ಪ್ರೀತಿ ಎಂದರೆ ಏನು? ಎಲ್ಲಾ ತಿಳಿದಿರುವ ಗೂಗಲ್ ಪಂಡಿತನನ್ನೇ ಕೇಳ್ಳೋಣ ಅಂತ ಅವನನ್ನೇ ಕೇಳಿದೆ. 0.78 ಸೆಕೆಂಡುಗಳಲ್ಲಿ ಲಕ್ಷಗಳಷ್ಟು ಫಲಿತಾಂಶಗಳನ್ನು ಜಾಲಾಡಿ ಒಂದಷ್ಟು ಕೊಂಡಿಗಳನ್ನು ನನ್ನ ಮುಂದಿಟ್ಟಿತು.
ಆವತ್ತಿನ ರೇಡಿಯೊ ಕಾರ್ಯಕ್ರಮ ಮುಗಿಸಿ ಫೇಸ್‌ಬುಕ್‌ಗೆ ಲಾಗಿನ್ ಆದೆ. ಬಹಳಷ್ಟು ಸಂಖ್ಯೆಯಲ್ಲಿ ಮೆಸೇಜುಗಳು ಬರುತ್ತಲೇ ಇದ್ದವು. ಅವುಗಳನ್ನೆಲ್ಲಾ ನೋಡಿ ಒಂದು ಯೋಚನೆ ಬಂದಿತು. ನನಗೆ ಬರುವ ಮೆಸೇಜುಗಳಲ್ಲಿ ಬಹುತೇಕವು “ನಾನು ನಿಮ್ಮ ದನಿಯನ್ನು ಪ್ರೀತಿಸುತ್ತೇನೆ’, “ನೀವು ಕಾರ್ಯಕ್ರಮದಲ್ಲಿ ನೀಡೋ ಸಂದೇಶಗಳನ್ನು ಪ್ರೀತಿಸುತ್ತೇನೆ’… ಹೀಗೆ ಪ್ರೀತಿಯ ಕುರಿತೇ ಆಗಿದ್ದವು. ಆಗ ಯೋಚನೆಗೆ ಕುಳಿತೆ. ಈ ಪ್ರೀತಿ ಎಂದರೇನು? ಅದೆಷ್ಟೋ ಸಾವಿರ ವರ್ಷಗಳಿಂದ ಮನುಷ್ಯ ಅದರ ಅರ್ಥದ ಹುಡುಕಾಟದಲ್ಲಿಯೇ ತೊಡಗಿದ್ದಾನೆ. ಚಿಕ್ಕ ಮಗುವಾಗಿದ್ದಾಗಿನಿಂದ ಹಿಡಿದು ಮುಪ್ಪಿನವರೆಗೂ ಪ್ರೀತಿಯ ಅರ್ಥ ಬದಲಾಗುತ್ತಿರುತ್ತೆ.
ಹೃದಯದ ಬಡಿತ ಜಾಸ್ತಿಯಾದರೆ ನೀವು ಗರ್ಭಿಣಿ ಎಂದೋ, ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತೆ ಅನಿಸಿದರೆ ಹಸಿವೆಂದೋ ಗುರುತಿಸಬಹುದು. ಆದರೆ ಕೆಲವೊಮ್ಮೆ ಪ್ರೀತಿಯ ಕುರುಹು ಇದ್ದಾಗಲೂ ಇವೆಲ್ಲಾ ಸೂಚನೆಗಳು ಕಾಣಿಸಿಕೊಳ್ಳುತ್ತವೆಯಲ್ಲಾ… ಹಾಗಾದರೆ ಮತ್ತೆ ಕೇಳುತ್ತೇನೆ ಪ್ರೀತಿ ಎಂದರೆ ಏನು? ಎಲ್ಲಾ ತಿಳಿದಿರುವ ಗೂಗಲ್ ಪಂಡಿತನನ್ನೇ ಕೇಳ್ಳೋಣ ಅಂತ ಅವನನ್ನೇ ಕೇಳಿದೆ. 0.78 ಸೆಕೆಂಡುಗಳಲ್ಲಿ ಲಕ್ಷಗಳಷ್ಟು ಫಲಿತಾಂಶಗಳನ್ನು ಜಾಲಾಡಿ ಒಂದಷ್ಟು ಕೊಂಡಿಗಳನ್ನು ನನ್ನ ಮುಂದಿಟ್ಟಿತು. ಆ ಕೊಂಡಿಗಳನ್ನು ಕ್ಲಿಕ್ಕಿಸುತ್ತಾ ಹೋದಂತೆ ನನ್ನ ಪ್ರಶ್ನೆ ಕಗ್ಗಂಟಾಗುತ್ತಾ ಹೋಯಿತೇ ಹೊರತು, ಉತ್ತರವಂತೂ ಸಿಗಲಿಲ್ಲ.
