Advertisement

ಸಾಕಾರಗೊಳ್ಳಲಿದೆ ಭವ್ಯ ಶಿಲಾಮಯ ದೇಗುಲ

11:07 AM Aug 05, 2020 | mahesh |

ಅಯೋಧ್ಯೆ ಹೆಸರಿನ ಹಿನ್ನೆಲೆ ಸಂಸ್ಕೃತದ “ಯುದ್ಧ’ ಪದದಿಂದ ಹುಟ್ಟಿಕೊಂಡದ್ದು “ಅಯೋಧ್ಯಾ’. “ಯುದ್ಧ’ ಅಂದರೆ ಕಾದಾಡುವುದು, ಹೋರಾಡುವುದು. ಹಾಗಾಗಿ ಅಯೋಧ್ಯಾ ಅಂದರೆ ಗೆಲ್ಲಲಾಗದ, ಅಜೇಯ ಎಂದು ಅರ್ಥ. ಅಥರ್ವ ವೇದದಲ್ಲಿ ಅಯೋಧ್ಯೆಯ ಕುರಿತಾಗಿ ಈ ಅರ್ಥದಲ್ಲಿ ದೇವತೆಗಳ ಅಜೇಯ ನಗರ ಎಂಬ ಉಲ್ಲೇಖವಿದೆ. ಸಾಕೇತವೆಂಬುದು ಅಯೋಧ್ಯೆಯ ಹಳೆಯ ಹೆಸರು. ಸಂಸ್ಕೃತದ ಸಹ ಮತ್ತು ಆಕೇತನ ಪದಗಳಿಂದ ಹುಟ್ಟಕೊಂಡ ಸಾಕೇತಕ್ಕೆ ಸುಂದರ ಕಟ್ಟಡಗಳ ನಗರ ಎಂದರ್ಥ. ಕೋಸಲ ರಾಜವಂಶದ ರಾಜಧಾನಿಯಾಗಿದ್ದುದರಿಂದ ಅಯೋಧ್ಯೆಗೆ ಕೋಸಲ ಎಂಬ ನಾಮಧೇಯವೂ ಇದೆ. ತನ್ನ ಸುಭಿಕ್ಷೆ ಮತ್ತು ಉತ್ಕೃಷ್ಟ ಕೌಶಲಗಳಿಂದ ಈ ಹೆಸರು ಬಂದಿದೆ ಎಂಬ ಉಲ್ಲೇಖ ಜೈನರ ಆದಿಪುರಾಣದಲ್ಲಿದೆ. ಥೈಲಂಡ್‌ನ‌ “ಆಯುತ್ತಾಯ’, ಇಂಡೋ ನೇಷ್ಯಾದ “ಯೋಗ್ಯಕರ್ತ’
ನಗರಗಳ ಹೆಸರಿನ ಮೂಲ ಅಯೋಧ್ಯೆಯೇ.

Advertisement

ರಾಮ ಮಂದಿರವೆಂದರೆ ಥಟ್ಟನೆ ಮನಸ್ಸಿಗೆ ಬರುವುದು ಮಂಟಪ ವಾಸ್ತು ರೀತಿಯ ವಿಶಿಷ್ಟ ದೇಗುಲ. ಈ ಮಂದಿರದ ವಿನ್ಯಾಸ ಇಂದು ನಿನ್ನೆಯದ್ದಲ್ಲ. ಅಯೋಧ್ಯೆಯಲ್ಲಿ ಮಂದಿರ ಎಂದಾಗಲೇ ಇದು ರೂಪು ತಳೆದಿದೆ. ಸರಿಸುಮಾರು ಮೂರು ದಶಕಗಳಷ್ಟು ಹಳೆಯ ವಿನ್ಯಾಸ ಇದು.

