ಬೆಂಗಳೂರು: ಎಲ್ಲ ಪ್ರಕಾರದ ವಾಣಿಜ್ಯ ವಾಹನಗಳಿಗೆ ಸ್ಪೀಡ್ ಗವರ್ನರ್ (ವೇಗ ನಿಯಂತ್ರಕ) ಅಳವಡಿಕೆ ಕಡ್ಡಾಯ ಆದೇಶ ಹಿಂಪಡೆಯಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ಇಲಾಖೆಯಿಂದ ಪೂರಕ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟರು, ಟ್ಯಾಕ್ಸಿ ಮಾಲಿಕರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ನಿರ್ಧಾರ ಕೈಬಿಟ್ಟರು.
ಸ್ಪೀಡ್ ಗವರ್ನರ್ ಅಳವಡಿಕೆಯಿಂದ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳಿಗೆ ವಿನಾಯ್ತಿ ನೀಡುವ ಬಗ್ಗೆ ಸರ್ಕಾರದ ಅವಗಾಹನೆಗೆ ತರಲಾಗುವುದು. ಅಲ್ಲದೆ, ವಿವಿಧ ಸಾರಿಗೆ ಶುಲ್ಕ ಇಳಿಕೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗುವುದು ಎಂದು ಸಾರಿಗೆ ಆಯುಕ್ತ ಬಿ. ದಯಾನಂದ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಲಾರಿ ಮತ್ತು ಟ್ಯಾಕ್ಸಿ ಮಾಲಿಕರು ಅನಿರ್ದಿಷ್ಟಾವಧಿ ನಿರ್ಧಾರದಿಂದ ಹಿಂದೆಸರಿದರು. ಸಂಧಾನ ಸಭೆ ಸಫಲವಾದ ಹಿನ್ನೆಲೆಯಲ್ಲಿ ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮಾಲಿಕರು, ಚಾಲಕರು ಸಂಭ್ರಮಿಸಿದರು.
ಸ್ಪೀಡ್ ಗವರ್ನರ್ ಇಲ್ದಿದ್ರೂ ಎಫ್ಸಿ?: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟ್‌ಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯದಿಂದ ಎಂ-1 ಕೆಟಗರಿ ವಾಹನಗಳಿಗೆ ವಿನಾಯ್ತಿ ಸೇರಿದಂತೆ ಹೆದ್ದಾರಿಗಳಲ್ಲಿ ಆರ್‌ಟಿಒ ಅಧಿಕಾರಿಗಳ ಕಿರುಕುಳ, ಆರ್‌ಟಿಒ ಶುಲ್ಕ ಇಳಿಕೆ,
ಅಂತರ್ ರಾಜ್ಯದ ಶುಲ್ಕ ಇಳಿಕೆ ಸಂಬಂಧ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ, ಬುಧವಾರದಿಂದ ಆರ್‌ಟಿಒ ಕಚೇರಿಗಳಲ್ಲಿ ಸ್ಪೀಡ್ ಗವರ್ನರ್ ಇಲ್ಲದಿದ್ದರೂ ವಾಹನಗಳಿಗೆ ಅರ್ಹತಾ ಪ್ರಮಾಣಪತ್ರ (ಎಫ್ಸಿ) ನೀಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಮಾಲಿಕರು, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳಿಗೆ ಸ್ಪೀಡ್‌ಗವರ್ನರ್ ಅಳವಡಿಕೆ ಅವೈಜ್ಞಾನಿಕ. ಹೀಗಾಗಿ “ಎಂ-1′ ಕೆಟಗರಿ ವಾಹನಗಳಿಗೆ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು. ಆಗ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಸಂಧಾನ ಸಭೆಗೂ ಮುನ್ನ ಸ್ಪೀಡ್ ಗವರ್ನರ್ ಕಡ್ಡಾಯ, ವಿವಿಧ ಸಾರಿಗೆ ಸೇವೆಗಳ ಶುಲ್ಕ ಹೆಚ್ಚಳ, ಸ್ಪೀಡ್ ಗವರ್ನರ್ ದರ ಮತ್ತಿತರ ಸಾರಿಗೆ ನಿಯಮಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟರುಗಳ ನೇತೃತ್ವದಲ್ಲಿ ಶಾಂತಿನಗರದ ಸಾರಿಗೆ ಇಲಾಖೆ ಕಚೇರಿ ಎದುರು ಲಾರಿ ಮಾಲಿಕರು, ಟ್ಯಾಕ್ಸಿ ಮಾಲಿಕರು ಪ್ರತಿಭಟನೆ ನಡೆಸಿ, ಕಚೇರಿ ಮುತ್ತಿಗೆಗೆ ನಿರ್ಧರಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಂಘಟನೆಗಳ ಬೇಡಿಕೆಗಳು ಹಾಗೂ ವಾಹನ ತಯಾರಿಕಾ ಕಂಪನಿಗಳು ನೀಡಿರುವ ಪತ್ರ ಎರಡನ್ನೂ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು. ಬಳಿಕ ರಾಜ್ಯ ಸರ್ಕಾರ ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
-ಬಿ.ದಯಾನಂದ, ಆಯುಕ್ತ, ಸಾರಿಗೆ ಇಲಾಖೆ