ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್ ಫೈರ್ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ “ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ’ ಗೀತೆಯನ್ನು ಅದೆಷ್ಟು ಭಾವಪೂರ್ಣವಾಗಿ ಅನುಭವಿಸಿ ಹಾಡಿದ್ದೆ ನೀನು. ನಾನಂತೂ ಮೈಮರೆತು ಚಪ್ಪಾಳೆ ಹೊಡೆದಿದ್ದೇ, ಹೊಡೆದಿದ್ದು.
ಪ್ರೀತಿಯ ಮೊದಲ ಬೆಂಚ್ ಹುಡುಗನಿಗೆ,
ನೆಲ ನೋಡಿಕೋತಾ ಬರ್ತಿದ್ದೆ, ನೆಲ ನೋಡಿಕೋತ ಹೋಗ್ತಿದ್ದೆ, ಸಂಕೋಚದ ಮುದ್ದೆ ನೀನು. ಯಾರಿಗೂ ಬೇಡದ ಫಸ್ಟ್ ಬೆಂಚ್ ನಿನಗೆ ಮಾತ್ರ ಸಿಂಹಾಸನ. ಕಾಫಿ, ಲಂಚ್ ಬ್ರೇಕ್‌ಗೂ ಕ್ಲಾಸ್‌ರೂಮ್‌ನಿಂದ ಹೊರಗೆ ಕಾಲಿಡದ ವಿಧೇಯ “ಕುಡುಮಿ’ ಎಂದೇ ಎಲ್ಲರೂ ನಿನ್ನನ್ನು ಚುಡಾಯಿಸುತ್ತಿದ್ದರು.
ಎಲ್ಲರಂತೆ ನಿನ್ನನ್ನು ಜೀನ್ಸ್ ಪ್ಯಾಂಟ್, ಟಿ ಶರ್ಟ್‌ನಲ್ಲಿ ಕಂಡದ್ದೇ ಇಲ್ಲ. ಸಾದಾ ಉಡುಗೆ. ಆದರೇನು? ಎಲ್ಲರೂ ನಿನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ನಿನ್ನ ವಾರ್ಷಿಕ ಫಲಿತಾಂಶ. ಯಾವುದೇ ಬ್ಯಾಕ್ ಲಾಗ್ಸ್ ಇಲ್ಲದೆ ಪಾಸ್ ಆದ ಕೆಲವೇ ಪ್ರತಿಭಾವಂತರಲ್ಲಿ ನೀನು ಮೊದಲಿಗ. ಓದಿಗೂ ಉಡುಗೆಗೂ ಸಂಬಂಧ ಇಲ್ಲ ಅಂತ ನೀನು ಸಾಧಿಸಿ ತೋರಿಸಿದ್ದೆ.
ಪಾರ್ಟ್ ಟೈಮ್ ಕೆಲಸ ಮಾಡಿ ಹಳ್ಳಿಯಲ್ಲಿರೋ ನಿನ್ನ ಮನೆಯವರಿಗೆ ನೆರವಾಗ್ತಿದ್ದೀಯ ಅಂತೆಲ್ಲ ಗುಸುಗುಸು ಕೇಳ್ಪಟ್ಟೆ. ನಿನ್ನ ಕಠಿಣ ಪರಿಶ್ರಮ ನನಗಂತೂ ತುಂಬಾ ಹಿಡಿಸಿದೆ. ಇನ್ನೇನು ಎರಡು ತಿಂಗಳಲ್ಲಿ ನಮ್ಮ ಓದು ಮುಗಿದು ಕಾಲೇಜಿಗೆ ವಿದಾಯ ಹೇಳ್ತೀವಿ. ಅಷ್ಟರಲ್ಲಿ ನನ್ನ ಮನದ ಮಾತು ನಿನಗೆ ಹೇಳಲೇಬೇಕು.
ನೆನಪಿದೆಯಾ, ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್ ಫೈರ್ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ “ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ’ ಗೀತೆಯನ್ನು ಅದೆಷ್ಟು ಭಾವಪೂರ್ಣವಾಗಿ ಅನುಭವಿಸಿ ಹಾಡಿದ್ದೆ ನೀನು. ನಾನಂತೂ ಮೈಮರೆತು ಚಪ್ಪಾಳೆ ಹೊಡೆದಿದ್ದೇ, ಹೊಡೆದಿದ್ದು. ಆಗಲೇ ನಮ್ಮಿಬ್ಬರ ಕಂಗಳು ಪರಸ್ಪರ ಸಂಧಿಸಿದವು. ತಕ್ಷಣ ನಾನು ನಾಚಿ ತಲೆ ತಗ್ಗಿಸಿದೆ. ಆ ಕ್ಷಣವೇ ತೀರ್ಮಾನಿಸಿಬಿಟ್ಟೆ, ಮುಗುಳುನಗೆ ಚೆಲ್ಲುವಷ್ಟಾದರೂ ನಿನ್ನೊಂದಿಗೆ ಸ್ನೇಹ ಗಳಿಸಬೇಕು.
ನನ್ನ ಪುಣ್ಯ, ನಂತರದ ದಿನಗಳಲ್ಲಿ ಸಂಕೋಚದಿಂದಲೇ ನನ್ನತ್ತ ಕಣ್ಣರಳಿಸಿ, ತುಟಿ ಬಿಚ್ಚಿ ಹಲೋ ಹೇಳುವಷ್ಟು ಧೈರ್ಯ ಮಾಡಿದೆಯಲ್ಲ, ಅಷ್ಟು ಸಾಕು ನನಗೆ. ರೇಡಿಯೋದಲ್ಲಿ “ನೀನಂದ್ರೆ ನಂಗಿಷ್ಟ’ ಹಾಡು ಬರುವಾಗ ಕಲ್ಪನೆಯಲ್ಲಿ ನಾವಿಬ್ಬರೇ. ನನ್ನ ಭಾವನೆಗಳಿಗೆ ನೀನು ಸ್ಪಂದಿಸಬಲ್ಲೆ ಎಂದು ನನ್ನ ಮನಸ್ಸು ಹೇಳ್ತಿದೆ. ನಿನ್ನ ಮುಕ್ತ ಮಾತುಗಳಿಗೆ ಕಾಯುತ್ತಿರುವ ಭಾವಜೀವಿ’.
ಲೈಬ್ರರಿಯಲ್ಲಿ ಅವನಿಗೆ ಅವಳು ಕೊಟ್ಟ ಪತ್ರ, ಮೂರು ವರ್ಷಗಳ ನಂತರ ಮತ್ತೆ ಅವಳ ಕೈಗೆ ಸಿಕ್ಕಿತ್ತು, ಅವನ ಕಪಾಟಿನಲ್ಲಿ.
“ಏನದು ?’ ಅವನು ಕೇಳಿದ.
“ಅಪ್ಲಿಕೇಷನ್. ನಿನ್ನ ಸಂಗಾತಿಯಾಗೋಕ್ಕೆ ಹಾಕಿದ್ನಲ್ಲ, ಅದು’ ನಕ್ಕಳು, “ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು’ ಗುನುಗುತ್ತ.
ಕೆ.ವಿ. ರಾಜಲಕ್ಷ್ಮಿ, ಬೆಂಗಳೂರು.