ್ದ ತಂಡ ಸುರಂಗ-ಸೇತುವೆಗಳ ನಿರ್ಮಾಣ, ಕುದುರೆಗಳ ಸವಾರಿ ಮತ್ತು ಸಾಕುವುದು, ಕಂಪೆನಿಯ ಟ್ರೇಡಿಂಗ್‌ ಜತೆಗೆ ಯುದ್ಧಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಾ ಬಂದಿತು. ಹಾಗಾಗಿ, ಯುದ್ಧಗಳಿಗೆ ಆ ತಂಡವನ್ನು ತೆಗೆದುಕೊಂಡು ಹೋಗಲು ಶುರುಮಾಡಿದರು. ಮಹಾಯುದ್ಧಗಳು, ಅದಕ್ಕಿಂತ ಮುನ್ನ ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ನಡೆದ ಯುದ್ಧಗಳಲ್ಲಿ ಈ ತಂಡ ನೀಡಿದ ಪ್ರದರ್ಶನ ಗಮನಸೆಳೆಯಿತು.

ದೋಭಿಗೆ ಮಹಾವೀರ ಚಕ್ರ: ಮುಂದೆ ಸ್ವಾತಂತ್ರ್ಯದ ನಂತರದಲ್ಲಿ ನಡೆಯುವ ಯುದ್ಧಗಳಲ್ಲೂ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಭಾರತೀಯ ಸೇನೆಗೆ ಹೆಗಲು ಕೊಟ್ಟಿತು. 1947-48ರಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ಸಂಚಿನಿಂದ ಜಮ್ಮುವಿನಲ್ಲಿ ಸೇತುವೆ ಮುರಿದುಬಿದ್ದಿತ್ತು. ಆ ಸಂಚಿನಲ್ಲಿ ಕಂಪೆನಿ ಕಮಾಂಡರ್‌ ಆಫೀಸರ್‌ ಸಿಲುಕಿದ್ದರು. ಅವರಿಗೆ ಗುಂಡು ಕೂಡ ತಗುಲಿ ಗಾಯಗೊಂಡಿದ್ದರು. ಆಗ ಅವರ ಕೈಲಿದ್ದ ಬಂದೂಕನ್ನು ತೆಗೆದುಕೊಂಡು, ಆರು ಜನ ಶತ್ರುಗಳನ್ನು ಹೊಡೆದುರುಳಿಸಿದ್ದಲ್ಲದೆ, ಆ ಅಧಿಕಾರಿಯನ್ನು ಸುಮಾರು 12.5 ಕಿ.ಮೀ.ವರೆಗೆ ಹೊತ್ತುಕೊಂಡು ಜೀವ ರಕ್ಷಿಸಿದ್ದ ರಾಮ ಚಂದರ್‌ ಇದೇ ಎಂಇಜಿ ತಂಡದವರು. ಅವರಿಗೆ ಮಹಾವೀರ ಚಕ್ರ ನೀಡಿ ಸನ್ಮಾನಿಸಲಾಯಿತು.

ಅಂದಹಾಗೆ ರಾಮ ಚಂದರ್‌ ಒಬ್ಬ ದೋಭಿಯಾಗಿದ್ದರು. ಅವರಿಗೆ ಗುಂಡುಹಾರಿಸುವುದು ಕೂಡ ಗೊತ್ತಿರಲಿಲ್ಲ. ಇದಕ್ಕೂ ಮುನ್ನ ಅಂದರೆ 2ನೇ ಮಹಾಯುದ್ಧದಲ್ಲಿ ಸಹ ಸೈನಿಕರನ್ನು ರಕ್ಷಿಸಲು ಸ್ವತಃ ಗ್ರೂಪ್‌ನ ಅಧಿಕಾರಿಯೊಬ್ಬರು ಕ್ರಿಯಾಶೀಲಗೊಂಡ “ಮೈನ್‌’ ಮೇಲೆ ಧುಮುಕಿ ಪ್ರಾಣಾರ್ಪಣೆ ಮಾಡಿದ್ದರು. ಆ ಅಧಿಕಾರಿಗೆ ಬ್ರಿಟಿಷರಿಗೆ ನೀಡುತ್ತಿದ್ದ ಅತ್ಯುನ್ನತ ಗೌರವ “ಜಾರ್ಜ್‌ ಕ್ರಾಸ್‌’ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಎಂಇಜಿ ಬದ್ಧತೆಗೆ ಇದು ಒಂದು ಚಿಕ್ಕ ಉದಾಹರಣೆ. ಇಂದು ದೇಶದ ಅಣೆಕಟ್ಟು, ಸೇತುವೆಗಳು, ನೆರೆಹಾವಳಿಯ ರಕ್ಷಣಾ ಕಾರ್ಯಗಳಿಗೆ ಇದು ಶ್ರಮಿಸುತ್ತಿದೆ.

