Advertisement

ಸಮಾನ ಮನಸ್ಕರ ಸಭೆ ಭಿನ್ನಮತವಲ್ಲ

11:25 AM Apr 30, 2019 | pallavi |

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ, ಒಡಕು ಇಲ್ಲ. ಎಲ್ಲರೂ ಒಗ್ಗೂಡಿಕೊಂಡು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶಾಸಕ ಎಸ್‌.ಟಿ. ಸೋಮಶೇಖರ ಅನೌಪಚಾರಿಕ ಸಭೆ ಕರೆದಿದ್ದಾರೆ. ಅದು ಭಿನ್ನಮತಕ್ಕೆ ಸಂಬಂಧಿಸಿದ್ದಲ್ಲ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದಿಷ್ಟು ಶಾಸಕರು ಒಂದೆಡೆ ಸೇರಿ ಭೋಜನಕೂಟ ಮಾಡಲು ಹಾಗೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕುರಿತು ಚರ್ಚಿಸುವ ಸಲುವಾಗಿ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಬೇಡವೆಂದು ತಿಳಿಸಿದ್ದರಿಂದ ಸಭೆ ಮುಂದೂಡಿದ್ದಾರೆ. ಸಭೆ ಸೇರಿದರೆ ಬಂಡಾಯವಲ್ಲ. ಅದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ಶಾಸಕ ರಮೇಶ ಜಾರಕಿಹೊಳಿ ವಿದೇಶಕ್ಕೆ ಹೋಗಬೇಡ ಅನ್ನಲು ಆಗಲ್ಲ. ಬಂಡಾಯ ಶಮನಕ್ಕಾಗಿ ಅವರೊಂದಿಗೆ ಸಂಧಾನಕ್ಕೆ ಪ್ರಯತ್ನ ಮಾಡಲಾಗಿದೆ. ಆದರೆ ಇನ್ನೂ ಅವರ ಮನಃ ಪರಿವರ್ತನೆ ಆಗಿಲ್ಲ. ಮುಂದೆ ಆಗಬಹುದೆಂಬ ವಿಶ್ವಾಸವಿದೆ ಎಂದರು.

ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಇರುವುದು ಸಾಮಾನ್ಯ.ಅಂತಹವರನ್ನು ಮನವೊಲಿಸಲಾಗುವುದು. ಯಾರೂ ಬಂಡಾಯ ಏಳಲ್ಲ. ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮೈತ್ರಿ ಪಕ್ಷದ ವತಿಯಿಂದ ದಿ. ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರು ಪಕ್ಷದ ಹೈಕಮಾಂಡ್‌ನ‌ ತೀರ್ಮಾನದಂತೆ ನಾಮಪತ್ರ ಸಲ್ಲಿಸಿದ್ದಾರೆ. ಶಿವಾನಂದ ಬೆಂತೂರ ಸೇರಿದಂತೆ ಕೆಲವು ಆಕಾಂಕ್ಷಿಗಳಲ್ಲಿ ಅಸಮಾಧಾನ ಸಹಜ. ಮನವೊಲಿಸಲಾಗುವುದು ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಶಾಸಕರಾದ ಮುನಿರತ್ನ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್‌ ಸದಸ್ಯರಾದ ಭೈರತಿ ಸುರೇಶ, ಶ್ರೀನಿವಾಸ ಮಾನೆ, ಮುಖಂಡ ಲಕ್ಷ್ಮಿನಾರಾಯಣ, ಹು-ಧಾ ಮಹಾನಗರ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ ಮೊದಲಾದವರಿದ್ದರು.

