Advertisement

ಗರ್ಜನೆ ನಿಲ್ಲಿಸಿದ ಯಕ್ಷಸಿಂಹ

05:32 PM Jun 02, 2018 | |

ಹೊನ್ನಾವರ: ಯಕ್ಷಗಾನ ಕಲಾಲೋಕದ ಪ್ರಸಿದ್ಧ ಕರ್ಕಿ ಹಾಸ್ಯಗಾರ ಪರಂಪರೆಯ ಹಿರಿಯ ಕಲಾವಿದ ಕೃಷ್ಣ ಪರಮಯ್ಯ ಹಾಸ್ಯಗಾರ (94) ಮಹಾರಾಷ್ಟ್ರದ ಬಲ್ಲಾರಪುರದಲ್ಲಿರುವ ಮಗನ ಮನೆಯಲ್ಲಿ ನಿಧನರಾದರು.

Advertisement

ಮಹಾರಾಷ್ಟ್ರದ ನಾಟ್ಯರಂಗ ಭೂಮಿಗೆ ಸ್ಫೂರ್ತಿ ನೀಡಿತ್ತು ಎನ್ನಲಾದ ಹವ್ಯಾಸಿ ಕರ್ಕಿ ಹಾಸ್ಯಗಾರ ಮೇಳದ ಸ್ಥಾಪಕ ದಿ. ಪರಮಯ್ಯ ಹಾಸ್ಯಗಾರರ
ಮಗ ಕೃಷ್ಣ ಬಣ್ಣದ ವೇಷ, ಹಾಸ್ಯ ವೇಷಗಳಿಂದ ಮೇಳದಲ್ಲಿ ಪ್ರಸಿದ್ಧರಾಗಿದ್ದರು. 43 ವರ್ಷ ಸೇಂಟ್‌ ಥಾಮಸ್‌ ಹೈಸ್ಕೂಲಿನಲ್ಲಿ ಕಲಾ ಶಿಕ್ಷಕರಾಗಿ ಕೆಲಸ
ಮಾಡುತ್ತಾ ಮಳೆಗಾಲದ ಬಿಡುವಿನಲ್ಲಿ ಸುಂದರ ಮಣ್ಣಿನ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದ ಇವರ ಮನೆಯಲ್ಲಿ ಮೈದಳೆಯುವ ಗಣೇಶನ ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. 70 ವರ್ಷ ರಂಗದಲ್ಲಿ ಕಾಣಿಸಿಕೊಂಡ ಕೃಷ್ಣ ಹಾಸ್ಯಗಾರರು ಆಕಸ್ಮಾತ್‌ ಒದಗಿ ಬಂದ ಸಿಂಹನ ವೇಷದಿಂದಾಗಿ ಪ್ರಸಿದ್ಧರಾಗಿ ನಾಡಿನ ಎಲ್ಲ ಮೇಳಗಳಲ್ಲಿ ಸಿಂಹ ನೃತ್ಯ ಪ್ರದರ್ಶಿಸಿದ್ದಾರೆ.

1950-52ರ ಸುಮಾರು ಕುಮಟಾ ಉತ್ತಮ ನಾಯ್ಕ ಮತ್ತು ಧಾರೇಶ್ವರ ಸುಬ್ಬ ಅವರ ಮೇಳ ದೆಹಲಿಯಲ್ಲಿ ಪ್ರದರ್ಶನ ನೀಡಿತ್ತು. ಧಾರೇಶ್ವರರ ಸಿಂಹದ ವೇಷದ ಚಿತ್ರಗಳು ಅಂದು ಇಂಗ್ಲಿಷ್‌ ಪತ್ರಿಕೆಯ ಮುಖಪುಟದಲ್ಲಿ ಬಂದಿದ್ದವು. ಅದೇ ಸಮಯದಲ್ಲಿ ಸೇಂಟ್‌ ಥಾಮಸ್‌ ಹೈಸ್ಕೂಲಿನ ಚಿನ್ನದ ಹಬ್ಬ ನಡೆದಿತ್ತು. ಸಿಂಹದ ವೇಷಕ್ಕೆ ಧಾರೇಶ್ವರ ಸುಬ್ಬ ಸಿಗಲಿಲ್ಲ. ಆಗ ಪ್ರಾಂಶುಪಾಲರಾಗಿದ್ದ ಸಿ.ಎಸ್‌. ಊಮನ್‌ರು ಕಲಾ ಶಿಕ್ಷಕ ಹಾಸ್ಯಗಾರರನ್ನು ಕರೆದು ಸಿಂಹ ನೃತ್ಯ ಮಾಡಲು ಹೇಳಿದರು. ಹಾಸ್ಯಗಾರರು ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿ ಅಲ್ಲಿ ಮಲಗಿದ್ದ ಸಿಂಹವನ್ನು ಎಬ್ಬಿಸಲು ಹೋಗಿ ಕಾವಲುಗಾರನಿಂದ
ಬೈಸಿಕೊಂಡು ದಿನವಿಡೀ ಸಿಂಹದ ಚಲನವಲನವನ್ನು ಅಭ್ಯಾಸ ಮಾಡಿ ಮರಳಿ ಬಂದರು. 600 ರೂ. ವೆಚ್ಚದಲ್ಲಿ ವೇಷಭೂಷಣವನ್ನು ಊಮನರು ಸಿದ್ಧಪಡಿಸಿಕೊಟ್ಟರು. ಚಿನ್ನದ ಹಬ್ಬದಲ್ಲಿ ಹಾಸ್ಯಗಾರರ ಸಿಂಹ ಆಗಿನ ರಾಜ್ಯಪಾಲ ಮೈಸೂರು ಜಯಚಾಮರಾಜ ಒಡೆಯರ್‌ ಅವರ ಮತ್ತು
ಅಸಂಖ್ಯ ಜನರ ಮೆಚ್ಚುಗೆ ಗಳಿಸಿತ್ತು. ಹೀಗೆ ಕೃಷ್ಣ ಸಿಂಹನಾಗಿ ಕೀರ್ತಿ ಪಡೆದರು. ತಮ್ಮ 80ನೇ ವರ್ಷದವರೆಗೆ ಸಿಂಹನಾಗಿ ಮೆರೆದರು.

