ಬೆಂಗಳೂರು: ಡೀಸೆಲ್ ಉತ್ಪನ್ನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಹಾಗೂ 347 ಟೋಲ್‌ಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಲಾರಿ ಮಾಲೀಕರು ದೇಶಾದ್ಯಂತ ಎರಡು ದಿನಗಳ ಮುಷ್ಕರ ಹಮ್ಮಿಕೊಂಡಿದ್ದು, ಮಂಗಳವಾರವೂ ಲಾರಿ ಸಂಚಾರ ಇರುವುದಿಲ್ಲ.
ಸೋಮವಾರ ಬೆಳಗ್ಗೆಯಿಂದಲೇ ಮುಷ್ಕರ ಆರಂಭವಾಗಿದ್ದು, ಸರಕು ಸಾಗಾಣಿಕೆ ಮಾಡುವ ಲಾರಿಗಳ ಸಂಚಾರ ವಿರಳವಾಗಿದೆ. ಬಹುತೇಕ ಲಾರಿಗಳನ್ನು ರಾಜ್ಯದ ವಿವಿಧ ಗಡಿ ಪ್ರದೇಶದಲ್ಲೇ ನಿಲ್ಲಿಸಲಾಗಿದೆ. ಲಾರಿ ಮುಷ್ಕರದಿಂದ ಒಂದು ದಿನಕ್ಕೆ ದೇಶದಲ್ಲಿ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಷ್ಟವಾಗಲಿದೆ.
ಕರ್ನಾಟಕದಲ್ಲಿ 120 ಕೋಟಿ ರೂ.ಗಳಷ್ಟು ವಹಿವಾಟು ನಷ್ಟ ಉಂಟಾಗಲಿದೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದರೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಎಚ್ಚರಿಕೆ ನೀಡಿದರು.
ಎಲ್ಲಾ ಟೋಲ್‌ಗಳನ್ನು ರದ್ದು ಮಾಡಬೇಕು. ಮುಂಗಡವಾಗಿ ಒಂದು ಲಾರಿಗೆ ವರ್ಷಕ್ಕೆ 50 ಸಾವಿರ ರೂ. ಪಾವತಿಸಲು ನಾವು ಸಿದ್ಧರಿದ್ದೇವೆ. ಟೋಲ್‌ಗಳಿಂದಾಗಿ ಸಮಯದ ಅಪವ್ಯಯ ಆಗುತ್ತಿದೆ. ವಾರ್ಷಿಕವಾಗಿ ಟೋಲ್ ಪಾವತಿಸಲು ಅವಕಾಶ ನೀಡಿದರೆ, ಸರ್ಕಾರಕ್ಕೂ ಲಾಭ ಹೆಚ್ಚಲಿದೆ. ಲಾರಿ ಮಾಲೀಕರಿಗೂ ಅನುಕೂಲ ಆಗುತ್ತದೆ ಮತ್ತು ಡೀಸೆಲ್ ಕೂಡ ಉಳಿಕೆಯಾಗಲಿದೆ ಎಂದರು.
ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕದ 5 ಲಕ್ಷ ಲಾರಿ ಸೇರಿದಂತೆ ದೇಶಾದ್ಯಂತ 40 ಲಕ್ಷ ಲಾರಿ ಸರಕು ಸಾಗಾಟ ಸ್ಥಗಿತಗೊಳಿಸಿದೆ. ದೇಶಾದ್ಯಂತ ಈಗಾಗಲೇ 1627 ಚೆಕ್‌ಪೋಸ್ಟ್‌ಗಳನ್ನು ಹಿಂಪಡೆಯಲಾಗಿದೆ. ಇದೇ ಮಾದರಿಯಲ್ಲಿ ಹೆದ್ದಾರಿಯಲ್ಲಿರುವ 347 ಟೋಲ್‌ಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಜಿಎಸ್‌ಟಿ ಅವೈಜ್ಞಾನಿಕವಾಗಿದ್ದು, ತೆರಿಗೆ ಭಾರದಿಂದ ಲಾರಿ ಮಾಲೀಕರು ಕಂಗೆಟ್ಟಿದ್ದಾರೆ. ಡೀಸೆಲ್ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಇಲ್ಲವೇ ದರ ಕಡಿಮೆ ಮಾಡಬೇಕು. ಹಳೇ ಲಾರಿ ಮಾರಾಟಕ್ಕೆ ಜಿಎಸ್‌ಟಿ ವಿಧಿಸುವುದನ್ನು ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು.