Advertisement
ಕೋವಿಡ್ 19 ದೆಸೆಯಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಶೇ. 4.5ರಷ್ಟು ಕುಸಿತ ಎದುರಾಗಬಹುದೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದಾಜು ಮಾಡಿದೆ. ಕೋವಿಡ್-19 ಬಿಕ್ಕಟ್ಟಿನಿಂದ ದೇಶದ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದು 2020ನೇ ಸಾಲಿನಲ್ಲಿ ಜಿಡಿಪಿ ವೃದ್ಧಿ ದರ ಚಾರಿತ್ರಿಕ ಕೆಳಮಟ್ಟಕ್ಕೆ ಕುಸಿಯುವ ನಿರೀಕ್ಷೆಯಿದೆ ಎಂದು ಅದರ ವರದಿ ತಿಳಿಸಿದೆ. ಜಾಗತಿಕ ಆರ್ಥಿಕತೆ ಶೇ. (-) 4.5 ನಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್ ವಿಶ್ಲೇಷಿಸಿದೆ.
Related Articles
Advertisement
ಇದು ಕಾರ್ಯಗತವಾಗಿ ಕೊನೆಯ ಫಲಾನುಭವಿಗೆ ತಲುಪಲು ಒಂದಿಷ್ಟು ಕಾಲಾವಕಾಶ ಬೇಕು. ಘೋಷಿಸಿದ ಪ್ಯಾಕೇಜ್‌ಗಳು ಗಮನಾರ್ಹವಾಗಿ ಅನುಷ್ಠಾನವಾದರೆ ಈ ಯೋಜನೆಗಳಿಂದ ಬ್ಯಾಂಕ್ ಸಾಲ ನಿರೀಕ್ಷೆ ಮೀರಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಮಾರುಕಟ್ಟೆಯಲ್ಲಿ ಹಣದ ಹರಿವು ಕೂಡಾ ಹೆಚ್ಚಬಹುದು.
ಆದರೆ ಈ ಪ್ಯಾಕೇಜ್‌ಗಳ ಮುಖಾಂತರ ಹೊರ ಬೀಳಲಿರುವ ಸಾಲವು ದೂರಗಾಮಿ ಉದ್ದೇಶದ ಸಾಫಲ್ಯ ಕಾಣಬಹುದೇ? ಬ್ಯಾಂಕರ್‌ಗಳು ಸುಸ್ತಿ ಸಾಲದ ಮಟ್ಟ ಅಪಾಯಕ್ಕೆ ಏರಬಹುದೆಂಬ ಭಯದಲ್ಲಿದ್ದಾರೆ. ಒಟ್ಟಾರೆ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಮತ್ತು ಗ್ರಾಹಕ ಸ್ನೇಹಿ ನಿರ್ಧಾರಗಳನ್ನು ಘೋಷಿಸಿದರೂ ಹೂಡಿಕೆದಾರರು ಹೂಡಿಕೆ ಮಾಡಲು ಎಚ್ಚರದಿಂದ ವಿಶ್ಲೇಷಿಸುತ್ತಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಕೋವಿಡ್ 19 ಭಯದಿಂದ ಬ್ಯಾಂಕ್‌ಗಳು ಅರ್ಧ ಬಾಗಿಲು ತೆರೆದು ಕೆಲಸಮಾಡುತ್ತಿವೆ. ಈ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳ ಸಾಲದಲ್ಲಿ ರೂ. 1.48 ಲಕ್ಷ ಕ್ಷೀಣಿಸಿರುವುದು ಇದೆಲ್ಲದಕ್ಕೂ ಉದಾಹರಣೆಯೇ ಸರಿ.
