Advertisement

ಚೀನ- ಅಮೆರಿಕ ಬಿಕ್ಕಟ್ಟು ದೀರ್ಘ‌ಕಾಲಿಕ ಪರಿಣಾಮ

08:38 AM Jul 27, 2020 | mahesh |

ಅಮೆರಿಕ ಮತ್ತು ಚೀನದ ನಡುವಿನ ಬಿಕ್ಕಟ್ಟು ಈಗ ಗಂಭೀರ ರೂಪ ತಾಳುತ್ತಿದೆ. ಈ ಎರಡೂ ದೇಶಗಳ ನಡುವಿನ ಅಶಾಂತಿ ವಿಶ್ವವನ್ನು ಮತ್ಯಾವ ಸಂಕಟಕ್ಕೆ ದೂಡಲಿದೆಯೋ ಎಂದು ಕೆಲವು ದೇಶಗಳು ಚಿಂತಿತವಾಗಿವೆ. ಕೊರೊನಾ ವೈರಸ್‌ ಜಗತ್ತಿನಾದ್ಯಂತ ಹಾವಳಿ ಎಬ್ಬಿಸಿರುವುದಕ್ಕೆ ಚೀನವೇ ಕಾರಣ ಎಂದು ಟ್ರಂಪ್‌ ಸರಕಾರ ಆರಂಭದಿಂದಲೂ ಆರೋಪಿಸುತ್ತಲೇ ಬಂದಿದೆ. ಈ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೂ ಚೀನದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಅವರು ನೇರವಾಗಿಯೇ ಆರೋಪಿಸಿದಾಗಿಂದ ಈ ರಾಷ್ಟ್ರಗಳ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರವಾಗಿದ್ದವು.

Advertisement

ಈಗ ಅಮೆರಿಕವು ಹ್ಯೂಸ್ಟನ್‌ನಲ್ಲಿರುವ ಚೀನದ ವಾಣಿಜ್ಯ ದೂತಾವಾಸವನ್ನು ಮುಚ್ಚಿರುವುದಷ್ಟೇ ಅಲ್ಲದೇ, ಇಂಥ ಹೆಜ್ಜೆಯನ್ನು ತಾನು ಮುಂದೆಯೂ ಇಡುವುದಾಗಿ ಎಚ್ಚರಿಸಿದೆ. ಅಮೆರಿಕದಲ್ಲಿ ಚೀನದ ಇಂಥ 5 ವಾಣಿಜ್ಯ ದೂತಾವಾಸ ಕಚೇರಿಗಳಿವೆ. ಇದಕ್ಕೆ ಪ್ರತ್ಯುತ್ತರವಾಗಿ ಚೀನ ಚೆಂಗುxವಿನಲ್ಲಿರುವ ಅಮೆರಿಕದ ಮಹಾವಾಣಿಜ್ಯ ದೂತಾವಾಸ ಕಚೇರಿಯನ್ನು ಬಂದ್‌ ಮಾಡಲು ಆದೇಶ ನೀಡಿದೆ.