ಸಂಪ್ರದಾಯವಾದಿ ಪರಮಯ್ಯ ಹಾಸ್ಯಗಾರರು ಸಿಂಹನನ್ನು ಯಕ್ಷರಂಗಕ್ಕೆ ತರಲು ಶ್ಯಮಂತಕೋಪಾಖ್ಯಾನ ಪ್ರಸಂಗದಲ್ಲಿ ಸಿಂಹನ ಪ್ರವೇಶ ಮಾಡಿಸಿದರು. ಶ್ಯಮಂತಕ ಮಣಿಗಾಗಿ ಜಾಂಬವತನಾಗಿ ಸತ್ಯಹಾಸ್ಯಗಾರ, ಸಿಂಹನಾಗಿ ಕೃಷ್ಣ ಹಾಸ್ಯಗಾರ ರಂಗಸ್ಥಳದಲ್ಲಿ ಕಾದಾಡುವ ದೃಶ್ಯ ಹಾಸ್ಯಗಾರ
ಮೇಳಕ್ಕೆ ಕೀರ್ತಿ ತಂದಿತ್ತು. ಕರ್ಕಿ ಭಂಡಾರಿ ಸಹೋದರರ ಚಂಡೆ, ಮದ್ದಳೆಯ ಹಿನ್ನೆಲೆಯಲ್ಲಿ ಸಿಂಹ ಪ್ರವೇಶ, ನಿದ್ರೆ, ಆಕಳಿಕೆ, ಮುಖದ ಮೇಲಿನ ನೊಣ ಹಾರಿಸುವ ರೀತಿ, ಬೇಟೆಗೆ ಜಿಗಿಯುವ ದೃಶ್ಯ, ಜಿಂಕೆಯ ಬೇಟೆಯಾಡಿ ಮಾಂಸ ತಿನ್ನುವ ದೃಶ್ಯಗಳು ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದವು. ತಮ್ಮ ಮೇಳದಲ್ಲಿ ಮತ್ತು ಇತರ ಮೇಳದಲ್ಲಿ, ವಿವಿಧ ಸಮಾರಂಭಗಳಲ್ಲಿ 2500ಕ್ಕೂ ಹೆಚ್ಚು ಸಿಂಹ ನೃತ್ಯವನ್ನು ಹಾಸ್ಯಗಾರರು ಪ್ರದರ್ಶಿಸಿದ್ದರು. ಆ ಕಾಲದಲ್ಲಿ ಸಿಂಹದ
ಮೈಬಣ್ಣದ ಬಟ್ಟೆ, ಉಡುಗೆ, ತೊಡುಗೆ, ಮುಖವಾಡ ಇರಲಿಲ್ಲ. ಮಣಿಹಾಡು ಎಂಬ ಮರದ ಕಾಂಡ ತಂದು ಅದನ್ನು ನೀರಲ್ಲಿ ಮುಳುಗಿಸಿ, ಜಜ್ಜಿ, ಸ್ವತ್ಛಗೊಳಿಸಿ ಅದರ ನಾರಿಗೆ ಕೇಸರಿ ಬಣ್ಣ ಕೊಟ್ಟು, ಹೊಲಿಗೆ ಅಂಗಡಿಯಲ್ಲಿ ಕೂತು ಬಟ್ಟೆ ಹೊಲಿಸುತ್ತಿದ್ದ ಹಾಸ್ಯಗಾರರು ಮುಖವರ್ಣಿಕೆ
ಬರೆಯಲು ಮೂರು ತಾಸು ಶ್ರಮ ವಹಿಸುತ್ತಿದ್ದರು. ಕೇವಲ ಅರ್ಧ ಗಂಟೆ ಪ್ರದರ್ಶಿತವಾಗುವ ಸಿಂಹ ನೃತ್ಯ ಜನರ ಮನಸ್ಸಿನಲ್ಲಿ ಸದಾ ಉಳಿದಿದೆ.

