Advertisement

ಮಹದಾಯಿ ಯೋಜನೆ; ಬಿಜೆಪಿಗೆ ಬದ್ಧತೆ ಸಕಾಲ

01:26 AM Jul 28, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಆ ಪಕ್ಷದ ಭದ್ರಕೋಟೆ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಮಹದಾಯಿ ಯೋಜನೆ ಅನುಷ್ಠಾನದ ಕನಸು ಚಿಗುರೊಡೆದಿದೆ. ದಶಕಗಳ ಹೋರಾಟ ಈಗಲಾದರೂ ತಾರ್ಕಿಕ ಅಂತ್ಯ ತಲುಪುವ ನಿರೀಕ್ಷೆಗಳು ಗರಿಗೆದರಿವೆ.

Advertisement

ಇದಕ್ಕೆ ಸಕಾರಣವೂ ಇದೆ. ಮಹದಾಯಿ ಹಾದು ಹೋಗುವ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಇದರ ಸೂತ್ರ ಇರುವುದು ಕೇಂದ್ರದಲ್ಲಿ. ಅಲ್ಲಿಯೂ ಬಿಜೆಪಿ ಚುಕ್ಕಾಣಿ ಹಿಡಿದಿದೆ. ನ್ಯಾಯಾಧಿಕರಣದಿಂದ ತೀರ್ಪು ಕೂಡ ಬಂದಾಗಿದೆ. ಆದರೆ, ನೀರು ಮಾತ್ರ ಇನ್ನೂ ಆ ಭಾಗಕ್ಕೆ ಹರಿದಿಲ್ಲ. ಆದ್ದರಿಂದ ಇತ್ತ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅತ್ತ ವಿವಾದಕ್ಕೆ ಪೂರ್ಣವಿರಾಮದ ನಿರೀಕ್ಷೆ ಮೊಳಕೆಯೊಡೆದಿದೆ.

ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ತೀರ್ಪು ಬಂದು ಬಹುತೇಕ ಒಂದು ವರ್ಷ ಆಗಿದೆ. ಅದರಂತೆ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಈಗ ಆ ನೀರು ಬಳಕೆಗೆ ಅಧಿಸೂಚನೆ ಹೊರಡಿಸಬೇಕಿದೆ. ಕಣಕುಂಬಿ ಸೇರಿ ಅಲ್ಲಲ್ಲಿ ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಪರಿಸರ ಅನುಮತಿಯ ಅವಶ್ಯಕತೆ ಇದೆ. ಜಲಾಶಯ ನಿರ್ಮಾಣಕ್ಕೆ ಟೆಂಡರ್‌ ಕರೆದು, ತ್ವರಿತಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ. ಇದಲ್ಲದೆ, ಉತ್ತರ ಕರ್ನಾಟಕಕ್ಕೆ ಹಂಚಿಕೆಯಾದ ನೀರು ಸಾಲುವುದಿಲ್ಲ. ಭವಿಷ್ಯದ ದೃಷ್ಟಿಯಿಂದ 36.5 ಟಿಎಂಸಿ ನೀರು ಕೇಳಲಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿದೆ. ಇದೆಲ್ಲದರ ಜವಾಬ್ದಾರಿ ಈಗ ನೂತನ ಸರ್ಕಾರದ ಮೇಲಿದೆ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳುತ್ತಾರೆ.

