Advertisement
ಮರಣವೆಂಬುದು ಮಹಾ ನವಮಿಯಾಗಬೇಕೇ ಹೊರತು ಸ್ವಯಂ ವಧಾಮಿಯಾಗಬಾರದು. ಮರಣ ನಮ್ಮ ವಿಳಾಸ ಹಿಡಿದುಕೊಂಡು ಪರದಾಡಬೇಕು. ನಾವು ಯಾಕೆ ಬಾರದೆ ಇರುವ ಮರಣವನ್ನು ಬಲವಂತದಿಂದ ಬರಮಾಡಿಸಿಕೊಂಡು ಒದ್ದಾಡಿ ಸಾಯಬೇಕು? ಭಗವಂತ ನಮಗೆ ಬದುಕು ಕೊಟ್ಟಿರುವುದು ಬದುಕಲು. ಸಾವು ಬರುವ ತನಕ ನಾವು ಬದುಕಿ ತೋರಿಸಬೇಕು. ಈ ಬದುಕಿ ತೋರಿಸುವ ಕಲೆಯೇ ಜೀವನ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುವವರು ಒಮ್ಮೆ ನಮ್ಮಂತವರನ್ನು ನೋಡಬೇಕು. ಅಥವಾ ನಮ್ಮಂತವರ ಬಗ್ಗೆ ತಿಳಿದುಕೊಳ್ಳಬೇಕು. ತಂದೆ ಗದರಿದರು ತಾಯಿ ಬೈದರು, ಶಿಕ್ಷಕರು ಜೋರು ಮಾಡಿದರೂ, ಎಂದು ಒಂದು ಕ್ಷಣದಲ್ಲಿ ಬದುಕೇ ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಬೇಸರಿಸುತ್ತಾರೆ ಭಾವಚಿತ್ರ ಕಲಾವಿದ ಗಣೇಶ್ ಪಂಜಿಮಾರು.
Related Articles
Advertisement
ಇದನ್ನೂ ಓದಿ: ಸುಮಾರು 20 ಲಕ್ಷ ಜನರಿಂದ ಪುನೀತ್ ಅಂತಿಮ ದರ್ಶನ: ಆರಗ ಜ್ಞಾನೇಂದ್ರ
ಗಣೇಶ್ ಅವರು ಇಂದು ತನ್ನದೇ ಆದ Ganesh Panjimar Arts ಎಂಬ ಯುಟ್ಯೂಬ್’ ಚಾನೆಲ್ ಹೊಂದಿದ್ದಾರೆ. ನೂರಾರು ಭಾವಚಿತ್ರಗಳನ್ನು ಬಿಡಿಸಿ ಯುಟ್ಯೂಬ್ ವಾಹಿನಿಯಲ್ಲಿ ಹರಿಯಬಿಟ್ಟಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಯ ಚಲನಚಿತ್ರ ರಂಗದ ದಿಗ್ಗಜರ ಭಾವಚಿತ್ರಗಳನ್ನು ರಚಿಸಿದ್ದಾರೆ. ಕ್ರಿಕೆಟ್, ಫುಟ್‌ಬಾಲ್, ಡಬ್ಲ್ಯು ಡಬ್ಲ್ಯು ಎಫ್ ತಾರೆಯರ ರಾಜಕೀಯ ನೇತಾರರ, ಸಾಮಾಜಿಕ ಗಣ್ಯರ ಭಾವಚಿತ್ರಗಳನ್ನು ರಚಿಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಂದ ಸನ್ಮಾನಿತರಾಗಿದ್ದಾರೆ ಬಂಜರಾ ಗ್ರೂಪಿನ ಮಾಲಕರಾದ ಡಾ. ಪ್ರಕಾಶ್ ಶೆಟ್ಟಿಯವರ ಅಭಿನಂದನ ಕಾರ್ಯಕ್ರಮದಲ್ಲಿ ಪುರಸ್ಕೃತರಾಗಿದ್ದಾರೆ. ಪರ್ಯಾಯೋತ್ಸವದಲ್ಲಿ ಸನ್ಮಾನಿತರಾಗಿದ್ದಾರೆ. ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ, ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ಜಾಗತಿಕ ಸಮಾವೇಶದಲ್ಲಿ ಸನ್ಮಾನಿತರಾಗಿದ್ದಾರೆ. ಊರಿನ ಹಲವಾರು ಸಂಘ ಸಂಸ್ಥೆಗಳು ಗಣೇಶ್ ಅವರ ಸಾಧನೆಯನ್ನು ಗುರುತಿಸಿವೆ. ಮಾಧ್ಯಮಗಳೂ ಪರಿಚಯಿಸಿವೆ. ಗಣೇಶ್ ಅವರ ಓರ್ವ ಹಿರಿಯ ಸೋದರ ದಿವ್ಯಾಂಗರಾದರೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಉದ್ಯೋಗಿ ಆಗಿದ್ದಾರೆ ಇವರ ತಮ್ಮ ಕೂಡ ಸಾಫ್ಟ್‌ವೇರ್ ಇಂಜಿನಿಯರ್.
