ಒಂದು ಕಡೆ ಖುಷಿ, ಇನ್ನೊಂದು ಕಡೆ ತುಂಬಿ ತುಳುಕೋ ದುಃಖ. ಒಂದು ಕಡೆ ಗೆದ್ದಿದ್ದೇವೆ, ಇನ್ನೊಂದು ಕಡೆ ಸೋಲಿನ ರುಚಿ. ಒಂದೆಡೆ ತೃಪ್ತಿ, ಇನ್ನೊಂದೆಡೆ ಕಡೆ ಒತ್ತಡ. ಇಂಥಾ ಸಮಸ್ಯೆ ಯಾವ ಶತ್ರುಗೂ ಬರಬಾರದು…’
-ಹೀಗೆ ನೋವು ತುಂಬಿದ ಮಾತುಗಳಲ್ಲೇ ಹೇಳುತ್ತಾ ಹೋದರು ನಿರ್ದೇಶಕ ಕಮ್ ಹೀರೋ ವಿಕಾಸ್. ಅವರು ಹೀಗೆ ಬೇಸರದೊಂದಿಗೆ ಮಾತಿಗಿಳಿದದ್ದು ತಮ್ಮ “ಕಾಣದಂತೆ ಮಾಯವಾದನು’ ಚಿತ್ರಕ್ಕೆ ಆದಂತಹ ಅನುಭವ. ಹೌದು, ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಜನರೇ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದು ಅವರೊಳಗಿರುವ ನೋವು. ಆ ಕುರಿತು ಹೇಳಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ವಿಕಾಸ್.
ತಮ್ಮ ಚಿತ್ರಕ್ಕೆ ಬಂದ ಪ್ರತಿಕ್ರಿಯೆ ಹಾಗು ಎದುರಾದ ಸಮಸ್ಯೆ ಬಗ್ಗೆ ವಿಕಾಸ್ ಹೇಳಿದ್ದು ಹೀಗೆ. “ಬಿಡುಗಡೆ ದಿನ ಎಲ್ಲರಿಂದಲೂ ಒಳ್ಳೆಯ ಮಾತು ಕೇಳಿ ಬಂತು. ಪತ್ರಿಕೆಗಳಲ್ಲೂ ಒಳ್ಳೆಯ ವಿಮರ್ಶೆಗಳೇ ಬಂದವು. ಎಲ್ಲೂ ನೆಗೆಟಿವ್ ಕಾಮೆಂಟ್ ಬರಲೇ ಇಲ್ಲ. ಒಳ್ಳೆಯ ಸಿನಿಮಾ ಮಾಡಿದ ಖುಷಿಯೇನೋ ಇದೆ. ಆದರೆ, ಜನರು ಮಾತ್ರ ಥಿಯೇಟರ್‌ಗೆ ಬರುತ್ತಿಲ್ಲ ಎಂಬ ಕೊರಗೂ ಇದೆ. ಪ್ರತಿಕ್ರಿಯೆ ಚೆನ್ನಾಗಿದೆ. ಆದರೆ, ಚಿತ್ರಮಂದಿರದಲ್ಲಿ ಮಾತ್ರ ಒಂದೇ ವಾರದಲ್ಲಿ ಸಾಬೀತುಪಡಿಸಬೇಕು. ಇಲ್ಲವಾದರೆ ಚಿತ್ರ ಎತ್ತಂಗಡಿಯಾಗುತ್ತೆ. ನಮ್ಮ ಸಿನಿಮಾಗೆ ಉತ್ತಮ ಮಾತುಗಳು ಕೇಳಿಬಂದರೂ, ಜನರು ನೋಡೋಕೆ ಬರಲಿಲ್ಲ. ಎರಡನೇ ವಾರಕ್ಕೆ ಸಿನಿಮಾ ಇರಲೇ ಇಲ್ಲ. ಕೊನೆಗೆ ಬಾಡಿಗೆ ಕೊಟ್ಟು ಎರಡು ಥಿಯೇಟರ್‌ನಲ್ಲಿ ಚಿತ್ರ ಹಾಕಿದರೂ, ಅದರಲ್ಲೂ ಅದೇ ಸಮಸ್ಯೆ. ಅಲ್ಲಿಗೂ ಜನ ಬರಲಿಲ್ಲ. ನೋಡಿದವರು ಹ್ಯಾಪಿಯಾಗಿ ಹೊರಬರುತ್ತಾರೆ. ಆದರೆ, ಬೆರಳೆಣಿಕೆ ಜನ ಬಂದರೆ ಹೇಗೆ. ನಿರ್ಮಾಪಕರೂ ಕೂಡ ಇನ್ನು, ಸಾಧ್ಯವಿಲ್ಲ ಅಂತ ಸುಮ್ಮನಾಗಿದ್ದಾರೆ. ನಾನೇ, ಗೆಳೆಯರ ಬಳಿ, ಸಂಬಂಧಿಕರ ಬಳಿ ಹಣ ವ್ಯವಸ್ಥೆ ಮಾಡಿಕೊಂಡು, ಒಂದು ನಂಬಿಕೆ ಇಟ್ಟು, ಎರಡು ಥಿಯೇಟರ್‌ನಲ್ಲಿ ಚಿತ್ರ ಹಾಕಿಸಿದ್ದೇನೆ.
