ಮಂಗಳೂರು: ವೈದ್ಯಕೀಯ ವೃತ್ತಿ ಅತ್ಯುನ್ನತ ಸೇವೆಯಾಗಿದ್ದು, ಕಷ್ಟಕಾಲದಲ್ಲಿ ವೈದ್ಯರು ದೇವ ಸ್ವರೂಪಿಗಳು. ಜನಸೇವೆಯ ದೃಷ್ಟಿ ಯಿಂದ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿತು ವೈದ್ಯಕೀಯ ವೃತ್ತಿಗೆ ಬರುತ್ತಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಿನ್ನೆಲೆ ಗಾಯಕಿ ಹಾಗೂ ಮಲಯಾಳ ಟೆಲಿವಿಷನ್ ನಿರೂಪಕಿ, ನಟಿ ರಿಮಿ ಟೋಮಿ ಹಾರೈಸಿದರು.
ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಫೆ. 22ರಿಂದ 25ರ ವರೆಗೆ ಆಯೋಜಿಸಲಾಗಿರುವ “ಅಡ್ರಿನಾಲಿನ್-2017′ ಅಂತರ್ ಕಾಲೇಜು ಸಂಗೀತ, ಕಲೆ ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು, ಕಾಲೇಜಿನ ಸಾಧನೆಯ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಈ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಿಜವಾದ ಭಾಗ್ಯಶಾಲಿಗಳು ಎಂದರು. ಈ ಸಂದರ್ಭದಲ್ಲಿ ಸಿನೆಮಾ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳ ಮನ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ನಿರ್ದೇಶಕ ಫಾ| ಪ್ಯಾಟ್ರಿಕ್ ರಾಡ್ರಿಗಸ್ ಮಾತನಾಡಿ, ಸಾಧಕರು ಎಲ್ಲ ಕ್ಷೇತ್ರದಲ್ಲಿದ್ದಾರೆ. ಕೃಷಿ, ವಿಜ್ಞಾನ, ಉದ್ಯಮ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗೆ ಕಾರಣವಾಗಿರುವ ಅವರ ಕನಸು ನನಸು ಮಾಡುವ ಮನಃಸ್ಥಿತಿಯನ್ನು ಶ್ಲಾಘಿಸಬೇಕು. ಅವರು ನಮಗೆ ಮಾದರಿ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಗಳ ಕನಸನ್ನು ನನಸು ಮಾಡಲು ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದು, ಈ ಮೂಲಕ ಅವರ ಪ್ರತಿಭೆಗಳು ಹೊರಹೊಮ್ಮಿ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಅತಿಥಿಗಳಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾ ಧಿಕಾರಿ ಫಾ| ರಿಚರ್ಡ್ ಕುವೆಲ್ಲೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ| ರುಡಾಲ್ಫ್ ರವಿ ಡೇಸಾ, ಫಾದರ್ ಮುಲ್ಲರ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಫಾ| ಅಜಿತ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ| ಜಯಪ್ರಕಾಶ್ ಆಳ್ವ, ಡಾ| ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.
ಡಾ| ನಿಕೋಲ್ ಪಿರೇರಾ ಅವರು ಸ್ವಾಗತಿಸಿ, ಫಾ| ಮುಲ್ಲರ್ ಮೆಡಿಕಲ್ ಕಾಲೇಜಿನ ಸ್ಟುಡೆಂಟ್ ಕೌನ್ಸಿಲ್‌ನ ಅಧ್ಯಕ್ಷ ರೇಮಂಡ್ ಆ್ಯಂಟನಿ ಅವರು ವಂದಿಸಿದರು.