ಇಂದು ಸ್ಮಾರ್ಟ್‌ಫೋನ್, ಹುಡುಗಿಯರ ಮೇಕಪ್ ಕಿಟ್‌ನಲ್ಲಿ ಕನ್ನಡಿಯೇ ಆಗಿಬಿಟ್ಟಿದೆ. ಬ್ಯಾಗ್‌ನಲ್ಲಿದ್ದ ಕನ್ನಡಿಗಳನ್ನು ಆಚೆ ಕಳುಹಿಸಿ, ಹುಡುಗಿ ಈ ಸ್ಮೈಲ್ ಕೊಡುತ್ತಿದ್ದಾಳೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕಾಗಿಯೇ ಅವಳು ಮೊದಲಿಗಿಂತ ಸುಂದರಿಯಾಗಿ ತಯಾರುಗೊಳ್ಳುತ್ತಿದ್ದಾಳೆ…
ಮೊನ್ನೆ ಮೊನ್ನೆ ತನಕವೂ ಹುಡುಗಿಯರ ಬ್ಯಾಗಿನಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದ್ದ ಚಿಕ್ಕ ಕನ್ನಡಿ ಮಾಯಾವಾಗಿದೆ! ಪರ್ಸ್‌ಗಳಲ್ಲಿ ಎಂಟಾಣೆ ಗಾತ್ರದಲ್ಲಿ ತೂರಿಸಿದ್ದ ಕನ್ನಡಿಯೂ ಇಲ್ಲವಾಗಿದೆ. ಹಾಗಂತ ಅವರ ಅಲಂಕಾರಪ್ರಿಯತೆ ಕಡಿಮೆಯಾಯಿತು ಅಂತ ಭಾವಿಸಿಕೊಂಡಿರೇನು? ಹಾಗೇನೂ ಇಲ್ಲ. ಬದಲಾಗಿ, ಇನ್ನೂ ಹೆಚ್ಚಾಗಿದೆ. ಮೊದಲಿಗಿಂತಲೂ ಇಂದು ಇನ್ನೂ ಹೆಚ್ಚು ಅಲಂಕಾರದಿಂದಿರುತ್ತಾರೆ. ಸಂಜೆಯವರೆಗೂ ಮುಖದಲ್ಲಿ ಅದೇ ಗೆಲುವು! ಅದೇ ಕಳೆ! ಅದೇ ಒಪ್ಪವಾದ ಉಡುಗೆ- ತೊಡುಗೆ. ಕಾರಣವಿಷ್ಟೇ… ಈಗ ಸೆಲ್ಫಿ ಬಂದಿದೆ! ಇವೆಲ್ಲವನ್ನು ಬದಲಾಯಿಸಿದ್ದು ಕೇವಲ ಒಂದು ಸ್ಮಾರ್ಟ್‌ಫೋನ್ ಮತ್ತು ಅದರೊಳಗಿದ್ದ ಒಂದು ಚಿಕ್ಕ ಕ್ಯಾಮೆರಾ. ಇಂದು ಹುಡುಗಿಯರ ಮೇಕಪ್ ಕಿಟ್‌ನಲ್ಲಿ ಸ್ಮಾರ್ಟ್‌ಫೋನ್, ಕನ್ನಡಿಯೇ ಆಗಿಬಿಟ್ಟಿದೆ. ಬ್ಯಾಗ್‌ನಲ್ಲಿದ್ದ ಕನ್ನಡಿಗಳನ್ನು ಆಚೆ ಕಳುಹಿಸಿ, ಹುಡುಗಿ ಈ ಸ್ಮೈಲ್ ಕೊಡುತ್ತಿದ್ದಾಳೆ.