ರಾಮಮಂದಿರ ನಿರ್ಮಾಣ ಉದ್ದೇಶದಿಂದ ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ರಚನೆಯಾದ ರಾಮ ಜನ್ಮಭೂಮಿ ನ್ಯಾಸ ಸಮಿತಿ ಈ ವಿನ್ಯಾಸವನ್ನು ರೂಪಿಸಿತ್ತು. 1985ಕ್ಕೂ ಮೊದಲೇ ರಾಮ ಮಂದಿರ ವಿನ್ಯಾಸವನ್ನು ಮಾಡಲಾಗಿತ್ತು. ಭಾರತೀಯ ಶಿಲ್ಪಶಾಸ್ತ್ರ, ಪರಂಪರೆಗೆ ಅನುಗುಣವಾಗಿ ನೂರಾರು ವರ್ಷಗಳವರೆಗೆ ಇದರ ಸಂರಚನೆ ಉಳಿಯುವಂತೆ ಈ ವಿನ್ಯಾಸವನ್ನು ರೂಪಿಸಲಾಗಿದೆ.

ಮೂಲ ವಿನ್ಯಾಸದಲ್ಲಿ ರಾಮ ಮಂದಿರ ಸುಮಾರು 37,590 ಚದರ ಅಡಿಗಳಲ್ಲಿ ಮಂದಿರ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೀಗ ಬದಲಾದ ಸಂದರ್ಭದಲ್ಲಿ ಇದನ್ನು 76 ಸಾವಿರದಿಂದ 84 ಸಾವಿರ ಚದರ ಅಡಿಗಳಿಗೆ ವಿಸ್ತರಿಸಲಾಗಿದೆ. ಅಂದರೆ ಇಡೀ ದೇಗುಲ ಸುಮಾರು 100ರಿಂದ 120 ಎಕರೆ ವರೆಗೆ ವ್ಯಾಪಿಸಿರಲಿದೆ. ಮೂರು ಅಂತಸ್ತುಗಳು ಮತ್ತು ಒಟ್ಟು ಐದು ಗೋಪುರಗಳನ್ನು ಹೊಂದಿರಲಿದೆ. ಸುತ್ತ ನಾಲ್ಕು ಮಂದಿರಗಳು ನಿರ್ಮಾಣವಾಗಲಿವೆ. ದೇಗುಲದಲ್ಲಿ ಆರಾಧ್ಯಮೂರ್ತಿಯಾಗಿ ಶ್ರೀರಾಮನಿರಲಿದ್ದು, ಸೀತಾಮಾತೆ, ಲಕ್ಷ್ಮಣ, ಆಂಜನೇಯ, ಗಣಪತಿಯ ಗುಡಿಗಳನ್ನೂ ನಿರ್ಮಿಸಲಾಗುವುದು.

ಹೊಸ ವಿನ್ಯಾಸದಲ್ಲಿ 3 ಹೊಸ ಮಂಟಪ ಮಾದರಿಗಳನ್ನು ಸೇರಿಸಲಾಗಿದೆ. ಶಿಲ್ಪಸ್ತಂಭಗಳ ಸಂಖ್ಯೆಯನ್ನು 212ರಿಂದ 360ಕ್ಕೆ ಹೆಚ್ಚಿಸಲಾಗಿದೆ. ಮೆಟ್ಟಿಲುಗಳ ಅಳತೆಯನ್ನು 6ರಿಂದ 16 ಅಡಿಗಳಿಗೆ ಹೆಚ್ಚಿಸಲಾಗಿದ್ದು, ದೇಗುಲದ ಒಟ್ಟು ಎತ್ತರವನ್ನು141ರಿಂದ 161 ಅಡಿಗಳಿಗೆ ಏರಿಕೆ ಮಾಡಲಾಗಿದೆ. ದೇಗುಲ 268 ಅಡಿ ಉದ್ದ, 120 ಅಡಿ ಅಗಲ ಇರಲಿದೆ.

