Advertisement

ಸೋತು ಸುಣ್ಣವಾದ್ರು ಘಟಾನುಘಟಿ ನಾಯಕರು

03:42 PM May 18, 2018 | |

ಚಿತ್ರದುರ್ಗ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ  ಅಲೆಯ ಹೊಡೆತಕ್ಕೆ ಜಿಲ್ಲೆಯ ಆರು
ಶಾಸಕರ ಪೈಕಿ ನಾಲ್ವರು ಸೋತು ಹೋಗಿದ್ದಾರೆ. ಇಬ್ಬರು ಶಾಸಕರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಪುನರಾಯ್ಕೆ
ಆಗುವಲ್ಲಿ ಸಫಲರಾಗಿದ್ದಾರೆ.

Advertisement

ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಎಚ್‌.ಆಂಜನೇಯ, 15 ವರ್ಷಗಳ ಕಾಲ ಹೊಸದುರ್ಗ ಕ್ಷೇತ್ರದ
ಶಾಸಕರಾಗಿದ್ದ ಬಿ.ಜಿ. ಗೋವಿಂದಪ್ಪ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪರಾಭವಗೊಂಡಿದ್ದಾರೆ. ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದ್ದ ಹಿರಿಯೂರು ಶಾಸಕರಾಗಿದ್ದ ಡಿ. ಸುಧಾಕರ್‌ ಅವರಿಗೂ ವಿಜಯಲಕ್ಷ್ಮಿ ಒಲಿಯಲಿಲ್ಲ. ಬಿಎಸ್‌ಆರ್‌ಸಿ
ಪಕ್ಷದಿಂದ ಆಯ್ಕೆಯಾಗಿದ್ದ ಹಾಗೂ ಈ ಬಾರಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ
ಸ್ಪರ್ಧಿಸಿದ್ದ ಮೊಳಕಾಲ್ಮೂರು ಕ್ಷೇತ್ರದ ಎಸ್‌. ತಿಪ್ಪೇಸ್ವಾಮಿ ಸೋಲಿನ ರುಚಿ ಉಂಡಿದ್ದಾರೆ.

 ಅಭಿವೃದ್ಧಿ ಮಾಡಿಯೂ ಸೋತ ಆಂಜನೇಯ: ಹೊಳಲ್ಕೆರೆ ಕ್ಷೇತ್ರದಲ್ಲಿ ಎಚ್‌. ಆಂಜನೇಯ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿಯೂ ಸೋತಿದ್ದಾರೆ. ಅವರ ವಿರುದ್ಧ ಉಂಟಾದ ಅಸಮಾಧಾನವೇ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆಂದು ಲಿಂಗಾಯತರ ಎರಡು ಬಣಗಳು ಎಂ. ಚಂದ್ರಪ್ಪ ಅವರನ್ನು
ಬೆಂಬಲಿಸಿದವು. ಇದು ಹಾಗೂ ಎಸ್ಸಿ, ಎಸ್ಟಿ ಇತರೆ ಒಬಿಸಿ ವರ್ಗಗಳು ಬಿಜೆಪಿ ಕಡೆ ವಾಲಿದ್ದರಿಂದ ಆಂಜನೇಯ
ಅವರಿಗೆ ತೀವ್ರ ಹಿನ್ನಡೆಯಾಗಿದೆ.

ನನಸಾಗದ ಗೋವಿಂದಪ್ಪ ಪುನರಾಯ್ಕೆ ಕನಸು: ಹೊಸದುರ್ಗ ಕ್ಷೇತ್ರದಲ್ಲಿ ಕುರುಬ ಸಮಾಜ ಮತ್ತು ಲಿಂಗಾಯತರ ಒಂದು ಬಣ, ಒಬಿಸಿ ವರ್ಗಗಳು ಮತ್ತು ಪರಿಶಿಷ್ಟ ವರ್ಗದವರು ಕಳೆದ ಚುನಾವಣೆಯಲ್ಲಿ ಬಿ.ಜಿ. ಗೋವಿಂದಪ್ಪ ಅವರಿಗೆ ಬೆಂಬಲ ನೀಡಿದ್ದರು. ಆದರೆ ಈ ಸಲ ಲಿಂಗಾಯತರ ಎರಡು ಬಣಗಳು, ಭೋವಿ ಸಮುದಾಯದವರು ಮತ್ತು ಯಾದವರು ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌ ಬೆಂಬಲ ನೀಡಿದ್ದರಿಂದ ಗೋವಿಂದಪ್ಪ ಅವರ ಪುನರಾಯ್ಕೆ ಕನಸು ನನಸಾಗಲಿಲ್ಲ.

