ಕೋಟ: ಇಂದಿನ ಮಾಧ್ಯಮ ವ್ಯವಸ್ಥೆ ಸಮಾಜ ದಲ್ಲಾಗುವ ಕೆಟ್ಟ ಕೆಲಸಗಳನ್ನು ವೈಭವೀಕರಿಸುತ್ತದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉತ್ತಮ ಕೆಲಸಗಳ ಕುರಿತು ಹೆಚ್ಚು ಪ್ರಚಾರ ನೀಡಿದರೆ ಸಾಮಾಜಿಕ ವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
ಅವರು ಸೋಮವಾರ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಜಾತ್ರೆಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಮ್ಮಾನ ನೆರವೇರಿಸಿ ಮಾತನಾಡಿದರು. ದೇಗುಲಗಳು ಈ ರಾಷ್ಟ್ರದ ಸಾಂಸ್ಕೃತಿಕ ವೈಭವದ ಪ್ರತೀಕ. ಸಾಲಿಗ್ರಾಮ ಕ್ಷೇತ್ರ ದೇಶಕ್ಕೆ ಮಾದರಿಯಾಗುವಂತ ಧಾರ್ಮಿಕ ಕ್ಷೇತ್ರ ಎಂದು ಹೇಳಿದ ಅವರು ಕಾರ್ಯಕ್ರಮದಲ್ಲಿ ಸಮ್ಮಾನಿತರಾದ ಸಮಾಜ ಸೇವಕ ವಿಶು ಶೆಟ್ಟಿ ಸೇರಿದಂತೆ ಎಲ್ಲರ ಕೊಡುಗೆಯನ್ನು ಶ್ಲಾಘಿಸಿದರು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ, ವಿಶ್ರಾಂತ ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಮಂಗಳೂರು ಕರಾವಳಿ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ ರಾವ್, ಕಾರ್ಪೊರೇಶನ್ ಬ್ಯಾಂಕ್ ಮಹಾ ಪ್ರಬಂಧಕ ಬಾಲಕೃಷ್ಣ ಅಲ್ಸೆ, ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸುಮಂಗಲಾ ಕೇಶವ ಐತಾಳ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾ ಸಾಧಕ ಕೃಷ್ಣ ದೇವಾಡಿಗ ಹಾಗೂ ಶೈಕ್ಷಣಿಕ ಸಾಧಕ ಡಾ| ಸ್ವಸ್ತಿಕ್ ಉಪಾಧ್ಯ ಅವರನ್ನು ಗೌರವಿಸಲಾಯಿತು.
ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಪಿ. ವೆಂಕಟ್ರಾವ್ ಮುಂತಾದವರು ಶುಭ ಹಾರೈಸಿದರು. ದೇಗುಲದ ಆಡಳಿತ ಮಂಡಳಿ ಉಪಾಧ್ಯಕ್ಷ ಬಿ. ರಘುನಾಥ ಸೋಮಯಾಜಿ, ಖಜಾಂಚಿ ಪ್ರಸನ್ನ ತುಂಗ, ಸದಸ್ಯರಾದ ವೈ| ಸದಾರಮ ಹೇಳೆì, ಜಿ. ಚಂದ್ರಶೇಖರ ಉಪಾಧ್ಯ, ಎಂ.ಕೆ. ಅಶೋಕ್ ಕುಮಾರ್ ಹೊಳ್ಳ, ಬಿಜೂರು ಬಲರಾಮ ಮಯ್ಯ, ಪಿ. ಸುಬ್ರಹ್ಮಣ್ಯ ಹೇಳೆì ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ. ಮಂಜುನಾಥ ಮಯ್ಯ ಸ್ವಾಗತಿಸಿ, ಶಿಕ್ಷಕ ಶ್ರೀಧರ್ ಶಾಸ್ತ್ರಿ, ಸತೀಶ್ ಐತಾಳ ಕಾರ್ಯಕ್ರಮ ನಿರೂಪಿಸಿದರು.