Advertisement

 ಶಿಲಾ ದೇಗುಲ
ಗರ್ಭಗುಡಿ ಅಷ್ಟಭುಜಾಕೃತಿಯದ್ದಾಗಿದ್ದು ಇದರ ಗೋಪುರ ಅತಿ ಎತ್ತರ ವಾಗಿರಲಿದೆ. ನಾಗರ ಶೈಲಿಯಲ್ಲಿ ನಿರ್ಮಾಣಗೊಳ್ಳಲಿರುವ ಇಡೀ ದೇಗುಲ ಶಿಲಾಮಯವಾಗಿರಲಿದೆ. ಭಾರತದ ಪ್ರಾಚೀನ ಶಿಲ್ಪಶಾಸ್ತ್ರದ ಕ್ರಮದಂತೆ ಎಲ್ಲಿಯೂ ಕಬ್ಬಿಣ ಬಳಕೆಯನ್ನು ಮಾಡುವುದಿಲ್ಲ. ಹಿಂದಿನ ಅಂದಾಜು ಪ್ರಕಾರ 3 ಲಕ್ಷ ಕ್ಯೂಬಿಕ್‌ ಅಡಿ ಗುಲಾಬಿ ಬಣ್ಣದ ಕಲ್ಲು (ರೆಡ್‌ ಸ್ಯಾಂಡ್‌ಸ್ಟೋನ್‌)ಗಳು ಬೇಕಾಗಲಿವೆ ಎಂದು ಅಂದಾಜಿಸಲಾಗಿದ್ದು, ಈಗ ಅದು ದುಪ್ಪಟ್ಟಾಗುವ ಸಾಧ್ಯತೆ ಇದೆ. ಈ ಮೊದಲು ಆಂದೋಲನದ ವೇಳೆ ದೇಶಾದ್ಯಂತ ಜನರಿಂದ ಸಂಗ್ರಹಿಸಲಾಗಿದ್ದ ಇಟ್ಟಿಗೆಗಳನ್ನೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.

 ಜಗತ್ತಿನಲ್ಲಿ 3ನೇ ಅತಿ ದೊಡ್ಡ ದೇಗುಲ!
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರ ಜಗತ್ತಿನ ಮೂರನೇ ಅತೀ ದೊಡ್ಡ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕಾಂಬೋಡಿಯಾದ ಅಂಕೋರ್‌ವಾಟ್‌ ದೇಗುಲ 402 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿದ್ದು ಜಗತ್ತಿನ ಅತಿ ದೊಡ್ಡ ದೇಗುಲವಾಗಿದೆ. ಎರಡನೆಯ ಅತಿ ದೊಡ್ಡ ದೇಗುಲವೆಂದರೆ ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಾಲಯ. ಇದು 156 ಎಕರೆಯಲ್ಲಿ ವ್ಯಾಪಿಸಿದೆ. ಇವುಗಳನ್ನು ಗಮನಿಸಿದರೆ, ರಾಮಮಂದಿರ 120 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದ್ದು ಮೂರನೇ ಅತೀ ದೊಡ್ಡ ದೇಗುಲವಾಗಲಿದೆ.

 ಮೂರೂವರೆ ವರ್ಷ
ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಕೋವಿಡ್‌ನಿಂದಾಗಿ ಇದು ತುಸು ದೀರ್ಘ‌ವಾಗಬಹುದು. ಈಗಾಗಲೇ ಶಿಲ್ಪಸ್ತಂಭಗಳ ಕೆತ್ತನೆಗಳು ನಡೆಯುತ್ತಿವೆ. ನಿರ್ಮಾಣ ಕಾಮಗಾರಿಗೆ ಪೂರಕವಾಗಿ ಪ್ರಸಿದ್ಧ ನಿರ್ಮಾಣ ಕಂಪೆನಿ ಎಲ್‌ ಆ್ಯಂಡ್‌ ಟಿ ಯ ತಾಂತ್ರಿಕ ಸಲಕರಣೆಗಳು, ತಂಡ ಅಯೋಧ್ಯೆಯಲ್ಲಿ ಬೀಡುಬಿಟ್ಟಿದೆ.

