Advertisement

ಬಸ್ಸು ತಂಗುದಾಣ ನಿರ್ವಹಣೆಗೆ ಸ್ಥಳೀಯ ಯುವಕನ ಪರಿಶ್ರಮ

01:40 AM Jun 29, 2019 | Sriram |

ಕೋಟ: ಸರಕಾರಿ ಸ್ವತ್ತುಗಳೆಂದರೆ ನಿರ್ವಹಣೆ ಇಲ್ಲದೆ ಸದಾ ಗಲೀಜಿನಿಂದ ಕೂಡಿದ್ದು, ಉಪಯೋಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಎಲ್ಲ ಕಡೆಯೂ ಇರುತ್ತದೆ. ಆದರೆ ಕೋಟ ಸಮೀಪ ವಡ್ಡರ್ಸೆಯಲ್ಲಿರುವ ಸರಕಾರಿ ಬಸ್ಸು ತಂಗುದಾಣವೊಂದು ಸ್ಥಳೀಯ ಯುವಕನೋರ್ವನ ಶ್ರಮದಿಂದ ಪುಸ್ತಕ ಭಂಡಾರ, ಕುಡಿಯುವ ನೀರು, ಕಸದ ಬುಟ್ಟಿ, ಪ್ರತಿದಿನ ಸ್ವಚ್ಛತೆ ಮುಂತಾದ ವ್ಯವಸ್ಥೆಗಳೊಂದಿಗೆ ಜನಸ್ನೇಹಿಯಾಗಿದೆ.

Advertisement

ಯುವಕನ ಶ್ರಮ
2016-17ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ವರ್ಷದ ಹಿಂದೆ ಈ ತಂಗುದಾಣ ನಿರ್ಮಿಸಲಾಗಿತ್ತು. ಉದ್ಘಾಟನೆ ದಿನದಿಂದಲೇ ಸ್ಥಳೀಯ ರಿಕ್ಷಾ ಚಾಲಕ ರಘು ವಡ್ಡರ್ಸೆ ಎಂಬವರು ಇದರ ನಿರ್ವಹಣೆಯಲ್ಲಿ ತೊಡಗಿದ್ದಾರೆ. ತನ್ನ ಸ್ವಂತ ಖರ್ಚಿನಲ್ಲಿ ಕಪಾಟು ಇರಿಸಿ ಅದರಲ್ಲಿ ದಿನಪ್ರತಿಕೆ, ವಾರಪತ್ರಿಕೆ. ಕಥೆ-ಕಾದಂಬರಿ ಇತ್ಯಾದಿ ಸಂಗ್ರಹಿಸಿದ್ದಾರೆ. ಮಣ್ಣಿನ ಮಡಿಕೆಯಲ್ಲಿ ನೀರಿನ ವ್ಯವಸ್ಥೆ, ಸ್ವಚ್ಛತೆಗೆ ಕಸದ ಬುಟ್ಟಿ ಇರಿಸಿದ್ದಾರೆ. ತಂಗುದಾಣವನ್ನು ತಾವೇ ಸ್ವಚ್ಛಗೊಳಿಸುತ್ತಿದ್ದಾರೆ. ಈತನ ಕಾರ್ಯಕ್ಕೆ ಸ್ನೇಹಿತರು ಸಹಕಾರ ನೀಡುತ್ತಾರೆ.

ಈ ಸ್ಥಳದಲ್ಲಿ ತಂಗುದಾಣ ಅಗತ್ಯವಿದ್ದು ನಿರ್ಮಿಸಿದರೆ, ಸ್ವಚ್ಛತೆ ಹೊಣೆ ನನ್ನದೇ ಎಂದು ರಘು ಹೇಳಿದ್ದರು. ಬಳಿಕ ಸ್ಥಳೀಯ ಗ್ರಾ.ಪಂ.ಸದಸ್ಯ ಕೋಟಿ ಪೂಜಾರಿಯವರು ಸಂಸದರಿಗೆ ಮನವಿ ಮಾಡಿ ತಂಗುದಾಣ ನಿರ್ಮಾಣವಾಗುವಂತೆ ಮಾಡಿದ್ದರು. ಇದೀಗ ದಿನಪತ್ರಿಕೆಗಳ ವೆಚ್ಚವನ್ನು ಕೋಟಿ ಪೂಜಾರಿಯವರೇ ಭರಿಸುತ್ತಿದ್ದಾರೆ.

