Advertisement

ಬಹುಮತ ವ್ಯವಸ್ಥೆಯೂ ಶಾಸಕರ ಕಳ್ಳಾಟವೂ

02:07 AM Jul 20, 2019 | mahesh |

ತಮ್ಮ ಸ್ವಾರ್ಥಕ್ಕಾಗಿ ಶಾಸಕರು ಹಾಗೂ ಸಂಸದರು ಸಹಿತ ಜನಪ್ರತಿನಿಧಿಗಳು ದಿಢೀರ್‌ ರಾಜೀನಾಮೆ ನೀಡುವುದು, ಬೇರೆ ಪಕ್ಷದ ಜತೆಗೆ ಗುರುತಿಸಿಕೊಂಡು ಸರಕಾರವನ್ನು ಬೀಳಿಸುವುದಕ್ಕೆ ದೇಶದಲ್ಲಿ ದೀರ್ಘ‌ ಇತಿಹಾಸವಿದೆ. ಪಕ್ಷಗಳ ಸಂಖ್ಯೆ ಹೆಚ್ಚಾದಂತೆ ಇದರ ಪರಿಣಾಮ ಮತ್ತಷ್ಟು ಪ್ರಭಾವಶಾಲಿಯಾಗಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಸೀಮಿತ ಸಂಖ್ಯೆಯ ಪಕ್ಷಗಳಿದ್ದಾಗ ಇರುವಂಥ ಬಹುಮತ ವ್ಯವಸ್ಥೆಯೇ ಈಗಲೂ ಇದೆ. ಆದರೆ ಪಕ್ಷಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈಗಿನ ಬೆಳವಣಿಗೆಗಳಿಗೆ ತಕ್ಕಂತೆ ಬಹುಮತ ವ್ಯವಸ್ಥೆಯಲ್ಲೂ ಬದಲಾವಣೆಯ ಅಗತ್ಯ ಇದೆ ಎಂಬುದಕ್ಕೆ ರಾಜ್ಯದಲ್ಲಿ ಕಳೆದ ಕೆಲವು ಸಮಯದಿಂದ ನಡೆಯು ತ್ತಿರುವ ರಾಜಕೀಯ ಅತಂತ್ರತೆ ಸಹಿತ ದೇಶದಲ್ಲಿ ಎದುರಾಗಿದ್ದಾಗ ಇಂಥ ಹಲವು ಉದಾಹರಣೆಗಳು ತೋರಿಸಿಕೊಡುತ್ತವೆ.

Advertisement

ಈಗ ರಾಜ್ಯದಲ್ಲಿ ಇಂಥದ್ದೊಂದು ರಾಜಕೀಯ ಡೋಲಾಯಮಾನ ಸ್ಥಿತಿ ಎದುರಾಗಲು ಪ್ರಮುಖ ಕಾರಣವಾದುದು ಅತಿ ಹೆಚ್ಚಿನ ಸ್ಥಾನ ಪಡೆದಿರುವ ಪಕ್ಷವು ವಿಪಕ್ಷ ಸ್ಥಾನದಲ್ಲಿರುವುದು ಮತ್ತು ಅತಿ ಕಡಿಮೆ ಸ್ಥಾನ ಪಡೆದಿರುವ ಪಕ್ಷದ ನಾಯಕನು ಮುಖ್ಯಮಂತ್ರಿಯಾಗಿ ಸರಕಾರವನ್ನು ಮುನ್ನಡೆಸುತ್ತಿ ದ್ದುದಾಗಿದೆ. ಬೆಂಗಳೂರಿನ ಪಾಲಿಕೆಯಲ್ಲೂ ಪರಿಸ್ಥಿತಿ ಇದೇ ರೀತಿಯಲ್ಲಿದೆ. ಅಲ್ಲೂ ಅತಿ ಹೆಚ್ಚು ಸ್ಥಾನ ಪಡೆದಿರುವ ಹಾಗೂ ಬಹುಮತಕ್ಕೆ ಒಂದೆರಡು ಸ್ಥಾನ ಕಡಿಮೆ ಗಳಿಸಿದ್ದ ಪಕ್ಷವು ವಿಪಕ್ಷ ಸ್ಥಾನದಲ್ಲಿದೆ. ಈ ಹಿಂದೆಯೂ ಧರ್ಮ ಸಿಂಗ್‌ ಅವರ ಕಾಲದಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಿ, ಅತಿ ಕಡಿಮೆ ಸ್ಥಾನ ಪಡೆದವರಿಗೆ ಅಧಿಕಾರ ನೀಡಲಾಗಿತ್ತು. ಇವೆಲ್ಲವೂ ಒಂದು ರೀತಿಯಲ್ಲಿ ವಿಶ್ಲೇಷಿಸಿದರೆ ಪ್ರಜಾಪ್ರಭುತ್ವದ ಅಣಕ ಎಂದು ಹೇಳಬೇಕಾಗುತ್ತದೆ.

