Advertisement

ಕೋಟೆ ನಗರಿ ವರ್ತಕನ ವಾನರ ಪ್ರೇಮ

05:20 PM Jun 10, 2018 | Team Udayavani |

ಚಿತ್ರದುರ್ಗ: ತೋಟದಲ್ಲಿ ಹಣ್ಣು-ಕಾಯಿ ಕಿತ್ತು ಉಪಟಳ ನೀಡುವ ಕೋತಿಗಳನ್ನು ಹೊಡೆದೋಡಿಸುವವರೇ ಜಾಸ್ತಿ. ಅಂಥದ್ದರಲ್ಲಿ ಇಲ್ಲೊಬ್ಬರು ಪ್ರತಿ ಶನಿವಾರ ಕೋತಿಗಳಿಗೆ ಅನ್ನ, ಹಣ್ಣು, ಆಹಾರ ನೀಡಿ ವಾನರ ಪ್ರೇಮ ಮೆರೆಯುತ್ತಿದ್ದಾರೆ.

Advertisement

ನಗರದ ಬುರುಜನಹಟ್ಟಿಯ ವರ್ತಕ ಡಿ.ಬಿ. ನರಸಿಂಹಪ್ಪ ಮತ್ತು ಅವರ ಮಕ್ಕಳು ಕಳೆದ 45 ವರ್ಷಗಳಿಂದ ಕೋಟೆಯೊಳಗಿನ ಕೋತಿಗಳಿಗೆ ಪ್ರತಿ ಶನಿವಾರ ಮೊಸರನ್ನ, ಬಾಳೆಹಣ್ಣು ನೀಡುತ್ತ ಸದ್ದುಗದ್ದಲವಿಲ್ಲದೆ ವಾನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.

ಕೋಟೆಯೊಳಗಿರುವ ಅಕ್ಕ-ತಂಗಿ ಹೊಂಡದ ಸಮೀಪದ ಬಂಡೆಯ ಮೇಲೆ ಹೋಗಿ ಹನುಮಂತಪ್ಪ ಮತ್ತು ಮಕ್ಕಳು ಗೇರ್‌ ಗೇರ್‌ ಎಂದು ಕೂಗಿ ಕರೆದಾಗ ಬಂಡೆಗಳ ಮೇಲಿಂದ ಹತ್ತಾರು ಕೋತಿಗಳು ಬಂದು ಮೊಸರನ್ನ ಮತ್ತು ಬಾಳೆಹಣ್ಣಿನ ರುಚಿ ಸವಿಯುತ್ತವೆ. ಪ್ರತಿ ವರ್ಷ ಯುಗಾದಿ ಹಬ್ಬದಂದು ಕೋತಿಗಳಿಗೂ ಹೋಳಿಗೆ ಊಟ ನೀಡುವುದು ವಿಶೇಷ.
 
ಪ್ರತಿ ವಾರ ಕೋಟೆಗೆ ವಾಯುವಿಹಾರಕ್ಕೆ ಹೋಗುವಾಗ ಕೆಲವೊಮ್ಮೆ ಕೋತಿಗಳು ತಿನ್ನಲು ಆಹಾರವಿಲ್ಲದೆ ರೋದಿಸುತ್ತಿದ್ದುದನ್ನು ಗಮನಿಸಿದ ನರಸಿಂಹಪ್ಪ, ಏನಾದರೂ ಆಹಾರ ಕೊಡಬೇಕೆಂದು ಮನಸ್ಸು ಮಾಡಿದರು.

ಅಂದಿನಿಂದ ಇಲ್ಲಿಯವರೆಗೂ ಒಂದು ಶನಿವಾರವೂ ತಪ್ಪದೆ ಕೋತಿಗಳಿಗೆ ಮೊಸರನ್ನ, ಅಕ್ಕಿ- ಬೆಲ್ಲದ ಮಿಶ್ರಣದಿಂದ ಸಿದ್ಧಪಡಿಸುವ ಪೊಂಗಲ್‌ ನೀಡುತ್ತ ಬಂದಿದ್ದಾರೆ. ಮೊದಲು ನಮ್ಮ ತಂದೆ ಡಿ.ಬೊಮ್ಮಪ್ಪ ಕೋತಿಗಳಿಗೆ ಆಹಾರ ನೀಡುವುದನ್ನು ಆರಂಭಿಸಿದರು. ಅವರ ಪ್ರೇರಣೆಯಿಂದ ನಾನು ಕೋತಿಗಳಿಗೆ ಆಹಾರ ನೀಡಲು ಮುಂದಾದೆ. 

ಈಗ ನನ್ನ ಮಕ್ಕಳಾದ ಬಿ.ಎನ್‌. ಚಂದ್ರಶೇಖರ್‌, ಬಿ.ಎನ್‌. ವೆಂಕಟೇಶ್‌, ಬಿ.ಎನ್‌. ರಂಗನಾಥ್‌ ಪ್ರತಿ ಶನಿವಾರ ವಾನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಹಿರಿಯರಿಂದ ಆರಂಭಗೊಂಡ ಈ ಪದ್ಧತಿಯನ್ನು ನಮ್ಮ ಕುಟುಂಬದಲ್ಲಿ ಮಕ್ಕಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಸಂತೋಷವಾಗಿದೆ ಎಂದು ಡಿ.ಬಿ. ನರಸಿಂಹಪ್ಪ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next