Advertisement

ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳು ಜಲಾವೃತ

11:51 AM May 26, 2018 | Team Udayavani |

ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಸುರಿದ ಧಾರಾಕಾರ ಮಳೆಗೆ ಬಹುತೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. 

Advertisement

ಶುಕ್ರವಾರ ಮಧ್ಯಾಹ್ನ ಆರಂಭವಾದ ಗುಡುಗು ಸಹಿತ ಮಳೆಗೆ ನಗರದ ಭಾಗದ ಬಹುತೇಕ ರಸ್ತೆಗಳು, ಜಂಕ್ಷನ್‌ಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳು ಸರಾಗವಾಗಿ ಸಂಚರಿಸಲಾಗದೆ, ದಟ್ಟಣೆ ಉಂಟಾಗಿತ್ತು. ಜತೆಗೆ ಜೋರಾದ ಗಾಳಿಗೆ ಕೆಲವು ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪಾಲಿಕೆಯ ಕೇಂದ್ರ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ನಗರದಲ್ಲಿ ಟೆಂಡರ್‌ಶ್ಯೂರ್‌ ವಿಧಾನದಡಿ ಅಭಿವೃದ್ಧಿಯಾದ ರಸ್ತೆಗಳು, ಅಂಡರ್‌ಪಾಸ್‌ ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು. ಜಯಮಹಲ್‌ ರಸ್ತೆ, ಟಿ.ವಿ.ಟವರ್‌, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿಯ ಅಂಡರ್‌ಪಾಸ್‌, ಕೆ.ಆರ್‌.ವೃತ್ತದ ಅಂಡರ್‌ಪಾಸ್‌, ಶಾಂತಿನಗರದ ಆನೇಪಾಳ್ಯ, ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣ, ಮೆಯೋಹಾಲ್‌ ಎದುರು, ಹೆಣ್ಣೂರು ಮುಖ್ಯರಸ್ತೆ, ಡಿಕೆನ್ಸನ್‌ ರಸ್ತೆ, ಟ್ರಿನಿಟಿ ವೃತ್ತ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು. 

ಇನ್ನು ಜೋರಾದ ಗಾಳಿಗೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್‌ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ್ದು, ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ವಿಲ್ಸನ್‌ ಗಾರ್ಡನ್‌, ನೀಲಸಂದ್ರ, ಜೀವನ್‌ ಬಿಮಾ ನಗರ, ಕಲ್ಯಾಣನಗರ, ಮಲ್ಲೇಶ್ವರ, ಮಿನರ್ವ ವೃತ್ತ ಸೇರಿದಂತೆ ಹಲವೆಡೆ ಮರಗಳು ಮುರಿದು ಬಿದ್ದಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next