ಬೊಕ್ಕಸ ತುಂಬಿಸುವ ಅನಿವಾರ್ಯತೆ: ಕೋವಿಡ್ 19 ಸಾಂಕ್ರಾಮಿಕದಿಂದ ಈಗಾಗಲೇ ದೇಶದ ಆರ್ಥಿಕತೆಗೆ 50 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಕೆಲವೇ ಸಮಯದಲ್ಲಿ ಇದು ದುಪ್ಪಟ್ಟಾದರೂ ಆಶ್ಚರ್ಯವಿಲ್ಲ. ಪ್ರಸ್ತಕ ಪರಿಸ್ಥಿತಿಯಲ್ಲಿ ಕೋವಿಡ್ 19 ಹಾವಳಿ ಇನ್ನೆಷ್ಟು ಕಾಲ ಮುಂದುವರಿಯುತ್ತದೆ ಮತ್ತು ಆರ್ಥಿಕತೆ ಯಾವಾಗ ದಡ ಸೇರುತ್ತದೆ ಎನ್ನುವ ದೃಢವಾದ ಲಕ್ಷಣ ಕಾಣದಿರುವುದರಿಂದ ಸರಕಾರದ ಬೊಕ್ಕಸವನ್ನು ಹೇಗಾದರೂ ಮಾಡಿ ತುಂಬಿಸಲೇಬೇಕಾದ ಅನಿವಾರ್ಯತೆಯಿದೆ.
ಅಭಿವೃದ್ಧಿ ಯೋಜನೆಗಳಿಗೆ ಸ್ವಲ್ಪ ಕಾಯಬಹುದು ಆದರೆ ಯಾವುದೇ ಕಾರಣಕ್ಕೂ ಉದ್ಯೋಗಿಗಳ ವೇತನ ತಡೆಹಿಡಿಯಲಾಗುವುದಿಲ್ಲ. ಇನ್ನು ಜನತೆಯ ಆರ್ಥಿಕ ಪರಿಸ್ಥಿತಿ ಜರ್ಜರಿತರಾಗಿರುವ ಸನ್ನಿವೇಶದಲ್ಲಿ ಹೊಸ ತೆರಿಗೆ ವಿಧಿಸಿದರೆ ಜನರ ಆಕ್ರೋಶ ತಡೆಯಲಾಗದು.
ಬ್ಯಾಂಕಿಂಗ್ ಕ್ಷೇತ್ರ ವಿಚಲಿತ: ಅನುತ್ಪಾದಕ ಆಸ್ತಿ ಮತ್ತು ವಂಚನೆ ಪ್ರಕರಣಗಳ ಸುಳಿಗೆ ಸಿಲುಕಿ ನಲುಗುತ್ತಿರುವ ಬ್ಯಾಂಕಿಂಗ್ ವಲಯಕ್ಕೆ ಕೋವಿಡ್ 19 ಕಂಟಕದಿಂದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಶೇ.9.5ರಷ್ಟು ಆಗಿದ್ದು ರೂ. 9.7ಲಕ್ಷ ಕೋಟಿಗೇರಿವೆ. ಅದು ದುಪ್ಪಟ್ಟಾಗುವ ಭಯದಲ್ಲಿವೆ ಬ್ಯಾಂಕ್‌ಗಳು. ಬ್ಯಾಂಕ್‌ಗಳಲ್ಲಿ ಸಾಲ ಬೇಡಿಕೆ ಕ್ಷೀಣಿಸಿದೆ. ಸುಸ್ತಿ ಸಾಲ ಮರಳಿ ಬರುತ್ತಿಲ್ಲ. ಕೋವಿಡ್ 19 ಸಂಕಷ್ಟದಿಂದ ಪಾರಾಗಲು ಬ್ಯಾಂಕ್‌ಗಳು ಸಾಲಗಾರರಿಗೆ 6 ತಿಂಗಳ ಕಾಲ ಸಾಲ ಮುಂದೂಡಿಕೆಗೆ ಅವಕಾಶ ಕಲ್ಪಿಸಿರುವುದರಿಂದ ಸಾಲ ಮರು ಪಾವತಿ ನೆಲ ಕಚ್ಚಿದೆ.
