Advertisement
ಸ್ವಿಸ್ ಬ್ಯಾಂಕಿನಲ್ಲಿ ಇದೆಯೆನ್ನಲಾದ ಕಪ್ಪುಹಣದ ಬಗ್ಗೆ ದೇಶದ ಎಲ್ಲೆಡೆ ವ್ಯಾಪಕವಾದ ಚರ್ಚೆ ಆಗುತ್ತಲೇ ಇರುತ್ತಿದೆ. ಅಲ್ಲಿ ಇದೆಯೆನ್ನಲಾದ ದುಡ್ಡು ಎಷ್ಟು? ಎನ್ನುವ ಪ್ರಶ್ನೆ ಒಂದೆಡೆಯಾದರೆ ಅದನ್ನು ವಾಪಾಸು ತರುವ ಬಗ್ಗೆ ಇನ್ನೊಂದೆಡೆ ಚರ್ಚೆ ನಡೆಯುತ್ತಿದೆ. ಇವೆಲ್ಲದರ ನಡುವೆ ಕೆಲವರಾದರೂ ಈ ದೇಶದಿಂದ ಕಪ್ಪು ಹಣ ಒಳಕ್ಕೆ ಮತ್ತು ಹೊರಕ್ಕೆ ಹರಿದಾಡುವುದಾದ್ರೂ ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಹೌದು! ಈ ಕಪ್ಪು ಹಣವೆನ್ನುವ ಭೂತ ಯಾವ ರೀತಿ ಅವತಾರವೆತ್ತಿ ಯಾವ ರೀತಿ ಸಂಚಾರ ಮಾಡುತ್ತದೆ ಎನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಒಳ್ಳೆಯದು. ಅರಿವಿಲ್ಲದೆಯೇ ಅಮಾಯಕರು ಇದರ ಕರಾಳಾಗ್ನಿಯಲ್ಲಿ ಬೆಂದು ಹೋಗುವ ಸಾಧ್ಯತೆಗಳೂ ಇವೆಯಲ್ಲ?
Related Articles
ದುಬೈ ಅಥವಾ ಪ್ರಪಂಚದ ಇನ್ನಾವುದೋ ಮೂಲೆಯಲ್ಲಿ ಕುಳಿತ ಆ ವ್ಯಕ್ತಿ, ಭಾರತದ ಇನ್ನೊಂದು ಮೂಲೆಗೆ ಕಾನೂನಿನ ಕಣ್ತಪ್ಪಿಸಿ ದುಡ್ಡು ಹೇಗೆ ಕಳುಹಿಸುತ್ತಾನೆ ಎಂದಿರಾ? ಇದೇ ಹವಾಲಾ ಜಾಲದ ಶಕ್ತಿ. ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಂತೆಯೇ ದೇಶ ವಿದೇಶಗಳಲ್ಲಿ ಹವಾಲಾ ಚಾಲಕರ ಒಂದು ಬೃಹತ್ ಜಾಲವೇ ಇದೆ. ಯಾವುದೇ ಕಾಗದ ಪತ್ರಗಳಿಲ್ಲದೇ ಕೇವಲ ನಂಬಿಕೆಯಿಂದ ಮಾತ್ರವೇ ನಡೆಯುವ ಜಾಲ! ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿರುವಷ್ಟು ನಂಬಿಕೆ- ವಿಶ್ವಾಸಗಳು ರಿಸರ್ವ್ ಬ್ಯಾಂಕಿನ ವ್ಯವಹಾರದಲ್ಲೂ ಇರಲಾರದು. ಇದು ವಿಪರ್ಯಾಸವಾದರೂ ಸತ್ಯ.
ಅಂತಹ ನಂಬಿಗಸ್ಥ ಜಾಲದ ಒಂದು ಕೊಂಡಿ ಇಲ್ಲಿ ನಮ್ಮೂರಲ್ಲೂ ಇರುತ್ತದೆ. ದುಬೈಯ ಹವಾಲಾ ಕುಳವಾರು, ಮಂಗಳೂರಿನ ಕುಳವಾರಿಗೆ ಫೋನಾಯಿಸಿ ಇಲ್ಲಿ ದುಡ್ಡು ಬಟ್ವಾಡೆ ಮಾಡುವುದಕ್ಕೆ ನಿರ್ದೇಶಿಸುತ್ತಾನೆ. ಇದಕ್ಕೆ ಮೊಬೈಲ್ ನಂಬರ್, ಕೋಡ್ ವರ್ಡುಗಳನ್ನು ಬಳಸುವುದೂ ಇದೆ. ಇದೇ ರೀತಿ ಮಂಗಳೂರಿನಿಂದ ದುಬೈಗೂ ರವಾನೆಗಳಿರುತ್ತವೆ. ಕೊನೆಗೆ ಯಾವಾಗಾದರೊಮ್ಮೆ ಕ್ರೆಡಿಟ್/ ಡೆಬಿಟ್ ಲೆಕ್ಕಾಚಾರ ಹಾಕಿ ನಿವ್ವಳ ಮೊತ್ತದ ಪಾವತಿಯನ್ನು ಸ್ಮಗ್ಲಿಂಗ್‌ಅಥವಾ ಇನ್ನಾವುದೋ ರೀತಿಯಲ್ಲಿ ಸೆಟಲ್ ಮಾಡಿಕೊಳ್ಳುತ್ತಾರೆ. ಇದೇ ರೀತಿ ಅಮೇರಿಕಾ ಯುರೋಪು ಕಡೆ ದುಡ್ಡು ಕಳುಹಿಸಬೇಕಿದ್ದರೆ, ಕಾಳಧನದವರು ಆಶ್ರಯಿಸುವುದು ಹವಾಲಾ ಜಾಲವನ್ನೇ! ಇಲ್ಲಿನ ರಾಜಕೀಯ ಪುಢಾರಿಗಳು ಬಿಸಿನೆಸ್ ಧುರೀಣರು, ಸಿನಿಮಾ ನಿರ್ಮಾಪಕರು ಇತ್ಯಾದಿ ಇತ್ಯಾದಿ ಕಾಸುಳ್ಳ ಕುಡಿಕೆದಾರರು ದೇಶಕ್ಕೆ ದುಡ್ಡನ್ನು ಹವಾಲಾ ಮೂಲಕ ಕಳುಹಿಸುತ್ತಾರೆ. ಇವೆಲ್ಲವೂ ಕಪ್ಪುಧನವಾದ ಕಾರಣ, ಬ್ಯಾಂಕಿಂಗ್ ಜಾಲವನ್ನು ಬಳಸಿಕೊಳ್ಳುವಂತಿಲ್ಲ. ಬಹುತೇಕ ಹವಾಲ ನಡೆಯುವುದು ಹೀಗೆ.ಇದರಲ್ಲಿ ಸಂದರ್ಭಾನುಸಾರ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು.