ಇಲ್ಲಿ ಅತಿ ಕಡಿಮೆ ಸ್ಥಾನ ಪಡೆದವರಿಗೆ ಬೇರೆ ಕೆಲವು ಪಕ್ಷಗಳು ಬೆಂಬಲ ನೀಡುತ್ತವೆ ಹಾಗೂ ಆಗ ಹೆಚ್ಚು ಜನರು ಆಯ್ಕೆ ಮಾಡಿರುವ ಪ್ರತಿನಿಧಿಗಳು ಸರಕಾರದ ಭಾಗವಾಗಿ ಪ್ರಜಾಪ್ರಭುತ್ವದ ಶಕ್ತಿ ಗಟ್ಟಿಯಾಗುತ್ತದೆ ಎಂದು ಹೇಳಬಹುದು. ಆದರೆ ಆ ಬೆಂಬಲ ಎಂಬುದೇ ಸಂಶಯಾಸ್ಪದವಾದಾಗ, ಅದರ ಉದ್ದೇಶವೇ ಸ್ವಾರ್ಥವಾದಾಗ ಪ್ರಜಾಪ್ರಭುತ್ವ ಹೇಗೆ ಗಟ್ಟಿಯಾದೀತು ಎಂಬುದು ಇಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ.

ಈಚೆಗೆ ಉಡುಪಿಯ ಪೇಜಾವರ ಶ್ರೀಗಳು ಒಂದು ಸಲಹೆ ಕೊಟ್ಟಿದ್ದರು. ಯಾರಿಗೂ ಬಹುಮತ ಸಿಗದ ಸಂದರ್ಭದಲ್ಲಿ ಎಲ್ಲ ಪಕ್ಷಗಳನ್ನೂ ಸೇರಿಸಿ ಸರಕಾರ ರಚನೆ ಮಾಡಬೇಕು. ಆಗ ಶಾಸಕರ ಖರೀದಿಯಂಥ ಕೆಟ್ಟ ಬೆಳವಣಿಗೆ ಇಲ್ಲವಾಗುತ್ತವೆ ಹಾಗೂ ಸರಕಾರ ಅವಧಿಗಿಂತ ಮೊದಲೇ ಅಧಿಕಾರದಿಂದ ಕೆಳಗಿಳಿಯುವುದು ತಪ್ಪುತ್ತದೆ. ಹಿಂದೆ ಇಂಗ್ಲಂಡ್‌ನ‌ಲ್ಲಿ ಇಂಥದ್ದೊಂದು ಪ್ರಯೋಗವೂ ನಡೆದಿತ್ತು ಎಂದು ಶ್ರೀಗಳು ಹೇಳಿದ್ದಾರೆ.

ಶಾಸಕರ ಖರೀದಿಯಂಥ ಕ್ರಮಗಳನ್ನು ತಡೆಯಲು ಇದರಿಂದ ಸಾಧ್ಯವಾಗಬಹುದಾದರೂ ಅದೊಂದು ಉತ್ತಮ ಆಯ್ಕೆ ಎಂದು ಹೇಳಲು ಸಾಧ್ಯವಾಗದು. ವಿರೋಧ ಪಕ್ಷವಿಲ್ಲದ ಆಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ. ಹಾಗಿರುವಾಗ ಇಡೀ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಜನಪ್ರತಿನಿಧಿಗಳು ವರ್ತಿಸುವುದನ್ನು ತಡೆಯಲು ಅತಿ ಹೆಚ್ಚು ಸ್ಥಾನ ಗೆದ್ದಿರುವ ಪಕ್ಷಕ್ಕೆ ಅಧಿಕಾರ ನೀಡುವುದರ ಕುರಿತು ಯಾಕೆ ಚಿಂತಿಸಬಾರದು?

