Advertisement
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಏಳೆಂಟು ತಿಂಗಳಿಂದ ಪದೇ ಪದೆ ಒಂದಲ್ಲ ಒಂದು ರೀತಿಯ ಇಂತಹ ಎಡವಟ್ಟು ಸಂಭವಿಸುತ್ತಿದ್ದು, ಅದಕ್ಕೆ ಮತ್ತೂಂದು ಸೇರ್ಪಡೆಯೇ ಕಂಠ ಪೂರ್ತಿ ಕುಡಿದು ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್ ಒಬ್ಬರು ಸೃಷ್ಟಿಸಿದ ಅವಾಂತರ. ಇದರಿಂದ ಮಂಗಳೂರು-ದುಬಾೖ ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬೆಳಗಾಗುವ ತನಕ ನಿಲ್ದಾಣದಲ್ಲೇ ತೂಕಡಿಸುತ್ತ ಕುಳಿತು ಕೊಳ್ಳಬೇಕಾಯಿತು. ಸುಮಾರು ಐದು ಗಂಟೆಗಳ ಅನಂತರ ಬದಲಿ ಪೈಲಟ್‌ನ ವ್ಯವಸ್ಥೆಯೊಂದಿಗೆ ವಿಮಾನ ಟೇಕ್‌ಆಫ್ ಆಗಿದೆ.
Related Articles
ಸ್ಪೈಸ್ ಜೆಟ್‌ನ ಈ ವಿಮಾನವು ನಿಗದಿತ ಸಮಯಕ್ಕೆ ಏಕೆ ಟೇಕ್‌ಅಪ್ ಆಗಿಲ್ಲ ಎನ್ನುವುದಕ್ಕೆ ಪ್ರಯಾಣಿಕರಿಗೆ ನಿಜವಾದ ಕಾರಣ ಗೊತ್ತಾಗಿಲ್ಲ. ತಾಂತ್ರಿಕ ದೋಷದ ಕಾರಣದಿಂದ ಮಂಗಳೂರು-ದುಬಾೖ ವಿಮಾನ ಹಾರಾಟ ವಿಳಂಬವಾಗಿರುವುದಾಗಿ ಅಧಿಕೃತ ಘೋಷಣೆ ಮಾಡಿದ್ದು, ಆ ವಿಚಾರವನ್ನೇ ಪ್ರಯಾಣಿಕರಿಗೂ ಮನವರಿಕೆ ಮಾಡಲಾಗಿದೆ.
Advertisement
ಈ ನಡುವೆ ಪೈಲಟ್ ಒಬ್ಬರು ಮಿತಿಮೀರಿ ಮದ್ಯಪಾನ ಮಾಡಿಕೊಂಡು ವಿಮಾನ ಚಲಾಯಿಸುವುದಕ್ಕೆ ಬಂದಿದ್ದ ವಿಚಾರ ವಿಮಾನ ನಿಲ್ದಾಣದ ಸಿಬಂದಿಗೆ ಗೊತ್ತಾಗಿದೆ. ಅಲ್ಲದೆ, ಪೈಲಟ್ ಮಾಡಿದ ಈ ಎಡವಟ್ಟಿನಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಾತ್ರಿಯೆಲ್ಲ ನಿದ್ದೆಗೆಡುವ ಪ್ರಮೇಯ ಸೃಷ್ಟಿಯಾಗಿತ್ತು. ವಿಮಾನದ ತಾಂತ್ರಿಕ ದೋಷ ಗಂಟೆಯೊಳಗೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಮಧ್ಯರಾತ್ರಿಯಿಂದ ಎದುರು ನೋಡುತ್ತ ಕಾದು ಕುಳಿತಿದ್ದವರೆಲ್ಲ ಬೆಳಗ್ಗಿನ ತನಕ ಹಾಗೆಯೇ ಕುಳಿತುಕೊಂಡಿದ್ದರು. ಕೊನೆಗೂ ಬುಧವಾರ ಬೆಳಗ್ಗೆ 6.05ಕ್ಕೆ ವಿಮಾನ ಟೇಕ್‌ಅಪ್ ಆಗುವುದಕ್ಕೆ ರನ್‌ವೇ ಸ್ಥಳಾವಕಾಶ ಲಭಿಸಿದ್ದು, ಬದಲಿ ಪೈಲಟ್ ನಿಯೋಜನೆಯೊಂದಿಗೆ ವಿಮಾನವು ದುಬಾೖಗೆ ಹಾರಾಟ ನಡೆಸಿದೆ.
