ಬೆಂಗಳೂರು: ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದ ಎನ್ನಲಾದ ವರ್ತೂರಿನ ಸರಕು ವಾಹನ ಚಾಲಕ ನವಾಜ್ ಶವವಾಗಿ ಪತ್ತೆಯಾಗಿದ್ದಾನೆ. ಆತನನ್ನು ಹತ್ಯೆಗೈದ ದುಷ್ಕರ್ಮಿಗಳು ಮೃತ ದೇಹವನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ನದಿಗೆ ಎಸೆದಿದ್ದಾರೆ.
ಈ ಸಂಬಂಧ ಕೋಲಾರ ಮೂಲದ ಶಿವಕುಮಾರ್, ಈತನ ಸ್ನೇಹಿತರಾದ ಪವನ್ ಹಾಗೂ ಬಿಎಸ್ಸಿ ವಿದ್ಯಾರ್ಥಿ ರಕ್ಷಿತ್ ಎಂಬುವವರನ್ನು ಬಂಧಿಸಲಾಗಿದೆ. ನವಾಜ್ ಕೊಲೆ ಪ್ರಕರಣದಲ್ಲಿ ಪತ್ನಿ ಆಯೀಷಾ ಕೈವಾಡ ಇರುವ ಶಂಕೆಯಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯೀಷಾ ಹಾಗೂ ಆರೋಪಿ ಶಿವಕುಮಾರ್ ಕೆಲ ವರ್ಷಗಳಿಂದ ಪರಿಚಯಸ್ಥರಾಗಿದ್ದು, ಇಬ್ಬರ ನಡುವೆ ಸ್ನೇಹವಿತ್ತು. ಶಿವಕುಮಾರ್ ವಿನಾ ಕಾರಣ ಮನೆಗೆ ಬರುತ್ತಿದ್ದ ಬಗ್ಗೆ ನವಾಜ್ ಪ್ರಶ್ನಿಸಿದ್ದ. ಪತ್ನಿಗೂ ಎಚ್ಚರಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ತನ್ನ ಸ್ನೇಹಿತರ ಜತೆ ಸೇರಿ ಆತನ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ನವಾಜ್, ವರ್ಷದ ಹಿಂದೆ ಆಯೀಷಾಳನ್ನು ವಿವಾಹವಾಗಿದ್ದ. ದಂಪತಿ ವರ್ತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಯೀಷಾ ಆ.20ರಂದು ಪತಿ ನವಾಜ್ ನಾಪತ್ತೆಯಾಗಿದ್ದಾರೆ ಎಂದು ವರ್ತೂರು ಠಾಣೆಗೆ ದೂರು ನೀಡಿದ್ದಳು. ಇದರ ಬೆನ್ನಲ್ಲೇ ನವಾಜ್ ಪೋಷಕರು ಆ.22ರಂದು ಮತ್ತೂಂದು ದೂರು ನೀಡಿದ್ದರು. ಇದರಿಂದ ಅನುಮಾನಗೊಂಡು ತನಿಖೆ ಚುರುಕುಗೊಳಿಸಿದಾಗ ಕೊಲೆಯಾಗಿರುವುದು ಖಾತ್ರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರೆಸಿಕೊಂಡು ಕೊಂದರು: ಸರಕು ಸಾಗಣೆ ವಾಹನ ಚಾಲಕನಾಗಿರುವ ನವಾಜ್‌ಗೆ ಕೆಲ ದಿನಗಳ ಹಿಂದೆ ಆರೋಪಿ ಪವನ್, ನಿಮ್ಮ ವಾಹನ ಬಾಡಿಗೆಗೆ ಬೇಕು. ಆ ಬಗ್ಗೆ ಮಾತನಾಡಬೇಕು ಎಂದು ಹೇಳಿ ಮನೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ನವಾಜ್ ಬರುತ್ತಿದ್ದಂತೆ ಆರೋಪಿಗಳು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಚಾಕುನಿಂದ ಕುತ್ತಿಗೆಗೆ ಇರಿದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ನವಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆರೋಪಿಗಳು ನವಾಜ್ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಗೋಣಿಚೀಲದಲ್ಲಿ ಮೃತದೇಹವನ್ನು ತುಂಬಿಕೊಂಡಿದ್ದಾರೆ. ಬಳಿಕ ಕಾರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖಕ್ಕೆ ಕೊಂಡೊಯ್ದು ಭದ್ರಾ ನದಿಯ ಹಿನ್ನಿರಿನಲ್ಲಿ ಬಿಸಾಡಿದ್ದಾರೆ. ಹೀಗಾಗಿ ಮೂವರು ಆರೋಪಿಗಳನ್ನು ಕರೆದೊಯ್ದು ಶವ ಹೊರಗೆ ತೆಗೆಯಬೇಕಿದೆ ಎಂದು ಪೊಲೀಸರು ತಿಳಿಸಿದರು.
ಇಬ್ಬರಿಗೂ ಎರಡನೇ ಮದುವೆ: ನವಾಜ್ ಹಾಗೂ ಆಯೀಷಾಗೆ ಈಗಾಗಲೇ ಮದುವೆಯಾಗಿದ್ದು, ನವಾಜ್ ಮೊದಲ ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದ. ಮತ್ತೂಂದೆಡೆ ಆಯೀಷಾ ಕೂಡ ಪತಿಯಿಂದ ದೂರವಾಗಿ ಒಂಟಿಯಾಗಿ ವಾಸವಾಗಿದ್ದರು. ಈ ವೇಳೆ ಇಬ್ಬರು ಪರಸ್ಪರ ಪರಿಚಯವಾಗಿದ್ದು, ಮದುವೆ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.