ಧಾರವಾಡ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ನಗರದ ಗುಲಗಂಜಿಕೊಪ್ಪದ ಈದ್ಗಾ ಮೈದಾನದಲ್ಲಿ ಬುಧವಾರ ಸಾವಿರಾರು ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ ಈದ್ಗಾ ಮೈದಾನದಲ್ಲಿ ಧರ್ಮಗುರುಗಳು ಪ್ರಾರ್ಥನೆ ಬೋಧಿಸಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜನರು ಅಲ್ಲಾಹನನ್ನು ಸ್ಮರಿಸಿದರು. ಇದೇ ವೇಳೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು. ಅಪಾರ ಸಂಖ್ಯೆ ಹಿರಿಯರು ಮತ್ತು ನೂರಾರು ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಪ್ರಾರ್ಥನೆ ಮುಗಿದ ಬಳಿಕ ಇದೇ ವೇಳೆ ಬಡವರು, ನಿರ್ಗತಿಕರಿಗೆ ನಗದು, ದವಸ, ವಸ್ತ್ರ ಮತ್ತಿತರ ಸಾಮಗ್ರಿಗಳನ್ನು ನೀಡಿ ರಂಜಾನ್ ಮಹತ್ವ ಸಾರಿದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಅಧಿಕಾರಿ ಎಸ್. ನಿಸಾರ ಅಹಮ್ಮದ ಮಾತನಾಡಿ, ಪವಿತ್ರ ರಂಜಾನ್ ತಿಂಗಳಲ್ಲಿ ಒಟ್ಟು 30 ಉಪವಾಸಗಳು ಮಾಡಲಾಗುತ್ತಿದ್ದು, ಮಕ್ಕಳಿಗೆ, ರೋಗಿಗಳಿಗೆ, ಗರ್ಭಿಣಿಯರಿಗೆ ಉಪವಾಸದಲ್ಲಿ ವಿನಾಯತಿ ಇದೆ. ಇನ್ನೂಳಿದವರಿಗೆ ಉಪವಾಸಗಳನ್ನು ಮಾಡಬೇಕೆಂದು ಪವಿತ್ರ ಧರ್ಮ ಗ್ರಂಥ ಖುರಾನನಲ್ಲಿ ಹೇಳಲಾಗಿದೆ. ಉಪವಾಸದಿಂದ ಬೇರೆಯವರ ಕಷ್ಟ ಕಾರ್ಪಣ್ಯಗಳು ಅರಿವು ಆಗುತ್ತದೆ. ಆರ್ಥಿಕ ಸದೃಢತೆ ಹೊಂದಿದವರು ತಮ್ಮ ಆದಾಯದಲ್ಲಿ ಶೇ.2.5 ಹಣವನ್ನು ಬಡವರಿಗಾಗಿ ಮೀಸಲಿಡ ಬೇಕಾಗುತ್ತದೆ ಎಂದರು.
ಈದ್ಗಾ ಮೈದಾನದ ಒಳಗಡೆ ರಸ್ತೆ ನಿರ್ಮಿಸಲು ಗ್ರಾಮೀಣ ಶಾಸಕರ ಅನುದಾನದಡಿ 20 ಲಕ್ಷ ರೂ.ಗಳು ಸರ್ಕಾರದಿಂದ ಮಂಜೂರಾಗಿದ್ದು, ಕಾರ್ಯ ಪೂರ್ಣಗೊಂಡಿದೆ. ಅಂಜುಮನ್ ಪದವಿ ಪೂರ್ವ ವಿದ್ಯಾಲಯಕ್ಕೆ 4 ಲಕ್ಷ ರೂ.ಗಳು ಅನುದಾನ ಬಂದಿದ್ದು, ಈ ಹಣದಿಂದ ಕಂಪ್ಯೂಟರ್‌ಗಳನ್ನು ಖರೀದಿಸಿ ಕಂಪ್ಯೂಟರ್ ಸಾಯನ್ಸ್ ವಿಭಾಗ ಪ್ರಾರಂಭಿಸಲಾಗಿದೆ ಎಂದರು.
ಬ್ಲಾಕ್ ಸಿ ವಾಣಿಜ್ಯ ಸಂರ್ಕೀಣ ಕಟ್ಟಡ ನಿರ್ಮಿಸಲು ವರ್ಕ್ಸ್ ಬೋರ್ಡ್‌ಗೆ 8 ಕೋಟಿ ಅನುದಾನ ನೀಡಲು ಮನವಿ ಮಾಡಿದ್ದು, ಕೆಲವೇ ದಿನಗಳಲ್ಲಿ ಮಂಜೂರ ಆಗುವ ಸಾಧ್ಯತೆ ಇದೆ. ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ತರಗತಿಗಳು ಒಳಗೊಂಡ ಸಂಸ್ಥೆ ಇದಾಗಿದೆ. ಪ್ರತಿ ವರ್ಷದಂತೆ ಉರ್ದು ಪ್ರಾರ್ಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಸಮವಸ್ತ್ರ ನೀಡಲಾಗಿದೆ ಎಂದರು.
ಮಳೆಗಾಗಿ ಪ್ರಾರ್ಥನೆ: ಮಳೆಯ ಸಲುವಾಗಿ ಲಕಮಾಪೂರ ಹಾಗೂ ದಾಸನಕೊಪ್ಪ ಗ್ರಾಮದ ಮುಸ್ಲಿಂ ಬಾಂಧವರು ಈದ್ ನಮಾಜ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.