Advertisement

ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಕ್ಕೆ ಅಧಿಕಾರ ಕೊಡುವುದು ಸರಿಯಾಗದು ಎಂದು ಹೇಳುವವರೂ ಇದ್ದಾರೆ. ಆದರೆ ಶಾಸಕರು ಈ ರೀತಿ ವರ್ತಿಸಿ ಇಡೀ ವ್ಯವಸ್ಥೆಯನ್ನೇ ಕೈಬೆರಳ ತುದಿಯಲ್ಲಿ ಕುಣಿಸುವುದು ಎಷ್ಟು ಸರಿ? ಈಗಿನ ಬಹುಮತ ವ್ಯವಸ್ಥೆಯು ಹಲವು ರಾಜ್ಯಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಮತ್ತು ಸರಕಾರವು ಒಂದು ರೀತಿಯ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಕಾರಣವಾಗುತ್ತದೆ ಎಂಬುದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ಸಿಕ್ಕಿವೆ, ಸಿಗುತ್ತಿವೆ.

ಹಾಲಿ ಬಹುಮತ ವ್ಯವಸ್ಥೆಯಿಂದಲೇ ಕೇವಲ ಒಂದು ಮತದ ಕೊರತೆಯಿಂದ ಇಡೀ ದೇಶವೇ ಅನಿವಾರ್ಯವಾಗಿ ಚುನಾವಣೆ ಎದುರಿಸಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಅದರಿಂದ ನಾವು ಸಾಧಿಸುವುದಾದರೂ ಏನನ್ನು? ಯಾರಧ್ದೋ ಸ್ವಾರ್ಥ ಮತ್ತು ಹಠಮಾರಿತನಕ್ಕೆ ಇಡೀ ದೇಶ ಯಾಕೆ ಶಿಕ್ಷೆ ಅನುಭವಿಸಬೇಕು? ರಾಜಕಾರಣಿಗಳು ಇಡೀ ದೇಶದ ಮುಂದೆ ಹಾಸ್ಯಗಾರರಂತಾಗುವುದು ಮತ್ತು ಕ್ಷಣಕ್ಕೊಂದು ಮಾತಾಡು ವುದಕ್ಕೂ ಇದೇ ಬಹುಮತ ವ್ಯವಸ್ಥೆ ಕಾರಣವಲ್ಲವೇ?

ಎಷ್ಟೋ ಸಂದರ್ಭಗಳಲ್ಲಿ ಪಕ್ಷೇತರರು ಕಿಂಗ್‌ಮೇಕರ್‌ ಆಗಿ ಇಡೀ ಸರಕಾರವನ್ನು ಬೆರಳತುದಿಯಲ್ಲಿ ಕುಣಿಸುತ್ತಾರೆ. ಮಾತೆತ್ತಿದರೆ ಬೆಂಬಲ ವಾಪಸ್‌ ಎಂದು ಹೆದರಿಸಿ ತಮ್ಮ ಇಚ್ಛೆಗೆ ಅನುಗುಣವಾಗಿ ಇಡೀ ರಾಜ್ಯದ ಅಥವಾ ದೇಶದ ಆಡಳಿತವನ್ನು ನಿಯಂತ್ರಿಸುತ್ತಾರೆ. ಇದನ್ನು ನಾವು ಪ್ರಜಾಪ್ರಭುತ್ವದ ವ್ಯವಸ್ಥೆ ಎಂದು ಹೇಗೆ ಸಮರ್ಥಿಸಲು ಸಾಧ್ಯವಾಗುತ್ತದೆ? ಒಂದು ವ್ಯವಸ್ಥೆಯು ಸೀಮಿತ ಸಂಖ್ಯೆಯ ಪಕ್ಷೇತರರ ಕೈಯಲ್ಲಿ ನಿಯಂತ್ರಿಸಲ್ಪಡುವುದಾದರೆ ನಮ್ಮ ಪ್ರಜಾಪ್ರಭುತ್ವ ಎಂಬುದು ಅಷ್ಟು ದುರ್ಬಲವೇ ಎಂಬ ಪ್ರಶ್ನೆ ಮೂಡದೆ ಇರುವುದಿಲ್ಲ.

