Advertisement

ಸೈಕಲ್‌ನಲ್ಲಿ ಬಂದವನು ಕಾರು ಓಡಿಸಿದ…

07:25 PM Feb 03, 2020 | mahesh |

ಆಗಷ್ಟೇ ಹೊಸದಾದ ದೊಡ್ಡ ಕಾರನ್ನು ಮಗ ಖರೀದಿಸಿದ್ದ. ದೇವಸ್ಥಾನದಲ್ಲಿ ಪೂಜೆಗೆ ಮಾಡಿಸಬೇಕಿದ್ದುದರಿಂದ, ಹೂ ಹಣ್ಣು ಖರೀದಿಸಿ ,ಸಂಜೆ ಆರು ಗಂಟೆಗೆ ಅದೇ ಕಾರಲ್ಲಿ ಹೊರಟೆವು. ಎಂಟು ಗಂಟೆಯ ಒಳಗೆ ನಾವು ದೇವಾಲಯದಲ್ಲಿರಬೇಕಾಗಿತ್ತು. ಕತ್ತಲೆಯಲ್ಲಿ ನಮಗೆ ಸ್ವಲ್ಪ ದಾರಿತಪ್ಪಿ, ಅವರಿವರನ್ನು ಕೇಳಿಕೊಂಡು ಬಂದೆವು. ಇನ್ನೇನು ಒಂದೆರಡು ಕಿ.ಮೀ ದೂರದಲ್ಲಿದೆ ಎನ್ನುವಾಗ ‘ದೇವಾಲಯಕ್ಕೆ ದಾರಿ’ ಎನ್ನುವ ಫ‌ಲಕವನ್ನು ಕಂಡೆವು. ಸದ್ಯ ಬೇಗ ತಲುಪಬಹುದು ಎಂಬ ಆಸೆಯಿಂದ ಅಲ್ಲಿಯೇ ಹೋಗುತ್ತಿದ್ದ ಒಂದಿಬ್ಬರನ್ನು-“ಈ ದಾರಿಯಲ್ಲಿ ಕಾರು ಹೋಗುತ್ತದಾ’ ಎಂದು ಕೇಳಿದಾಗ ಹೌದೆನ್ನುವ ಉತ್ತರ ಬಂದಿತು. ನಮ್ಮದು ದೊಡ್ಡ ಕಾರು ಎಂಬುದನ್ನು ಗಮನಿಸದೆ ಕಾರನ್ನು ತಿರುಗಿಸಿ ಬಿಟ್ಟೆವು. ಆದರೆ, ದಾರಿಯಲ್ಲಿ ಒಂದೆರಡು ಮೀಟರ್‌ ಕ್ರಮಿಸಿದ್ದೇವಷ್ಟೇ. ಕಾರು ಮುಂದೆ ಹೋಗಲಾರದಷ್ಟು ಇಕ್ಕಟ್ಟಾದ ರಸ್ತೆ ಎದುರಾಯಿತು. ಹೊಸದಾಗಿ ಡ್ರೈವಿಂಗ್‌ ಕಲಿತಿದ್ದ ಮಗನಿಗೆ ಮುಂದೆ ಚಲಾಯಿಸಲೂ ಆಗದೆ, ಹಿಂದೆ ಹೋಗಲೂ ಆಗದೆ ಒದ್ದಾಡ ತೊಡಗಿದ.

Advertisement

ಇದರ ನಡುವೆ ಆಚೀಚೆ ಹೋಗುವವರ, ಆಟೋ, ಸೈಕಲ್‌ ಸವಾರರ ಬೈಗುಳ ಬೇರೆ. ಕಾರಿಗೆ ಏನೋ ತಗುಲಿ ಸ್ವಲ್ಪ ಗೀಚು, ಗೀಚಾಯಿತು. ಪೂಜೆಯ ಸಮಯ ಬೇರೆ ಹತ್ತಿರವಾಗುತ್ತಿದೆ. ಬೇರೇನೂ ತೋಚದೆ “ದೇವರೇ, ನೀನೇ ಈ ಕಷ್ಟದಿಂದ ಪಾರುಮಾಡಬೇಕು’ ಎಂದು ಪ್ರಾರ್ಥಿಸುವ ಹೊತ್ತಿಗೆ, ನನ್ನ ಕರೆ ದೇವರಿಗೆ ಮುಟ್ಟಿತೋ ಎಂಬಂತೆ ಸೈಕಲ್ಲಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು, “ಏನಾಯಿತಮ್ಮಾ, ನಾನೊಬ್ಬ ಡ್ರೈವರ್‌. ನನ್ನಿಂದೇನಾದರೂ ಸಹಾಯ ಆಗುವುದಾದರೆ ಮಾಡಿಕೊಡುತ್ತೇನೆ’ ಎಂದು ಹೇಳಿದಾಗ, ನಮಗೆಲ್ಲಾ ಹೋದ ಜೀವ ಬಂದಂತಾಯಿತು. ಮರು ಮಾತನಾಡದೆ ನನ್ನ ಮಗ ಕಾರಿನಿಂದ ಇಳಿದು, ಅವನಿಗೆ ಸೀಟು ಬಿಟ್ಟು ಕೊಟ್ಟ. ನಿಮಿಷ ಮಾತ್ರದಲ್ಲಿ ಆತ ಕಾರನ್ನು ಹಿಮ್ಮುಖವಾಗಿ ಚಲಿಸಿ ಮುಖ್ಯರಸ್ತೆಗೆ ತಂದು ನಿಲ್ಲಿಸಿ, ಕೆಳಗಿಳಿದು, ಹೊರಡಲು ಅನುವಾದ. ಕೃತಜ್ಞತೆಯಿಂದ ಹಣ ಕೊಡಲು ಹೋದ ನನ್ನ ಮಗನ ಕೈಯನ್ನು ಹಿಂದಕ್ಕೆ ನೂಕಿ, “ಬೇಡ ಸಾರ್‌, ಏನೋ ನನಗೆ ಗೊತ್ತಿರೋ ವಿದ್ಯೆ, ಸಹಾಯಮಾಡಿದೆ ಅಷ್ಟೇ. ಇದಕ್ಕೆಲ್ಲ ಹಣ ತೆಗೆದುಕೊಂಡರೆ ದೇವರು ಮೆಚ್ಚುತಾನಾ?’ ಎಂದು ಹೇಳುತ್ತಾ, ಸೀದಾಹೊರಟೇಬಿಟ್ಟ. ದೇವರೇ ಅವನ ರೂಪದಲ್ಲಿ ಬಂದು ನಮಗೆ ಸಹಾಯ ಮಾಡಿರಬಹುದು ಎಂದು ಅನ್ನಿಸಿತು. ಇಂದಿಗೂ ಆ ಆಪತ್ಭಾಂಧವನನ್ನು ಮರೆತಿಲ್ಲ. ಆತ ಎಲ್ಲೋ ಇದ್ದರೂ ಚೆನ್ನಾಗಿರಲಿ.

ಪುಷ್ಪ ಎನ್‌.ಕೆ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next