Advertisement

ಸಭೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ

01:08 PM Mar 31, 2019 | Lakshmi GovindaRaju |

ಚಾಮರಾಜನಗರ: ಬೇರೆ ಬೇರೆ ಪಕ್ಷಗಳಲ್ಲಿ ನಡೆಯುವಂತೆ ವೀರಶೈವ ಸಮಾಜದ ಕಾಂಗ್ರೆಸ್‌ ಮುಖಂಡರ ಸಭೆ ನಡೆಸಲಾಗಿದೆ. ಇದಕ್ಕೆ ಮಾಜಿ ಶಾಸಕ ಸಿ.ಗುರುಸ್ವಾಮಿ ಅವರು ವಿಶೇಷ ಅರ್ಥ ಕಲ್ಪಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಎಸ್‌.ಬಾಲರಾಜು ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಿ.ಗುರುಸ್ವಾಮಿ ಅವರು ಕಾಂಗ್ರೆಸ್‌ ವತಿಯಿಂದ ವೀರಶೈವ ಲಿಂಗಾಯತ ಮುಖಂಡರ ಸಭೆ ಕರೆದಿದ್ದನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಲಿಂಗಾಯತ ಸಮಾಜದ ಸಭೆ ಮಾತ್ರವಲ್ಲದೇ ಇತರ ಸಮುದಾಯದ ಸಭೆಗಳನ್ನೂ ನಡೆಸಲಾಗಿದೆ.

ರತ್ನೆಶ್ವರಿ ಹೋಟೆಲ್‌ನಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಲಾಗಿದೆ. ಉಪ್ಪಾರ, ನಾಯಕ ಸಮುದಾಯದ ಸಭೆಗಳನ್ನೂ ನಡೆಸಲಾಗಿದೆ. ಹಾಗೆಯೇ ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಮುಖಂಡರ ಸಭೆಯನ್ನೂ ನಡೆಸಲಾಗಿದೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಗುರುಸ್ವಾಮಿ ಅವರು ತಾವು ಅಧಿಕಾರದಲ್ಲಿದ್ದ ವೇಳೆ ಲಿಂಗಾಯತ ಮುಖಂಡರನ್ನು ಸೇರಿಸಿ ಮಾತನಾಡಿಲ್ಲವೇ? ಧ್ರುವನಾರಾಯಣ ಅವರ ವಿರುದ್ಧ ಗುರುಸ್ವಾಮಿಯವರಿಗೆ ಟೀಕೆ ಮಾಡಲು ಬೇರೆ ಯಾವ ಕಾರಣಗಳೂ ಇಲ್ಲದೆ, ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ.

ಸಂಸದರಾಗಿ ಧ್ರುವನಾರಾಯಣ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಶಾಸಕರಾಗಿ ಗುರುಸ್ವಾಮಿ ಅವರು ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಹೋಲಿಕೆ ಮಾಡಲಿ. ಕೆಲಸ ಮಾಡಿ ತೋರಿಸಬೇಕೇ ಹೊರತು, ವೈಯಕ್ತಿಕವಾಗಿ ನಿಂದನೆ ಮಾಡುವುದಲ್ಲ ಎಂದು ದೂರಿದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಕಳೆದ 10 ವರ್ಷಗಳಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಲ್ಲಾ ಸಮುದಾಯಗಳನ್ನೂ ಸಮಾನ ದೃಷ್ಟಿಯಿಂದ ಪರಿಗಣಿಸಿದ್ದಾರೆ. ಬಸವ ಭವನಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ.

ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಬಗ್ಗೆ ಇವರು ಮಾತನಾಡುತ್ತಿಲ್ಲ. ಇನ್ನೊಬ್ಬರ ಬಗ್ಗೆ ಆರೋಪ ಮಾಡುವಾಗ ಅರಿತು ಮಾಡಬೇಕು. ಗುರುಸ್ವಾಮಿಯವರು ಮಾಡಿರುವ ಬಹಳಷ್ಟು ತಪ್ಪು ನಮ್ಮಲ್ಲಿದೆ ಎಂದರು.

ಧ್ರುವನಾರಾಯಣ ಅವರು ಜಾರಿಗೊಳಿಸಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಐಸೆಟ್‌ ಎಂಬ ಸ್ವಯಂ ಸೇವಾ ಸಂಸ್ಥೆ ಕಿರು ಹೊತ್ತಿಗೆ ಬಿಡುಗಡೆ ಮಾಡಿದೆ. ಇದನ್ನು ಧ್ರುವನಾರಾಯಣ ಹೊರತಂದಿಲ್ಲ. ಅವರೇ ಹೊರತಂದಿದ್ದರೆ, ರಾಜಶೇಖರ ಮೂರ್ತಿಯವರ ಭಾವಚಿತ್ರವನ್ನು ಹಾಕುತ್ತಿದ್ದರು ಎಂದು ಬಾಲರಾಜು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ನಾಮಪತ್ರ ಸಲ್ಲಿಸಲು ಅವರನ್ನು ಕರೆದಿಲ್ಲ, ಇವರನ್ನು ಕರೆದಿಲ್ಲ ಎಂದು ಗುರುಸ್ವಾಮಿ ಆಕ್ಷೇಪಿಸಿದ್ದಾರೆ. ಆದರೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಂದಿಗೆ ನಾಲ್ಕೇ ಜನರಿಗೆ ಅವಕಾಶವಿರುವುದು.

