ಮಳವಳ್ಳಿ: ಬಿಸಿಯೂಟದ ಅಕ್ಕಿ ಕದ್ದು ಮನೆಗೆ ಸಾಗಿಸುತ್ತಿದ್ದ ಮುಖ್ಯ ಶಿಕ್ಷಕಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. 23 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಚನಹಳ್ಳಿ ಗ್ರಾಮದ ಮುಖ್ಯ ಶಿಕ್ಷಕಿ ಶಾರದಮ್ಮ ಎಂಬುವರೇ ಬಿಸಿಯೂಟ ಅಕ್ಕಿ ಕದ್ದು ಗ್ರಾಮಸ್ಥರಿಗೆ ಸಿಕ್ಕಿಬಿದ್ದವರು. ಸರ್ಕಾರಿ ಶಾಲೆಗಳು ಅಧಿಕೃತವಾಗಿ ಸೋಮವಾರದಿಂದ ಆರಂಭವಾಗಿದ್ದು, ಮುಖ್ಯ ಶಿಕ್ಷಕಿ ಶಾರದಮ್ಮ ಅವರು ಬೆಳಗ್ಗೆ 9.30ಕ್ಕೆ ಸಂಬಂಧಿ ಹುಡುಗನ ಸ್ಕೂಟರ್‌ನಲ್ಲಿ ಬಂದು 50 ಕೆ.ಜಿ.ಅಕ್ಕಿ ಮೂಟೆಯನ್ನು ಸ್ಕೂಟರ್‌ನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಮುಖ್ಯ ಶಿಕ್ಷಕಿಯ ಬಳಿ ತೆರಳಿ ಪ್ರಶ್ನಿಸಿದರು.
ಮುಖ್ಯ ಶಿಕ್ಷಕಿ ಹಾರಿಕೆಯ ಉತ್ತರ ನೀಡಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ
ಸದಸ್ಯರನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದರು. ಆಗ ಮುಖ್ಯ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ತಕ್ಷಣ ಎಚ್ಚೆತ್ತ ಗ್ರಾಮಸ್ಥರು, ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿ, ಮುಖ್ಯ ಶಿಕ್ಷಕಿಯನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಶಿಕ್ಷಕಿ
ವಿರುದ್ಧ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.