ಕುಟುಂಬದ ಪೋಷಣೆಯ ಭಾರ ಆ ಇಬ್ಬರ ಮೇಲಿದೆ. ಇವರ ದಿವ್ಯಾಂಗವುಳ್ಳ ತಂಗಿ ಮನೆಯಲ್ಲಿ ಕಾಗದಗಳ ಪಟ್ಟಿಯಿಂದ (Quill Arts) ಗೊಂಬೆ ತಯಾರಿಸುವ ಸೃಜನಶೀಲತೆಯನ್ನು ಬೆಳೆಸಿಕೊಂಡಿದ್ದಾರೆ.
ಗಣೇಶ್ ಪಂಜಿಮಾರು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹತ್ತಿರದ ಕೋಡು ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಶ್ರೀಗುರು ನಾರಾಯಣ ಹೈಸ್ಕೂಲ್, ಪಡುಬೆಳ್ಳ, ಪದವಿ ಪೂರ್ವ ಶಿಕ್ಷಣವನ್ನು ಹಿಂದೂ ಜೂನಿಯರ್ ಕಾಲೇಜ್ ಹಾಗೂ ಬಿಕಾಂ ಪದವಿಯನ್ನು ಎಂ. ಎಸ್. ಆರ್. ಎಸ್ ಕಾಲೇಜ್ ಇಲ್ಲಿಂದ ಪಡೆದಿರುವರು. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂ. ಎಸ್. ಆರ್. ಎಸ್. ಕಾಲೇಜಿನ ಹಳೆ ವಿದ್ಯಾರ್ಥಿ ಮುಂಬೈ ಘಟಕವು ಮೂರು ವರ್ಷ ಧನ ಸಹಾಯ ಮಾಡಿದೆ ಎಂದು ಸದಾ ಸ್ಮರಿಸುತ್ತಾರೆ ಗಣೇಶ್. ಪದವಿ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿಗೆ ಹೋಗಿ ಬರಲು ವಿಶೇಷವಾಗಿ ತಯಾರಿಸಿದ ತ್ರಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಿದ ಉಡುಪಿಯ ಉದ್ಯಮಿ ಶ್ರೀಸುದರ್ಶನ್ ಶೆಟ್ಟಿಯವರನ್ನೂ ಅದಕ್ಕಾಗಿ ಶ್ರಮಿಸಿದ ಹಿಂದಿ ಪ್ರಾಧ್ಯಾಪಕರಾಗಿದ್ದ ಶ್ರೀಮತಿ ಶಾರದ ಎಂ. ಅವರನ್ನೂ ಈಗಲೂ ನೆನೆಯುತ್ತಾರೆ ಗಣೇಶ್.
ಗಣೇಶ್ ಪಂಜಿಮಾರು ಅವರ ಹಿರಿಯರು ಉಡುಪಿಯವರಾದರೂ ನೆಲೆಸಿದ್ದು ಆಂಧ್ರ ಪ್ರದೇಶದಲ್ಲಿ. ಮೂರು ದಶಕಗಳ ಹಿಂದೆ ಗಣೇಶ್ ಅವರ ಹೆತ್ತವರಾದ ದಿವಗಂತ ರಾಮ ಮೂಲ್ಯರು ಹಾಗೂ ಶ್ರೀಮತಿ ನಾಗಮಣಿ ಅವರು ಪಂಜಿಮಾರಲ್ಲಿ ಬಂದು ನೆಲೆಸಿದವರು. ಆರೋಗ್ಯದಲ್ಲಿ ಸರಿಯಿರುವ ಗಣೇಶ್ ಅವರ ದೊಡ್ಡಣ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಅವರು ಸಂಸಾರಿಕರಾಗಿ ಬೇರೆ ವಾಸವಾಗಿದ್ದಾರೆ. ದುಡಿಯವ ಕೈಗಳಿಗಿಂತ ಉಣ್ಣುವ ಬಾಯಿಗಳ ಸಂಖ್ಯೆ ಹೆಚ್ಚು. ಔಷದಕ್ಕೆ ತಿಂಗಳಿಗೆ ತಲಾ ಒಂದೂವರೆ ಸಾವಿರ ರೂಪಾಯಿಗಳಷ್ಟು ವ್ಯಯವಾಗುತ್ತದೆ. ಆದರೂ ನಗು ನಗುತ್ತ ಬಾಳುವ ಇವರು ಊರಿಗೆಲ್ಲ ಮಾದರಿಯಾಗಿದ್ದಾರೆ.
ತನ್ನ ಅನ್ನವನ್ನು ತಾನು ದುಡಿದು ತಿನ್ನಬೇಕು ಎಂಬ ಅಚಲ ನಿರ್ಧಾರ ಹೊಂದಿದ ಗಣೇಶ್ ಪಂಜಿಮಾರು ಕಾಯಿಲೆಯೊಂದಿಗೆ ನಿರುದ್ಯೋಗ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಬ್ಯಾಂಕಿನ ಪರೀಕ್ಷೆ ಪಾಸು ಮಾಡಿ ಕೆಲಸಕ್ಕೆ ಸೇರಬೇಕೆಂಬ ಗಣೇಶ್ ಅವರ ಕನಸು ನನಸಾಗಲಿ. ಅಥವಾ ಅದಕ್ಕೆ ತತ್ಸಮಾನವಾದ ಕೆಲಸವೊಂದು ಆದಷ್ಟು ಬೇಗ ದೊರೆಯಲಿ ಎಂದು ಹಾರೈಸೋಣ.