ಕಾಮಾಕ್ಯ ಮತ್ತು ರಾಕ್‌ಲೈನ್ ಮಾಲ್‌ನಲ್ಲಿದೆ. ಶುಕ್ರವಾರದಿಂದ ಶುರುವಾಗಿದೆ. ಅಲ್ಲೂ ಅದೇ ಸಮಸ್ಯೆಯಾದರೆ ಹೇಗೆ, ನನಗೆ ಅರ್ಥ ಆಗುತ್ತಿಲ್ಲ. ಜನರು ಸಿನಿಮಾ ಚೆನ್ನಾಗಿಲ್ಲ ಅಂದರೆ ಬಿಡ್ತೀನಿ. ಎಲ್ಲರೂ ಹೊಗಳುತ್ತಿದ್ದಾರೆ. ಹಾಗಾಗಿ ಉಳಿಸಿಕೊಳ್ಳಬೇಕೆಂಬ ಛಲವಿದೆ. ಅದಕ್ಕೆ ಎಲ್ಲರ ಬೆಂಬಲ ಬೇಕು. ಕನ್ನಡಿಗರು ಚಿತ್ರಮಂದಿರಕ್ಕೆ ಬರಬೇಕು. ಒಳ್ಳೆಯ ಸಿನಿಮಾಗಳಿಗೆ ಪ್ರೋತ್ಸಾಹ ಕೊಡಬೇಕು. ಬುಕ್ ಮೈ ಶೋ ಕೂಡ ಮೋಸ ಮಾಡಿದೆ. ಈಗಲೂ ಹೋರಾಡುತ್ತಿದ್ದೇನೆ. ಜನರು ಬರಬೇಕಷ್ಟೇ. ನಾನೀಗ ಜೀರೋ ಆಗಿ ಬಂದಿದ್ದೇನೆ. ಇಲ್ಲಿ ಯಾವುದೋ ಕದ್ದ ಕಥೆ ಇಲ್ಲ. ಕೆಟ್ಟ ಸೀನ್ ಇಲ್ಲ. ಎಲ್ಲವೂ ಹೊಸದಾಗಿದೆ. ಆದರೂ, ನನ್ನ ನಂಬಿಕೆಯೇ ಅಲ್ಲಾಡುತ್ತಿದೆ. ಈ ಚಿತ್ರಕ್ಕಾಗಿ ನಾನು 6 ವರ್ಷ ಸಮಯ ಕಳೆದಿದ್ದೇನೆ. ಕಾರಣ, ಚಿತ್ರ ಚೆನ್ನಾಗಿ ಬರಬೇಕು ಅಂತ. ಕನ್ನಡಿಗರು ಈಗಾದರೂ ಕೈ ಹಿಡಿಯಬೇಕು. ಇಲ್ಲವಾದರೆ, ನಾನೇ ಮಾಯವಾಗುತ್ತೇನೆ’ ಎಂಬ ನೋವು ಹೊರಹಾಕಿದರು.
ಅಂದು ಜೊತೆಗಿದ್ದ ನಟ ಧರ್ಮಣ್ಣ ಕೂಡ, “ಹೊಸ ರೀತಿಯ ಸಿನಿಮಾಗಳಿಗೆ ಬೆಂಬಲ ಬೇಕು. ಸಿನಿಮಾಗೆ ಒಳ್ಳೆಯ ಮಾತುಗಳಿವೆ. ಆದರೆ, ಜನರು ಬರುತ್ತಿಲ್ಲ. ಬಂದರೆ, ಒಂದೊಳ್ಳೆಯ ಚಿತ್ರ ಬೆಂಬಲಿಸಿ ದಂತಾಗುತ್ತದೆ’ ಎಂದರು.