ಆವಾಗ ಒಂದು ವಿಚಾರ ಅರ್ಥವಾಯಿತು. ಪ್ರೀತಿಯ ಅರ್ಥವನ್ನು ಹುಡುಕುತ್ತಾ ಹೋಗಿದ್ದೇ ನಾನು ಮಾಡಿದ ಮೊದಲ ತಪ್ಪಾಗಿತ್ತು. ಅನುಭವದ ಗ್ರಹಿಕೆಗೆ ಮಾತ್ರ ದಕ್ಕುವಂಥದ್ದನ್ನು ನಾನು ಕುರುಡನಂತೆ ತಡಕಾಡುತ್ತಿದ್ದೆ. ಪದಗಳಲ್ಲಿ ಹಿಡಿದಿಡಲು ಹವಣಿಸುತ್ತಿದ್ದೆ. ಪ್ರೀತಿಯ ಅರ್ಥ ವ್ಯಾಪ್ತಿ ತುಂಬಾ ದೊಡ್ಡದು. ಇನ್ನೊಬ್ಬರಿಂದ ಪ್ರೀತಿಯನ್ನು ಅಪೇಕ್ಷಿಸದೆ ಕೊಡುವುದರಿಂದಲೇ ಬೆಳೆಯುತ್ತಾ ಹೋಗುತ್ತೆ. ಪ್ರೀತಿಯನ್ನು ಯಾರಿಂದಲೂ ನಿರೀಕ್ಷಿಸಬಾರದು. ಅದು ತಾನಾಗಿಯೇ ಸಿಗಬೇಕು. ಹಾಗಿದ್ದೂ ನೀವು ಪ್ರೀತಿಸಬಲ್ಲಿರಾದರೆ, ಅದು ನಿಜವಾದ ಪ್ರೀತಿ ಎನ್ನುವುದು ನನ್ನ ಅನುಭವಕ್ಕೆ ಬಂದ ಸಂಗತಿ.
ಪುರಾತನ ಕಾಲದಲ್ಲಿ ಗ್ರೀಸ್‌ನಲ್ಲಿ ಪ್ರೀತಿಗೆ ಏಳು ಸಮಾನಾರ್ಥಕ ಪದಗಳನ್ನು ಸೃಷ್ಟಿಸಿದ್ದರಂತೆ. ಅಂದರೆ ಒಂದು ಪದ ಸಾಕಾಗೋದಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತೇ? ಇರಬಹುದು, ಆದರೆ ಪ್ರೀತಿಯನ್ನು ಹಿಡಿದಿಡೋಕೆ ಆ 7 ಪದಗಳು ಸಾಕಾದವೇ? ಗೊತ್ತಿಲ್ಲ. ಸಿನಿಮಾದಲ್ಲಿ ನಟ ಗಣೇಶ್ ಹೇಳುವಂತೆ ಪರಿಸ್ಥಿತಿಗೆ ತಕ್ಕಂತೆ ಕಾಳು ಹಾಕುತ್ತಾ ಹೋಗೋದಷ್ಟೇ ನಮ್ಮ ಕೆಲಸ. ಒಂದು ಲೆಕ್ಕದಲ್ಲಿ ಅದೂ ಸರಿಯೇ. ಏಕೆಂದರೆ ಫಾರ್ಮ್ಯುಲಾ, ಪ್ರಮೇಯಗಳಾವುವೂ ಪ್ರೀತಿಯ ವಿಷಯದಲ್ಲಿ ನಿರುಪಯುಕ್ತ. ಇಷ್ಟೆಲ್ಲಾ ತಲೆಕೆಡಿಸಿಕೊಂಡು ಕೂತಿದ್ದಾಗಲೇ ಫೋನ್ ರಿಂಗುಣಿಸಿತು. ನೋಡಿದರೆ, ಪತಿರಾಯರು! ಮನೆಗೆ ಹಿಂದಿರುಗೋ ಸಮಯ. ಹೃದಯ ಬೆಚ್ಚಗಾಯಿತು.
ಯಾವತ್ತೂ ಜೀವನದಲ್ಲಿ ಪ್ರೀತಿಯನ್ನು ಹಂಚುತ್ತಾ ಇರಬೇಕು, ನಿಮ್ಮನ್ನು ಯಾರೂ ಪ್ರೀತಿಸದೇ ಇದ್ದರೂ ಕೂಡಾ…