Advertisement
ಆದರೆ ಒಂದಂತೂ ನಿಜ ರಾಜಕೀಯ ನಾಯಕರುಗಳು ಸುಲಭವಾಗಿ ಮರೆಯುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಚುನಾವಣೆಗೆ ಮೊದಲು ಪರಸ್ಪರರನ್ನು ನಿಂದಿಸಿಕೊಂಡಿದ್ದವರು ಈಗ ತೆರೆದ ತೋಳುಗಳಿಂದ ಬಿಗಿದಪ್ಪಿ ಕೊಳ್ಳುತ್ತಿದ್ದಾರೆ. ಸಭ್ಯತೆಯ ಸೀಮೋಲ್ಲಂಘನೆಗೈದು ಅಶಿಷ್ಟತೆಯಿಂದ ದೂಷಿಸಿಕೊಂಡವರು, ನಟನೆ ಮುಗಿಸಿ ಅದಾಗಷ್ಟೇ ಬಣ್ಣ ತೊಳೆದುಕೊಂಡು ಹೊರ ಬರುತ್ತಿರುವ ಕಲಾವಿದರಂತೆ ಕುಲು ಕುಲು ನಗುತ್ತಾ ವಿಜಯದ ಸಂಕೇತ ತೋರುತ್ತಾ ಮಾಧ್ಯಮಗಳಿಗೆ ಪೋಸು ಕೊಡುವ ದೃಶ್ಯ ಕಂಡ ಮತದಾರರ ಪಾಡು ಇಂಗು ತಿಂದ ಮಂಗನಂತಾಗಿದೆ. ತಾವು ಮೋಸಗೊಂಡೆ ವೆಂಬ ಹತಾಶ ಭಾವ ಅವರಲ್ಲಿ ಆವರಿಸಿಕೊಂಡಿದೆ.
ಯಾವುದು ಆದ್ಯತೆಯಾಗಬೇಕು? ಪಕ್ಷವೋ, ವ್ಯಕ್ತಿಯೋ, ಸಾಧನೆಯೋ, ಸಿದ್ಧಾಂತವೋ ಎಂದು ಚುನಾವಣೆಗೆ ಮೊದಲು ಅನೇಕ ಮತದಾರರು ಮಾನಸಿಕ ಹೊಯ್ದಾಟಕ್ಕೆ ಸಿಲುಕಿದ್ದರು. ಕೊನೆಗೂ ಚಿಂತಿಸಿ ಯಾವುದೋ ಒಂದು ನಿರ್ಧಾರಕ್ಕೆ ಬಂದು ಮತ ನೀಡುವುದು ಅನಿವಾರ್ಯ ಆಗಿತ್ತು. ಮತದಾರರ ತೀರ್ಮಾನಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲವಲ್ಲ! ಎಲ್ಲಾ ಬಸ್ಸುಗಳಲ್ಲಿ ಶಾಸಕರ ಮೀಸಲು ಸೀಟು ಇದ್ದರೂ ಅದರಲ್ಲಿ ಪ್ರಯಾಣ ಬೆಳೆಸುವ ಶಾಸಕರು ಈಗಂತೂ ಅಪರೂಪ. ಎಲ್ಲಾ ಪಕ್ಷಗಳಲ್ಲೂ ಬೆರಳೆಣಿಕೆಯ ಸರಳ ವ್ಯಕ್ತಿಗಳು, ಕೆಲಸ ಮಾಡುವ ಸಾಧಕರು ಇದ್ದಾರೆ. ಬಸ್‌ಸ್ಟಾಂಡಿ ನಲ್ಲಿ ಮಡದಿಯೊಂದಿಗೆ ಬಸ್ಸಿಗಾಗಿ ಕುಳಿತಿದ್ದ ಶಾಸಕರೊಬ್ಬರ ಫೋಟೊವೊಂದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದ ವ್ಯಕ್ತಿಯೊಬ್ಬರು ಇಂತಹ ಸರಳ ವ್ಯಕ್ತಿಯನ್ನು ನಾವು ಸೋಲಿಸಿದೆವೆಲ್ಲಾ ಎಂದು ನೋವು ತೆರೆದಿಟ್ಟಿದ್ದರು. 25 ವರ್ಷ ರಾಜ್ಯ ವೊಂದರ ಮುಖ್ಯಮಂತ್ರಿಯಾಗಿದ್ದು ಮಾಜಿಯಾಗಿರುವ ಇನ್ನೋರ್ವ ಪ್ರಾಮಾಣಿಕ ರಾಜಕಾರಣಿಗೆ ಇನ್ನೊಂದು ಅವಕಾಶ ನಮ್ಮ ಮತದಾರ ಕೊಡಲಿಲ್ಲವಲ್ಲ ಎಂಬ ರೋಷವನ್ನು ಮಗದೊಬ್ಬ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದರು. ಹೌದು