ಕನ್ನಡಿಗಿಂತ ಹತ್ತುಪಟ್ಟು ಮುದ್ದುಮುದ್ದಾಗಿ, ಸ್ಮಾರ್ಟ್‌ಫೋನ್, ಹುಡುಗಿಯ ಮೋರೆಯನ್ನು ತೋರಿಸುತ್ತಿದೆ. ಬೆಳಗ್ಗೆ ಒಮ್ಮೆ ನಿಲುವುಗನ್ನಡಿಯ ಮುಂದೆ ಒಂದೆರಡು ಗಂಟೆ ಕಳೆದು ಬಂದರೆ, ಸಂಜೆಯವರೆಗೂ ಆಕೆ ರೂಪಸಿರಿಯನ್ನು ಮ್ಯಾನೇಜ್ ಮಾಡುವುದು ಸ್ಮಾರ್ಟ್‌ಫೋನ್ ಮೂಲಕವೇ. ಸೆಲ್ಫಿ ಬಂದಾಗಿನಿಂದ ಹುಡುಗಿಯರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಏಕೆಂದರೆ, ಯಾವ ಸಮಯದಲ್ಲಿ, ಯಾವ ಜಾಗದಲ್ಲಿ, ಸೆಲ್ಫಿ ತೆಗೆದುಕೊಳ್ಳುವ ಸಂದರ್ಭ ಬರುತ್ತೋ ಯಾರಿಗೆ ಗೊತ್ತು? ಅದಕ್ಕೆಂದೇ ಹುಡುಗಿಯರು ಮತ್ತು ಮಹಿಳೆಯರು ಈ ನಡುವೆ ಸದಾ ಲಕ್ಷಣವಾಗಿ ಕಾಣಿಸುತ್ತಾರೆ. ಥ್ಯಾಂಕ್ಸ್ ಟು ಸೆಲ್ಫಿ!
ನಿಜಕ್ಕೂ ತಿಳಿಯಲೇಬೇಕಾದ ಅಂಶವೆಂದರೆ, ಸೆಲ್ಫಿಯಿಂದ ಅತ್ಯುತ್ತಮವಾದ ಕೆಲಸವೊಂದಾಗುತ್ತದೆ. ನೆನಪುಗಳನ್ನು ಈ ಮೊದಲು ಮೆದುಳಿನ ಮೂಲೆಯಲ್ಲಿ ಕೂರಿಸಿಕೊಂಡು ಬಂದು ಕೆಲವು ಕಾಲದ ನಂತರ ಮರೆತುಬಿಡುತ್ತಿದ್ದೆವು. ಆದರೆ, ಇಂದು ಕ್ಷಣಮಾತ್ರದಲ್ಲಿ ಬೇರೆಯವರ ಸಹಾಯವಿಲ್ಲದೇ, “ಪ್ಲೀಸ್… ನಮೊªಂದು ಫೋಟೋ ತೆಗೆಯಿರಿ’ ಅಂತ ಕೇಳುವ ಮುಜುಗರವಿಲ್ಲದೇ ತನ್ನಷ್ಟಕ್ಕೆ ತಾನೇ ಆ ಸಂದರ್ಭ, ಆ ಸಮಯದ ಭಾವಗಳನ್ನು ನವಿರಾಗಿ ಸೆಲ್ಫಿಯೊಳಗೆ ಕೂರಿಸಿಕೊಂಡು ಬಿಡಬಹುದು. ಅದಕ್ಕೆ ಲಿಮಿಟ್ ಇಲ್ಲದೆ ಸಂಗ್ರಹಿಸಿಟ್ಟುಕೊಳ್ಳಬಹುದು!
