ಬೆಂಗಳೂರು: ಕಾಂಗ್ರೆಸ್ ಬಾಕಿ ಉಳಿಸಿಕೊಂಡಿರುವ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಹಿನ್ನೆಲೆಯಲ್ಲಿ ಆಗಿರುವ ಬೆಳವಣಿಗೆ ಗಮನಿಸಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಸೋಮವಾರ ಹಾಗೂ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸರಣಿ ಸಭೆ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ಬಾಕಿ 58 ಕ್ಷೇತ್ರಗಳ ಪೈಕಿ ಬಹುತೇಕ 30 ಕ್ಷೇತ್ರಗಳಿಗೆ ಕಣಕ್ಕಿಳಿಸುವ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ತೀವ್ರ ಸಮಸ್ಯೆಯಾಗಿರುವ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆಘಳಿಗೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಬಾಕಿ ಉಳಿದ ಕ್ಷೇತ್ರಗಳ ಅಭ್ಯರ್ಥಿ ಗಳ ಪಟ್ಟಿ ಅಂತಿಮಗೊಳಿಸುವುದಕ್ಕೆ ಹೈಕಮಾಂಡ್ ಸೂಚನೆ ಮೇರೆಗೆ ಹೊಸದಿಲ್ಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ಬಳಿಕ 30 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಒಮ್ಮತ ಮೂಡಿದೆ. ಆದರೂ ಹಾಲಿ ಶಾಸಕರ 5 ಕ್ಷೇತ್ರಗಳ ಟಿಕೆಟ್ ವಿಷಯದಲ್ಲಿ ಮಾತ್ರ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಒಮ್ಮತ ಮೂಡದ ಕಾರಣ ಮತ್ತೆ ಮುಂದೂಡಲ್ಪಟ್ಟಿದೆ.
ವಿಶೇಷವಾಗಿ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವುದಕ್ಕೆ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದರೆ ಸಿದ್ದರಾಮಯ್ಯ ಅವರು ಅಖಂಡ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್‌ಗೆ ಕೊಡಬೇಕೆಂಬುದು ಡಿಕೆಶಿ ಹಠ. ಈ ಕಗ್ಗಂಟಿನಿಂದಾಗಿ ಮಹದೇವಪುರದಲ್ಲಿ ಮುಳಬಾಗಿಲು ಶಾಸಕ ಎಚ್. ನಾಗೇಶ್‌ಗೆ ಕ್ಷೇತ್ರ ತ್ಯಾಗ ಮಾಡಿದ್ದ ಎ.ಸಿ. ಶ್ರೀನಿವಾಸ್‌ಗೆ ಟಿಕೆಟ್ ಕೊಡುವುದು ಸೂಕ್ತ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ವಾಸ್ತವವಾಗಿ ಶ್ರೀನಿವಾಸ್ ಅವರನ್ನು ಮಹದೇವಪುರದಿಂದ ದೇವನಹಳ್ಳಿಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ಘೋಷಿಸಿದ್ದ ರಿಂದ ಶ್ರೀನಿವಾಸ್ ಮತ್ತೆ ಅತಂತ್ರರಾ ದರು. ಹೀಗಾಗಿ ಇಬ್ಬರಿಗೂ (ಅಖಂಡ-ಸಂಪತ್‌ರಾಜ್) ಟಿಕೆಟ್ ಕೊಡದೆ ಶ್ರೀನಿವಾಸ್‌ಗೆ ಕೊಡ ಬೇಕೆಂದು ಒಟ್ಟಾರೆ ಅಭಿಪ್ರಾಯ ವ್ಯಕ್ತವಾಗಿದೆ.
ಕುಂದಗೋಳದಲ್ಲಿ ಕುಸುಮ ಶಿವಳ್ಳಿ ಬದಲಿಗೆ ಮತ್ತೂಬ್ಬರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಹರಿಹರದಲ್ಲಿ ರಾಮಪ್ಪ ಬದಲಿಗೆ ತಮಗೆ ಟಿಕೆಟ್ ಕೊಡಬೇಕೆಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಲಾಬಿ ನಡೆಸುತ್ತಿರುವುದು ಹೊಸ ತಲೆನೋವಾಗಿದೆ.