Advertisement
ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು-ಕೊಡಗು ಕ್ಷೇತ್ರದಲ್ಲಿ, ಪಕ್ಷದೊಳಗಿನ ಅಸಮಾಧಾನಗಳ ನಡುವೆಯೇ ಪ್ರತಾಪ ಸಿಂಹ ಅವರು ದ್ವಿತೀಯ ಬಾರಿಗೆ ಮೋದಿ ಅಲೆಯಲ್ಲಿ ತೇಲಿ ಗೆಲುವಿನ ದಡ ಸೇರಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಎದುರಾಗಬಹುದಾದ ಆತಂಕ ಮತ್ತು ಪಕ್ಷದೊಳಗೆಯೇ ಪ್ರತಾಪಸಿಂಹ ಅವರ ವಿರುದ್ಧ ನಿರ್ಮಾಣವಾಗಿದ್ದ ಅಸಮಾಧಾನ ಬಿಜೆಪಿಯನ್ನು ಸೋಲಿಸಿ ಬಿಡಬಹುದು ಎನ್ನುವ ನಿರೀಕ್ಷೆಗಳು ಹುಸಿಯಾಗಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು ಸರಿ ಸುಮಾರು 1.46 ಲಕ್ಷ ಮತಗಳ ಅಂತರದಿಂದ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿಜಯಶಂಕರ್ ಅವರ ವಿರುದ್ಧ ಸ್ಪಷ್ಟ ಗೆಲುವನ್ನು ದಾಖಲಿಸಿದ್ದಾರೆ.
Related Articles
Advertisement
ಮೈಸೂರು -ಕೊಡಗು ಕ್ಷೇತ್ರದ ಚುನಾವಣೆಯ ಉದ್ದಕ್ಕೂ ಇಲ್ಲಿನ ಎರಡು ಕ್ಷೇತ್ರಗಳಲ್ಲಿ ಜಾತಿ ಧರ್ಮದ ವಿಚಾರಗಳು ಹೆಚ್ಚಾಗಿ ಕೇಳಿ ಬಂದಿಲ್ಲ.ಇದಕ್ಕೂ ಮಿಗಿಲಾದ ಕುತೂಹಲವೆಂದರೆ ಮತದಾರ ಅಭ್ಯರ್ಥಿಯ ಹೆಸರು ಪ್ರಸ್ತಾಪಿಸಿದ್ದು ವಿರಳವೆ. ಬದಲಾಗಿ ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎನ್ನುವ ಘೋಷಣೆಗೆ ತಕ್ಕಂತೆ ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಮೋದಿಯ ಹೆಸರಿನಲ್ಲಿ ಬಿಜೆಪಿಗೆ ಮತ ಚಲಾಯಿಸಿರುವುದು ಪ್ರತಾಪ ಸಿಂಹ ಗೆಲುವಿನ ನಗುವಿಗೆ ಕಾರಣವಾಗಿದೆ. ಚುನಾವಣಾ ಪೂರ್ವದಲ್ಲಿ ಪ್ರತಾಪ ಸಿಂಹ ವಿರುದ್ಧವಾಗಿ ಮೂಡಿದ್ದ ಅಭಿಪ್ರಾಯಗಳು ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿನ ವಿಶ್ವಾಸವನ್ನು ಮೂಡಿಸಿತ್ತು. ಹೀಗಿದ್ದೂ, ಮೈತ್ರಿ ಎಂಬುದೇ ಇಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದುದರಿಂದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್‌ರಿಗೆ ಗೆಲುವಿನ ಸಮೀಪಕ್ಕೂ ಹೋಗಲು ಸಾಧ್ಯವಾಗಿಲ್ಲ. ಮಂಡ್ಯ ಚುನಾವಣೆಯಲ್ಲಿನ ಮೈತ್ರಿಗಳೊಳಗಿನ ಕಚ್ಚಾಟಗಳು ಮೈಸೂರು-ಕೊಡಗು ಕ್ಷೇತ್ರದ ಮೇಲೆ ನಿಚ್ಚಳ ಪರಿಣಾಮಗಳನ್ನು ಬೀರಿದೆ. ಮನಃಪೂರ್ವಕವಾಗಿ ಕೊಡಗಿನಲ್ಲಿ ವಿಜಯಶಂಕರ್ ಪರ ಜೆಡಿಎಸ್‌ನಿಂದ ಕೆಲಸ ನಡೆಯದಿರುವುದಕ್ಕೆ ಫಲಿತಾಂಶ ಕೈಗನ್ನಡಿ ಹಿಡಿಯುತ್ತಿದ್ದರೆ, ಇದೇ ಸಂದರ್ಭ ಕಾಂಗ್ರೆಸ್ ಪಕ್ಷ ತನ್ನ ತಾಕತ್ತಿಗೆ ತಕ್ಕಂತ ಸಂಘಟನೆಯ ಮೂಲಕ ಮತದಾರರ ಮನವೊಲಿಸುವಲ್ಲಿ ವಿಫಲವಾಗಿರುವುದು ಕೂಡ ಗಮನಾರ್ಹ.
ಭಿನ್ನ ಅಭಿಪ್ರಾಯಗಳ ನಡುವೆಯೂ ಮೈಸೂರು, ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ. ಗೆಲುವನ್ನು ಸಾಧ್ಯಮಾಡಿಕೊಳ್ಳಬಹುದಾದ ಅವಕಾಶವನ್ನು ತಮ್ಮ ಸ್ವಯಂಕೃತ ಅಪರಾಧದಿಂದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳು ಕಳೆದುಕೊಂಡು ತಮ್ಮ ಅಸ್ತಿತ್ವಕ್ಕೆ ಧಕ್ಕೆಯನ್ನು ತಂದುಕೊಂಡಿವೆ.