ಬೆಂಗಳೂರು: ರೈತರ ಸಾಲ ಮನ್ನಾ ಯೋಜನೆಯ ಪೂರ್ಣ ಲಾಭ ರೈತರಿಗೆ ಸಿಗಬೇಕೇಹೊರತು ಮಧ್ಯವರ್ತಿಗಳ ಪಾಲಾಗಬಾರದೆಂಬ ಕಾರಣಕ್ಕೆ ಸಾಲ ಮನ್ನಾದ ಲಾಭ ಪಡೆಯುವ ರೈತರ ಹೆಸರುಗಳನ್ನು ಆಯಾ ಸಹಕಾರ ಬ್ಯಾಂಕ್ ಅಥವಾ ಸೊಸೈಟಿಗಳ ನೋಟಿಸ್ ಬೋರ್ಡ್‌ಗಳಲ್ಲಿ ಪ್ರಕಟಿಸಲು ಸರ್ಕಾರ ನಿರ್ಧರಿಸಿದೆ.
ಮನ್ನಾ ಆಗುವ ಸಾಲದ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುವುದರೊಂದಿಗೆ ಯಾವ ರೈತರಿಗೆ ಎಷ್ಟು ಸಾಲ ಮನ್ನಾ ಆಗಿದೆ ಮತ್ತು ಯಾವತ್ತಿಗೆ ಅದು ಜಾರಿಯಾಗುತ್ತದೆ ಎಂಬ ಅಂಶಗಳು ರೈತರ ಹೆಸರಿನ ಸಹಿತ ನೋಟಿಸ್ ಬೋಡ್ ìಗಳಲ್ಲಿ ಹಾಕಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರೈತರ ಸಾಲ ಮನ್ನಾ ಮಾಡಿದಾಗ ಕೆಲವು ಕಡೆ ಸೊಸೈಟಿ ಹಾಗೂ ಸಹಕಾರ ಬ್ಯಾಂಕ್‌ನ ಕಾರ್ಯದರ್ಶಿಗಳು ರೈತರ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡಿರುವ ಉದಾಹರಣೆಗಳಿವೆ. ನೇರವಾಗಿ ರೈತರ ಖಾತೆಗೆ ಸಾಲ ಮನ್ನಾದ ಮೊತ್ತ ಪಾವತಿಸಿದರೂ ಕ್ರೆಡಿಟ್ ರಶೀದಿ ಕಾರ್ಯದರ್ಶಿಗಳ ಕೈಯ್ಯಲ್ಲೇ ಇರುವುದರಿಂದ ರೈತರಿಂದ ಸಹಿ ಹಾಕಿಸಿಕೊಂಡು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾವ ಸೊಸೈಟಿಯಲ್ಲಿ ಎಷ್ಟು ರೈತರ ಸಾಲ ಮನ್ನಾ ಆಗುತ್ತದೆ ಮತ್ತು ಎಷ್ಟು ಸಾಲ ಮನ್ನಾ ಆಗುತ್ತದೆ ಎಂಬುದನ್ನು ನೋಟಿಸ್ ಬೋರ್ಡ್ ನಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.
ಸಾಲ ಮನ್ನಾ ಕುರಿತ ಸರ್ಕಾರಿ ಆದೇಶದೊಂದಿಗೆ ಹೊರಡಿಸುವ ಮಾರ್ಗಸೂಚಿಯಲ್ಲಿ ಈ ಅಂಶಗಳನ್ನು ಅಳವಡಿಸಲಾಗುವುದು. ಒಂದೊಮ್ಮೆ ಕಾರ್ಯದರ್ಶಿಗಳು ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದರೆ ತನಿಖೆ ನಡೆಸಿ ಅಕ್ರಮ ಎಸಗಿದವರನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು. ಸಾಲ ಮನ್ನಾದ ಸಂಪೂರ್ಣ ಅನುಕೂಲ ರೈತರಿಗೆ ಸಿಗಬೇಕೆಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಲ ಮನ್ನಾ ಜತೆಗೆ ರೈತರಿಗೆ ಋಣಮುಕ್ತ ಪತ್ರವನ್ನೂ ನೀಡಲಾಗುತ್ತದೆ ಎಂದರು.
9448 ಕೋಟಿ ರೂ. ಮನ್ನಾ: ಒಂದು ಲಕ್ಷ ರೂ.ವರೆಗಿನ ಚಾಲ್ತಿ ಸಾಲ ಮನ್ನಾದಿಂದ ಸುಮಾರು 20 ಲಕ್ಷ ರೈತರ 9448 ಕೋಟಿ ರೂ. ಸಾಲ ಮನ್ನಾ ಆಗಲಿದೆ ಎಂದು ಸಚಿವರು ತಿಳಿಸಿದರು.