Advertisement

ಪತ್ನಿಗೆ ಮಚ್ಚಿನಿಂದ ಹೊಡೆದು, ಬಂಧನಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ

11:51 AM Sep 01, 2017 | Team Udayavani |

ಬೆಂಗಳೂರು: ಜಗಳದಲ್ಲಿ ಪತ್ನಿಯ ಕುತ್ತಿಗೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬ, ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ, ಬಂಧನ ಭೀತಿಯಿಂದ ನೇಣಿಗೆ ಶರಣಾಗಿರುವ ಘಟನೆ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಕೋಗಿಲು ಲೇಔಟ್‌ನ ನಾಗರಾಜು (32) ಮೃತ ವ್ಯಕ್ತಿ. ಪತಿ ನಾಗರಾಜುವಿನಿಂದ ಮಾರಣಾಂತಿಕ ಹಲ್ಲೆಯಿಂದ ಗಂಭೀರ ಸ್ಥಿತಿಯಲ್ಲಿರುವ ಆತನ ಪತ್ನಿ ದೇವಿಕ(27) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

Advertisement

ಕೋಗಿಲು ಲೇಔಟ್‌ನಲ್ಲಿ ಇಬ್ಬರು ಮಕ್ಕಳೊಂದಿಗೆ ಪತ್ನಿ ಜೊತೆ ವಾಸಿಸುತ್ತಿದ್ದ ನಾಗರಾಜು, ಸ್ಥಳೀಯರೊಬ್ಬರ ಟ್ರ್ಯಾಕ್ಟರ್‌ ಚಾಲಕನಾಗಿದ್ದ. ಪತ್ನಿ ದೇವಿಕ, ಸ್ಥಳೀಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿ ಅನೋನ್ಯವಾಗಿದ್ದರು. ಆದರೆ, ಪತ್ನಿಯು ಬೇರೊಬ್ಬ ಯುವಕನ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ ಎಂದು ಶಂಕಿಸುತ್ತಿದ್ದ ನಾಗರಾಜು, ಇತ್ತೀಚೆಗೆ ಪದೇ ಪದೇ ಜಗಳ ನಡೆಸುತ್ತಿದ್ದ. ಆಸ್ಪತ್ರೆ ಕೆಲಸಕ್ಕೆ ಹೋಗಬೇಡ ಎಂದು ಪತ್ನಿಗೆ ತಾಕೀತು ಮಾಡಿದ್ದ.

ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಅದೇ ರೀತಿ ಬುಧವಾರ ಬೆಳಿಗ್ಗೆ 10.30ರಲ್ಲಿ ಜಗಳ ತೆಗೆದಿದ್ದ ನಾಗರಾಜು, ಕೆಲಸಕ್ಕೆ  ಹೋಗಬೇಡ ಎಂದು ಹೇಳಿದ್ದಾನೆ. ಇದಕ್ಕೆ ಪತ್ನಿ ಪ್ರತಿರೋಧ ತೋರಿದ್ದಾಳೆ.  ಈ ವಿಚಾರಕ್ಕೆ ಇಬ್ಬರ ನಡುವೆಯೂ ಜೋರು ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡ ನಾಗರಾಜು, ಮಚ್ಚು ತೆಗೆದುಕೊಂಡು ಪತ್ನಿಯ ಕುತ್ತಿಗೆಗೆ ಎರಡು ಮೂರು ಬಾರಿ ಹಲ್ಲೆ ನಡೆಸಿದ್ದಾನೆ.

ಇದರಿಂದ ತೀವ್ರ ರಕ್ತಸ್ರಾವವಾಗಿ ದೇವಿಕ ಕುಸಿದು ಬಿದ್ದಿದ್ದಾರೆ. ಕೂಡಲೇ ಮನೆಯಿಂದ ಹೊರಗಡೆ ಬಂದು ನಾಗರಾಜು ಯಾರಿಗೂ ಗೊತ್ತಾಗದಂತೆ ತಲೆ ಮರೆಸಿಕೊಂಡಿದ್ದಾನೆ. ಇತ್ತ ದಂಪತಿಯ ಜಗಳದ ಸದ್ದು ಕೇಳಿ ಅಕ್ಕ-ಪಕ್ಕದ ಮನೆಯವರು ನಾಗರಾಜು ಮನೆಗೆ ಬಂದು ನೋಡಿದಾಗ, ದೇವಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. 

ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆ ಮೃತಪಟ್ಟಿರಬಹುದು ಎಂದು ನಾಗರಾಜು ಭಾವಿಸಿದ್ದ. ಜೊತೆಗೆ ಪೊಲೀಸರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ನಾಗರಾಜು, ರಾತ್ರಿ ಮನೆಯ ಸಮೀಪದ ಖಾಲಿ ಜಾಗದಲ್ಲಿರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಮುಂಜಾನೆ ಸ್ಥಳೀಯರು, ಮರದಲ್ಲಿ ನೇತಾಡುತ್ತಿದ್ದ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಅದು ನಾಗರಾಜು ಎಂದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next