ಸೋಮೇಶ್ವರ: ಕನ್ನಡ ಸಾಹಿತ್ಯ ಸಂಘಟನೆ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಉತ್ತಮ ಕಾರ್ಯ ನಡೆಸುತ್ತಿದ್ದು, ಸುಬ್ರಹ್ಮಣ್ಯದಲ್ಲಿ ಜರಗಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅರ್ಥಪೂರ್ಣವಾಗಿದೆ. ಲಾಂಛನದ ಆಶಯದಂತೆ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಹಿರಿಯ ಸಾಹಿತಿ ಜಾನಪದ ವಿದ್ವಾಂಸ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪುರಸ್ಕೃತ ಡಾ| ಅಮೃತ ಸೋಮೇಶ್ವರ ಅಭಿಪ್ರಾಯಪಟ್ಟರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾರ್ಚ್ 5, 6, 7ರಂದು ಜರಗಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಸೋಮೇಶ್ವರದಲ್ಲಿರುವ ಅಮೃತರ ಸ್ವಗೃಹ ಒಲುಮೆಯಲ್ಲಿ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ಜಾನಪದ ವಿದ್ವಾಂಸ ಡಾ| ಚಿನ್ನಪ್ಪ ಗೌಡ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ| ಶಿವರಾಮ ಕಾರಂತರ ಬಳಿಕ ನಮ್ಮ ನಡುವೆ ಇರುವ ಹಿರಿಯ ಸಾಹಿತಿ ಅಮೃತ ಸೋಮೇಶ್ವರರು. ಕನ್ನಡ ಮತ್ತು ತುಳುವಿಗೆ 80ಕ್ಕಿಂತಲೂ ಹೆಚ್ಚು ಕೃತಿಗಳನ್ನು ಕೊಟ್ಟಿರುವ ಸೋಮೇಶ್ವರರ ಅಧ್ಯಕ್ಷತೆಯಲ್ಲಿ ಈ ಹಿಂದೆ ಬೆಳ್ತಂಗಡಿಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿತ್ತು. ಅಂದಿನ ಆ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ| ಸುರೇಂದ್ರ ರಾವ್, ಲಾಂಛನವನ್ನು ಸಂಯೋಜಿಸಿದ ಕಲಾವಿದ ಜಾನ್ ಚಂದ್ರನ್, ನರ್ಮದಾ ಅಮೃತ ಸೋಮೇಶ್ವರ, ಜೀವನ್ ಸೋಮೇಶ್ವರ, ಸತ್ಯಾ ಜೀವನ್ ಉಪಸ್ಥಿತರಿದ್ದರು. ಈ ಸಂದರ್ಭ ಅಮೃತರು ಬರೆದ ಭಾವಗಾನವೊಂದನ್ನು ರತ್ನಾವತಿ ಜೆ. ಬೈಕಾಡಿ ಅವರು ಹಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಬೈಕಾಡಿ ಜನಾರ್ದನ ಆಚಾರ್ ವಂದಿಸಿದರು.