ರಬಕವಿ-ಬನಹಟ್ಟಿ: ರಬಕವಿ ಪಟ್ಟಣದ ಸಾವಿರಾರು ಮಗ್ಗಗಳು ಮಜೂರಿ ಹೆಚ್ಚಳಕ್ಕಾಗಿ ಬೇಡಿಕೆಯೊಡ್ಡಿರುವ ನೇಕಾರರು ಕಳೆದೊಂದು ವಾರದಿಂದ ಮಗ್ಗಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಮಜೂರಿ ಹೆಚ್ಚಳಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ.
ಕಳೆದ 6 ವರ್ಷಗಳಿಂದ ಜೋಡಣೆದಾರರಿಗೆ ಹಾಗೂ ಒಂದುವರೆ ವರ್ಷದಿಂದ ನೇಕಾರರಿಗೆ ಮಜೂರಿ ಹೆಚ್ಚಳಗೊಂಡಿಲ್ಲ. ಆ ಕಾರಣಕ್ಕಾಗಿ ಸದ್ಯ ಶೇ.30ರಷ್ಟು ನೇಕಾರರಿಗೆ ಹಾಗೂ ಶೇ. 25ರಷ್ಟು ಜೋಡಣೆದಾರರಿಗೆ ಮಜೂರಿ ಹೆಚ್ಚಳಗೊಳಿಸಬೇಕೆಂದು ಕಾರ್ಮಿಕ ಸಂಘಟನೆ ಕಾರ್ಯದರ್ಶಿ ಸಂಗಪ್ಪ ಕುಂದಗೋಳ ಆಗ್ರಹಿಸಿದರು.
ಈಗಾಗಲೇ ನೇಕಾರ ಹಾಗೂ ಮಾಲೀಕರ ನಡುವೆ ಮಾತುಕತೆ ನಡೆದಿದ್ದು, ಜಿಎಸ್‌ಟಿ ತೆರಿಗೆ ಹೆಚ್ಚಳದ ಆತಂಕವೂ ಮನೆ ಮಾಡಿರುವ ಹಿನ್ನಲೆಯಲ್ಲಿ ಶೇ. 5ರಷ್ಟು ಮಾತ್ರ ಮಜೂರಿ ಮಾಡಲು ಸಾಧ್ಯವೆಂದು ಪಾವರ್‌ಲೂಮ್ ಮಾಲಿಕರ ಸಂಘದ ಅಧ್ಯಕ್ಷ ನೀಲಕಂಠ ಮುತ್ತೂರ ಸ್ಪಷ್ಟಪಡಿಸಿದ್ದು, ಇದಕ್ಕೆ ಕಾರ್ಮಿಕ ವರ್ಗ ಮನೆ ಹಾಕದೆ ಶೇ.30 ರಷ್ಟು ಮಜೂರಿ ಹೆಚ್ಚಳಗೊಳಿಸಲೇಬೇಕೆಂಬ ಒತ್ತಾಯವಾಗಿದೆ.
ಸೈಜಿಂಗ್ ಘಟಕಕ್ಕೂ ಶಾಕ್: ಬನಹಟ್ಟಿಯಲ್ಲಿಯೂ ಕೋನ್, ವಾರ್ಪಿಂಗ್ ಹಾಗೂ ಸೈಜಿಂಗ್ ಘಟಕಗಳಲ್ಲಿನ ಕಾರ್ಮಿಕ ಮುಖಂಡ ರವೀಂದ್ರ ಹಳಿಂಗಳಿ ಪತ್ರವೊಂದನ್ನು ಮಾಲಿಕರ ಸಂಘಕ್ಕೆ ಒದಗಿಸಿದ್ದು, ಶೇ.35 ರಷ್ಟು ಮಜೂರಿ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಈ ಮಾತುಕತೆ ಯಾವುದೇ ರೀತಿ ಸೈಜಿಂಗ್‌ಗಳನ್ನು ಬಂದ್ ಮಾಡದೆ 15 ದಿನಗಳೊಳಗಾಗಿ ಪರಿಹರಿಸುವಲ್ಲಿ ಕಾರ್ಮಿಕ ವರ್ಗ ಸನ್ನದ್ಧವಾಗಿದ್ದು, ಸೈಜಿಂಗ್ ಮಾಲೀಕರೊಂದಿಗೆ ಶೀಘ್ರ ಮಹತ್ವದ ಮಾತುಕತೆ
ನಡೆಯಲಿದ್ದು, ಇಲ್ಲವಾದಲ್ಲಿ ಇವೂ ಕೂಡ ಬಂದ್ ಆಗುವ ಸಾಧ್ಯತೆಯಿದೆ.
ಅನ್ಯ ಉದ್ಯೋಗದತ್ತ: ಕಳೆದೊಂದು ವಾರದಿಂದ ಉದ್ಯೋಗವಿಲ್ಲದೆ ಸೀರೆ ನೇಯ್ಗೆ ಬಂದ್ ಮಾಡಿರುವ ನೇಕಾರರು ಹೊಟ್ಟೆಪಾಡಿಗಾಗಿ ಅನ್ಯ ಉದ್ಯೋಗದತ್ತ ವಾಲಿದ್ದಾರೆ. ಕೆಲವರು ಗಾರೆ(ಗೌಂಡಿ) ಕೆಲಸಕ್ಕೆ ತೆರಳುತ್ತಿದ್ದರೆ, ಹೊಟೇಲ್, ಹಮಾಲಿ ಹೀಗೆ ಹಲವಾರು ಉದ್ಯೋಗಗಳತ್ತ ಮುಖ ಮಾಡಿದ್ದಾರೆ. ಶೀಘ್ರ ಪರಿಹಾರಗೊಂಡು ಮತ್ತೇ ಮಗ್ಗಗಳು ಪುನರಾರಂಭಗೊಳ್ಳಬೇಕಿದೆ.