Advertisement

ಸೆಲ್ಫಿ ಎಂಬ ಮಾಯೆ

01:36 PM Apr 20, 2019 | mahesh |

ಸೆಲ್ಫಿ ಹುಚ್ಚು ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಅದಕ್ಕೆ ಅವರಿವರು ಎಂಬ ಹಂಗಿಲ್ಲ. ನಮ್ಮ ಪ್ರಧಾನಿ ಮೋದೀಜಿಯಿಂದ ಹಿಡಿದು ನಾವು ಕೂಡ ಸೆಲ್ಫಿ ಪ್ರಿಯರೇ. ಇದೊಂದರಿಂದಲೇ ಹೌಸ್‌ ಬ್ಯೂಟಿಫ‌ುಲ್‌ ವರ್ಲ್ಡ್ ಅನಿಸಿಕೊಳ್ಳುವುದು ! ಮುಖ ಕಪ್ಪಗಿರಲಿ ಅಥವಾ ಎಷ್ಟೇ ಚಿತ್ರವಿರಲಿ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಸಖತ್‌ ಆಗಿ ಕಾಣಬಹುದು.

Advertisement

ಒಂದೊಂದು ಸಂದರ್ಭದಲ್ಲಿ ಪ್ರತಿಯೊಬ್ಬನೂ ಸೆಲ್ಫಿಗನಾಗಿಯೇ ಬಿಡುತ್ತಾನೆ. ಅದು ದುಃಖವೇ ಇರಲಿ, ಸುಖವೇ ಇರಲಿ ಇವರ ಕೈಯಲ್ಲೊಂದು ಬಣ್ಣ ಬದಲಿಸೋ ಅಪ್ಲಿಕೇಷನ್‌ ಜೊತೆಗಿದ್ದರೆ ಅಲ್ಲೇ ಸೆಲ್ಫಿ ಹುಟ್ಟಿ ಬಿಡುತ್ತದೆ. ಕಾಲೇಜಿನ ಹುಡುಗ-ಹುಡುಗಿಯರಂತೂ ಇದಕ್ಕೆ ಕಡಿಮೆ ಇಲ್ಲ. ಅವರಿಗೆ ಸೆಲ್ಫಿಯದೇ ಹುಚ್ಚು. ನಮ್ಮ ಕಾಲೇಜ್‌ ಕ್ಯಾಂಪಸ್‌ನ ಯಾವುದೇ ಕಡೆ ನೋಡಿದರೂ ಅಂಗೈ ಉದ್ದದ ಮೊಬೈಲ್‌ ಹಿಡಿದು ಸೆಲ್ಫಿ ಕ್ಲಿಕ್ಕಿಸುವವರು ಪ್ರತ್ಯೇಕವಾಗಿರುತ್ತಾರೆ.

ಇನ್ನೂ ಕೆಲವು ಕಡೆ ಬರ್ತ್‌ಡೇ ಪಾರ್ಟಿ, ಮೆಹಂದಿ, ಮದುವೆ ಸಮಾರಂಭಗಳಲ್ಲಂತೂ ಹಿರಿಯರು-ಕಿರಿಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸೆಲ್ಫಿಗರಾಗಿರುತ್ತಾರೆ. ಕ್ರೀಮ್‌ ಪಾರ್ಲರ್‌ನಲ್ಲಿ ಎದುರಿಗಿರುವ ಐಸ್‌ಕ್ರೀಮ್‌ ಕರಗಿದರೂ ಸೆಲ್ಫಿಲೋಕದಲ್ಲಿ ಮುಳುಗಿರುವವರೂ ಅದೆಷ್ಟೋ ಮಂದಿ. ಅಪಘಾತವಾದರೂ ಅಲ್ಲಿ ಸೆಲ್ಫಿಯೇ. ಎಲ್ಲೆಲ್ಲೂ ಸೆಲ್ಫಿ ಹುಚ್ಚರು.

ಮೊಬೈಲ್‌ ಎಂಬ ಜಂಗಮ ಗಂಟೆ ಅದು ಯಾವಾಗ ಮಾನವನ ಕೈ ಸೇರಿತೋ ಅಂದಿಗೆ ದಿನದ ಅರ್ಧ ಸಮಯ ವ್ಯರ್ಥವಾಗುವ ಪರಿಪಾಠ ಶುರುವಾಯಿತು. ಮೊದಲೆಲ್ಲ ಒಂದು ಫೋಟೊ ತೆಗೆಯಬೇಕು ಎಂದಾದರೆ ಸ್ಟುಡಿಯೋವನ್ನೋ ಅಥವಾ ಫೋಟೊಗ್ರಾಫ‌ರ್‌ನನ್ನೋ ಹುಡುಕಿಕೊಂಡು ಅಲೆದಾಡಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ.

ಕಡಲಿನ ಅಬ್ಬರದ ತೆರೆಯ ಎಡೆಯಲ್ಲಿ, ಬೆಟ್ಟದ ಇಳಿಜಾರಿನಲ್ಲಿ, ಬಹುಮಹಡಿ ಕಟ್ಟಡದ ತುದಿಯಲ್ಲಿ ಸೆಲ್ಫಿ ಸಾಹಸಕ್ಕೆ ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡವರು ಅದೆಷ್ಟೋ ಜನ. ಸಾವಿರ ರೂಪಾಯಿಯಿಂದ ಲಕ್ಷಗಟ್ಟಲೆ ಮೌಲ್ಯದ ಮೊಬೈಲ್‌ ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಏನೇ ಇರಲಿ, ಈ ಸೆಲ್ಫಿ ಹುಚ್ಚು ಇತರರಿಗೆ ಕಿರಿಕಿರಿ ಎನಿಸದೇ ಜೀವಕ್ಕೆ ಕುತ್ತಾಗದೆ ಇದ್ದರೆ ಸಾಕು ಅಷ್ಟೇ.

Advertisement

ಸುಶ್ಮಿತಾ ಎಮ್‌. ಸಾಮಾನಿ
ಎಂಸಿಜೆ ವಿಭಾಗ, ಮಂಗಳಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next