ಪಿರಿಯಾಪಟ್ಟಣ: ತಾಲೂಕಿನಲ್ಲಿ ಬಿಜೆಪಿಗೆ ಪೂರಕವಾದ ವಾತವರಣವಿದ್ದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಹುಣಸೂರಿನಲ್ಲಿ ನಡೆಯುವ ಜನಸಂಪರ್ಕ ಅಭಿಯಾನ-ಬೃಹತ್ ಕಾರ್ಯಕರ್ತರ ಸಭೆಗೆ ತಾಲೂಕಿನಿಂದ ಅತಿ ಹೆಚ್ಚು ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಲ್ಲಿದ್ದೆವೆ ಎಂದು ಜಿಲ್ಲಾಧ್ಯಕ್ಷ ಕೋಟೆ.ಎಂ.ಶಿವಣ್ಣ ಹೇಳಿದರು.
ಪಟ್ಟಣ ಬಿಜೆಪಿ ಕಚೇರಿಯಲ್ಲಿ ಜನಸಂಪರ್ಕ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹುಣಸೂರು ಪಟ್ಟಣದ ಪುರಸಭೆ ಮೈದಾನದಲ್ಲಿ ನಡೆಯುವ ಜನಸಂಪರ್ಕ ಅಭಿಯಾನ-ಬೃಹತ್ ಕಾರ್ಯಕರ್ತರ ಸಭೆಯಲ್ಲಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೈಸೂರು ಗ್ರಾಮಾಂತರ ತಾಲೂಕುಗಳು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹುಣಸೂರು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲೂಕುಗಳಿಗೆ ಸಮೀಪದಲ್ಲಿದ್ದು ಇವುಗಳಿಂದ ಸುಮಾರು 10 ರಿಂದ 15 ಸಾವಿರ ಕಾರ್ಯಕರ್ತರ ನಿರೀಕ್ಷೆಯಲ್ಲಿದ್ದು ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಜೆ.ರವಿ ಮಾತನಾಡಿ, ಹುಣಸೂರಿನಲ್ಲಿ ನಡೆಯುವ ಜನಸಂಪರ್ಕ ಅಭಿಯಾನದ ಸಭೆ ನಮ್ಮ ಪಕ್ಷದ ಶಕ್ತಿ ಪ್ರದರ್ಶನದ ವೇದಿಕೆಯೆಂದೇ ಭಾವಿಸಿ ಸಂಘಟನೆಯಲ್ಲಿ ತೊಡಗಿರುವ ಎಲ್ಲಾ ಕಾರ್ಯಕರ್ತರು ಮಾಜಿ ಸಚಿವರು ಹಾಗೂ ರಾಜ್ಯ ರೈತಮೋರ್ಚಾ ಅಧ್ಯಕ್ಷರಾದ ಸಿ.ಹೆಚ್. ವಿಜಯಶಂಕರ್ ಹಾಗೂ ಸಂಸದ ಪ್ರತಾಪ್‌ಸಿಂಹ ನಾಯಕತ್ವದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರಲ್ಲದೆ, ತಾಲೂಕಿನಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲ್ಲವಿರುವುದಿಲ್ಲ, ರಾಜಾಧ್ಯಕ್ಷರ ಪ್ರವಾಸದ ಕೆಲದಿನಗಳ ನಂತರ ಎಲ್ಲಾ ಗೊಂದಲಗಳಿಗೂ ತೆರೆಬೀಳಲಿದೆ ಎಂದರು.
ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ: ಜೂ.11 ರಂದು ಹುಣಸೂರಿನಲ್ಲಿ ನಡೆಯುವ ಜನಸಂಪರ್ಕ ಅಭಿಯಾನ-ಬೃಹತ್ ಕಾರ್ಯಕರ್ತರ ಸಭೆಗೆ ಪಿರಿಯಾಪಟ್ಟಣದಿಂದ ಹುಣಸೂರು ಪಟ್ಟಣದವರೆಗೆ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಪಕ್ಷದ ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ, ತಮ್ಮ ಗೆಳೆಯರು ಹಾಗೂ ಪಕ್ಷದ ಹಿತೈಷಿಗಳನ್ನು ಕರೆತಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಯುವ ಮೋರ್ಚಾ ಅಧ್ಯಕ್ಷ ಪಿ.ಟಿ.ಲಕ್ಷ್ಮೀ ನಾರಾಯಣ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ, ಕಾರ್ಯದರ್ಶಿ ಬೋರೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಕೊಣಸೂರುಆನಂದ್, ಉಪಾಧ್ಯಕ್ಷ ಶಿವರಾಮ್‌ಸತ್ಯಗಾಲ, ಮಹದೇವಣ್ಣ, ಮಾಜಿ ಅಧ್ಯಕ್ಷ ಆರ್.ಟಿ.ಸತೀಶ್, ಮುಖಂಡರಾದ ಭಾಗ್ಯ, ಲೋಕಪಾಲಯ್ಯ, ಕೆ.ಕೆ.ಶಶಿ, ಆನಂದ್‌ಕಾನೂರು, ವಿವಿಧ ಮೋರ್ಚಾ ಅಧ್ಯಕ್ಷರುಗಳಾದ ಎಸ್.ಟಿ.ಕೃಷ್ಣಪ್ರಸಾದ್, ಮಹದೇವ್, ನಳಿನಿ, ವೀರಭದ್ರ, ಷಣ್ಮುಖ ಹಾಗೂ ಶಕ್ತಿಕೇಂದ್ರಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.