ಷರತ್ತುಗಳಿರಲಿ
ಅಲ್ಲ, ಈಗಿನ ಬಹುಮತ ವ್ಯವಸ್ಥೆ ಅನಿವಾರ್ಯ ಎಂದೇ ಹೇಳುವುದಾದರೆ, ಒಮ್ಮೆ ನೀಡಿದ ಬೆಂಬಲವನ್ನು ಯಾವುದೇ ಕಾರಣಕ್ಕೂ ವಾಪಸ್‌ ತೆಗೆದುಕೊಳ್ಳಲು ಅವಕಾಶ ನೀಡದಂತೆ ಕಾನೂನು ರೂಪಿಸಬೇಕು. ಜನಪ್ರತಿನಿಧಿಗಳು ತಮಗೆ ಬೇಕಾದಂತೆ ಇಡೀ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅವಕಾಶ ಸಿಗಬಾರದು. ರಾಜೀನಾಮೆ ನೀಡುವ ಶಾಸಕರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಬೇಕು ಅಥವಾ ಒಂದು ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಯಾವುದಾದರೂ ಕಾರಣಕ್ಕೆ ಬಿದ್ದು ಹೋದರೆ ಬೇರೆ ಮೈತ್ರಿ ಸರಕಾರ ಅಧಿಕಾರಕ್ಕೆ ಬರಲು ಅವಕಾಶ ಇರಬಾರದು. ಒಂದು ಸರಕಾರ ಬಿದ್ದು ಹೋದರೆ ಮುಂದಿನ ಸರಕಾರವನ್ನು ಚುನಾವಣೆ ನಡೆಸಿಯೇ ತೀರ್ಮಾನಿಸಬೇಕು. ಇಂಥ ವ್ಯವಸ್ಥೆಯಾದರೂ ಜಾರಿಗೆ ಬರುವ ಅಗತ್ಯ ಇದೆ. ಹೀಗಾದಾಗ ಮಾತ್ರ ಶಾಸಕರ ಖರೀದಿಗೆ ಒಂದು ಹಂತದ ನಿಯಂತ್ರಣ ಹಾಕಲು ಸಾಧ್ಯವಾದೀತು. ಈಗಿನ ಉದಾರತೆಯನ್ನೇ ಮುಂದು ವರಿಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ನಮ್ಮ ದೇಶದ ರಾಜಕೀಯ ಸ್ಥಿತಿ ಮತ್ತಷ್ಟು ಕಂಗಾಲಾಗುವುದು ಖಚಿತ.

ಸ್ಥಿರ ಸರಕಾರ ಕಷ್ಟ
ಈಗಿನ ನಮ್ಮ ರಾಜ್ಯದ ಬೆಳವಣಿಗೆಯನ್ನೇ ಗಮನಿಸಿ ಹೇಳುವುದಾದರೆ, ಶಾಸಕರು ಈಗ ಏನು ಆಟವಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅವರು ನಮ್ಮ ವ್ಯವಸ್ಥೆಯಲ್ಲಿರುವ ಎಲ್ಲ ಅವಕಾಶಗಳನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ. ಈಗ ಹಾಲಿ ಸರಕಾರ ಬಿದ್ದು ಬಿಜೆಪಿ ನೇತೃತ್ವದ ಸರಕಾರ ರಚನೆಯಾದರೂ ಅದು ಉಳಿದ ಅವಧಿಗೆ ಸ್ಥಿರ ಆಡಳಿತ ನೀಡೀತು ಎಂಬ ಖಾತ್ರಿಯೇನೂ ಇಲ್ಲ.

ಏಕೆಂದರೆ ಅದಕ್ಕೂ ಅಲ್ಲಿಂದಲ್ಲಿಗೆ ಸರಳ ಬಹುಮತ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಸ್ವಾರ್ಥ ಶಾಸಕರು ಬಂಡಾಯ ಎದ್ದು ಸರಕಾರದ ವಿರುದ್ಧ ನಿಂತರೆ ಅಥವಾ ಈಗ ಅಧಿಕಾರ ಕಳೆದುಕೊಳ್ಳುವವರು ಸರಕಾರವನ್ನು ಅತಂತ್ರಗೊಳಿಸಲು ಶ್ರಮಿಸಿದರೆ ಆಗ ಅಪಾಯ ಕಟ್ಟಿಟ್ಟ ಬುತ್ತಿ.

