Advertisement

ಹುಚ್ಚು ನೃತ್ಯ ಕೀಕಿ ಕಿಕ್‌ ಔಟ್‌ಗೆ ಖಾಕಿ ಪಣ

09:45 AM Aug 01, 2018 | Team Udayavani |

ಹೊಸದಿಲ್ಲಿ: ಬ್ಲೂವೇಲ್‌ನಂತಹ ಮಾರಣಾಂತಿಕ ಆಟದ ಬಳಿಕ ವಿಶ್ವಾದ್ಯಂತ ಯುವ ಜನತೆಯಲ್ಲಿ ಕೀಕಿ ನೃತ್ಯದ ಚಾಲೆಂಜ್‌ ಎಂಬ ಹೊಸ ಹುಚ್ಚು ವ್ಯಾಪಕವಾಗಿ ಹಬ್ಬುತ್ತಿದೆ. 

Advertisement

ಇದನ್ನು ನಿಗ್ರಹಿಸಲು ದೇಶಾದ್ಯಂತ ಪೊಲೀಸರು ಪಣ ತೊಟ್ಟಿದ್ದಾರೆ. ಕೀಕಿ ನೃತ್ಯದಲ್ಲಿ ತೊಡಗಿರುವುದು ಕಂಡುಬಂದರೆ ದಂಡ ವಿಧಿಸಿ, ವಾಹನ ಜಪ್ತಿ ಮಾಡಲಾಗುವದು ಎಂಬ ಎಚ್ಚರಿಕೆ ನೀಡಿದ್ದಾರೆ.

ಭಾರತ ಸಹಿತ ವಿಶ್ವಾದ್ಯಂತ ಹಲವು ಯುವಕ, ಯುವತಿಯರು ಈಗಾಗಲೇ ಲೈವ್‌ ಆಗಿ ತಮ್ಮ ಕೀಕಿ ನೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿದ್ದಾರೆ. ನೃತ್ಯ ಮಾಡುತ್ತಾ ರಸ್ತೆ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದಿರುವುದು, ರಸ್ತೆಯ ಹೊಂಡಗಳಿಗೆ ಬಿದ್ದಿರುವುದು, ಬೇರೊಂದು ಕಾರಿಗೆ ಢಿಕ್ಕಿ ಹೊಡೆದಿರುವುದು, ಕಾರಿನಿಂದ ಇಳಿಯುವಾಗ ಎಡವಿ ಬಿದ್ದಿರುವ ಅವಘಡಗಳು ನಡೆದಿವೆ. ಇದನ್ನು ನೋಡುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಚಲಿಸುತ್ತಿರುವ ವಾಹನದಿಂದ ಕೆಳಕ್ಕೆ ಜಿಗಿದು ನೃತ್ಯಗೈವ ಮೂಲಕ ಜೀವವನ್ನು ಅಪಾಯಕ್ಕೆ ಒಡ್ಡಬೇಡಿ ಎಂದು ವಿವಿಧ ರಾಜ್ಯಗಳ ಪೊಲೀಸರು ಯುವ ಜನರಲ್ಲಿ ಮನವಿ ಮಾಡತೊಡಗಿದ್ದಾರೆ. ಜತೆಗೆ ಮಕ್ಕಳ ವರ್ತನೆ ಬಗ್ಗೆ ನಿಗಾ ಇಡಿ ಎಂದು ಪೋಷಕರಿಗೂ ಸಲಹೆ ನೀಡಿದ್ದಾರೆ.

ಜಾಗೃತಿ ಸಂದೇಶ
ನೆಲದ ಮೇಲೆ ನೃತ್ಯ ಮಾಡಿ, ರಸ್ತೆಯಲ್ಲಲ್ಲ.. ರಸ್ತೆಯ ಮೇಲಿನ ನೃತ್ಯ ನಿಮಗೆ ಹೊಸ ಬಾಗಿಲು ತೆರೆಯಬಹುದು… ಇತ್ಯಾದಿ ಜಾಗೃತಿ ಸಂದೇಶಗಳನ್ನು ಬೆಂಗಳೂರು, ಮುಂಬಯಿ, ದಿಲ್ಲಿ, ಪಂಜಾಬ್‌, ಉತ್ತರಪ್ರದೇಶ ಪೊಲೀಸರು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ.

Advertisement

ಏನಿದು ಕೀಕಿ ಚಾಲೆಂಜ್‌?
ಇದೊಂದು ಹೊಸ ಬಗೆಯ ಅಪಾಯಕಾರಿ ಸವಾಲಿನ ಆಟವಾಗಿದೆ. ನಿಧಾನವಾಗಿ ಚಲಿಸುವ ಕಾರಿನಿಂದ ಕೆಳಕ್ಕೆ ಹಾರಿ ಅದರ ಜತೆ ಜತೆಯಲ್ಲೇ ಸಾಗುತ್ತಾ ನೃತ್ಯ ಮಾಡುವುದು ಇದರಲ್ಲಿ ಸವಾಲಾಗಿದೆ. 

ಪೊಲೀಸರ ಎಚ್ಚರಿಕೆ
ಬೆಂಗಳೂರು ಸಂಚಾರ ಪೊಲೀಸರೂ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಆಡುಗೋಡಿ ಸಂಚಾರ ಠಾಣೆ ಪೊಲೀಸರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ರೀತಿಯ ಕ್ರೀಡೆಯಲ್ಲಿ ತೊಡಗಿದರೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜತೆಗೆ ಕೀಕಿ ಚಾಲೆಂಜ್‌ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವೀಡಿಯೋವನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ  ಹಿತೇಂದ್ರ, ಕೀಕಿ ಡ್ಯಾನ್ಸ್‌ ಕುರಿತ ಯಾವುದೇ ಪ್ರಕರಣ ನಗರದಲ್ಲಿ ದಾಖಲಾಗಿಲ್ಲ. ಆ ಅಪಾಯಕಾರಿ ನೃತ್ಯವನ್ನು ಯಾರಾದರೂ ಮಾಡಿದಲ್ಲಿ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next