Advertisement

ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜನದ್ದೇ ದರ್ಬಾರ್‌

01:50 PM May 09, 2019 | pallavi |

ಹಾವೇರಿ: ಹಣ್ಣುಗಳ ರಾಜ ಎನಿಸಿದ ಮಾವಿನ ಹಣ್ಣು ಭರಪೂರ ಪ್ರಮಾಣದಲ್ಲಿ ಮಾರುಕಟ್ಟೆಗೆ ಆಗಮಿಸಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವುಗಳದ್ದೇ ದರ್ಬಾರ್‌ ಜೋರಾಗಿದೆ.

Advertisement

ಆಪೂಸ್‌, ಕಲ್ಮಿ, ಸಿಂಧೂರ, ಮಲ್ಲಿಕಾ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದು, ಪ್ರಸಕ್ತ ವರ್ಷ ಮಾವಿನ ಇಳುವರಿ ಕುಂಠಿತಗೊಂಡಿದ್ದರಿಂದ ದರದಲ್ಲಿ ಏರಿಕೆ ಕಂಡು ಬಂದಿದೆ. ಮಳೆಯ ಕೊರತೆ, ವಿವಿಧ ರೋಗಬಾಧೆ, ಅಕಾಲಿಕ ಮಳೆ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಮಾವು ಬೆಳೆ ಬರದೆ ಇರುವುದೇ ಇಳುವರಿ ಕುಸಿತಕ್ಕೆ ಕಾರಣವಾಗಿದೆ.

ನಗರದ ಮಾರುಕಟ್ಟೆಗೆ ವಿವಿಧ ತಳಿಗಳ ಮಾವು ಬಂದಿವೆ. ಹಾಗನಲ್ಲ, ಆನವಟ್ಟಿ, ಹುಬ್ಬಳ್ಳಿ, ದಾವಣಗೆರೆ, ಹರಿಹರ ಸೇರಿದಂತೆ ವಿವಿಧ ಕಡೆಗಳಿಂದ ವ್ಯಾಪಾರಸ್ಥರು ಹಣ್ಣುಗಳನ್ನು ಖರೀದಿ ಮಾರಾಟ ಮಾಡುತ್ತಿದ್ದು, ಸ್ಥಳೀಯ ಬಸ್‌ ನಿಲ್ದಾಣ, ಹಳೇ ಕೋರ್ಟ್‌ ಸರ್ಕಲ್, ಕಾಗಿನಲೆ ಕ್ರಾಸ್‌, ಹಾನಗಲ್ ರಸ್ತೆ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾವಿನ ಹಣ್ಣುಗಳು ಗ್ರಾಹಕರನ್ನು ತನ್ನತ್ತ ಕೈ ಬಿಸಿ ಕರೆಯುತ್ತಿವೆ.

ವೈವಿಧ್ಯ ತಳಿಗಳು: ನಗರದ ಮಾರುಕಟ್ಟೆಗೆ ವಿವಿಧ ತಳಿಯ ಮಾವಿನ ಹಣ್ಣುಗಳ ಆಗಮನವಾಗಿದ್ದು, ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಆಪೂಸ್‌, ಕಲ್ಮಿ, ರಸಪೂರಿ, ಮಲ್ಲಿಕಾ, ಸಿಂಧೂರ, ತೋತಾಪುರಿ ತಳಿಗಳ ಮಾವು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಹಣ್ಣಿಗೆ 80-100 ರೂ., ಒಂದು ಡಜನ್‌ ಹಣ್ಣಿಗೆ 250-350 ರೂ., ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಗಗಳಿಂದ ಮಾವು ಅಧಿಕ ಪ್ರಮಾಣದಲ್ಲಿ ಬಂದರೆ ದರ ಇಳಿಯುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹಾನಗಲ್ಲ, ಶಿಗ್ಗಾವಿ ತಾಲೂಕುಗಳಲ್ಲೇ ಸುಮಾರು 3 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಭರಪೂರ ಮಾವು ಬೆಳೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಬೆಳೆಗಾರರು ಕಳೆದ ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆ, ಗಾಳಿಯಿಂದ ಮಾವು ನೆಲ ಕಚ್ಚಿದ್ದು ಸಂಕಷ್ಟ ಎದುರಿಸುವಂತಾಗಿದೆ. ಪ್ರಸಕ್ತ ವರ್ಷ ಸುಮಾರು 1 ಲಕ್ಷ‌ 20 ಸಾವಿರ ಟನ್‌ ಮಾವು ಉತ್ಪಾದನೆಯಾಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಶೇ.25ರಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

Advertisement

ಪ್ರಸಕ್ತ ವರ್ಷ ಒಂದು ತಿಂಗಳು ತಡವಾಗಿ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಹಣ್ಣಿನ ಇಳುವರಿ ಕುಸಿದಿದ್ದು ದರ ಏರಿಕೆಗೆ ಕಾರಣವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹಣ್ಣಿಗೆ ಬೇಡಿಕೆ ಇದೆ.
•ಮಾಬೂಲಿ ದೇವಗಿರಿ, ಹಣ್ಣಿನ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next