Advertisement

ಮೇಕೆದಾಟು ಅಣೆಕಟ್ಟು ತುರ್ತು ಅಗತ್ಯ

04:04 PM Jul 31, 2018 | Team Udayavani |

ಮಂಡ್ಯ: ಉತ್ತಮ ವರ್ಷಧಾರೆಯಿಂದ ಅವಧಿಗೆ ಮುನ್ನವೇ ಜಲಾಶಯಗಳು ಭರ್ತಿಯಾಗಿ ವ್ಯರ್ಥವಾಗಿ ಹರಿದು ಸಮುದ್ರ
ಸೇರುತ್ತಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಅಣೆಕಟ್ಟು ನಿರ್ಮಾಣ ಇಂದಿನ ತುರ್ತು ಅಗತ್ಯವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.

Advertisement

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ವಿಶ್ವ ಯುವಕ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ “ಸುಸ್ಥಿರ ಅಭಿವೃದ್ಧಿಗಾಗಿ ನಾವು-ನೀವು’ ಎರಡು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳೆಲ್ಲಾ ಭರ್ತಿಯಾಗಿದೆ. ನಿತ್ಯ 50 ಸಾವಿರ ಕ್ಯುಸೆಕ್‌ ನೀರು ತಮಿಳುನಾಡಿನತ್ತ ಹರಿಯುತ್ತಿದೆ. ಅಲ್ಲಿನ ಮೇಕೆದಾಟು ಅಣೆಕಟ್ಟು ಭರ್ತಿಯಾಗಿ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಆ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನವರು ಒಪ್ಪುತ್ತಿಲ್ಲ. ಅವರ ಕೆಟ್ಟ ಹಠದಿಂದ ಅಣೆಕಟ್ಟು ನಿರ್ಮಾಣ ವಿಳಂಬವಾಗುತ್ತಿದೆ ಎಂದು ಹೇಳಿದರು.

ದುರಂತದ ಸಂಗತಿ: ಉತ್ತಮ ವರ್ಷಧಾರೆಯಿಂದ ನಮಗೆ ಹೆಚ್ಚುವರಿ ನೀರು ಸಿಗುತ್ತಿದೆ. ಇಂತಹ ಸಮಯದಲ್ಲಿ ಅದನ್ನು
ಸಂಗ್ರಹಿಸಿಟ್ಟುಕೊಂಡು ನೀರಿಗೆ ಅಭಾವ ಎದುರಾದ ಸಮಯದಲ್ಲಿ ಬಳಸಿಕೊಳ್ಳಬಹುದು. ಸಮುದ್ರಕ್ಕೆ ನೀರು ಹರಿದುಹೋದರೆ ಯಾರಿಗೆ ಪ್ರಯೋಜನ. ನೀರನ್ನು ಸಂಗ್ರಹಿಸುವ ಆಲೋಚನೆಗಳೇ ಮಾಯವಾಗುತ್ತಿರುವುದು ದುರಂತದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಪೂರ್ವಜರ ಕೃಷಿಯತ್ತ ಪಯಣ: ಆಹಾರ ಉತ್ಪಾದನೆ ದೇಶದಲ್ಲಿ ಕ್ಷೀಣಿಸಿದಾಗ ರಸಗೊಬ್ಬರ ಬಳಸಿ ಉತ್ಪಾದನೆ ಹೆಚ್ಚಿಸಿದೆವು. ಇದೀಗ ರಾಸಾಯನಿಕ ಬಳಕೆಯಿಂದ ಉಂಟಾಗುತ್ತಿರುವ ಅನಾಹುತ ಮನಗಂಡು ಮತ್ತೆ ಪೂರ್ವಜರು ನಡೆಸುತ್ತಿದ್ದ ಕೃಷಿಯ ಕಡೆ ಮುಖ ಮಾಡುತ್ತಿದ್ದೇವೆ. ಹಿಂದೆ ಬಡವರು ತಿನ್ನುತ್ತಿದ್ದ ಆರಕ, ನವಣೆ, ಸಜ್ಜೆ, ಬೂರಲು ಸೇರಿದಂತೆ ವಿವಿಧ ತಳಿಯ ಬೆಳೆಗಳು ಇಂದು ಸಿರಿಧಾನ್ಯಗಳ ರೂಪದಲ್ಲಿ ಶ್ರೀಮಂತರ ಆಹಾರವಾಗಿ ರೂಪಾಂತರಗೊಂಡಿದೆ. ಆ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ದುಬಾರಿಯಾಗಿದೆ ಎಂದು
ಹೇಳಿದರು.

 ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಭಾರತದಲ್ಲಿ ಶೇ.60ರಷ್ಟು ಕೃಷಿ ಪ್ರದೇಶವಿದ್ದು, ಕೃಷಿಯೊಂದಿಗೆ ಪರಿಸರವನ್ನೂ ರಕ್ಷಣೆ ಮಾಡುವ ಅಗತ್ಯವಿದೆ. ಹವಾಮಾನ ವೈಪರೀತ್ಯದಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪರಿಣಾಮ ಆಹಾರ ಉತ್ಪಾದನೆ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.
 
ಅಮೆರಿಕಾದ ಒಂದು ಸಂಸ್ಥೆ ನಡೆಸಿರುವ ಸಮೀಕ್ಷಾ ವರದಿಯಂತೆ 2050ಕ್ಕೆ ಆಹಾರ ಉತ್ಪಾದನೆ ಸಮಸ್ಯೆ ತಲೆದೋರಲಿದೆ. ಆಹಾರ ಉತ್ಪಾದನೆ ಜೊತೆ ಪರಿಸರ ಸಂರಕ್ಷಣೆ ಮಾಡಿದರೆ ಆಹಾರ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆಂಜನೇಯರೆಡ್ಡಿ, ನವದೆಹಲಿಯ ವಿಶ್ವ ಯುವಕ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ್‌, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ,
ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರ ಗುರು, ರವೀಂದ್ರ ಪ್ರಕಾಶ್‌ ಇತರರಿದ್ದರು.

ಶೇ.40ರಷ್ಟು ಕೆರೆಗಳು ಕಣ್ಮರೆ
ಮೈಸೂರು, ನಂಜನಗೂಡು ವ್ಯಾಪ್ತಿಯಲ್ಲಿದ್ದ ಕೆರೆಗಳ ಬಗ್ಗೆ ಸಂಶೋಧನಾತ್ಮಕ ವರದಿ ಹೊರಬಂದಿದ್ದು, ಅದರ ಪ್ರಕಾರ ಹಿಂದೆ ಒಟ್ಟು 170 ಕೆರೆಗಳಿದ್ದವು. ಅವುಗಳಲ್ಲಿ ಶೇ.40ರಷ್ಟು ಕೆರೆಗಳು ಮಾಯವಾಗಿವೆ. ಶೇ.20ರಷ್ಟು ಕೆರೆಗಳು ಅವಸಾನದ ಅಂಚಿನಲ್ಲಿವೆ. ಶೇ.15ರಷ್ಟು ಕೆರೆಗಳಲ್ಲಿ ಕೊಳಚೆ ನೀರು ತುಂಬಿಕೊಂಡು ಮಲಿನಗೊಂಡಿವೆ. ಉಳಿದ ಬೆರಳೆಣಿಕೆಯಷ್ಟು ಕೆರೆಗಳಲ್ಲಿ ಅಷ್ಟೋ-ಇಷ್ಟೋ ನೀರಿದೆ ಎಂದು ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿಷಾದಿಸಿದರು.

ಇದು ಮೈಸೂರು ವ್ಯಾಪ್ತಿಯ ಪರಿಸ್ಥಿತಿಯಷ್ಟೇ ಅಲ್ಲ. ಇಡೀ ರಾಜ್ಯದಲ್ಲಿರುವ ಕೆರೆಗಳ ಪರಿಸ್ಥಿತಿಯೂ ಇದೇ ಆಗಿದೆ. ನೀರು
ಸಂಗ್ರಹಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡುತ್ತಿಲ್ಲ. ಹಿಂದಿನ ರಾಜ-ಮಹಾರಾಜರು ಯಥೇತ್ಛವಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರಂತೆಯೇ ಕೆರೆಗಳನ್ನು ಉಳಿಸುವ ಪ್ರಯತ್ನ
ಮುಂದುವರೆದಿದ್ದರೆ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಕೆರೆಗಳು ನಾಲ್ಕು ಪಟ್ಟು ಹೆಚ್ಚಾಗಬೇಕಿತ್ತು. ಆದರೆ, ಇರುವ
ಕೆರೆಗಳನ್ನೇ ಉಳಿಸಿಕೊಳ್ಳುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next