ಪ್ರತಿಪಕ್ಷದಲ್ಲಿದ್ದೂ ಭರವಸೆ ಗೋಪುರ: ಬಿಜೆಪಿಯಿಂದ ಅದರಲ್ಲೂ ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ನಿರೀಕ್ಷೆಗಳು ಹೆಚ್ಚಿವೆ. ಯಾಕೆಂದರೆ, ಪ್ರತಿಪಕ್ಷದಲ್ಲಿದ್ದೂ ಈ ಯೋಜನೆಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ಜನರ ಎದುರು ಭರವಸೆ ಗೋಪುರ ನಿರ್ಮಿಸಿದ್ದು ಬಿಜೆಪಿ ನಾಯಕರು. 2017ರ ನವೆಂಬರ್‌ 1ರಂದು ಸಿಹಿ ಸುದ್ದಿ ಕೊಡುವುದಾಗಿ ಅಂದು ಪ್ರತಿಪಕ್ಷದ ನಾಯಕರಾಗಿದ್ದ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದ್ದರು. ಇದು ಹುಸಿಗೊಂಡ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರ ಮನೆ ಮುಂದೆ ರೈತರು ಧರಣಿ ಆರಂಭಿಸಿದರು. ಮತ್ತೂಂದೆಡೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ನ.15ರೊಳಗೆ ನೀರು ತರುವುದಾಗಿ ಆಶ್ವಾಸನೆ ಕೊಟ್ಟರು. ಮತ್ತೆ ಹುಸಿಗೊಂಡಿದ್ದರಿಂದ ಬಿಜೆಪಿ ಕಚೇರಿ ಎದುರು ರೈತ ಸೇನೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.

ಈ ಮಧ್ಯೆ ‘ಸ್ವತ: ಗೋವಾ ಮುಖ್ಯಮಂತ್ರಿ ಮನೋ ಹರ್‌ ಪರಿಕರ್‌ ಅವರು ಮಹದಾಯಿ ಯೋಜನೆ ಅಡಿ ಕರ್ನಾಟಕಕ್ಕೆ ಕುಡಿಯಲು ಒಂದೂವರೆ ಟಿಎಂಸಿ ನೀರು ಹರಿಸಲು ಯಾವುದೇ ಅಭ್ಯಂತರ ಇಲ್ಲ’ ಎಂದು ತಮಗೆ ಪತ್ರ ಬರೆದಿರುವುದಾಗಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಯಡಿಯೂರಪ್ಪ ಪ್ರದರ್ಶನ ಮಾಡಿದರು. ನಂತರ ಇದನ್ನು ಅದೇ ಗೋವಾ ಸರ್ಕಾರದ ಜಲ ಸಂಪನ್ಮೂಲ ಸಚಿವರು ನಿರಾಕರಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು. ಇದರ ನಡುವೆ ಬಿಜೆಪಿ ಮುಖಂಡ ಗಿರೀಶ ಮಟ್ಟೆಣ್ಣವರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳಸಾ-ಬಂಡೂರಿ ನಾಲೆಗೆ ನಿರ್ಮಿಸಿದ ತಡೆಗೋಡೆಯನ್ನು ರಾತ್ರೋರಾತ್ರಿ ಒಡೆಯುವ ಪ್ರಯತ್ನ ಮಾಡಿರುವುದಾಗಿಯೂ ಘೋಷಿಸಿದರು.

Advertisement

ಬದ್ಧತೆ ಪ್ರದರ್ಶನದ ಅನಿವಾರ್ಯತೆ: ಈಗ ಸ್ವತ: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮಹದಾಯಿ ವಿಚಾರದಲ್ಲಿ ತನ್ನ ಬದ್ಧತೆ ಪ್ರದರ್ಶಿಸಲು ಇದು ಸಕಾಲ ಮತ್ತು ಅನಿವಾರ್ಯ ಎಂದು ಆ ಭಾಗದ ನಾಯಕರು ವಿಶ್ಲೇಷಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಮಹದಾಯಿ ವಿವಾದದ ‘ಕೊಡುಗೆ’ಯೂ ಇದೆ. ಕರ್ನಾಟಕದಿಂದ ಗೋವಾ ಮೂಲಕ ಸಮುದ್ರ ಸೇರುವ ನೀರನ್ನು ಮಲಪ್ರಭಾ ನದಿಪಾತ್ರದ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ಹರಿಸುವ ಯೋಜನೆಯೇ ಮಹದಾಯಿ ತಿರುವು. ಈ ಹೋರಾಟಕ್ಕೆ ನೀರೆರೆದು ತಕ್ಕಮಟ್ಟಿಗೆ ಪೋಷಿಸಿದ್ದು ಬಿಜೆಪಿ. ಜತೆಗೆ ಅದರ ಹೆಸರಿನಲ್ಲಿ ತನ್ನ ನೆಲೆಯನ್ನೂ ವಿಸ್ತರಿಸಿಕೊಂಡಿತು. ಈಗಲೂ ಯೋಜನೆ ಅವಲಂಬಿತ ಕ್ಷೇತ್ರಗಳನ್ನು ಬಹುತೇಕ ಬಿಜೆಪಿ ಸಂಸದರು ಮತ್ತು ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭಗಳಲ್ಲಿ ಯೋಜನೆಯ ಹೋರಾಟದ ಕಾವು ತೀವ್ರಗೊಳ್ಳುತ್ತಿತ್ತು. ನಂತರ ನಿರೀಕ್ಷೆಗಳು ಹುಸಿಯಾಗುತ್ತಿತ್ತು.