“ಗ್ರೇಮ್ಯುವಲ್‌’ ಸಮಾಧಿಗೆ ವಿಶೇಷ ಗೌರವ: ಅದು ಮೊದಲ ಮಹಾಯುದ್ಧದ ಸಮಯ. “ಗ್ರೇಮ್ಯುವಲ್‌’ ಎಂಬ ಹೆಸರಗತ್ತೆಯೊಂದಿಗೆ ಯೋಧರ ಹೊರಟಿದ್ದ ಮಾರ್ಗದಲ್ಲಿ ಶತ್ರುಗಳು “ಮೈನ್‌’ ಹುದುಗಿಸಿಟ್ಟಿದ್ದರು. ಆದರೆ, ಇದನ್ನು ವಾಸನೆಯಿಂದ ಕಂಡುಹಿಡಿದ ಗ್ರೇಮ್ಯುವಲ್‌ ಮುಂದೆಹೋಗಲಿಲ್ಲ. ಆಗ ಸಂದೇಹ ಬಂದು ಮಣ್ಣು ಕೆದಕಿ ನೋಡಿದಾಗ, ಸಿಡಿಮದ್ದು ಪತ್ತೆಯಾಯಿತು. ಆ ಹೆಸರಗತ್ತೆಯ ಸಮಯಪ್ರಜ್ಞೆಯಿಂದ ಕೆಲವು ಸೈನಿಕರ ಜೀವ ಉಳಿಯಿತು. ನಂತರದಿಂದ ಸೈನಿಕರು ಮುನ್ನುಗ್ಗುವ ಮೊದಲು ಈ ಹೆಸರಗತ್ತೆಯನ್ನು ಮೊದಲು ಮುಂದೆಬಿಡಲಾಗುತ್ತಿತ್ತು. ಅದು ಮಾರ್ಗ ಸುರಕ್ಷಿತ ಎಂದು ಸೂಚನೆ ನೀಡಿದ ನಂತರ ಸೈನಿಕರು ಅದನ್ನು ಹಿಂಬಾಲಿಸುತ್ತಿದ್ದರು. ಈ ಕಾರಣಕ್ಕಾಗಿ ಗ್ರೇಮ್ಯುವಲ್‌ ಸಮಾಧಿಗೆ ಈಗಲೂ ಅತ್ಯಂತ ಗೌರವ ನೀಡಲಾಗುತ್ತದೆ.

ಹೌದು, ಗ್ರೇಮ್ಯುವಲ್‌ ಉಳಿದ ಹೆಸರಗತ್ತೆಗಳಿಗಿಂತ ತುಸು ಭಿನ್ನವಾಗಿತ್ತು. ಯಾಕೆಂದರೆ, ಅದು ನಾಯಿಯಂತೆ ಮೂಸಿನೋಡುತ್ತಿತ್ತು. ಮೈನ್‌ನಂತಹ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚುತ್ತಿತ್ತು. 40 ವರ್ಷಗಳ ಕಾಲ ಅದು ಸೇನೆಯಲ್ಲಿ ಸೇವೆ ಸಲ್ಲಿಸಿತು. ಸಾವನ್ನಪ್ಪಿದ ನಂತರ ಅದರ ನಾಲ್ಕೂ ಖುರಪುಟಗಳ ಪೈಕಿ ಮೂರನ್ನು ಇಲ್ಲಿನ ಮೂರು ರೆಜಿಮೆಂಟ್‌ಗಳಲ್ಲಿ ಹಾಗೂ ಒಂದು ಖುರಪುಟವನ್ನು ಲಂಡನ್‌ನಲ್ಲಿ ಗೌರವಾರ್ಥವಾಗಿ “ಮಸಿ ಕುಡಿಕೆ’ ರೂಪದಲ್ಲಿ ಬಳಕೆ ಮಾಡಲಾಗುತ್ತಿತ್ತು. ಈಗ ಪ್ರದರ್ಶನಕ್ಕೆ ಇಡಲಾಗಿದೆ.