ಏತನ್ಮಧ್ಯೆ ನಿರಂತರ ಕುಸಿಯುತ್ತಿರುವ ಬಡ್ಡಿದರವು ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುಸ್ತಿ ಸಾಲಗಳನ್ನು ಬ್ಯಾಂಕ್ ದಿವಾಳಿ ಕಾನೂನಿಗೆ ವಹಿಸುವ ಪ್ರಕ್ರಿಯೆಯೂ ಮುಂದೂಡಲ್ಪಟ್ಟಿದೆ. ಇದೇ ಸಂದರ್ಭದಲ್ಲಿ ಹಿಂದೆ ನಡೆದ ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದಂತೆ ಸಿಬಿಐ ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ ಮೇಲೆ ಯಾವ ಬ್ಯಾಂಕ್ ಅಧಿಕಾರಿಯೂ ಸಾಲ ನೀಡಲು ಮುಂದೆ ಬರುತ್ತಿಲ್ಲ. ಈ ಅಡಚಣೆಗಳು, ಬ್ಯಾಂಕ್ ಸಿಬ್ಬಂದಿ ವೇತನ ಪರಿಷ್ಕರಣೆಯ ಸಂದರ್ಭದಲ್ಲಿ ಕೋವಿಡ್ 19 ಆಘಾತ. ಬ್ಯಾಂಕರ್‌ಗಳಿಗೆ ಜನ್‌ಧನ್ ಖಾತೆ, ನೋಟ್ ಬ್ಯಾನ್, ಸಾಫ್ಟ್ವೇರ್ ಮರು ವರ್ಗೀಕರಣಗಳು, ಬ್ಯಾಂಕ್‌ಗಳ ವಿಲೀನವೆಲ್ಲವೂ ಸೇರಿ ನೆಮ್ಮದಿಯಿಲ್ಲದೇ ವಿಚಲಿತರಾಗಿದ್ದಾರೆ.
ಎಂಎಸ್‌ಎಂಇ ಮತ್ತು ಕೃಷಿ ಕ್ಷೇತ್ರ: ಕೋವಿಡ್ 19 ಸಾಂಕ್ರಾಮಿಕಕ್ಕೆ ಮುಂಚೆಯೇ ಎಂಎಸ್‌ಎಂಇ ಸಮಸ್ಯೆ ತೀವ್ರವಾಗಿತ್ತು. ಬ್ಯಾಂಕ್‌ಗಳು ಅವುಗಳಿಗೆ ಸಾಲಕೊಡುವ ಪರಿಸ್ಥಿತಿಯಲ್ಲಿರಲಿಲ್ಲ. ಉತ್ಪಾದನೆಗೆ ಬೇಡಿಕೆಯಿಲ್ಲದಿರುವುದು, ಆದಾಯದ ಕೊರತೆ, ಬೃಹತ್ ವ್ಯಾಪಾರೋದ್ಯಮದೊಂದಿಗೆ ಸ್ಪರ್ಧೆಗೆ ನಿಲ್ಲಲು ಸಾಧ್ಯವಾಗದೆ ಅಪಾರ ನಷ್ಟ ಅನುಭವಿಸಿ ಸುಸ್ತಿ, ಸಾಲಗಾರರಾಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಉತ್ತಮ ಸರಬರಾಜು ಸರಪಳಿಯನ್ನು ಸುಧಾರಿಸದೇ, ತರ್ಕಬದ್ಧ ತೆರಿಗೆ ವಿಧಿಸದೇ ಇದ್ದಲ್ಲಿ ಕೃಷಿಕರ ಸಮಸ್ಯೆ ಹೆಚ್ಚಲಿದೆ. ಹೀಗಾಗಿ ಕೃಷಿಕರಿಗೆ ಅಮೂಲಾಗ್ರ ಸಾಲ ಸೌಕರ್ಯ ನೀಡಬೇಕಾಗಿದೆ. ಆದರೆ ಈಗಾಗಲೇ ಸಾಲದ ಸುಳಿಯಲ್ಲಿರುವ ಪ್ರಾಮಾಣಿಕ ರೈತರ ಸಾಲ ಬೇಡಿಕೆಗೆ ಸ್ಪಂದಿಸಬೇಕು.