Advertisement

ಸುಧಾಕರ್‌ಗೆ ಕೈ ತಪ್ಪಿದ ಹ್ಯಾಟ್ರಿಕ್‌ ಗೆಲುವು: ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದ ಸುಧಾಕರ್‌ ಅವರ ದುರಾಡಳಿತ, ಅಕ್ರಮ ಮರಳು ದಂಧೆ, ಕಳಪೆ ಕಾಮಗಾರಿ ಮತ್ತಿತರ ಕಾರಣಗಳ ವಿರುದ್ಧ ಕ್ಷೇತ್ರದ ಜನತೆ ಸಿಡಿದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್‌ ವಿರುದ್ಧ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಎ. ಕೃಷ್ಣಪ್ಪ ನಂತರ ನಿಧನರಾಗಿದ್ದರು. ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ ಮೂರ್‍ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸುತ್ತಾಡಿ ಜನರ ವಿಶ್ವಾಸ ಗಳಿಸಿದ್ದರು. ತಂದೆ ಸಾವಿನ ಅನುಕಂಪದ ಜೊತೆಗೆ ಗೊಲ್ಲ, ಲಿಂಗಾಯತ, ವಾಲ್ಮೀಕಿ, ಕುಂಚಿಟಿಗ ಮತ್ತು ಭೋವಿ ಸಮುದಾಯದವರು, ಯುವಕರು, ಇತರೆ ಹಿಂದುಳಿದರರ ಬೆಂಬಲ ಪೂರ್ಣಿಮಾಗೆ ದೊರೆಯಿತು. ಹೀಗಾಗಿ ಜಿಲ್ಲೆಯ ಏಕೈಕ ಮಹಿಳಾ ಶಾಸಕಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.

ತಿಪ್ಪೇಸ್ವಾಮಿಗೆ ಮುಳುವಾದ ಆತುರದ ನಿರ್ಧಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಗೆದ್ದು ನಂತರ ಬಿಜೆಪಿ ಸೇರಿದ್ದ ಎಸ್‌. ತಿಪ್ಪೇಸ್ವಾಮಿ ಅವರಿಗೆ ಆತುರದ ನಿರ್ಧಾರವೇ ಮುಳುವಾದಂತಿದೆ. ಈ ಬಾರಿ ಬಿಜೆಪಿ ಟಿಕೆಟ್‌ ತಮಗೇ ಎಂದು ಬೀಗಿದ್ದ ಅವರು ಅನಿರೀಕ್ಷಿತವಾಗಿ ಬಿ. ಶ್ರೀರಾಮುಲು ಅವರಿಗೆ ಟಿಕೆಟ್‌ ಘೋಷಣೆಯಾದಾಗ ಪಕ್ಷದ ವಿರುದ್ಧ ಸಿಡಿದೆದ್ದರು. ಶ್ರೀರಾಮುಲು ನಾಯಕನಹಟ್ಟಿ ದೇವಾಲಯಕ್ಕೆ ಭೇಟಿ ನೀಡಿದಾಗ ತಮ್ಮ ಬೆಂಬಲಿಗರಿಂದ ಗಲಾಟೆ ಮಾಡಿಸಿದ್ದು, ಕೊನೆ ಹಂತದಲ್ಲಿ ಬೆಂಬಲಿಗರು ಕೈಕೊಟ್ಟು ಶ್ರೀರಾಮುಲು ಬೆಂಬಲಿಸಿದ್ದು ತಿಪ್ಪೇಸ್ವಾಮಿ ಸೋಲಿನಲ್ಲಿ ಪರ್ಯವಸಾನವಾಯಿತು.

ಜಿಲ್ಲೆಯ ನಾಲ್ವರು ಪ್ರಭಾವಿ ಶಾಸಕರಿಗೆ ಮತದಾರರು ಸೋಲಿನ ರುಚಿ ಉಣಿಸಿದ್ದಾರೆ. ಆದರೆ ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಚಳ್ಳಕೆರೆ ಕ್ಷೇತ್ರದಲ್ಲಿ ಟಿ. ರಘುಮೂರ್ತಿ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸಿ ಮತ್ತೆ ವಿಧಾನಸಭೆ ಮೆಟ್ಟಿಲು ಹತ್ತುವಲ್ಲಿ ಯಶಸ್ಸು ಕಂಡಿದ್ದಾರೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next