ಇಡೀ ಐದು ವರ್ಷಗಳ ಕಾಲ ಸರಕಾರವನ್ನು ಉಳಿಸಿಕೊಳ್ಳಲೆಂದೇ ಎಲ್ಲ ಪಕ್ಷಗಳೂ ಶ್ರಮಿಸುವುದು ಅನಿವಾರ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಉತ್ತಮ ಆಡಳಿತ ಎಂಬುದು ಗಗನಕುಸುಮವಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಪ್ರಜಾಪ್ರಭುತ್ವಕ್ಕೆ ಕಳಂಕ
ಶಾಸಕರು ಸಹಿತ ಯಾವುದೇ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಯಾವುದಾದರೂ ಆಮಿಷಕ್ಕೆ ಒಳಗಾಗಿ ಮೂಲ ನಿಷ್ಠೆಯನ್ನು ಬದಲಾಯಿಸುವುದು ಹಾಗೂ ಅದರ ಮೂಲಕ ಆಡಳಿತ ವ್ಯವಸ್ಥೆಗೆ ಚ್ಯುತಿ ತರುವುದು ಪ್ರಜಾಪ್ರಭುತ್ವ ಎಂಬ ಪವಿತ್ರ ವ್ಯವಸ್ಥೆಗೆ ಕಳಂಕವಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ವಿಶ್ವದಲ್ಲಿಯೇ ಉತ್ತಮ ರಾಜಕೀಯ ವ್ಯವಸ್ಥೆ ಎಂದು ಗುರುತಿಸಿಕೊಂಡಿದೆ.

ಆದರೆ ಅದರಲ್ಲಿರುವ ಹಲವಾರು ಉದಾರತೆಯನ್ನು ತಮ್ಮ ಅಗತ್ಯಕ್ಕೆ ಬಳಸಿಕೊಳ್ಳುವ ಸ್ವಾರ್ಥ ಉದ್ದೇಶದ ಜನ ಪ್ರತಿನಿಧಿಗಳು ನಮ್ಮ ಪವಿತ್ರ ವ್ಯವಸ್ಥೆಗೆ ಮಸಿ ಬಳಿಯುವಂಥ ಕೆಲಸ ಮಾಡುತ್ತಿದ್ದಾರೆ. ಕೆಲವು ಜನಪ್ರತಿನಿಧಿಗಳು ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ತಮ್ಮ ಮನಸ್ಥಿತಿಯನ್ನು ಜನರೆದುರು ಬೆತ್ತಲೆಗೊಳಿಸುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ಸಿಗೋದು ಪ್ರಜಾಪ್ರಭುತ್ವಕ್ಕೆ ಕಳಂಕವೇ.

ಬದಲಾವಣೆ ತುರ್ತು ಅಗತ್ಯ
ಒಂದೋ ಬಹುಮತ ವ್ಯವಸ್ಥೆಯಲ್ಲಿ ಬದಲಾವಣೆ, ಅಥವಾ ಜನಪ್ರತಿನಿಧಿಗಳ ವರ್ತನೆಗೆ ಕಡಿವಾಣ ಹಾಕುವಂಥ ಕೆಲಸ ಆಗಬೇಕು. ಒಟ್ಟಿನಲ್ಲಿ ಒಂದು ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅವಧಿ ಪೂರ್ತಿ ಅಧಿಕಾರದಲ್ಲಿರುವುದಕ್ಕೆ ಪೂರಕವಾದಂಥ ಬದಲಾವಣೆ ಆಗಬೇಕಾದ ತುರ್ತು ಅಗತ್ಯ ಕಂಡು ಬರುತ್ತಿದೆ. ಪ್ರಜಾಪ್ರಭುತ್ವ ಹಾಗೂ ಮತದಾರರ ಭಾವನೆ ಮತ್ತು ಪಾವಿತ್ರ್ಯಕ್ಕೆ ಧಕ್ಕೆಯಾಗುವುದನ್ನು ತಡೆಯಲು ತುರ್ತು ಕ್ರಮದ ಅಗತ್ಯ ಈಗ ಕಂಡುಬಂದಿದೆ.

– ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next