‘ಆತ್ಮನಿರ್ಭರತೆ ಮತ್ತು ನಿರುದ್ಯೋಗ ನಿವಾರಣೆ’: ಗಾಂಧೀಜಿ ತತ್ವಗಳಾದ ಗುಡಿ ಕೈಗಾರಿಕೆ, ಸ್ವದೇಶಿ ವಸ್ತುಗಳ ಉತ್ಪಾದನಾ ಅಭಿಯಾನ, ಸ್ವಾವಲಂಬನೆ ಈಗ ಹೆಚ್ಚು ಪ್ರಸ್ತುತವಾಗಿವೆ. ಕಡಿಮೆ ಬಂಡವಾಳ ಮತ್ತು ಹೆಚ್ಚು ದುಡಿಮೆಯ ಕೈಗಳು ಇರುವ ಭಾರತದಲ್ಲಿ ಇವೆರಡರ ಬಳಕೆಯ ಮೂಲಕ ಉದ್ಯೋಗ ಸೃಷ್ಟಿಸಬೇಕಾಗಿದೆ. ದೇಶೀ ಬಂಡವಾಳದ ಪಲಾಯನ ನಿಲ್ಲಿಸುವುದು, ಶೈಶಾವಸ್ಥೆಯಲ್ಲಿರುವ ಉದ್ದಿಮೆಗಳು ಕೂಡಾ ತಲೆ ಎತ್ತಿ ವಿದೇಶೀ ಉದ್ಯಮಗಳಿಗೆ ಸ್ಪರ್ಧೆ ನೀಡುವಂತಾಗಬೇಕು.
ಗಾಂಧೀಜಿ, ಭಾರತದಲ್ಲಿ ಪ್ರತಿಯೊಬ್ಬನಿಗೂ ಜೀವನಕ್ಕೆ ಸಾಕಾಗುವಷ್ಟು ಪ್ರಮಾಣದ ವೃತ್ತಿಗಳಿವೆ. ತೃಪ್ತಿಕರ ಜೀವನಕ್ಕೆ ಕೊರತೆಯಿಲ್ಲ ಎಂದಿದ್ದರು. ಅಲ್ಲದೇ ಗಾಂಧಿ ವಿಚಾರಧಾರೆಯೆಂದರೆ ಪ್ರತಿ ಯೊಂದು ವೃತ್ತಿಗೂ ಗೌರವವಿದೆ ಮತ್ತು “ನಿರುದ್ಯೋಗವನ್ನು ವಿದ್ಯಾವಂತರ ನಿರುದ್ಯೋಗಕ್ಕೆ ಸೀಮಿತಗೊಳಿಸುವುದು ತಪ್ಪು” ಎಂಬುದಾಗಿತ್ತು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಅಂತೆಯೇ ಅಭಿವೃದ್ಧಿಶೀಲ ದೇಶವೂ ಹೌದು ಎಂಬುದನ್ನು ಸಾಬೀತುಗೊಳಿಸಬೇಕು.
ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ, ಸ್ಥಿರ ಸರಕಾರ, ಯುವ ಜನಶಕ್ತಿ ಒಂದಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದರೆ ಚೀನದಿಂದ ಹೊರಬರುವ ಉದ್ದಿಮೆಗಳನ್ನು ಸೆಳೆದು ಜಾಗತಿಕ ವಿದ್ಯಮಾನಗಳಿಗೆ ಸೂಕ್ತವಾಗಿ ಸ್ಪಂದಿಸಿದರೆ ನಾಲ್ಕಾರು ವರ್ಷಗಳಲ್ಲಿ ವಿಶ್ವದ ಚೈತನ್ಯಯುತ ಮುಂದುವರಿದ ರಾಷ್ಟ್ರವಾಗಬಹುದು. ಚೀನವನ್ನು ಯಾವ ರಾಷ್ಟ್ರವೂ ಗೌರವ ಪೂರ್ಣವಾಗಿ ಕಾಣುತ್ತಿಲ್ಲ. ಆದರೆ ಕೋವಿಡ್ ಅವಾಂತರಗಳ ನಂತರ ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಭಾರತದ ಮೇಲಿರುವ ವಿಶ್ವಾಸ ಮತ್ತು ನಂಬಿಕೆ ಇಮ್ಮಡಿಯಾಗಿದೆ.
ಹಣ ಸಂಬಂಧಿ ನೀತಿಗಳುಹಣಕಾಸಿನ ಪ್ರಮುಖ ಸಂಸ್ಥೆಗಳಾದ ಕೇಂದ್ರ ಮತ್ತು ವಾಣಿಜ್ಯ ಬ್ಯಾಂಕ್‌ಗಳು ಸಾಲವನ್ನು ಸೃಷ್ಟಿಸುತ್ತವೆ. ಕೇಂದ್ರ ಬ್ಯಾಂಕ್ (ಆರ್‌ಬಿಐ) ಹಣವನ್ನು ಮುದ್ರಿಸಿ ಚಲಾವಣೆಗೆ ತರುವ ಮೂಲಕ ಸಾಲ ಸೌಲ ಭ್ಯ ಸೃಷ್ಟಿಸಿದರೆ, ವಾಣಿಜ್ಯ ಬ್ಯಾಂಕ್‌ಗಳು ಠೇವಣಿ ಸಂಗ್ರಹದ ಮೂಲಕ ಸಾಲವನ್ನು ಸೃಷ್ಟಿಸುತ್ತವೆ. ಇದೀಗ ಆರ್ಥಿಕ ಚಟುವಟಿ ಕೆಗಳ ವಿಸ್ತರಣೆಗೆ ಹಣದ ಕೊರತೆಯಿದೆ. ಆದುದರಿಂದ ಕೇಂದ್ರ ಬ್ಯಾಂಕ್ ಕರೆನ್ಸಿ ನೋಟ್‌ಗಳ ಪೂರೈಕೆಯನ್ನು ಹೆಚ್ಚಿಸಬೇಕು ಹಾಗೂ ವಾಣಿಜ್ಯ ಬ್ಯಾಂಕುಗಳು ಅಧಿಕ ಪ್ರಮಾಣದ ಸಾಲವನ್ನು ಸೃಷ್ಟಿಸುವಂತೆ ಅವಕಾಶ ಮಾಡಿಕೊಡಬೇಕು. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಉದ್ಯಮಗಳ ಲಾಭಗಳು ಕುಸಿಯುತ್ತಿರುತ್ತದೆ. ಉತ್ಪಾದನೆ ಹೂಡಿಕೆ ಉದ್ಯೋಗ ಮತ್ತು ಆದಾಯ ಕಡಿಮೆಯಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯ ನಿರಾಶೆಯನ್ನು ನೀಗಿಸುವಲ್ಲಿ ಹೆಚ್ಚಿನ ಪ್ರಮಾಣದ ಸಾಲವನ್ನು ಪೂರೈಕೆ ಮಾಡುವುದು ಅವಶ್ಯಕವಾಗಿರುತ್ತದೆ. ಸಾಲ ಪೂರೈಕೆಗೆ ಅತ್ಯುತ್ತಮ ಮಾರ್ಗವೆಂದರೆ ಬಡ್ಡಿ ದರವನ್ನು ಇಳಿಸುವುದು. – ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