Advertisement

ಮಾರುಕಟ್ಟೆಯಂತಾಗಿದೆ ಶಾಸಕರ ಭವನ ಆವರಣ 

07:00 AM Jul 24, 2018 | Team Udayavani |

ಬೆಂಗಳೂರು: ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಟ್ಟಡದಲ್ಲಿ ಕಾರ್‌ ಪಾರ್ಕಿಂಗ್‌ಗೆ ಜಾಗವಿಲ್ಲ. ಸಾರ್ವಜನಿಕ ಶೌಚಾಲಯವೂ ಇಲ್ಲ. ನೀರು ನಿಂತು ಓಡಾಡಲು ಆಗದ ಪರಿಸ್ಥಿತಿ. ಆದರೂ ಕಟ್ಟಡಕ್ಕೆ ಕಾಮಗಾರಿ ಪೂರ್ಣ ಪ್ರಮಾಣಪತ್ರ ನೀಡಿ ಬಿಲ್‌ ಪಾವತಿಯೂ ಆಗಿದೆ. 

Advertisement

ಪಕ್ಕದಲ್ಲೇ ಆಸ್ಪತ್ರೆ ಇದೆಯಾದರೂ ಅಲ್ಲಿ ಹೋಗಲೂ ಸಾಧ್ಯವಿಲ್ಲದಂತೆ ನೀರು ನಿಂತಿದೆ. ಟೆಂಡರ್‌ ಕರೆಯದೆ ಅಂಗಡಿ,  ಹೋಟೆಲ್‌ಗ‌ಳನ್ನು ಗುತ್ತಿಗೆ ನೀಡಲಾಗಿದೆ… ಇಷ್ಟೆಲ್ಲಾ ಆಗಿರುವುದು ಬೇರೆಲ್ಲೂ ಅಲ್ಲ, ಶಕ್ತಿಸೌಧ ವಿಧಾನಸೌಧದ ಪಕ್ಕದಲ್ಲೇ ಇರುವ ಶಾಸನ ರಚಿಸುವವರಿಗಾಗಿ ನಿರ್ಮಿಸಿರುವ ಶಾಸಕರ ಭವನದ ಆವರಣದಲ್ಲಿ. ಶಾಸಕರ ಭವನದ ಅನಾನುಕೂಲತೆಗಳು, ಅಲ್ಲಿ ಆಗಿರುವ ಲೋಪಗಳ ಕುರಿತಂತೆ ಬಂದ ದೂರುಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲನೆ ನಡೆಸಿದಾಗ ಈ ಅಂಶಗಳು ಕಂಡುಬಂದಿವೆ.

ತಕ್ಷಣ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಕಾರ್ಯದರ್ಶಿಗಳಿಬ್ಬರನ್ನೂ ಸ್ಥಳಕ್ಕೆ ಕರೆಸಿದ ಸಭಾಪತಿಯವರು, ಶಾಸಕರ ಭವನಕ್ಕೆ ಸಂಬಂಧಿಸಿದ ಕಾಮಗಾರಿಗಳು, ಟೆಂಡರ್‌, ಖರೀದಿ ಸೇರಿ ಎಲ್ಲ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.ಅಲ್ಲದೆ, ವಿಧಾನ ಪರಿಷತ್‌ ವ್ಯಾಪ್ತಿಗೆ ಬರುವ ಶಾಸಕರ ಭವನದ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್‌ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next