ಜನಸ್ನೇಹಿ
ದಿನಪತ್ರಿಕೆ, ಪುಸ್ತಕಗಳನ್ನು ಓದುವ ಸಲುವಾಗಿಯೇ ಹಲವಾರು ಮಂದಿ ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಯಾಣಿಕರು, ವಿದ್ಯಾರ್ಥಿಗಳ ಬಾಯಾರಿಕೆಯನ್ನೂ ತಂಗುದಾಣ ನೀಗುತ್ತದೆ. ಇದೀಗ ಹೆಚ್ಚಿನ ಪುಸ್ತಕ ಗಳನ್ನು ಇಡಲು ಹಾಗೂ ಮಳೆ ನೀರು ತಂಗುದಾಣದೊಳಗೆ ಬಾರ ದಂತೆ ತಡೆಯಲು ವ್ಯವಸ್ಥೆ ಮಾಡುವ ಕುರಿತು ಯುವಕರು ಚಿಂತನೆ ನಡೆಸುತ್ತಿದ್ದಾರೆ.
ಸರಕಾರಿ ಸೊತ್ತುಗಳ ಮೇಲೆ ಪ್ರೀತಿಯಿರಲಿ

ಸರಕಾರಿ ಸ್ವತ್ತುಗಳೆಂದರೆ ಜನರಿಗೆ ತುಂಬಾ ಅಸಡ್ಡೆ ಇರುತ್ತದೆ. ಆದರೆ ವಡ್ಡರ್ಸೆ ತಂಗುದಾಣದಂತೆ ಪ್ರತಿ ಊರಿನಲ್ಲೂ ಸರಕಾರಿ ವಸ್ತುವನ್ನು ಜೋಪಾನ ಮಾಡುವ ಯುವಕರು, ಸಂಘಟನೆಗಳು ಹುಟ್ಟಿಕೊಂಡರೆ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಬಹುದು. ಹಾಗೂ ಬದಲಾವಣೆಗೆ ಕಾರಣವಾಗುತ್ತದೆ.
-ಕೋಟಿ ಪೂಜಾರಿ,ಸ್ಥಳೀಯ ವಾರ್ಡ್‌ ಸದಸ್ಯರು ವಡ್ಡರ್ಸೆ ಗ್ರಾ.ಪಂ.

ಜನಸ್ನೇಹಿ ಪರಿಕಲ್ಪನೆ

ಎಲ್ಲ ಊರಿನಲ್ಲೂ ಬಸ್ಸು ತಂಗುದಾಣ ನಿರ್ಮಾಣವಾಗಿ ವರ್ಷದೊಳಗೆ ಗಲೀಜು ಕೊಂಪೆಯಾಗಿರುತ್ತದೆ. ಆದರೆ ನಮ್ಮೂರಿನದ್ದು ಹಾಗಾಗಬಾರದು, ಜನಸ್ನೇಹಿಯಾಗಿರಬೇಕೆಂದು ಒಂದಷ್ಟು ಪುಸ್ತಕ, ಕುಡಿಯುವ ನೀರು, ಪ್ರತಿದಿನ ಸ್ವಚ್ಛತೆ, ಕಸದ ಬುಟ್ಟಿಯ ವ್ಯವಸ್ಥೆ ಮಾಡಿದೆ. ಇದನ್ನು ಜನರು ಚೆನ್ನಾಗಿ ಉಪಯೋಗಿಸುತ್ತಿದ್ದಾರೆ. ನಿರ್ವಹಣೆ ಮಾಡಲು ಖುಷಿಯಾಗುತ್ತದೆ.
-ರಘು ವಡ್ಡರ್ಸೆ, ಜನಸ್ನೇಹಿ ತಂಗುದಾಣದ ಪರಿಕಲ್ಪನೆಗಾರ

-ರಾಜೇಶ್ ಗಾಣಿಗ ಅಚ್ಲಾಡಿ
Advertisement

Udayavani is now on Telegram. Click here to join our channel and stay updated with the latest news.

Next