ಕಮಲನಗರ: ದೇವರನ್ನು ಭಕ್ತಿಯಿಂದ ಪೂಜಿಸುವುದು ಬಿಟ್ಟು, ಮನುಷ್ಯರನ್ನು ಪ್ರೀತಿಸುವುದು ಸೂಫಿ ತತ್ವದ ಮುಖ್ಯ ಜೀವಾಳವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ| ಶಿವಗಂಗಾ ರುಮ್ಮಾ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ರಾಜ್ಯ ಪತ್ರಾಗಾರ ನಿರ್ದೇಶನಾಲಯದ ವತಿಯಿಂದ ಶುಕ್ರವಾರ ಆಯೋಜಿಸಿದ್ದ “ಹೈದ್ರಾಬಾದ್ ಕರ್ನಾಟಕ ಸೂಫಿ ಪರಂಪರೆ ಒಂದು ನೋಟ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸೂಫಿ ತತ್ವಗಳು ಇಸ್ಲಾಂ ಧರ್ಮದ ಹೊಸ ಆಯಾಮ ಎಂದು ಸಂಕೋಚಿತ ವಿಚಾರಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಸೂಫಿ ಮಾನವೀಯತೆಯ ಧರ್ಮವಾಗಿದೆ. ಮನುಷ್ಯರನ್ನು ಪ್ರೀತಿಸುವ ಮೂಲಕ ಜಾತಿ, ಆಚಾರ ಮತ್ತು ವಿಚಾರಗಳನ್ನು ಧಿಕ್ಕರಿಸಿ ಸಮಾನತೆ ಮತ್ತು ವೈಯುಕ್ತಿಕ ಸ್ವಾತಂತ್ರ್ಯ ಎತ್ತಿ ಹಿಡಿಯುತ್ತದೆ ಎಂದು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕಲಬುರಗಿ ಸಹಾಯಕ ಪ್ರಾಧ್ಯಾಪಕಿ ಡಾ| ಇಂದುಮತಿ ಪಾಟೀಲ ಮಾತನಾಡಿ, ಜಾಗತಿಕ ಸವಾಲುಗಳ ಮಧ್ಯೆ ದಾರ್ಶನಿಕ ಪರಂಪರೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ ಎಂದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಡಳಿತಾಧಿಕಾರಿ ವಿ.ಎಸ್. ಕಟ್ಟಿಮನಿ ಅಧ್ಯಕ್ಷತೆ ವಹಿಸಿದರು. ಡಾ| ಶ್ರೀನಿವಾಸ ಬೇಂದ್ರೆ, ಸುನಂದಾ ಗಂಗು, ಸುಧಾ ಮತ್ತು ಮುತ್ತಮ್ಮ ಅವರು ಪ್ರಾರ್ಥನೆ ಮತ್ತು ನಾಡಗೀತೆ ನುಡಿಸಿದರು. ಪ್ರಾಚಾರ್ಯ ಬಿಕೆ ಬೂದೆ ಪ್ರಾಸ್ತಾವಿಕ ಮಾತನಾಡಿದರು.
ಪ್ರೊ| ಎಸ್.ಎನ್. ಶಿವಣಕರ ಸ್ವಾಗತಿಸಿದರು. ಸಂಕಿರಣದ ಸಂಯೋಜಕ ಎಸ್.ಎಸ್. ಮೈನಾಳೆ ನಿರೂಪಿಸಿದರು. ಇದೇ ವೇಳೆ ಗುರುಶಾಂತ ಶಿವಣಕರ್, ಬಸವರಾಜ ತೆಲಂಗ್ ಮತ್ತು ಎಸ್.ಎನ್. ಶಿವಣಕರ್ ಅವರನ್ನು ಸನ್ಮಾನಿಸಲಾಯಿತು.
ಉಮಾಕಾಂತ ಬಚ್ಚಣ್ಣಾ, ಶಿವಕಾಂತಾ ಜಾಧವ, ಜೋರಾಬಿ, ಸರಿತಾ, ಸುನಂದಾ, ವಿಜಯಕುಮಾರ, ಬಾಬುರಾವ್ ಖರಾಬೆ, ಕೋರಕೆ, ಪ್ರಿಯಾ ಮೇತ್ರೆ, ಡಾ| ಶ್ರೀನಿವಾಸ, ಮಿಥುನ, ಗಣಪತಿ ಕೆ. ಹಾಗೂ ವಿವಿಧ ಮಹಾವಿದ್ಯಾಲಯಗಳ ಉಪನ್ಯಾಸಕರು ಇದ್ದರು.