ಇತ್ತೀಚೆಗೆ ಅಚಾನಕ್ಕಾಗಿ ನನ್ನ ಗೆಳತಿಯೊಬ್ಬಳ ಸೆಲ್ ನೋಡುವಾಗ ಗ್ಯಾಲರಿಯನ್ನು ನೋಡಿ ಶಾಕ್ ಆಗಿದ್ದೆ! ಅಲ್ಲಿ ಸಾವಿರಾರು ಸಂಖ್ಯೆಯ ಸೆಲ್ಫಿಗಳಿದ್ದವು. “ಅಷ್ಟೊಂದು ಸೆಲ್ಫಿ ತಗೊಳ್ಳೋಕೆ ಏಕೆ ಸಮಯ ಹಾಳು ಮಾಡಿಕೊಂಡೆ?’ ಅಂತ ಕೇಳಲಿಲ್ಲ. “ಬದುಕಿನ ಕ್ಷಣಗಳನ್ನು ಅಷ್ಟೊಂದು ಖುಷಿಯಿಂದ ಕಳೆದಿರುವೆಯಲ್ಲಾ?’ ಅಂತ ಹೇಳಿ ಆನಂದ ಪಟ್ಟೆ! ಸಾಮಾನ್ಯವಾಗಿ ಖುಷಿಯಾದಾಗ ಮಾತ್ರ ನಾವು ಅ ತರಹದೊಂದು ಸೆಲ್ಫಿ ಪ್ರಯತ್ನಕ್ಕೆ ಕೈ ಹಾಕುತ್ತೇವೆ ಅಲ್ಲವೇ?
ಸೆಲ್ಫಿ ತಗೆದುಕೊಳ್ಳಿ, ಸಂಗ್ರಹಿಸಿಟ್ಟುಕೊಳ್ಳಿ. ಖುಷಿಯ ಒಂದು ಕ್ಷಣವೂ ಮಿಸ್ ಆಗದಂತೆ ಬಾಚಿಕೊಳ್ಳಿ. ಅದರಿಂದ ಕಳಕೊಳ್ಳುವುದು ಏನೂ ಇಲ್ಲ. ಹೆಚ್ಚೆಂದರೆ, ಅದೊಂದು ಗೀಳಾಗಿ ಕಾಡೀತಷ್ಟೇ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ. ಹೆಚ್ಚಾದರೆ ಎಲ್ಲವೂ ಕೂಡ ಗೀಳೇ ಅಲ್ಲವೇ?
ಆದರೆ, ಹುಷಾರು…
ಹಾಗೆ ಸೆಲ್ಫಿ ತೆಗೆದುಕೊಳ್ಳುವಾಗ ಆಗುವ ಅವಘಡಗಳ ಬಗ್ಗೆಯೂ ಗಮನವಿರಲಿ. ಏಕೆಂದರೆ, ನಮ್ಮನ್ನು ನಾವು ಮರೆತು ನಮ್ಮ ಗಮನ ಸೆಲ್ಫಿ ಕೇಂದ್ರೀಕರಿಸುವ ಮೊಬೈಲ್ ಕಡೆ ನೆಟ್ಟಿರುತ್ತದೆ. ನಾವು ಎಲ್ಲಿ ನಿಂತಿದ್ದೇವೆ? ಯಾವ ಕಡೆ ಹೆಜ್ಜೆಯಿಡುತ್ತಿದ್ದೇವೆ? ಎಂಬುದನ್ನು ಮರೆತು ಪ್ರಾಣ ಹಾನಿಯಾದಂಥ ಘಟನೆಗಳೂ ನಡೆದುಹೋಗಿವೆ. ಅದು ಅಜಾಗರೂಕತೆಯ ಫಲ. ಯಾವುದೇ ಕೆಲಸವಾದರೂ ಅಲ್ಲೊಂದು ಜಾಗರೂಕತೆ ಇರಲೇಬೇಕಲ್ಲವೇ? ಒಂಚೂರು ಕಾಳಜಿಯಿಂದ ನಡೆದುಕೊಳ್ಳಿ. ಸೆಲ್ಫಿಗೆ ನೀಡುವ ಮಂದಹಾಸದಂತೆ ಅದರೊಂದಿಗೆ ಬರುವ ನೆನಪುಗಳೂ ನಿಮ್ಮ ಬದುಕನ್ನು ಮಧುರವಾಗಿಟ್ಟಿರಲಿ.