ಕೊನೆ ಕ್ಷಣ ಡಿಕೆಶಿ ಪ್ರವಾಸ ರದ್ದು
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿ ಜವಾಬ್ದಾರಿ ನೀಡಿದ್ದು, ಅವರು ಸೋಮವಾರ ಬೆಳಗ್ಗೆ ಕ್ಷೇತ್ರಕ್ಕೆ ಆಗಮಿಸುವ ಕುರಿತು ಕಾರ್ಯಕ್ರಮ ಪಟ್ಟಿ ಸಿದ್ಧವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಲ ಕಾರಣಾಂತರಗಳಿಂದ ಅವರು ತಮ್ಮ ಪ್ರವಾಸ ರದ್ದುಗೊಳಿಸಿದರು. ಕುಂದಗೋಳ ಉಪ ಚುನಾವಣೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೋಮವಾರ ಅಂತಿಮ ದಿನವಾಗಿದ್ದರಿಂದ ಸಿಎಲ್ಪಿಸಿ ಅಧ್ಯಕ್ಷ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಸೇರಿದಂತೆ ಪಕ್ಷದ ಪ್ರಮುಖರು ಕುಂದಗೋಳಕ್ಕೆ ತೆರಳಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ನಗರಕ್ಕೆ ಆಗಮಿಸಿದರು. ಆದರೆ ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿ ಹೊತ್ತಿರುವ ಡಿ.ಕೆ. ಶಿವಕುಮಾರ ಅವರು ಮಾತ್ರ ಒಮ್ಮೆಲೆ ತಮ್ಮ ಪ್ರವಾಸ ಮೊಟಕುಗೊಳಿಸಿದ್ದು ಹಲವು ಚರ್ಚೆಗಳಿಗೆ ಇಂಬು ನೀಡಿದೆ.
ಜಿಪಂಗೊಬ್ಬ ಸಚಿವ-ಗ್ರಾಪಂಗೊಬ್ಬ ಶಾಸಕರ ತಂಡ
ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪಚುನಾವಣೆಯನ್ನು ಗೆಲ್ಲಲೇಬೇಕೆಂಬ ಛಲಕ್ಕೆ ಬಿದ್ದಿರುವ ಕಾಂಗ್ರೆಸ್‌ ಮತಬೇಟೆಗಾಗಿ ಕ್ಷೇತ್ರದ ಪ್ರತಿ ಜಿಪಂ ಕ್ಷೇತ್ರಕ್ಕೆ ಒಬ್ಬ ಸಚಿವ, ಪ್ರತಿ ಗ್ರಾಪಂಗೆ ಒಬ್ಬ ಶಾಸಕ ಇಲ್ಲವೇ ಮಾಜಿ ಶಾಸಕರ ನೇತೃತ್ವದ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ನೇತೃತ್ವದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಕುಂದಗೋಳ ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ವಿವಿಧ ಕಾರ್ಯಗಳ ಕುರಿತು ಚರ್ಚಿಸಲಾಗಿದೆ.

Advertisement

ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರತಿ ಜಿಪಂ ಕ್ಷೇತ್ರಕ್ಕೆ ಒಬ್ಬ ಸಚಿವರ ನೇತೃತ್ವದಲ್ಲಿ ಸುಮಾರು 30-35 ಜನರುಳ್ಳ ತಂಡ ಕಾರ್ಯ ನಿರ್ವಹಿಸಲಿದೆ. ಅದೇ ರೀತಿ ಗ್ರಾಪಂ ಮಟ್ಟದಲ್ಲಿ ಶಾಸಕರ ನೇತೃತ್ವದ ಸಮಿತಿ ಕಾರ್ಯ ನಿರ್ವಹಿಸಲಿದೆ. ಕುಂದ‌ಗೋಳ ಕ್ಷೇತ ವ್ಯಾಪ್ತಿಯಲ್ಲಿ 6 ಜಿಪಂ ಕ್ಷೇತ್ರ, 40 ಗ್ರಾಪಂಗಳು ಬರುತ್ತಿದ್ದು, ಉಸ್ತುವಾರಿಗೆ ನೇಮಕಗೊಳ್ಳುವ ಸಚಿವರು, ಶಾಸಕರು ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದಂತೆ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ನೀಡಿದ ಹಲವು ಭಾಗ್ಯಗಳು, ಪ್ರಸ್ತುತ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಬೆಳೆ ಸಾಲಮನ್ನಾ ಸೇರಿದಂತೆ ವಿವಿಧ ಜನಪರ ಯೋಜನೆಗಳು ಹಾಗೂ ದಿ| ಸಿ.ಎಸ್‌. ಶಿವಳ್ಳಿ ಅವರಿಂದ ಕ್ಷೇತ್ರದ ಅಭಿವೃದ್ಧಿ, ಬಡವರ-ಹಿಂದುಳಿದವರ ಬಗ್ಗೆ ಅವರು ಹೊಂದಿದ್ದ ಕಾಳಜಿ ಎಲ್ಲವನ್ನೂ ಮುಂದಿಟ್ಟುಗೊಂಡು ಮತದಾರರ ಮನ ಗೆಲ್ಲಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ.

ಕುಸುಮಾವತಿ ಶಿವಳ್ಳಿ ಅವರ ಬಗೆಗಿನ ಅನುಕಂಪವನ್ನು ಮತವಾಗಿಸಿಕೊಳ್ಳಲು ಕಾರ್ಯಕರ್ತರು ಶ್ರಮಿಸಬೇಕು. ತನು-ಮನ-ಧನದೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಶಿಯಲ್ಲಿ ಸಮಾವೇಶ

ಕುಂದಗೋಳ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಮೇ 3ರಂದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಸಂಶಿಯಲ್ಲಿ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಸಚಿವ ಡಿ.ಕೆ. ಶಿವಕುಮಾರ ಸೇರಿದಂತೆ ಅನೇಕ ಸಚಿವರು, ಜೆಡಿಎಸ್‌ನ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next