ಹುಮನಾಬಾದ: ತಾಲೂಕಿನ ಮಾಣಿಕ ನಗರದ ಮಾಣಿಕಪ್ರಭುಗಳ 204ನೇ ಜಯಂತಿ, ದತ್ತ ಜಯಂತಿ ಹಾಗೂ ಮಾಣಿಕಪ್ರಭುಗಳ ಜಾತ್ರಾ ಮಹೋತ್ಸವ ಸಂಗೀತ ದರ್ಬಾರ್ ಹಾಗೂ ಶೋಭಾಯಾತ್ರೆ ಮೂಲಕ ಸೋಮವಾರ ಅಂತ್ಯಗೊಂಡಿತು.
ರವಿವಾರ ರಾತ್ರಿ ಪ್ರಭು ಸಂಸ್ಥಾನದಲ್ಲಿ ಡಾ| ಜ್ಞಾನರಾಜ ಮಾಣಿಕಪ್ರಭುಗಳು ರಾಜಸಿಂಹಾಸನದ ಮೇಲೆ ಆಸೀನರಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಿದರು. ನಂತರ ಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭುಗಳು ಒಂದು ವರ್ಷಗಳ ಕಾಲ ನಡೆದ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.
ಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ದಿ| ಮಾಣಿಕ ಪಬ್ಲಿಕ್ ಶಾಲೆ ಆರಂಭಗೊಂಡು 50ನೇ ವರ್ಷಾಚರಣೆ ಫೆ.1ರಂದು ಅದ್ದೂರಿಯಾಗಿ ನಡೆಯಲ್ಲಿದೆ. ಪ್ರಭು ಸಂಸ್ಥಾನ ಸಂಗೀತದಿಂದ ಗುರುತಿಸಿಕೊಂಡಿದ್ದು, ದೇಶದ ಖ್ಯಾತ ಸಂಗೀತ ಕಲಾವಿದರು ಪ್ರಭುಗಳ ಸಂಜೀವಿನಿ ಸಮಾಧಿ ಎದುರಿಗೆ ಸೇವೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಅನೇಕ ಸಂಗೀತ ಕಲಾವಿದರು ಇಲ್ಲಿಗೆ ಭೇಟಿ ನೀಡಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇದೇ ವೇಳೆ ಪರಂಪರೆಯಂತೆ ಸಂಸ್ಥಾನಕ್ಕೆ ವಿಶೇಷ ಸೇವೆ ಸಲ್ಲಿಸಿದ ಭಕ್ತರಿಗೆ ಮಾಣಿಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಪೈಕಿ ಮಾಣಿಕರಾವ ಆಗ್ರಹಾರಕರ್, ರಾಮ ಬಿದಾವಂತ ಹಾಗೂ ಡಾ| ಸುನೀಲ ಬಿದಾವಂತ ದುಬಲಗುಂಡಿ, ಮಧುಕರ ಮಹರಾಜ ಬಸವಕಲ್ಯಾಣ,ಕೇಶವರಾವ ನಿಟ್ಟೂರಕರ್ ಅವರಿಗೆ ಮಾಣಿಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಹಾರಾಷ್ಟ್ರ ಪುಣೆಯ ವಿಜಯ ಕೊಪ್ಪರಕರ್, ಪಂಡಿತ ಜಯಂತ, ಪಂಡಿತ ಶ್ರೀಪಾದ ಹೆಗೆಡೆ, ಪಂಡಿತ ಅಜಯ ಸುಗಾಂವಕರ್ ಗಾಯನ ಸೇವೆ ಸಲ್ಲಿಸಿದರು. ಪಂಡಿತ ಜಾಧವ ಸತಾರಾ ಶಹನಾಯಿ ವಾದನ ಸೇವೆ ಸಲ್ಲಿಸಿದರು. ತೆಲಂಗಾಣ ಜಹಿರಾಬಾದ್‌ನ ಕು| ಇಶೀತಾ ಮತ್ತು ಈಶಾನಿ ಕುಲಕರ್ಣಿ ಭರತನಾಟ್ಯಪ್ರದರ್ಶನ ಸೇವೆ ಸಲ್ಲಿಸಿದ್ದು, ಇನ್ನೂ ಅನೇಕ ಕಲಾವಿದರು ಸಂಗೀತ ದರ್ಬಾರ್‌ನಲ್ಲಿ ಸಂಗೀತ ಸೇವೆ ಸಲ್ಲಿಸಿ ಪ್ರಭುಗಳಿಗೆ ನಮನ ಸಲ್ಲಿಸಿದರು.