Advertisement

ಆತ್ಮಹತ್ಯೆಗೆ ಯತ್ನಿಸಿದ್ದವನು ಪದ್ಮಶ್ರೀ ಪ್ರಶಸ್ತಿ ಮಟ್ಟಕ್ಕೆ ಬೆಳೆದೆ

01:18 PM Apr 04, 2022 | Team Udayavani |

ಹುಬ್ಬಳ್ಳಿ: ಈ ಜೀವನ ಸಾಕೆಂದು ಕೈ ಚೆಲ್ಲಿ ಒಂದು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ, ಇನ್ನೊಂದು ಬಾರಿ ಚಿಂತಿಸಿ ಬದುಕಿ ಬಂದಿರುವ ನಾನು ಈಗ ಪದ್ಮಶ್ರೀ ಪ್ರಶಸ್ತಿ ಪಡೆಯುವಷ್ಟರ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆ ಮೂಡಿಸಿದೆ ಎಂದು ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದರು.

Advertisement

ಕಂಚಗಾರಗಲ್ಲಿ ನಗರೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜದ ಶ್ರೀ ವಾಸವಿ ಆಸರೆ ಸೇವಾ ಸಂಸ್ಥೆ ವತಿಯಿಂದ ರವಿವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕವನಿದ್ದಾಗ ನನ್ನಲ್ಲಾದ ಬದಲಾವಣೆಗಳಿಂದ ಬಿ.ಮಂಜುನಾಥ ಎಂದಿದ್ದ ನಾನು ಜೋಗತಿ ಮಂಜಮ್ಮನಾದೆ ಎಂದರು.

ಕಳೆದ 25 ವರ್ಷಗಳ ಕೆಳಗೆ ಧಾರವಾಡ ಆಕಾಶವಾಣಿಗೆ ಬರುತ್ತಿದ್ದೆ. ಅಂದು ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಮಲಗಿದ ಪಾದಗಳು ಇಂದು ಪಾದಪೂಜೆ ಮಾಡಿಸಿಕೊಳ್ಳುವಂತಾಗಿವೆ ಎಂದರೆ ನನ್ನನ್ನೇ ನಾನು ನಂಬಲು ಸಾಧ್ಯವಾಗುತ್ತಿಲ್ಲ. ಹಳೇಹುಬ್ಬಳ್ಳಿ ಹೆಗ್ಗೇರಿಯಲ್ಲಿರುವ ಯಲ್ಲಮ್ಮ ದೇವಸ್ಥಾನಕ್ಕೆ ನಾಟಕ ಮಾಡಲು ಬರುತ್ತಿದ್ದೆ. ಯಲ್ಲಮ್ಮನ ನಾಟಕದಲ್ಲಿ ರೇಣುಕಾ ದೇವಿ ಪಾತ್ರ ಮಾಡುತ್ತಿದ್ದೆ. ಒಗಟಿನ ಮೂಲಕ ಗಂಡನ ಹೆಸರು ಹೇಳುತ್ತಿದ್ದೆ. ನನಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಅಕಾಡೆಮಿ ಅಧ್ಯಕ್ಷೆಯಾಗಿದ್ದವರ ಕಲೆಗೆ ಸಿಕ್ಕ ಬೆಲೆ ಇದಾಗಿದೆ. ನಮ್ಮನ್ನು ಬೆಳೆಸಿರುವುದು ಮಾಧ್ಯಮದವರು. ಎಲ್ಲೇ ಹೋದರೂ ನಮ್ಮನ್ನು ಮೇಲೇರಿಸಿದ್ದಾರೆ. ಪ್ರಶಸ್ತಿ ಸಿಗಲು ಅವರೂ ಕಾರಣ ಎಂದರು.

ನಮ್ಮ ತಂದೆ ತಾಯಿಗೆ ಒಟ್ಟು 21 ಜನ ಮಕ್ಕಳು, ಅದರಲ್ಲಿ 16 ಜನ ಮೃತರಾಗಿದ್ದಾರೆ. ಅದಕ್ಕೆ ತಾಯಿಯಾದವಳಿಗೆ ಎಷ್ಟು ಸಂಕಟವಾಗಿರುತ್ತದೆ ಎಂದು ನನಗೆ ಈಗ ತಿಳಿಯುತ್ತಿದೆ ಎಂದರು.

ನಾಗಮಣಿ ಬಾಗಲಕೋಟೆ, ಸೀತಾಲಕ್ಷ್ಮಿಶಿರೋಳ, ಮೋಹನರಾಜ ಇಲ್ಲೂರ, ವಿನಾಯಕ ಆಕಳವಾಡಿ, ಡಾ|ಜೀವಣ್ಣವರ, ರಾಜಶೇಖರ ಕಂಪ್ಲಿ, ಕುಮಾರಸ್ವಾಮಿ ಇನ್ನಿತರರಿದ್ದರು. ಸರಸ್ವತಿ ದೊಡ್ಡಮನಿ ಪ್ರಾರ್ಥಿಸಿದರು. ಗೀತಾ ಕಂಪ್ಲಿ ನಿರೂಪಿಸಿದರು.

Advertisement

ಅನುಕಂಪ ಬೇಡ, ಅವಕಾಶ ನೀಡಿ: ಮಕ್ಕಳಿಗೆ ಒತ್ತಡ ಹೇರಬೇಡಿ, ನಿಮ್ಮ ಮಕ್ಕಳಿಗೆ ಅವರಿಗೆ ಖುಷಿ ಇರುವುದರಲ್ಲಿ ಪ್ರೋತ್ಸಾಹಿಸಿ. ಕಲೆಯನ್ನು ಆರಾಧಿಸಿದ್ದಕ್ಕೆ ಕಲೆ ನನಗೆ ಬೆಲೆ ನೀಡಿದೆ. ನನ್ನ ಸಮುದಾಯವರಿಗೂ ಗೌರವ ನೀಡಿ. ನಿಮ್ಮ ಮನೆಯಲ್ಲಿ ಅಂತಹ ಮಕ್ಕಳು ಹುಟ್ಟಿದರೆ ಅವರನ್ನು ಹೊರ ಹಾಕಬೇಡಿ. ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ನನ್ನ ಹೆಸರಲ್ಲಿ ಯಾವುದೇ ಸಂಘ, ಟ್ರಸ್ಟ್ ಯಾವುದೂ ಇಲ್ಲ. ಇತ್ತೀಚೆಗೆ ಒಂದು ಪ್ರತಿಷ್ಠಾನ ಮಾಡಿದ್ದಾರೆ. ನಮಗೆ ಅನುಕಂಪ ಬೇಡ, ಅವಕಾಶ ನೀಡಿ ಎಂದು ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next