ನಾಲ್ಕೂ ಕಡೆ ಒಂದೇ ಪಕ್ಷ: ಇದಕ್ಕೆ ನಾಯಕರು ನೀಡುತ್ತಿದ್ದ ಕಾರಣ-ಒಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಮತ್ತೂಂದು ರಾಜ್ಯದಲ್ಲಿ ಕಾಂಗ್ರೆಸ್‌ ಇರುತ್ತಿತ್ತು. ಇವೆರಡರಲ್ಲೂ ಬಿಜೆಪಿ ಇದ್ದಾಗ, ಕೇಂದ್ರದಲ್ಲಿ ಇನ್ನೊಂದು ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿರುತ್ತಿತ್ತು. ಹಾಗೆ ನೋಡಿದರೆ, ಈ ಹಿಂದೆ ಮಹದಾಯಿ ನದಿಯನ್ನು ಅವಲಂಬಿಸಿದ ಮೂರೂ ರಾಜ್ಯಗಳು ಮತ್ತು ಕೇಂದ್ರದಲ್ಲಿ ಒಟ್ಟೊಟ್ಟಿಗೆ ಒಂದೇ ಪಕ್ಷ ಅಧಿಕಾರಕ್ಕೆ ಬಂದ ಉದಾ ಹರಣೆಗಳಿಲ್ಲ (ಹೋರಾಟ ಶುರುವಾದ ನಂತರದಿಂದ). ವಿವಿಧ ಪಕ್ಷಗಳ ನಾಯಕರಿಗೂ ಇದೊಂದು ನೆಪವಾಗಿತ್ತು. ಇದೇ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ, ಸರ್ವಪಕ್ಷ ನಿಯೋಗಗಳ ಪ್ರಹಸನ ನಡೆಯುತ್ತಿತ್ತು. ಈ ಮಧ್ಯೆ ಮೂರೂ ರಾಜ್ಯಗಳ ಪೈಕಿ ಯಾವುದಾದರೂ ಒಂದು ಕಡೆ ಚುನಾವಣೆ ಎದುರಾಗುತ್ತಿತ್ತು. ಅಲ್ಲಿಗೆ ಯೋಜನೆ ಮತ್ತೆ ಮೂಲೆಗುಂಪಾಗುತ್ತಿತ್ತು.

ಯೋಜನೆಯ ಫ‌ಲಾನುಭವಿಗಳು
ಬಾಗಲಕೋಟೆಯ ಬಾದಾಮಿ, ಬೆಳಗಾವಿಯ ಸವದತ್ತಿ, ಮುನವಳ್ಳಿ, ಗದಗ ಜಿಲ್ಲೆಯ ರೋಣ ಮತ್ತು ನರಗುಂದ, ಧಾರವಾಡದ ನವಲಗುಂದ ಹಾಗೂ ಕುಂದಗೋಳ ಕ್ಷೇತ್ರದ ಜನತೆ ಮಹದಾಯಿ ಯೋಜನೆಯ ಫ‌ಲಾನುಭವಿಗಳು.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next