Advertisement

ನಮ್ಮ ಆಡಳಿತದಲ್ಲಿ ಲಾಬಿಗೆ ಅವಕಾಶವಿಲ್ಲ

02:46 PM Jun 27, 2018 | |

ಸಾಗರ: ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೊಸದಾಗಿ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏನೋ ಲಾಬಿ ನಡೆಯುತ್ತಿದೆ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ. ಅಂತಹ ಲಾಬಿಗಳು ನನ್ನ ಆಡಳಿತಾವಧಿಯಲ್ಲಿ ನಡೆಯಬಾರದು ಎಂದು ಶಾಸಕ ಹರತಾಳು ಹಾಲಪ್ಪ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯ ದಂಪತಿಗಳು ಉಪವಿಭಾಗೀಯ ಆಸ್ಪತ್ರೆಗೆ ವರ್ಗವಾಗಿ ಬರಲು ಸಿದ್ಧವಿದ್ದರೂ ಅವರ ದಿಕ್ಕು ತಪ್ಪಿಸುವ ಕೆಲಸವನ್ನು ಯಾರೋ ಆಸ್ಪತ್ರೆಯಲ್ಲಿ ಮಾಡಿದ್ದಾರೆ. ನಾನು ಬಂದು ತರಾಟೆಗೆ ತೆಗೆದುಕೊಂಡ ನಂತರ ಅವರು ವರ್ಗವಾಗಿ ಬಂದಿದ್ದಾರೆ. ಏನು ವ್ಯವಹಾರ ನಡೆಯುತ್ತದೆ ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಸಿವಿಲ್‌ ಸರ್ಜನ್‌ ಡಾ| ಪ್ರಕಾಶ್‌ ಬೋಸ್ಲೆ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನ ಎಲ್ಲ ಆಸ್ಪತ್ರೆಗಳಲ್ಲಿ ಹುಚ್ಚು ನಾಯಿ ಕಡಿತಕ್ಕೆ ಹಾಗೂ ಹಾವು ಕಚ್ಚಿದ್ದಕ್ಕೆ ಅಗತ್ಯ ಚುಚ್ಚುಮದ್ದುಗಳು ಸದಾ ಸಂಗ್ರಹದಲ್ಲಿರಬೇಕು. ಆಸ್ಪತ್ರೆಗಳಲ್ಲಿ ಕೊರತೆಯಿರುವ ವೈದ್ಯ ಸಿಬ್ಬಂದಿಗಳ ಭರ್ತಿಗೆ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರಿದ್ದರೂ ನರ್ಸ್‌ಗಳು ಇಲ್ಲ. ನರ್ಸ್‌ಗಳ ಭರ್ತಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ತಾಳಗುಪ್ಪ ಹೋಬಳಿಯಲ್ಲೂ ವೈದ್ಯರ ಕೊರತೆ ಇದೆ. ಕೆಲವು ಕಡೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುವ ವೈದ್ಯರು ಇದ್ದಾರೆ. ಆದರೆ ಅವರಿಗೆ ಸಹಕಾರ ನೀಡಲು ನರ್ಸ್‌ ಸೇರಿದಂತೆ ಸಿಬ್ಬಂದಿಗಳು ಇಲ್ಲ. ಇದರ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಜಿಪಂ ಸದಸ್ಯ ರಾಜಶೇಖರ್‌ ಗಾಳಿಪುರ ಮಾತನಾಡಿ, ಸೈದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಕೆಲಸ ಮಾಡುವ ವೈದ್ಯರಿದ್ದರು ಅಲ್ಲಿದ್ದ ದಾದಿಯನ್ನು ತ್ಯಾಗರ್ತಿಗೆ ವರ್ಗಾವಣೆ ಮಾಡಲಾಗಿದೆ. ವೈದ್ಯರ ಮತ್ತು ನರ್ಸ್‌ ಕೆಲಸವನ್ನು ಒಬ್ಬರೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಜಿಪಂ ಸದಸ್ಯೆ ಅನಿತಾ ಕುಮಾರಿ ಮಾತನಾಡಿ, ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್‌ ಆದ ವೈದ್ಯರು ಇಲ್ಲ. ಆಸ್ಪತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವುದರಿಂದ ಅಪಘಾತ ಇನ್ನಿತರ ತುರ್ತು ಸಂದರ್ಭದಲ್ಲಿ ಆಯುಷ್‌ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ದೂರು ಇದೆ. ಹೊಸ ವೈದ್ಯರು ಬರುವ ತನಕ ತುರ್ತು ಸಂದರ್ಭದಲ್ಲಿ ಅಕ್ಕಪಕ್ಕದ ಆಸ್ಪತ್ರೆಗಳಿಂದ ಎಂಬಿಬಿಎಸ್‌ ಆದ ವೈದ್ಯರನ್ನು ಕರ್ತವ್ಯಕ್ಕೆ ನೇಮಿಸಬೇಕು ಎಂದು
ಒತ್ತಾಯಿಸಿದರು.

ಜಿಪಂ ಸದಸ್ಯ ಆರ್‌.ಸಿ.ಮಂಜುನಾಥ್‌ ಮಾತನಾಡಿ, ಎಪಿಎಂಸಿಯ ಆಹಾರ ಇಲಾಖೆ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ 2 ಸಾವಿರ ಚೀಲ ಗೋ  ಹುಳ ಹಿಡಿದು ಉಪಯೋಗಕ್ಕೆ ಬಾರದಂತೆ ಆಗಿತ್ತು. ಈ ಸಂಬಂಧ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರಿಬ್ಬರೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೂರ್ಣ ವಿವರ ನೀಡುವಂತೆ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಿ, ಈ ಬಗ್ಗೆ ಸರ್ಕಾರಕ್ಕೆ ತನಿಖೆ ನಡೆಸುವಂತೆ ಪತ್ರ ಬರೆಯುವುದಾಗಿ ತಿಳಿಸಿದರು.

Advertisement

ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಈ ಸಾಲಿನಿಂದ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್‌ ಮಾಧ್ಯಮ ಪ್ರಾರಂಭ ಮಾಡುವ ಚಿಂತನೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಶಾಲೆಗಳಲ್ಲೂ ಇಂಗ್ಲಿಷ್‌ ಬೋಧನೆ ಮಾಡುವ ಶಿಕ್ಷಕರನ್ನು ಕಡ್ಡಾಯ ನೇಮಕ ಮಾಡಬೇಕು. ಕರ್ತವ್ಯ ನಿರ್ವಹಿಸುತ್ತಿದ್ದ ಇಂಗ್ಲಿಷ್‌ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದಂತೆ ಸೂಚನೆ ನೀಡಿದರು. 

ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಕೆ.ಎಚ್‌. ಪರಶುರಾಮ್‌, ತಾಪಂ ಇಒ ಮಂಜುನಾಥಸ್ವಾಮಿ, ಪೌರಾಯುಕ್ತ ಎಸ್‌. ರಾಜು ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next