1 ಕುಟುಂಬ; 5 ತಲೆಮಾರು!: ಒಂದೇ ಕುಟುಂಬದ ಐದು ತಲೆಮಾರುಗಳು ಈ ಎಂಇಜಿನಲ್ಲಿ ಸೇವೆ ಸಲ್ಲಿಸಿದ್ದೂ ಇದೆ. ಚಿನ್ನೈಯನ್‌ ಕುಟುಂಬದ ಐದು ತಲೆಮಾರಿನ ಐದು ತಲೆಮಾರುಗಳ 16 ಸದಸ್ಯರು 1843ರಿಂದ 1973ರವರೆಗೆ ವಿವಿಧ ಹಂತಗಳಲ್ಲಿ ಗ್ರೂಪ್‌ಗೆ ಭರ್ತಿಯಾಗಿ ನಿವೃತ್ತರಾಗಿದ್ದಾರೆ. ಮೊದಲಿಗೆ 1843ರಲ್ಲಿ ಚಿನ್ನೈಯನ್‌ ಭರ್ತಿಯಾಗಿ, 1874ರಲ್ಲಿ ನಿವೃತ್ತರಾದರು. ಐದನೇ ತಲೆಮಾರಿನ ಹೃದಯರಾಜ್‌ ಆ ಕುಟುಂಬದ ಕೊನೆಯವರು.

ಕೌತುಕದ ಕೇಂದ್ರ ಮ್ಯೂಸಿಯಂ: ಎಂಇಜಿ ಬೆಳೆದುಬಂದ ಹಾದಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಲಸೂರಿನ ಎಂಇಜಿ ಕೇಂದ್ರದಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸಲಾಗಿದೆ. ಅಲ್ಲಿ ಗ್ರೂಪ್‌ ಮಾಡಿದ ಸಾಧನೆಗಳು, ಭಾಗವಹಿಸಿದ್ದ ಯುದ್ಧಗಳ ಸಾಕ್ಷಿಗುಡ್ಡೆಗಳು, ಗ್ರೂಪ್‌ ಸದಸ್ಯರಿಗೆ ನೀಡಲಾದ ಮೊದಲ ವೇತನ ಬೆಳ್ಳಿಯ ಪಗೋಡ, 1843ರ ಮಿಯಾನಿ ಯುದ್ಧದಲ್ಲಿ ಶೌರ್ಯ ಮೆರೆದ ಯೋಧರಿಗೆ ಬ್ರಿಟೀಷ್‌ ಅಧಿಕಾರಿ ನೀಡಿದ ದೂಪಾ, ಯುದ್ಧದ ನಂತರ ವಶಪಡಿಸಿಕೊಂಡ ಜಪಾನಿನ ಕೈಗೆ ಕಟ್ಟುವ ಕಂಪಾಸ್‌ (ಅವು ಈಗಲೂ ಕೆಲಸ ಮಾಡುತ್ತಿವೆ!), ಧ್ವಜಗಳು, ನಾಣ್ಯಗಳು ಪುಳಕಗೊಳಿಸುತ್ತವೆ.

ಪ್ರಶಸ್ತಿಗಳ ಸುರಿಮಳೆ
ಕ್ರೀಡೆಯಲ್ಲೂ ಎಂಇಜಿ ಸೈನಿಕರ ಸಾಧನೆ ಗಮನಾರ್ಹವಾಗಿದ್ದು, ಇದುವರೆಗೆ 10 ಅರ್ಜುನ ಪ್ರಶಸ್ತಿ, 5 ದ್ರೋಣಾಚಾರ್ಯ ಮತ್ತು ಎರಡು ಪದ್ಮಶ್ರೀ ಮುಡಿಗೇರಿವೆ. ಮಿಲ್ಕಾಸಿಂಗ್‌ ಅವರ ದಾಖಲೆಯನ್ನು ಸರಿಗಟ್ಟಿದ್ದು ಇದೇ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ನ ಅನಿಲ್‌ ಕುಮಾರ್‌. ಇದರಿಂದ “ಅತಿ ವೇಗದ ಮನುಷ್ಯ’ ಎಂಬ ಗರಿಮೆಯೂ ಅವರಿಗೆ ಬಂದಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next