ಯಾವಾಗ ಎರಡೂ ರಾಷ್ಟ್ರಗಳ ನಡುವಿನ ತಿಕ್ಕಾಟ ಆರೋಪ-ಪ್ರತ್ಯಾರೋಪದ ಸ್ತರವನ್ನು ದಾಟಿ ರಾಜತಾಂತ್ರಿಕ ಸ್ತರದಲ್ಲಿ ನಡೆಯಲಾರಂಭಿಸುತ್ತದೋ, ಆಗ ಪರಿಸ್ಥಿತಿ ವಿಷಮಿಸುತ್ತಿದೆ ಎಂದರ್ಥ. ಎರಡು ದೊಡ್ಡ ರಾಷ್ಟ್ರಗಳ ನಡುವೆ ರಾಜಕೀಯ ಸ್ತರದಲ್ಲಿ ಇಂಥ ಕಠಿನ ನಿರ್ಣಯಗಳು ಹೊರಬೀಳಲಾರಂಭಿಸಿದರೆ, ಇದರ ದೂರಗಾಮಿ ಪರಿಣಾಮಗಳೂ ಹೆಚ್ಚುತ್ತಾ ಹೋಗುತ್ತವೆ. ಸತ್ಯವೇನೆಂದರೆ, ಇದೇ ಮೊದಲ ಬಾರಿಗೆ ಅಮೆರಿಕ ಚೀನದ ವಿರುದ್ಧ ಇಂಥ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಚೀನ ಕೂಡ ಇದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡಿದ್ದು, ಒಟ್ಟಿನಲ್ಲಿ ಇವೆರಡರ ನಡುವಿನ ಬಿಕ್ಕಟ್ಟು ದೀರ್ಘ‌ಕಾಲ ಮುಂದುವರಿಯಲಿದೆ ಎಂಬ ಸೂಚನೆ ಸಿಕ್ಕಿದೆ.

ಅಮೆರಿಕ ಹಾಗೂ ಚೀನ ನಡುವಿನ ಜಗಳ ಕಳೆದ ಮೂರು ವರ್ಷಗಳಿಂದ ಜೋರಾಗಿಯೇ ನಡೆದಿದೆ. ವ್ಯಾಪಾರ ಸಮರವಂತೂ ನಿಲ್ಲುವ ಸೂಚನೆಯೇ ಸಿಗುತ್ತಿಲ್ಲ. ಒಟ್ಟಿನಲ್ಲಿ ಚೀನ ಹಾಗೂ ಅಮೆರಿಕ ನಡುವಿನ ಈ ಸಮರ “ವರ್ಚಸ್ಸಿ’ಗಾಗಿ ನಡೆದಿರುವಂಥದ್ದು. ಜಗತ್ತಿನ ದೊಡ್ಡಣ್ಣನ ಪಟ್ಟವನ್ನು ತನ್ನದಾಗಿಸಿಕೊಳ್ಳಬೇಕೆಂಬ ಗುರಿ ಚೀನಕ್ಕಿದೆ. ಈ ಸ್ಥಾನವನ್ನು ಕಳೆದುಕೊಳ್ಳದಿರಲು ಅಮೆರಿಕ ಸಕಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದಲ್ಲಿ ಈ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಎರಡನೇ ಬಾರಿ ಅಧ್ಯಕ್ಷರಾಗಲು ಟ್ರಂಪ್‌ ಏನಕೇನ ಪ್ರಯತ್ನಿಸುತ್ತಲೇ ಇದ್ದಾರೆ.

ಚೀನಿ ಅಧ್ಯಕ್ಷ ಜಿನ್‌ಪಿಂಗ್‌ ಅವರ ಸಮಕ್ಷಮದಲ್ಲಿ ಚೀನದ ಕಮ್ಯೂನಿಸ್ಟ್‌ ಪಾರ್ಟಿಯು ಚೀನದ ಮೇಲಿನ ತನ್ನ ಹಿಡಿತವನ್ನು ಹೆಚ್ಚಿಸಿಕೊಂಡಿದೆ. ಯಾವುದೇ ಕಾರಣಕ್ಕೂ ತಮ್ಮ ಆಡಳಿತ ದುರ್ಬಲವಾಗಿಲ್ಲ ಎನ್ನುವುದನ್ನು ಚೀನೀಯರಿಗೆ ತೋರಿಸಲೇಬೇಕಾದ ಅನಿವಾರ್ಯ ಅವರಿಗಿದೆ. ಈ ಕಾರಣಕ್ಕಾಗಿಯೇ,ಅಮೆರಿಕ ಹಾಗೂ ಚೀನ ನಡುವಿನ ಸಮರ ಮುಂದುವರಿಯಲಿದೆ. ಇದರ ಪರಿಣಾಮವು ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಹೇಗೆ ಆಗಲಿದೆಯೋ ನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next