Advertisement

ಒಪ್ಪಿಕೊಳ್ಳುವ ಮನೋಧರ್ಮದೇಶದ ಮುಖ್ಯ ಮೌಲ್ಯವಾಗಲಿ

01:23 PM Aug 07, 2017 | Team Udayavani |

ಬೆಂಗಳೂರು: ಪ್ರಜಾಪ್ರಭುತ್ವ ರಾಜಕೀಯ ಚೌಕಟ್ಟು ಹಾಗೂ ಜಾತ್ಯಾತೀತ ಸಾಮಾಜಿಕ ವಿನ್ಯಾಸ ಹೊಂದಿರುವ ಬಹುತ್ವದ ಈ ದೇಶದಲ್ಲಿ ಒಳಗೊಳ್ಳುವಿಕೆ ಮತ್ತು ಒಪ್ಪಿಕೊಳ್ಳುವಿಕೆ ಎಂಬುದು ರಾಷ್ಟ್ರೀಯ ಮೌಲ್ಯ ಆಗಬೇಕು ಎಂದು ಉಪರಾಷ್ಟ್ರಪತಿ ಹಮೀದ್‌  ಅನ್ಸಾರಿ ಪ್ರತಿಪಾದಿಸಿದ್ದಾರೆ. ನಗರದ ಪಿಇಎಸ್‌ ವಿವಿಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು ಇದರ 25ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

Advertisement

 ಒಪ್ಪಿಕೊಳ್ಳುವಿಕೆ ಸಹಿಷ್ಣುತೆಗಿಂತ ಒಂದು ಹೆಜ್ಜೆ ಮುಂದೆ. ನಮಗಿಂತ ಭಿನ್ನರಾದವರನ್ನು ತಿಳಿದುಕೊಳ್ಳುವ ಮತ್ತು ಇತರನ್ನು ಒಪ್ಪಿಕೊಳ್ಳುವ ಗುಣವೇ ಒಪ್ಪಿಕೊಳ್ಳುವಿಕೆ. ಇದಕ್ಕೆ ತಡೆಯೊಡ್ಡುವ ಮಾದರಿಗಳನ್ನು ಭಿನ್ನವಾಗಿ ನೋಡುವುದು ಈಗಿರುವ ಸವಾಲು. ಇದಕ್ಕೆ ಸತತ ಚರ್ಚೆ, ಮಾತುಕತೆ ಬೇಕು.

ವರ್ಗ ವೈವಿಧ್ಯತೆ ನಡುವೆ ಸೌಹಾರ್ದತೆ ಪ್ರೋತ್ಸಾಹಿಸಲು ಇದೊಂದು ರಾಷ್ಟ್ರೀಯ ಮೌಲ್ಯವಾಗಬೇಕು. ಇದಕ್ಕೆ ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಾಯೋಗಿಕ ರೂಪ ಕೊಡುವುದು ತುರ್ತು ಅಗತ್ಯ. ದಲಿತರು, ಅಲ್ಪಸಮಖ್ಯಾತರಲ್ಲಿರುವ ಅಸುರಕ್ಷತೆಯ ಕಳವಳವನ್ನು ತೆಗೆದು ಹಾಕಲು ಸಲಹೆಗಳನ್ನು ಸ್ವೀಕರಿಸಿಸುವುದೂ ಅಗತ್ಯ ಎಂದು ಉಪರಾಷ್ಟ್ರಪತಿ ಹೇಳಿದರು.

  ಎಲ್ಲರನ್ನೂ ಒಳಗೊಳ್ಳುವ ಬಹುತ್ವದ ಸಮಾಜ ಕಟ್ಟುವಲ್ಲಿ ಸಹಿಷ್ಣುತೆಯೊಂದೇ ಬಲವಾದ ತಳಪಾಯವಾಗಲಾರದು. ಅದರ ಜತೆಗೆ ಪರಸ್ಪರ ತಿಳುವಳಿಕೆ ಮತ್ತು ಒಪ್ಪಿ$ಕೊಳ್ಳುವ ಮನೋಧರ್ಮವೂ ಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ  ನಾವು ಇತರ ಧರ್ಮಗಳ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳುವುದಷ್ಟೇ ಅಲ್ಲ,