ರಾಜ್ಯದಲ್ಲೂ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರು ಸೋತಿದ್ದಾರೆ. ಮತದಾರನ ಬಳಿ ಇರುವುದು ಒಂದೇ ಒಂದು ಅಸ್ತ್ರ ತಾನೇ? ತನ್ನಲ್ಲಿರುವ ಅಸ್ತ್ರ ಒಮ್ಮೆ ಬಿಟ್ಟನೋ ಮುಗಿಯಿತಲ್ಲ ಅದರ ಕತೆ. ಇವಾವುದರ ಹಂಗಿಲ್ಲದ ಚುನಾಯಿತ ಪ್ರತಿನಿಧಿಗಳಿಗೆ ಇರುವ ಅಧಿಕಾರ ಅಪರಿಮಿತ. ಕೊಟ್ಟವ ಕೋಡಂಗಿ ಇಸಗೊಂಡವ ವೀರಭದ್ರ ಎನ್ನುವಂತೆ ಮತ ನೀಡಿದ ನಂತರ ಮತದಾರನನ್ನು ಕಾಡುತ್ತಿದೆ ಅನಾಥ ಭಾವ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಜನಪ್ರತಿನಿಧಿ ಜನ ಭಾವನೆಗೆ ಎಷ್ಟು ಬೆಲೆ ಕೊಡುತ್ತಾನೆ? ಛೇ! ಉಂಡ ಎಲೆಯಂತೆ ಎಸೆದುಬಿಡುತ್ತಾನೆ.
Related Articles
Advertisement
ಸಾಕಷ್ಟು ಕೆಲಸ ಮಾಡಿ ಜನಪ್ರಿಯರಾದ ಜನಪ್ರತಿನಿಧಿಯೂ ಸೋಲುಣ್ಣ ಬೇಕಾಗಬಹುದು. ಅಂತೆಯೇ ವಿಪಕ್ಷದ ರಾಜ್ಯ-ರಾಷ್ಟ್ರ ಸ್ತರದ ನೇತೃತ್ವದ ಪ್ರಬಲ ಅಲೆಯೂ ಕೆಲವೊಮ್ಮೆ ಆಡಳಿತರೂಢ ಪಕ್ಷದ ಉತ್ತಮ ಕಾರ್ಯನಿರ್ವಹಿಸಿದ ಶಾಸಕನ ಸೋಲಿಗೆ ಹಾಗೂ ವಿಪಕ್ಷದ ಅಯೋಗ್ಯ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಬಹುದು.
ವರ್ಚಸ್ವಿ ನಾಯಕತ್ವ ದೇಶದಲ್ಲಿ ಪ್ರಬಲ ನಾಯಕತ್ವ ಇದ್ದಾಗೆಲ್ಲಾ ಇಂತಹ ವಿದ್ಯಮಾನ ಸಾಮಾನ್ಯ. ಉದಾಹರಣೆಗಾಗಿ ನೆಹರೂ, ಇಂದಿರಾ ಗಾಂಧಿ, ಪ್ರಸ್ತುತದಲ್ಲಿ ನರೇಂದ್ರ ಮೋದಿಯಂತಹ ಮೇರು ವರ್ಚಸ್ಸಿನ ನಾಯಕರ ನೇತೃತ್ವದಲ್ಲಿ ಜನಪ್ರತಿನಿಧಿಗಳ ವೈಯ್ಯಕ್ತಿಕ ಸಾಧನೆಗಿಂತ ಪಕ್ಷದ ಪ್ರಭಾವವೇ ಸೋಲು-ಗೆಲುವಿಗೆ ಅಧಿಕ ಕಾರಣವಾಗಿರುತ್ತದೆ. ಇಂದಿರಾ ಗಾಂಧಿಯವರು ಜನಪ್ರಿಯತೆಯ ತುತ್ತ ತುದಿಯಲ್ಲಿರುವಾಗ ರಾಜ್ಯ ವಿಧಾನ ಸಭಾ ಚುನಾವಣೆ ಇರಲಿ ಅಥವಾ ಲೋಕಸಭಾ ಚುನಾವಣೆ ಯಿರಲಿ ಅವರ ಭಾವ ಚಿತ್ರವೊಂದೇ ಕಾಂಗ್ರೆಸ್ಸಿನ ಅಭ್ಯರ್ಥಿ ಗಳಿಗೆ ಶ್ರೀರಕ್ಷೆಯಾಗಿತ್ತು. ಕೇಂದ್ರದಲ್ಲಿ ರೈಲ್ವೆಯಂತಹ ಪ್ರಭಾವಶಾಲಿ ಖಾತೆಯನ್ನು ನಿರ್ವಹಿಸಿದ ರಾಜ್ಯದ ಮುತ್ಸದ್ದಿಯೋರ್ವರನ್ನು ಅದುವರೆಗೆ ಯಾರೂ ಕೇಳದ ತೀರಾ
