Advertisement

ಮಾರ್ಚ್‌ ವೇಳೆಗೆಜೆಡಿಎಸ್‌ ಪಟ್ಟಿ ಬಿಡುಗಡೆ

03:45 AM Jan 24, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಜೆಡಿಎಸ್‌ 105 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ಫೆಬ್ರವರಿ ಮಾಸಾಂತ್ಯ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಬೆಂಗಳೂರು ಇಲ್ಲವೇ ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶ ನಡೆಸಿ ಬಿಡುಗಡೆ ಮಾಡಲು ಕೋರ್‌ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ.

Advertisement

ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ, 105 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಸಮಾಲೋಚನೆ ನಡೆಸಿ ಸಮಾವೇಶ ನಡೆಸಿ ಪಟ್ಟಿ ಬಿಡುಗಡೆ ಮಾಡುವುದು ಹಾಗೂ 105 ಅಭ್ಯರ್ಥಿಗಳಿಗೆ ಚುನಾವಣೆ ಎದುರಿಸುವ ಕುರಿತು ರಣತಂತ್ರ ರೂಪಿಸುವ ಸಂಬಂಧ ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಬಿಟ್ಟು ಉಳಿದ 32 ಹಾಲಿಶಾಸಕರಿಗೂ ಟಿಕೆಟ್‌ ನೀಡುವುದು. ತಪ್ಪೊಪ್ಪಿಗೆ ಬರೆದುಕೊಟ್ಟಿರುವ ಗೋಪಾಲಯ್ಯ ಅವರ ಬಗ್ಗೆ ಶಿಸ್ತು ಸಮಿತಿ ನೀಡುವ ಶಿಫಾರಸು ಆಧರಿಸಿ ಟಿಕೆಟ್‌ ನೀಡುವುದು. ಉಳಿದಂತೆ ಕಳೆದ ಚುನಾವಣೆಯಲ್ಲಿ ಐದು ಸಾವಿರ ಮತಗಳ ಅಂತರದೊಳಗೆ ಸೋತವರಿಗೆ ಪ್ರಥಮ ಆದ್ಯತೆ ನೀಡುವ ತೀರ್ಮಾನ ಮಾಡಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌
ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಬಗ್ಗೆ ಕೋರ್‌ ಕಮಿಟಿಯಲ್ಲಿ ಚರ್ಚಿಸಲಾಗಿದೆ. 105 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಫೆಬ್ರವರಿ ಮಾಸಾಂತ್ಯ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಮೊದಲ ಹಂತದ ಪಟ್ಟಿ ಬಿಡುಗಡೆ ಬೃಹತ್‌ ಸಮಾವೇಶದಲ್ಲೇ ಮಾಡಬೇಕೆಂಬ ಬಗ್ಗೆಯೂ ನಿರ್ಧರಿಸಲಾಗಿದ್ದು ಬೆಂಗಳೂರು ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಲ್ಕೂ ಕಂದಾಯ ವಿಭಾಗಗಳಿಗೆ ಉಸ್ತುವಾರಿ ನೇಮಿಸಲಾಗಿತ್ತು. ಆ ಸಮಿತಿ ನೀಡಿರುವ ಶಿಫಾರಸು ಹಾಗೂ ನಾನು ನನ್ನದೇ ಆದ ಮೂಲಗಳಿಂದ ಸಂಗ್ರಹಿಸಿದ
ಮಾಹಿತಿ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳಲ್ಲಿ ಒಂದೊಂದು ಕಡೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದಾರೆ. ಅಸಮಾಧಾನ ಇಲ್ಲದೆ ಅಭ್ಯರ್ಥಿಗಳ ಆಯ್ಕೆ ಮಾಡಲು ಎಲ್ಲ ಆಕಾಂಕ್ಷಿಗಳ ಜತೆ ವೈಯಕ್ತಿಕವಾಗಿ ಕುಳಿತು ಮಾತನಾಡಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಬಗ್ಗೆಯೂ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು. ನಾನು ಚಾಮರಾಜನಗರ ಜಿಲ್ಲಾ ನಾಯಕರ ಜತೆ ನಡೆಸಿದ ಮಾತುಕತೆಯ ವಿವರ ಸಭೆಯ ಮುಂದಿಟ್ಟಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ವಾದದ ಜತೆಗೆ ಮುಂದೆ ಏಳೆಂಟು ತಿಂಗಳಿಗೆ ಮತ್ತೆ ಚುನಾವಣೆ
ಎದುರಾಗುವುದರಿಂದ ಅಭ್ಯರ್ಥಿ ಕಣಕ್ಕಿಳಿಸಬೇಕಾ ಎಂಬ ವಾದವೂ ಇದೆ. ಅಂತಿಮವಾಗಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅನಿಸಿಕೆ ಪ್ರಕಾರ ತೀರ್ಮಾನ ಕೈಗೊಳ್ಳಲು ಕೋರ್‌ ಕಮಿಟಿಯಲ್ಲಿ ನಿರ್ಧರಿಸಲಾಯಿತು.