ಕಾಲಲ್ಲೇ ಅಳೆದಿದ್ದ ವಾಸ್ತುಶಿಲ್ಪಿ
ಚಂದ್ರಕಾಂತ ಸೋಮಪುರ ರಾಮಮಂದಿರದ ವಾಸ್ತುಶಿಲ್ಪಿ. ಇವರ ಇಡೀ ಕುಟುಂಬ ವಾಸ್ತುಶಿಲ್ಪದಲ್ಲಿ ಪ್ರಸಿದ್ಧವಾಗಿದ್ದು ಸೋಮನಾಥ ದೇಗುಲ ಸಹಿತ ಉತ್ತರ ಭಾರತದ ಸುಮಾರು 200ಕ್ಕೂ ಹೆಚ್ಚು ದೇಗುಲಗಳನ್ನು ವಿನ್ಯಾಸ ಮಾಡಿದೆ. ಭಾರತೀಯ ಶಿಲ್ಪಶಾಸ್ತ್ರ ಪಾರಂಗತರಾದ ಇವರು ಕಳೆದ 30 ವರ್ಷಗಳಿಂದ ರಾಮ ಮಂದಿರದ ವಿನ್ಯಾಸದ ಬಗ್ಗೆ ಚಿಂತನೆಗಳನ್ನು ನಡೆಸಿದ್ದಾರೆ.

1990ರಲ್ಲಿ ಚಂದ್ರಕಾಂತ ಅವರು ಅಯೋಧ್ಯೆಗೆ ವಿಎಚ್‌ಪಿ ಅಧ್ಯಕ್ಷರಾಗಿದ್ದ ಅಶೋಕ್‌ ಸಿಂಘಾಲ್‌ ಅವರೊಂದಿಗೆ ಭೇಟಿ ನೀಡಿದ್ದರು. ಆ ವೇಳೆ ಸ್ಥಳದಲ್ಲಿ ಮಿಲಿಟರಿ ನಿಯೋಜನೆಯಾಗಿದ್ದರಿಂದ ಏನನ್ನೂ ಕೊಂಡೊಯ್ಯಲು ಸಾಧ್ಯವಿರಲಿಲ್ಲ. ಇದರಿಂದಾಗಿ ಕಾಲಲ್ಲೇ ಅಳತೆ ತೆಗೆದು ಒಂದು ತಾತ್ಕಾಲಿಕ ವಿನ್ಯಾಸ ಸಿದ್ಧಪಡಿಸಿದ್ದರಂತೆ. ಅಂದು ಅವರಿಗೆ 47 ವರ್ಷಗಳಾಗಿದ್ದರೆ ಈಗ 77 ವರ್ಷ. ಅವರು ಪುತ್ರರಾದ ನಿಖೀಲ್‌, ಆಶಿಶ್‌ ಅವರೂ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಈಗ ಸೋಮಪುರ ಅವರ ಕಚೇರಿ ಮಂದಿರದ 3ಡಿ ವಿನ್ಯಾಸವನ್ನೂ ಸಿದ್ಧಪಡಿಸಿದೆ.

ಬೇರೆ ಎಲ್ಲೆಲ್ಲಿವೆ ಶ್ರೀರಾಮ ದೇಗುಲಗಳು?
ಭಾರತದ ವಿವಿಧೆಡೆ ಭವ್ಯ ಶ್ರೀರಾಮ ದೇಗುಲಗಳು ಈಗಾಗಲೇ ಇವೆ. ಅವುಗಳತ್ತ ಇಣುಕುನೋಟ ಇಲ್ಲಿದೆ.

ತೃಶ್ಶೂರು ಜಿಲ್ಲೆಯಲ್ಲಿದೆ. ಇಲ್ಲಿರುವ ಶ್ರೀರಾಮನ ವಿಗ್ರಹವು ಶ್ರೀಕೃಷ್ಣನೇ ಪೂಜಿಸುತ್ತಿದ್ದಂಥದ್ದು ಎಂಬ ಐತಿಹ್ಯವಿದೆ. ಸಮುದ್ರದಲ್ಲಿ ಜಲಸ್ಥಂಭನಗೊಂಡಿದ್ದ ಆ ವಿಗ್ರಹ ಮೀನುಗಾರರಿಗೆ ಲಭಿಸಿತು. ಬಳಿಕ ಸ್ಥಳೀಯ ಅರಸ ತೃಪ್ರಯಾರ್‌ನಲ್ಲಿ ದೇಗುಲ ನಿರ್ಮಿಸಿ ಅಲ್ಲಿ ಪ್ರತಿಷ್ಠಾಪಿಸಿದನಂತೆ.

ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿದೆ. ಇಲ್ಲಿರುವುದು ಎರಡಡಿ ಎತ್ತರದ ಶ್ರೀರಾಮನ ಕಪ್ಪು ವಿಗ್ರಹ, ಹೀಗಾಗಿ ಕಾಲಾರಾಮ ಎಂಬ ಹೆಸರು. ಭದ್ರಾಚಲಮ್‌ ಜಿಲ್ಲೆಯಲ್ಲಿದೆ. ಶ್ರೀರಾಮನು ಲಂಕೆಯಿಂದ ಸೀತಾದೇವಿಯನ್ನು ಕರೆತರುವುದಕ್ಕಾಗಿ ಗೋದಾವರಿ ನದಿಯನ್ನು ದಾಟಿದ ಸ್ಥಳದಲ್ಲಿಯೇ ಈ ದೇಗುಲವಿದೆ. ಇಲ್ಲಿನ ವಿಗ್ರಹ ತ್ರಿಭಂಗ ಸ್ಥಿತಿಯಲ್ಲಿದ್ದು, ಕೈಯಲ್ಲಿ ಧನುಸ್ಸನ್ನು ಹೊಂದಿದೆ. ಬದಿಯಲ್ಲಿರುವ ಸೀತಾದೇವಿಯ ವಿಗ್ರಹದ ಕೈಯಲ್ಲಿ ತಾವರೆಯಿದೆ.

ಶ್ರೀರಾಮನನ್ನು ರಾಜನನ್ನಾಗಿ ಆರಾಧಿಸುವ ಸಂಪ್ರದಾಯವಿರುವ ದೇಶದ ಏಕೈಕ ದೇಗುಲವಿದು. ದೇವಸ್ಥಾನವು ಕೋಟೆಯ ಶೈಲಿಯಲ್ಲಿದೆ. ರಾಜಾ ಶ್ರೀರಾಮನಿಗೆ ಪ್ರತಿದಿನವೂ ಪೊಲೀಸರು ಗೌರವ ರಕ್ಷೆ ಸಲ್ಲಿಸುವ ಸಂಪ್ರದಾಯವಿದೆ.

ಅಯೋಧ್ಯೆಯಲ್ಲಿರುವ ಅತ್ಯುತ್ತಮ ಶ್ರೀರಾಮ ದೇವಸ್ಥಾನಗಳಲ್ಲಿ ಒಂದು. ಕನಕ ಅಂದರೆ ಬಂಗಾರ; ಇಲ್ಲಿನ ಸೀತಾರಾಮಚಂದ್ರ ವಿಗ್ರಹಗಳಿಗೆ ಚಿನ್ನದ ಆಭರಣಗಳಿವೆ, ಚಿನ್ನದ ಸಿಂಹಾಸನವಿದೆ. ಶ್ರೀರಾಮನ ಮಲತಾಯಿ ಕೈಕೇಯಿಯು ರಾಮನಿಗೆ ವಿವಾಹದ ಉಡುಗೊರೆಯಾಗಿ ಈ ಮಂದಿರವನ್ನು ನಿರ್ಮಿಸಿದಳು ಎಂಬುದು ಐತಿಹ್ಯ.

ಲೋಕಾಪವಾದ ಅಳಿಸುವುದಕ್ಕಾಗಿ ಶ್ರೀರಾಮನಿಂದ ಪರಿತ್ಯಕ್ತೆಯಾದ ಸೀತಾದೇವಿಯು ಆಶ್ರಯ ಪಡೆದ ವಾಲ್ಮೀಕಿ ಮುನಿಯ ಆಶ್ರಮವಿದ್ದ ಸ್ಥಳವಿದು ಎನ್ನಲಾಗುತ್ತದೆ. ವಾಲ್ಮೀಕಿಯು ರಾಮಾಯಣವನ್ನು ರಚಿಸಿದ್ದು, ಸೀತಾದೇವಿ ಲವ-ಕುಶರಿಗೆ ಜನ್ಮ ನೀಡಿದ್ದು ಕೂಡ ಇಲ್ಲೇ. ಹೀಗಾಗಿ ಇದು ಕೂಡ ಬಹು ಪವಿತ್ರ.