ತಪ್ಪಿದ ಮತ್ತೂಂದು ಅನಾಹುತಒಂದು ವೇಳೆ ವಿಮಾನದ ಪೈಲಟ್ ಮದ್ಯಸೇವನೆ ಮಾಡಿರುವುದು ವೈದ್ಯಾಧಿಕಾರಿಗಳ ಗಮನಕ್ಕೆ ಬಾರದೆ ಹೋಗಿದ್ದರೆ ಮದ್ಯದ ಅಮಲಿನಲ್ಲಿ ವಿಮಾನ ಚಲಾಯಿಸಿ ದೊಡ್ಡ ಅನಾಹುತಕ್ಕೆ ಎಡೆಯಾಗುವ ಅಪಾಯ ಇತ್ತು. ಈ ವಿಮಾನದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಬಹುತೇಕ ಎಲ್ಲ ಸಿಬಂದಿ ಕೂಡ ಟರ್ಕಿ ದೇಶದವರೇ ಆಗಿದ್ದರೂ ವೈದ್ಯರ ಕಟ್ಟು ನಿಟ್ಟಿನ ತೀರ್ಮಾನವು ಪೈಲಟ್ ಮದ್ಯ ಸೇವನೆ ಮಾಡಿ ವಿಮಾನ ಚಲಾಯಿಸುವ ಸಂದರ್ಭವನ್ನು ತಪ್ಪಿಸುವ ಮೂಲಕ ಮಂಗಳೂರು-ದುಬಾೖ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ಎಲ್ಲ ಪ್ರಯಾಣಿಕರನ್ನು ಬಚಾವ್ ಮಾಡಿರುವುದು ಗಮನಾರ್ಹ. ಟರ್ಕಿ ದೇಶದ ವಿಮಾನ
ಮಂಗಳೂರು-ದುಬಾೖ ಸ್ಪೈಸ್ ವಿಮಾನ ಸುಮಾರು ಒಂದು ವರ್ಷದಿಂದ ಮಂಗಳೂರಿನಿಂದ ಹಾರಾಟ ನಡೆಸುತ್ತಿದೆ. ಈ ವಿಮಾನವು ಟರ್ಕಿ ದೇಶದ ಕಾರ್ಡೊಲ್ ಕಂಪೆನಿಗೆ ಸೇರಿದ್ದಾಗಿದ್ದು, ಸ್ಪೈಸ್ ಜೆಟ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನಮ್ಮ ದೇಶದಲ್ಲಿ ತನ್ನ ವಿಮಾನಗಳನ್ನು ಹಾರಾಟ ನಡೆಸುತ್ತಿದೆ. ಈ ಕಾರಣದಿಂದಾಗಿ ಮಂಗಳೂರು-ದುಬಾೖ ನಡುವೆ ಸಂಚರಿ ಸುವ ಈ ಸ್ಪೈಸ್ ಜೆಟ್‌ನಲ್ಲಿ ಪೈಲಟ್‌ನಿಂದ ಹಿಡಿದು ಹೆಚ್ಚಿನ ಸಿಬಂದಿ ಕೂಡ ಟರ್ಕಿ ಮೂಲದವರೇ ಆಗಿದ್ದಾರೆ. ಮೂಲಗಳ ಪ್ರಕಾರ, ಪಾನಮತ್ತರಾಗಿ ಸಿಕ್ಕಿಬಿದ್ದಿರುವ ಟರ್ಕಿ ಮೂಲದ ಈ ಮಹಿಳಾ ಪೈಲಟ್ ಸದ್ಯ ನಗರದಲ್ಲೇ ವಾಸ್ತವ್ಯ ಹೂಡಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳಿಂದ ತನಿಖೆಗೆ ಒಳಗಾಗಿ ಆ ಬಗ್ಗೆ ಸೂಕ್ತ ತೀರ್ಮಾನ ಹೊರ ಬೀಳುವವರೆಗೂ ಆಕೆಗೆ ಯಾವುದೇ ವಿಮಾನ ಹಾರಾಟ ನಡೆಸುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. – ಸುರೇಶ್ ಪುದುವೆಟ್ಟು