ಅವರಿಗೆ ಖ್ಯಾತಿ ತಂದ ಇನ್ನೊಂದು ಪಾತ್ರ ಪ್ರೇತ ನೃತ್ಯ. ಮಹಾಭಾರತ ಯುದ್ಧದ ಕೊನೆಯಲ್ಲಿ ಕೌರವ ಹೆಣದ ರಾಶಿಯನ್ನು ಏರುತ್ತಾ ಪಲಾಯನ ಮಾಡುವಾಗ ಎದುರಾಗುವ ಪ್ರೇತ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಕಪ್ಪು ಪರದೆಯ ಮುಂದೆ ಮೈತುಂಬ ಕಪ್ಪು ಬಣ್ಣ ಬಳಿದುಕೊಂಡು
ಅಸ್ತಿಪಂಜರವನ್ನು ಬಿಳಿಬಣ್ಣದಲ್ಲಿ ಬರೆದುಕೊಳ್ಳುತ್ತಿದ್ದ ಕೃಷ್ಣ ಹಾಸ್ಯಗಾರ ಮಲಗಿದಲ್ಲಿಂದ ನಿಧಾನವಾಗಿ ಎದ್ದು ಅಸ್ತಿಪಂಜರ ಕುಣಿಯ ತೊಡಗಿದಾಗ ಸಭೆಯಲ್ಲಿ ಸಿಳ್ಳೆ ಮತ್ತು ಗದ್ದಲ ತುಂಬಿ ಹೋಗುತ್ತಿತ್ತು. ಸ್ಮಶಾನ ದೃಶ್ಯಕ್ಕೆ ಕಳೆಕಟ್ಟುತ್ತಿದ್ದ ಕೃಷ್ಣ ಹಾಸ್ಯಗಾರರಿಗೆ ಶಾಲೆಯ ಪ್ರಯೋಗಾಲಯದಲ್ಲಿದ್ದ
ಅಸ್ತಿಪಂಜರವೇ ಗುರುವಾಗಿತ್ತು. ಸಾವಿರಕ್ಕೂ ಹೆಚ್ಚು ಗದಾಯುದ್ಧದಲ್ಲಿ ಕೌರವನಷ್ಟೇ ಆಕರ್ಷಣೆ ಪ್ರೇತ ನೃತ್ಯಕ್ಕಿತ್ತು. 

Advertisement

ಹಾಸ್ಯ, ರಾಕ್ಷಸ, ವೃದ್ಧೆ, ಬೇತಾಳ, ಮೊದಲಾದ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಇವರು ತಮ್ಮ 80ನೇ ವಯಸ್ಸಿನಲ್ಲೂ 20ರ ಹುರುಪಿನಿಂದ ಸಿಂಹ ನೃತ್ಯ ಮಾಡಿದ್ದಾರೆ. ಪತ್ನಿ ಮತ್ತು ಹಿರಿಯ ಮಗನ ಅಗಲಿಕೆಯಿಂದ ಮೌನಕ್ಕೆ ಜಾರಿದ ಹಾಸ್ಯಗಾರರು ದಿನವಿಡೀ ದೇವರ ಪೂಜೆಯಲ್ಲಿ ಮಗ್ನರಾಗಿರುತ್ತಿದ್ದರು. ಬಿಳೆ
ಧೋತಿ, ಜುಬ್ಟಾಧಾರಿ, ಸಣಕಲು ಜೀವ, ಸದಾ ನಗುತ್ತಾ, ನಗಿಸುವ ವ್ಯಕ್ತಿತ್ವದ ಕೃಷ್ಣ ಹಾಸ್ಯಗಾರರು ಯಕ್ಷಗಾನದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದರು. ಅವರೊಂದಿಗೆ ಸಿಂಹ, ಪ್ರೇತ ನೃತ್ಯ ಕಲಾಪರಂಪರೆ ಅಧ್ಯಾಯ ಮುಗಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next