ಹೊಯ್ಸಳ ಮತ್ತು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪರಶುರಾಮನ ವಿನಂತಿಯಂತೆ ಶ್ರೀರಾಮನು ತನ್ನ ವಿವಾಹ ಸಂದರ್ಭದ ದೃಶ್ಯಗಳನ್ನು
ಕಾಣಿಸಿದ ಸ್ಥಳ ಇದೆನ್ನಲಾಗುತ್ತದೆ. ಹೀಗಾಗಿ  ಇಲ್ಲಿ ಹಿಂದೂ ವಿವಾಹ ಸನ್ನಿವೇಶದಂತೆ ಕೋದಂಡರಾಮ ವಿಗ್ರಹದ ಬಲಭಾಗದಲ್ಲಿ ಸೀತಾದೇವಿಯ
ವಿಗ್ರಹವಿದೆ. ಸೀತೆಯು ರಾಮನ ಬಲದಲ್ಲಿಯೂ, ಲಕ್ಷ್ಮಣ ವಿಗ್ರಹವು ಎಡದಲ್ಲಿಯೂ ಇರುವ ದೇವಸ್ಥಾನ ಇದೊಂದೇ.

ದಕ್ಷಿಣದ ಅಯೋಧ್ಯೆ ಎಂಬ ಖ್ಯಾತಿ ಪಡೆದಿದೆ. ಶ್ರೀರಾಮ, ಲಕ್ಷ್ಮಣ, ಸೀತಾದೇವಿಯರ ಜತೆಗೆ ಭರತ, ಶತ್ರುಘ್ನರ ವಿಗ್ರಹಗಳೂ ಇರುವ ದೇಗುಲ ಇದೊಂದೇ.


03 ನೇ ಅತಿದೊಡ್ಡ ಹಿಂದೂ ಶ್ರದ್ಧಾಕೇಂದ್ರ

360 ಸ್ತಂಭಗಳ ಮೇಲೆ ಮಂದಿರ
27 ನಕ್ಷತ್ರಗಳ ಪ್ರತಿನಿಧಿಸುವ ವೃಕ್ಷಗಳ ನಕ್ಷತ್ರವಾಟಿಕಾ
05 ಬೆಳ್ಳಿ ಇಟ್ಟಿಗೆಗಳ ಪ್ರತಿಷ್ಠಾಪನೆ
161 ಅಡಿ ಎತ್ತರದ ರಾಮಮಂದಿರ
1,75,000 ಘನ ಅಡಿ ಶಿಲೆಗಳ ಬಳಕೆ
05 ಭವ್ಯ ಮಂಟಪಗಳ ಆಕರ್ಷಣೆ
175 ಗಣ್ಯ ಅತಿಥಿಗಳು ಭೂಮಿಪೂಜೆಗೆ ಭಾಗಿ ನಿರೀಕ್ಷೆ
84000 ಚದರ ಅಡಿ ವಿಸ್ತೀರ್ಣ
500 ಕೋಟಿ ರೂ. ವೆಚ್ಚದಲ್ಲಿ ಮಂದಿರ ಸಂಬಂಧ ಕಾರ್ಯ
2,50,000 ಇಟ್ಟಿಗೆ (ದೇಶಾದ್ಯಂತ ಸಂಗ್ರಹಿಸಿದ್ದ) ಬಳಕೆ
2023 ಇಸವಿಗೆ ಮಂದಿರ ಪೂರ್ಣ ಗುರಿ

Advertisement

Udayavani is now on Telegram. Click here to join our channel and stay updated with the latest news.

Next