ಅವುಗಳನ್ನು ಧನಾತ್ಮಕವಾಗಿ ಪೋಷಿಸಬೇಕು, ಸತ್ಯವೇ ಎಲ್ಲ ಧರ್ಮಗಳ ಮೂಲ. ಅದಾಗ್ಯೂ ಸಹಿಷ್ಣುತೆಯನ್ನು ಬಲವಾಗಿ ಸಮರ್ಥಿಸಬೇಕು. ಇದೊಂದು ಮೌಲ್ಯ. ಮತಾಂಧತೆಯಿಂದ ಬಿಡುಗಡೆ. ವಿವಿಧ ಧರ್ಮಗಳು, ರಾಜಕೀಯ ಚಿಂತನೆಗಳು, ರಾಷ್ಟ್ರೀಯತೆಗಳು, ಜನಾಂಗೀಯ ಗುಂಪುಗಳು ಮತ್ತು ಇತರ ಪಂಗಡಗಳು ಬಿಕ್ಕಟ್ಟು ರಹಿತವಾಗಿ ಸಮಾಜದಲ್ಲಿ ಕಾರ್ಯನಿರ್ವಹಿಸಲು ಸಹಿಷ್ಣುತೆ ಅನ್ನುವುದು ಒಂದು ಪ್ರಾಯೋಗಿಕ ಸೂತ್ರ ಎಂದು ಹಾಮಿದ್‌ ಅನ್ಸಾರಿ ಹೇಳಿದರು.

Advertisement

ಕಾನೂನು ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು 15 ಚಿನ್ನದ ಪದಕ ಪಡೆದ ಶೃತಿ ಅಶೋಕ್‌ ಅವರಿಗೆ ಉಪರಾಷ್ಟ್ರಪತಿ ಹಾಮಿದ್‌ ಅನ್ಸಾರಿ ಪದವಿ ಪ್ರದಾನ ಮಾಡಿದರು. ಉಳಿದ ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಪದವಿ ಪ್ರದಾನ ಮಾಡಿದರು. 

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರಬಾಬು, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕಾನೂನು ವಿವಿ ಉಪ ಕುಲಪತಿ ಪ್ರೊ. ಆರ್‌. ವೆಂಕಟರಾವ್‌ ಮತ್ತಿತರರು ಉಪಸ್ಥಿತರಿದ್ದರು. 
 
ಇಬ್ಬರು ಉಪರಾಷ್ಟ್ರಪತಿಗಳ ಭೇಟಿ
ಬೆಂಗಳೂರು:
ಒಂದೇ ದೇಶದ ಇಬ್ಬರು ಉಪರಾಷ್ಟ್ರಪತಿಗಳು ಒಂದೇ ದಿನ ಭೇಟಿ ನೀಡಿದ ಅಪರೂಪದ ಪ್ರಸಂಗಕ್ಕೆ ಭಾನುವಾರ ರಾಜದಾನಿ ಬೆಂಗಳೂರು ಸಾಕ್ಷಿಯಾಯಿತು. ಈ ಇಬ್ಬರು ಉಪರಾಷ್ಟ್ರಪತಿಗಳಲ್ಲಿ ಒಬ್ಬರು ನಿರ್ಗಮಿತ ಮತ್ತೂಬ್ಬರು ನಿಯೋಜಿತ. ಹೌದು, ನಿರ್ಗಮಿತ ಉಪರಾಷ್ಟ್ರಪತಿ ಹಾಮಿದ್‌ ಅನ್ಸಾರಿ ಹಾಗೂ ನೂತನ ಚುನಾಯಿತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಇವರಿಬ್ಬರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾನುವಾರ ಬೆಂಗಳೂರಿಗೆ ಬಂದಿದ್ದು ವಿಶೇಷ. 

ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು ಇದರ 25ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಹಾಮಿದ್‌ ಅನ್ಸಾರಿ ನಗರಕ್ಕೆ ಆಗಮಿಸಿದ್ದರೆ, ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವೆಂಕಯ್ಯ ನಾಯ್ಡು ಬಂದಿದ್ದರು.

ಪಿಇಎಸ್‌ ವಿವಿ ಸಭಾಂಗಣದಲ್ಲಿ ನಡೆದ ಲಾ ಯೂನಿವರ್ಸಿಟಿ ಘಟಿಕೋತ್ಸವದಲ್ಲಿ ಭಾಗವಹಿಸಲು ಹಾಮಿದ್‌ ಅನ್ಸಾರಿ ಶನಿವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿದ್ದರು. ಅದೇ ರೀತಿ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಮಧ್ಯಾಹ್ನ ವೆಂಕಯ್ಯ ನಾಯ್ಡು ಬೆಂಗಳೂರಿಗೆ ಬಂದು ಹೋದರು. 

Advertisement

Udayavani is now on Telegram. Click here to join our channel and stay updated with the latest news.

Next