Advertisement

ಬಹಳ ದಿನ ನಡೆಯಲ್ಲ ಸುಳ್ಳಿನ ಮೋಡಿ: ಶೈಲಜಾನಾಥ

04:36 PM Sep 09, 2017 | Team Udayavani |

ಸಿಂಧನೂರು: ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಧಾನಿಯಾಗಿರುವ ನರೇಂದ್ರ
ಮೋದಿ ಅವರು ಸುಳ್ಳು ಹೇಳುವ ಮೂಲಕವೇ ದೇಶದ ಆಡಳಿತವನ್ನು ಸುಲಲಿತವಾಗಿ ನಡೆಸಬಹುದು ಎಂದು
ನಂಬಿದಂತೆ ಕಾಣುತ್ತದೆ. ಸುಳ್ಳಿನ ಮೋಡಿ ಬಹಳ ದಿನ ನಡೆಯುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ
ಡಾ| ಶೈಲಜಾನಾಥ ಸಾಕೆ ಟೀಕಿಸಿದರು.

Advertisement

ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸಿಂಧನೂರು ನಗರ ಹಾಗೂ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೂತ್‌ ಮಟ್ಟದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಭಾರತದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಯಾವ ಅಹಾರ ಸೇವಿಸಬೇಕು. ಯಾವುದನ್ನು ತ್ಯಜಿಸಬೇಕು ಎಂದು ಸರ್ಕಾರವೇ ನಿರ್ಧರಿಸುತ್ತದೆ. ಯಾವುದೇ ಕಾರ್ಯಕ್ರಮಗಳಿಲ್ಲದೆ ಒಳ್ಳೆಯ ದಿನಗಳು ಬರುತ್ತವೆ ಎಂದರೆ ಅದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ನೋಟು ಅಮಾನ್ಯಿಕರಣದಿಂದ ದೇಶದ ಸ್ಥಿತಿ ಅಯೋಮಯವಾಗಿದೆ. ಜಿಡಿಪಿ ದರ 5.7ಕ್ಕೆ ಇಳಿದಿದೆ. ಇನ್ನೂ ಹತ್ತು ವರ್ಷ ಭಾರತದ ಆರ್ಥಿಕ
ಸ್ಥಿತಿ ಸುಧಾರಿಸುವುದು ಕಷ್ಟ ಸಾಧ್ಯವಾಗಿದೆ. ಇದು ಸಾಲದೆಂಬಂತೆ ಜಿಎಸ್‌ಟಿ ಜಾರಿಗೆ ತಂದು ವ್ಯಾಪಾರಸ್ಥರು
ಮತ್ತು ಮಧ್ಯಮ ವರ್ಗದವರು ಸೇರಿದಂತೆ ಬಡ ಕೂಲಿ ಕಾರ್ಮಿಕರು ಸಹ ತಮ್ಮ ಆದಾಯಕ್ಕೆ ತೆರಿಗೆ ಕಟ್ಟುವಂತ
ಪರಿಸ್ಥಿತಿ ನಿರ್ಮಿಸಲಾಗಿದೆ. ಇದರಿಂದ ಉದ್ಯೋಗ ಇಲ್ಲದಂತಾಗಿ ಜನರಿಗೆ ವಸ್ತುಗಳನ್ನು ಖರೀದಿಸುವ ಶಕ್ತಿ
ಕ್ಷಿಣವಾಗುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಕೆಳಮಟ್ಟಕ್ಕೆ ಹೋಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೆ ದೇಶದಲ್ಲಿ ಎಂತಹ ಅವಘಡಗಳು ಸಂಭವಿಸುತ್ತವೆ ಎನ್ನುವುದಕ್ಕೆ
ಮಹಾರಾಷ್ಟ್ರದ ದಾಬೋಲ್ಕರ್‌, ಡಾ| ಪನ್ಸಾರೆ, ಕರ್ನಾಟಕದ ಎಂ. ಎಂ. ಕಲಬುರ್ಗಿ ಮತ್ತು ಪತ್ರಕರ್ತೆ
ಗೌರಿ ಲಂಕೇಶ ಅವರ ಹತ್ಯೆಯೇ ನಿದರ್ಶನವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಕೆ.ಸಿ. ಕೊಂಡಯ್ಯ ಮಾತನಾಡಿ, ಬಿಜೆಪಿ ಮುಖಂಡರಿಗೆ ಅಭಿವೃದ್ಧಿ ಬಗ್ಗೆ ಅನುಭವವೇ ಇಲ್ಲ
ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಈಗಾಗಲೇ ಶೇ.80ರಷ್ಟು ಅನುಷ್ಠಾನಗೊಂಡಿವೆ. ತಾಲ್ಲೂಕಿನಲ್ಲಿಯೂ ಪ್ರತಿಯೊಂದು
ಹಳ್ಳಿಗೆ ಕುಡಿಯುವ ನೀರು, ರಸ್ತೆ, ಬಸ್‌ ಸೌಲಭ್ಯ ಶಾಲಾ ಕಟ್ಟಡ ಒದಗಿಸಲಾಗಿದೆ ಎಂದು ಹೇಳಿದರು.

Advertisement

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಬಿಜೆಪಿ ಮುಖಂಡರು ಮನೆ-ಮನೆಗೆ ಹೋಗಿ ಗ್ಯಾಸ್‌
ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕೆಪಿಸಿಸಿ ಕಾರ್ಯದರ್ಶಿಗಳಾದ ಅಲ್ಲಮಪ್ರಭು ಪಾಟೀಲ, ಸಿ.ಬಿ. ಪಾಟೀಲ, ಕೆ. ಕರಿಯಪ್ಪ, ಎ. ವಸಂತ ಕುಮಾರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಇರಬಗೇರಾ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ. ಕಾಳಿಂಗಪ್ಪ ವಕೀಲ, ತಾಪಂ ಅಧ್ಯಕ್ಷೆ ಬಸಮ್ಮ ಬಸವನಗೌಡ, ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್‌ ಜಾಫರ್‌ ಅಲಿ ಜಾಹಗೀರ್‌ದಾರ್‌, ಈಶಾನ್ಯ ಸಾರಿಗೆ ಸಂಸ್ಥೆ ನಿರ್ದೇಶಕ ರಾಮರೆಡ್ಡೆಪ್ಪ, ಜಿಪಂ ಮಾಜಿ ಸದಸ್ಯ ಚಂದುಸಾಬ್‌ ಮುಳ್ಳೂರು, ಮಸ್ಕಿ ಬ್ಲಾಕ್‌ ಕಾಂಗ್ರೆಸ್‌
ಅಧ್ಯಕ್ಷ ಬಸವಂತರಾಯ ಕುರಿ, ಆರ್‌. ತಿಮ್ಮಯ್ಯ ನಾಯಕ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾಜಿಮಲಿಕ್‌
ವಕೀಲ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next