ಕ್ಷೇತ್ರದ ಶಾಸಕರ ಜೊತೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯವರು ನಾಮಪತ್ರ ಸಲ್ಲಿಸುವಾಗ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ನಿರಂಜನ್‌ರನ್ನು ಕರೆಯದೆ ಕಡೆಗಣಿಸಿದ್ದಾರೆ. ಆದರೆ ನಾವು ಮಾಜಿ ಶಾಸಕ ಎ.ಆರ್‌.ಕೆಯವರನ್ನೂ ಕರೆದಿದ್ದೇವೆ. ಅವರನ್ನು ಕರೆದಿಲ್ಲವೆಂದು ಹೇಳುವುದು ಗುರುಸ್ವಾಮಿ ಅವರ ಸ್ಥಾನಮಾನಕ್ಕೆ ತಕ್ಕುದಲ್ಲ ಎಂದು ಟೀಕಿಸಿದರು.

ಆದಿ ಕರ್ನಾಟಕ ಸಂಘಕ್ಕೆ ಹಿಂದಿನ ಮಂತ್ರಿಗಳಾಗಿದ್ದ ಬಿ.ರಾಚಯ್ಯ ಅವರು 4 ಎಕರೆ ಜಮೀನನ್ನು ನೀಡಿದ್ದರು. ತಮ್ಮ ತಂದೆ ರಂಗಸ್ವಾಮಿ ಅವರ ಹೆಸರಿನಲ್ಲಿದ್ದ ಜಮೀನನ್ನು ಕಾನೂನು ಬದ್ಧವಾಗಿ ಸಂಸದ ಧ್ರುವನಾರಾಯಣ ಮಾರಾಟ ಮಾಡಿದ್ದಾರೆ.

ಇದನ್ನು ತಿಳಿಯದ ಸಿ.ಗುರುಸ್ವಾಮಿ ಅವರು 40 ಎಕರೆ ಅಕ್ರಮ ಮಾರಾಟ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಸುಳ್ಳು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಪೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಅವರನ್ನು ಹಿಂದಕ್ಕೆ ತಳ್ಳಿ ಪಕ್ಷದಲ್ಲಿ ಮುಂಚೂಣಿ ನಾಯಕರಾಗಬೇಕೆಂಬ ಉದ್ದೇಶದಿಂದ, ಯಾರನ್ನೋ ಓಲೈಸಲು ಗುರುಸ್ವಾಮಿಯವರು ಈ ಆರೋಪಗಳನ್ನು ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ನಮ್ಮ ಪಕ್ಷದಿಂದ ಲಿಂಗಾಯತ ಮುಖಂಡರ ಸಭೆ ಕರೆದಿದ್ದೇವೆ. ನಮಗೆ ಅವಶ್ಯಕತೆ ಇದ್ದರಿಂದ ಸಭೆ ಕರೆದಿದ್ದೇವೆ. ನಾವು ಕಾಂಗ್ರೆಸ್‌ ಹೈಕಮಾಂಡ್‌ ಮಾತು ಕೇಳಿ ಕೆಲಸ ಮಾಡುತ್ತೇವೆಯೇ ಹೊರತು, ವಿಪಕ್ಷಗಳ ಮಾತು ಕೇಳಿ ಸಂಘಟನೆ ಮಾಡಲಾಗುತ್ತದೆಯೇ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಧ್ರುವನಾರಾಯಣ ಅವರು ಮರಿಯಾಲದ ಮುರುಘರಾಜೇಂದ್ರ ಸಂಸ್ಥೆಗೆ ಅನುದಾನ ನೀಡಿದ್ದಾರೆ. ಬಂದಿಗೌಡನಹಳ್ಳಿ, ಯಾನಗಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ವೀರಶೈವ ಬಸವಭವನಕ್ಕೆ ಅನುದಾನ ನೀಡಿದ್ದಾರೆ. ಕಾಂಗ್ರೆಸ್‌ ಜಿಲ್ಲೆಯಲ್ಲಿ ಲಿಂಗಾಯತರಿಗೆ ಅನೇಕ ಸ್ಥಾನಮಾನಗಳನ್ನು ನೀಡಿದೆ. ಗುರುಸ್ವಾಮಿ ಅವರ ಪುತ್ರಿ ನಾಗಶ್ರೀ ಅವರಿಗೇ ಜಿಪಂ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದರು. ಜಿಪಂ ಉಪಾಧ್ಯಕ್ಷ ಜೆ.ಯೋಗೀಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next