ಸಾಮಾನ್ಯ ವ್ಯಕ್ತಿಯೋರ್ವರು 1977ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳಿಂದ ಸೋಲಿಸಿದ್ದು ಸುದ್ದಿಯಾಗಿತ್ತು. ಅಂದು ಇಂದಿರಾ ಗಾಂಧಿಯವರ ಹೆಸರಿನ ಮಹಿಮೆಯೇ ಅಷ್ಟು ಪ್ರಬಲವಾಗಿತ್ತು. ಹೆಚ್ಚು ಕಡಿಮೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವವೂ ಇಂದು ಅದೇ
ಪ್ರಮಾಣದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿ ಕಾಣುತ್ತಿದೆ. ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಪ್ರತಿನಿಧಿಗಳೂ ಉತ್ತಮರೆಂದು ಮತದಾರರು ಹರಸಿದ್ದಾರೆಂದು ಭಾವಿಸಬೇಕಿಲ್ಲ. ಸರಕಾರದ ಕಾರ್ಯ ವೈಖರಿಯಿಂದ ಬೇಸತ್ತಿದ್ದವರಿಗೆ ತಮ್ಮ ರೋಷವನ್ನು ವ್ಯಕ್ತಪಡಿಸಲು ಆಡಳಿತರೂಢ ಪಕ್ಷದ ಉತ್ತಮ ಅಭ್ಯರ್ಥಿಗಳನ್ನು ಸೋಲಿಸದೇ ಹಾಗೂ ವಿರೋಧಿ ಪಾಳಯದ ಅಯೋಗ್ಯ ಅಭ್ಯರ್ಥಿಗಳನ್ನು ಗೆಲ್ಲಿಸದೇ ಬೇರೆ ದಾರಿಯಿರಲಿಲ್ಲ. ಅರ್ಥಹೀನ, ಫಲಿತಾಂಶದ ಮೇಲೆ ಯಾವ ಪ್ರಭಾವ ಬೀರದ ನೋಟಾವಂತೂ ಅವರ ಆಯ್ಕೆಯಾಗುವುದು ಸಾಧ್ಯವಿರಲಿಲ್ಲ ಎಂದ ಮೇಲೆ ಈ ಖಂಡಿತ ಜನಾದೇಶವನ್ನು ಹೇಗೆ ಅರ್ಥೈಸಬೇಕು? ಸೋತವರು ಕುಗ್ಗಬೇಕಾಗಿಲ್ಲ, ಗೆದ್ದವರು ಬೀಗಬೇಕಾಗಿಲ್ಲ. ಇದು ಅಸಹಾಯಕ ಮತದಾರರ ಸೀಮಿತ ಅಧಿಕಾರದ ಪ್ರಯೋಗ ಅಷ್ಟೆ. ಕೆಲವರು ನಮ್ಮ ಸೀಟುಗಳು ಕಡಿಮೆಯಾಗಿರಬಹುದು ಮತಗಳಿಕೆ ಜಾಸ್ತಿ ಆಗಿದೆ ಎನ್ನಬಹುದು. ಇನ್ನು ಕೆಲವರು ಕಳೆದ ಬಾರಿ ನಮ್ಮ ಸೀಟಿನ ಸಂಖ್ಯೆ ಅಷ್ಟಿದ್ದದ್ದು ಈಗ ಇಷ್ಟು ಹೆಚ್ಚಾಗಿದೆ ಎಂದು ತಾವೇ ನಿಜವಾಗಿ ಗೆದ್ದವರು ಎಂದು ತಮ್ಮ ಬೆನ್ನು ತಾವೇ
ತಟ್ಟಿಕೊಂಡು ಬೀಗಬಹುದು. ಒಂದಂತೂ ನಿಜ ಯಾವ ಸರಕಾರದ ಅರ್ಧದಷ್ಟು ಮಂತ್ರಿಗಳು ಚುನಾವಣಾ ಕಣದಲ್ಲಿ ಪರಾಭವ ಕಂಡರೋ, ಯಾವ ಮುಖ್ಯಮಂತ್ರಿ ಒಂದು ಕ್ಷೇತ್ರದಲ್ಲಿ ಭಾರೀ ಪರಾಜಯ ಕಂಡು ಇನ್ನೊಂದು ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಕಂಡರೋ ಆ ಪಕ್ಷದ ಅದೇ ಹಳೆಯ ಮುಖಗಳು ಪುನಹ ಶಕ್ತಿ ಸೌಧದಲ್ಲಿ ಕುಳಿತುಕೊಂಡು ಅಧಿಕಾರ ಚಲಾಯಿಸುವುದು ನಮ್ಮ ಪ್ರಜಾಪ್ರಭುತ್ವದ ಮತ್ತು ಜನಭಾವನೆಯ ಅಣಕವೇ ಸರಿ. * ಬೈಂದೂರು ಚಂದ್ರಶೇಖರ ನಾವಡ