Advertisement

ನಂಜನಗೂಡು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಸಾಕಷ್ಟು ಪುಯತ್ನ ನಡೆದಿದೆ. ಆದರೆ, ಕೇಶವಮೂರ್ತಿ ಅವರು ನಾನು ನಡೆಸಿದ ಸಭೆಗೆ ಆಗಮಿಸಿ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷ ಜೆಡಿಎಸ್‌, ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಕೋಟ್ಯಂತರ ರೂ. ಖರ್ಚು ಮಾಡುತ್ತವೆ. ಆದರೆ, ನಮ್ಮ ಅಭ್ಯರ್ಥಿಗೆ ಅಷ್ಟು ಆರ್ಥಿಕ ಶಕ್ತಿಯಿಲ್ಲ, ಆದರೂ ಕಾರ್ಯಕರ್ತರು ನಾವೇ ವೆಚ್ಚ ಮಾಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲವನ್ನೂ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗೋಪಾಲಯ್ಯ ಅವರಿಗೆ ಕ್ಷಮಿಸಿದಂತೆ ಅಮಾನತುಗೊಂಡ ಏಳು ಶಾಸಕರೂ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರೆ ಕ್ಷಮೆ ಇದೆಯೇ ಎಂಬ ಪ್ರಶ್ನೆಗೆ, ಗೋಪಾಲಯ್ಯ ಪ್ರಕರಣ ಬೇರೆ, ಉಳಿದವರ ಪ್ರಕರಣ ಬೇರೆ. ಅವರ ಬಗ್ಗೆ ನಾವೇನೂ ಮಾತನಾಡಲು ಹೋಗುವುದಿಲ್ಲ ಎಂದಷ್ಟೇ ಹೇಳಿದರು.

ವಿಧಾನಸಭೆ ಚುನಾವಣೆಗೆ ಕುಟುಂಬದಲ್ಲಿ ಸ್ಪರ್ಧೆ ಬಗ್ಗೆ ಕೇಳಿದಾಗ, ಈಗಾಗಲೇ ಹೇಳಿದ್ದೇನೆ. ನಾವಿಬ್ಬರೇ ಸ್ಪರ್ಧಿಸುತ್ತೇವೆ. ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷ ಎಂಬ ಆರೋಪ ಕೇಳಿ ಸಾಕಾಗಿದೆ. ಚನ್ನಪಟ್ಟಣದಲ್ಲೂ
ಅನಿತಾಕುಮಾರಸ್ವಾಮಿ ಅವರನ್ನೇ ಕಣಕ್ಕಳಿಸಿ ಎಂಬ ಒತ್ತಾಯ ಕೇಳಿಬಂದಿತು. ನಾನು ಸ್ಪಷ್ಟವಾಗಿ ನಿರಾಕರಿಸಿದ್ದೇನೆ. ನಮ್ಮ ಕುಟುಂಬ ಸದಸ್ಯರ ಸ್ಪರ್ಧೆ ಬಗ್ಗೆ ಗೊಂದಲ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next