Advertisement
ನಾವೂ ಜವಾಬ್ದಾರರು…ದೇಶದಲ್ಲಿ ಅಪಾರ ಮೊತ್ತದಲ್ಲಿ ಹರಿದಾಡುವ ಕಪ್ಪುಧನ, ಈ ದೇಶದ ಬಿಸಿನೆಸ್ ಮತ್ತು ಆರ್ಥಿಕ ವ್ಯವಸ್ಥೆಯ ಜೀವನಾಡಿ. ಇಲ್ಲಿನ ರಾಜಕೀಯ ಪಕ್ಷಗಳು, ಬಿಸಿನೆಸ್ ಮನೆತನದವರು, ಸುಪಾರಿಕೋರರು, ಗೂಂಡಾ ದುರ್ಜನರು ಹಣವನ್ನು ಅತ್ತಿತ್ತ ವರ್ಗಾಯಿಸುವುದು ಹವಾಲ ಮೂಲಕವೇ. ಸಮಸ್ಯೆಯೇನೆಂದರೆ, ನಾಲ್ಕು ಜನರಿಗೆ ಸೌಕರ್ಯ ಉಂಟುಮಾಡುವ ಕೈಯಲ್ಲಿ ಸ್ವಲ್ಪ ಕಾಸು ಉಳಿಸುವ ಪ್ರತಿಯೊಂದು ಚಟುವಟಿಕೆಯನ್ನೂ ಅದು ಕಾನೂನು ಬಾಹಿರವಾದರೂ ಕೂಡಾ, ನಾವೆಲ್ಲ ಪ್ರೋತ್ಸಾಹಿಸುತ್ತೇವೆ. ಈ ದೇಶದಲ್ಲಿ ಲಂಚ, ಭ್ರಷ್ಟಾಚಾರ, ಕಪ್ಪುಹಣ ಈ ಪರಿಯಲ್ಲಿ ರಾರಾಜಿಸಲು ಅದರ ಬಗ್ಗೆ ಜನತೆಗೆ ಇರುವ ಆಷಾಡಭೂತಿತನವೇ ಮುಖ್ಯಕಾರಣ. ಇದು ಮುಖ್ಯ ವಿಚಾರ. ಅದೇ ರೀತಿ ಹವಾಲ ಕೂಡಾ ಜನಸಾಮಾನ್ಯರ ಹಾಗೂ ಬಿಸಿನೆಸ್ ಧುರೀಣರ, ಭ್ರಷ್ಟರ ಪೋಷಣೆಯಿಂದ ಬೆಳೆಯುತ್ತಿದೆ. ಸ್ವಲ್ಪ ಲಾಭಕ್ಕೆ, ಸ್ವಲ್ಪ ಸೌಕರ್ಯಕ್ಕೆ, ಸ್ವಲ್ಪ ಉದಾಸೀನಕ್ಕೆ ಬಲಿಬಿದ್ದು ಅಮಾಯಕರು ಹವಾಲಾಕೋರರ ಬಾಗಿಲು ತಟ್ಟುತ್ತಾರೆ, ತಾವು ಎಂತಹ ಅಪಾಯಕಾರಿ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದೇವೆ ಎನ್ನುವುದರ ಅರಿವಿರುವುದಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಕಳ್ಳಸಾಗಾಣಿಕೆ- ಭಯೋತ್ಪಾದನೆ ವಿಚಾರವಾಗಿ ನಾಲ್ಕು ಹವಾಲಾಕೋರರನ್ನು ಪೋಲೀಸರು ಹಿಡಿದಾಗ ಆತನ ಅಂಗಡಿಯಲ್ಲಿ ವ್ಯವಹಾರ ಕುದುರಿಸಿದ ನೂರಾರು ಅಮಾಯಕ ಮಂದಿ ಸುಖಾಸುಮ್ಮನೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹೇಳಿಕೇಳಿ ಕಾನೂನುಬಾರ; ಇತ್ತೀಚೆಗಿನ ದಿನಗಳಲ್ಲಂತೂ ಭಯೋತ್ಪಾದನೆಯ ಜೊತೆಗೆ ನಿಕಟವಾಗಿ ಬೆಸೆದುಕೊಂಡಿರುವ ಈ ವ್ಯವಹಾರ, ಕೆಲವು ನೂರು ಸಾವಿರದ ವರ್ಗಾವಣೆಗಾಗಿ ಹವಾಲ ಬಳಸಿ ಹವಾಲಾತ್‌ನ ಹವಾ ಸೇವಿಸುವ ದುರಾದೃಷ್ಟ ನಮ್ಮ ಪಾಲಾಗಬಾರದಲ್ಲ? ನೆನಪಿರಲಿ, ಕಾನೂನಿನ ಕೈಯಲ್ಲಿ ಯಾವತ್ತೂ ಸಿಕ್ಕಿ ಬೀಳುವುದು ನಾಲ್ಕಾಣೆ ಕದ್ದ ಅಮಾಯಕನೇ ಹೊರತು, ಕೋಟ್ಯಂತರ ದೋಚಿದ ಖಳನಾಯಕನಲ್ಲ! – ಜಯದೇವ ಪ್ರಸಾದ ಮೊಳೆಯಾರ